ITಯಿಂದ ಮೇಟಿಗೆ - ಮೂರನೆಯ ಮುದ್ರಣದ ಹೊಸ್ತಿಲಲ್ಲಿ

ಶ್ರೀ ಎಸ್.ದಿವಾಕರ್ - ನಮ್ಮ ಮನೆಯ ಹಟ್ಟಿಯಲ್ಲಿ. ITಯಿಂದ ಮೇಟಿಗೆ ಪುಸ್ತಕ ಕರೆತಂದ ಕಥೆಗಾರ


೨೦೧೮ ಜುಲೈ ಒಂದರಂದು ‘ITಯಿಂದ ಮೇಟಿಗೆ’ ಬಿಡುಗಡೆಯಾಯಿತು. ಸ್ನೇಹಿತ ಕನಕರಾಜು ಅವರ ಒತ್ತಾಯ, ಪ್ರಯತ್ನದಿಂದ 'ಡಿವಿಜಿ ಬಳಗ'ವು ಮೊದಲ ಮುದ್ರಣವನ್ನು ಪ್ರಕಟಿಸಿತು. ಅದೇ ಮೊದಲ ಬಾರಿಗೆ ಎನ್ನುವಂತೆ 'ಸಮೂಹ ಪ್ರಕಾಶನ'ದ ಪ್ರಯೋಗದಲ್ಲಿ ಇದು ಬೆಳಕು ಕಂಡಿತು. ನನ್ನ ಕಲ್ಪನೆಗೂ ಹೊರತಾಗಿ ಆಗಸ್ಟ್ ಆರರ ಹೊತ್ತಿಗೆ ಮೊದಲ ಮುದ್ರಣದ ಪ್ರತಿಗಳು ಖಾಲಿಯಾದವು. ಎರಡನೆಯ ಮುದ್ರಣದ ವಿತರಣೆಯನ್ನು ಜಮೀಲ್ ಸಾವಣ್ಣ  ತೆಗೆದುಕೊಂಡುದರಿಂದ ಒಕ್ಟೋಬರ್ ಹೊತ್ತಿಗೆ ಪ್ರತಿಗಳು ಮತ್ತೆ ಹೊರಬಂದವು. 2019 ಮೇಯಲ್ಲಿ ಪುಸ್ತಕವೀಗ ಮೂರನೆಯ ಮುದ್ರಣವಾಗಿ ಹೊರಬಂದಿದೆ.

2007 ರಿಂದ 2016ರ ವರೆಗಿನ ನನ್ನ ಮನಸ್ಸಿನ ತಲ್ಲಣಗಳು, ಉದ್ಯೋಗದಿಂದ ಕೃಷಿಯೆಡೆಗಿನ ನನ್ನ ನಡಿಗೆಯ ದಾರಿಯು ಈ ಪುಸ್ತಕದಲ್ಲಿ ದಾಖಲಾಗಿದೆ. ಕೃಷಿವ್ಯವಸ್ಥೆಯ ಮೇಲ್ಮೆಯನ್ನು ಕಂಡುಕೊಳ್ಳುವ ನನ್ನ ಪ್ರಯತ್ನದಲ್ಲಿ ನಾನು ಉದ್ಯೋಗದ, ನಗರದ ಮೂಲಭೂತ ಸಮಸ್ಯೆಯೇನು ಎಂದು ಬಹಳ ಕಾಲ ವಿಚಾರ ಮಾಡಿದ್ದೆ. ಇದು ಪುಸ್ತಕದಲ್ಲಿ ದಾಖಲಾದುದರಿಂದ ಇದನ್ನು ಓದುಗರು ಹೇಗೆ ಸಮಚಿತ್ತದಿಂದ ಸ್ವೀಕರಿಸಿಯಾರು? ಎನ್ನುವ ಬಗ್ಗೆ ನನಗೆ ಸಂಶಯಗಳಿದ್ದವು. ಇದನ್ನು ಓದಿದ ಹಲವರಲ್ಲಿ ಇದೇ ಪ್ರಶ್ನೆ ಉಂಟಾಗಿದ್ದೂ ನಿಜ. ಕೆಲ ಓದುಗರು ನನ್ನಲ್ಲಿ ಪುಸ್ತಕದ ಬಗ್ಗೆ ಇತರರ ಅಭಿಪ್ರಾಯವೇನು ಎನ್ನುವ ಬಗ್ಗೆ ಬಹಳ ಹಿಂದೆಯೇ ಕೇಳಿದ್ದರು, ಅವನ್ನು ಬಹಿರಂಗಪಡಿಸುವಂತೆಯೂ ಒತ್ತಾಯಿಸಿದರು. ಆದರೆ ನನ್ನ ವರೆಗೆ ತಲುಪಿದ ಹೆಚ್ಚಿನೆಲ್ಲ ಅಭಿಪ್ರಾಯಗಳು ಧನಾತ್ಮಕವಾಗಿ ಇದ್ದುದರಿಂದ ನನಗೆ ಅವನ್ನು ಬಹಿರಂಗ ಪಡಿಸುವ ಬಗ್ಗೆ ಬಹಳ ಸಂಕೋಚವಾಗಿ ನಾನು ಅದಕ್ಕೆ ಅಷ್ಟಾಗಿ ಮನಸ್ಸು ಮಾಡಲಿಲ್ಲ. ಈಗ ಮಳೆ ನಿಂತ ಮೇಲಿನ ಮರದ ಹನಿಯಂತೆ ಇಲ್ಲಿ ಅವನ್ನು ಬರೆದಿದ್ದೇನೆ.

ಇವುಗಳಲ್ಲಿ ನನಗೆ ಸ್ಮರಣೀಯವಾದವು ಬಹಳ ಇವೆ. ಅಂಥವು ಪ್ರಸಿದ್ಧರೆಂದು ಹೆಸರಾದವರಿಂದಲೂ ಬಂದಿವೆ, ಸಾಮಾನ್ಯ ಓದುಗ ಎನ್ನುವ ಅಸಾಮಾನ್ಯ ವರ್ಗದಿಂದಲೂ ಬಂದಿದೆ. ಅವುಗಳಲ್ಲಿ ಒಂದಷ್ಟು ಇಲ್ಲಿವೆ. ಒಟ್ಟು ಪ್ರತಿಕ್ರಿಯೆಗಳ ಸಂಖ್ಯೆ ಬಹಳವೇ ಇರುವುದರಿಂದ ಅವೆಲ್ಲವನ್ನೂ ನಾನಿಲ್ಲಿ ಕೊಡುತ್ತಿಲ್ಲ. ಫೋನ್ ಮೂಲಕ ತಿಳಿಸಿದವರ ಅಭಿಪ್ರಾಯಗಳು ಸಂಗ್ರಹಿಸಲಾಗದೆ ಬರಿಯ ಧನ್ಯತಾ ಭಾವನೆಯಷ್ಟೇ ಉಳಿದಿದೆ. ಮಂಗಳೂರಿಗೆ ಕಾರ್ಯಕ್ರಮಕ್ಕೆಂದು ಬಂದ ಶ್ರೀ ಎಸ್.ದಿವಾಕರ್ ಅವರು ನಮ್ಮ ಮನೆಯವರೆಗೂ ಬಂದಾಗ ಒಂದಿಡೀ ಹಗಲು ಅವರೊಂದಿಗೆ ಹರಟಿದ್ದು ನನಗೆ ಮರೆಯಲಾಗದ ಅನುಭವ. ಹಿರಿಯರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಇತ್ತೀಚೆಗೆ ಪುಸ್ತಕವನ್ನು ಇಡಿಯಾಗಿ ಓದಿ ಬಹಳ ಸುಂದರವಾದ ತಮ್ಮ ತುಳು ಭಾಷೆಯಲ್ಲಿ ಬಹಳ ಹೊತ್ತು ಪ್ರೀತಿಯಿಂದ ಮಾತನಾಡಿದರು. ಬಹಳ ವಿವರವಾಗಿ ಪ್ರೀತಿಯಿಟ್ಟು ಬರೆದ ಕೈಬರಹದ ಪತ್ರಗಳೂ ಹಲವು ಬಂದಿವೆ. ಪತ್ರಬರಹಗಳ ಅತ್ಯುತ್ತಮ ಸಂಗ್ರಹವೊಂದನ್ನು ಪ್ರಕಟಿಸಿದ ಶ್ರೀಮತಿ ಶಶಿಕಲಾ ಬಾಯಾರು ಅವರು ಬಹಳ ಸುದೀರ್ಘವಾದ, ಸ್ವತ: ಒಂದು ಪುಸ್ತಕದಷ್ಟೇ ಸುಂದರವಾದ ಪತ್ರವೊಂದನ್ನು ಬರೆದಿರುವುದು ನನಗೆ ಸದಾ ಸ್ಮರಣೀಯ (ಅವರಿಗೆ ಉತ್ತರ ಬರೆಯುವುದು ಇನ್ನೂ ಬಾಕಿ ಇದೆ). 

ಪುಸ್ತಕದ ಬಗ್ಗೆ ಟೀಕೆ/ವಿಮರ್ಶೆಗಳು ಹೆಚ್ಚಾಗಿ ಲಿಖಿತ ರೂಪದಲ್ಲಿ ಬರಲಿಲ್ಲ, ಬಹುಶಃ ತಮ್ಮತಮ್ಮಲ್ಲಿ ಮಾತನಾಡಿಕೊಂಡಿರಬಹುದು. ಅಹಿತವಾದದ್ದನ್ನು ಹೇಳಿ ಅಸುಖವುಂಟುಮಾಡುವುದೇಕೆ ಎಂಬುದು ಇದರ ಉದ್ದೇಶವಿರಬಹುದು. ಈ ಪುಸ್ತಕದ ಪ್ರತಿಪಾದನೆ ಅಪ್ರಾಯೋಗಿಕವಾಗಿದೆ ಎಂಬುದು ಪುಸ್ತಕದ ಬಗ್ಗೆ ಮಾಡಬಹುದಾದ ಮುಖ್ಯ ವಿಮರ್ಶೆ. ಅದನ್ನು ನಾನು ಭಾಗಶಃ ಒಪ್ಪಿಕೊಳ್ಳುತ್ತೇನೆ. ಆದರೆ ಇಂದಿನ ನೀರು, ಗಾಳಿಗಳ ಅಶುದ್ಧತೆ ಮತ್ತು ಪ್ಲಾಸ್ಟಿಕ್ ಮಾಲಿನ್ಯ, ಆಹಾರದ ನಿಕೃಷ್ಟ ಪರಿಸ್ಥಿತಿ, ಕೊಡಲಿಯೇಟಿನಿಂದ ಮುರಿದುಬೀಳುತ್ತಿರುವ ಸ್ಥಳೀಯ ಆಹಾರ-ವಿಹಾರ-ಜೀವನಕ್ರಮ - ಇವೆಲ್ಲವನ್ನು ಸಮಗ್ರವಾಗಿ ಪರಿಹರಿಸುವ ಇದಕ್ಕಿಂತ ಸುಲಭ ಪರಿಹಾರಗಳಿದ್ದರೆ; ಅಂತಹ ಸಂಪೂರ್ಣ ಪರಿಹಾರವನ್ನು ವಿಮರ್ಶಕ ಕೊಡುವುದಿದ್ದರೆ ಅವರನ್ನು ಒಪ್ಪಿಕೊಳ್ಳಬಹುದು. (ಬರಿಯ ಒಣಕಸ ಹಸಿಕಸ ಪ್ರತ್ಯೇಕಿಸುವುದು, ಅಪರೂಪಕ್ಕೊಮ್ಮೊಮ್ಮೆ ಗಿಡ ನೆಡುವುದು, ಮರುಪೂರಣಕ್ಕೆ ಗುಂಡಿ ತೆಗೆಯುವುದು ಇತ್ಯಾದಿ ಪರಿಹಾರಗಳಾದರೆ ಬಿಡಿಬಿಡಿ ಪರಿಹಾರಗಳಾದರೆ ಕ್ಷಮಿಸಿ. ನೈಜ ಪರಿಹಾರಗಳೆಂದರೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ವೆಂಡೆಲ್ ಅವರ ಈ ಲೇಖನ ಓದಿ). 'ಹಾಗಾದರೆ ನಾವು ಮತ್ತೆ ಶಿಲಾಯುಗಕ್ಕೆ ಹೋಗಬೇಕೆ?' ಎಂದು ಓದುಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ನಾನು ಪುಸ್ತಕದ ಕೊನೆಗೆ ಒಂದು ಪುಟದಷ್ಟು ಉತ್ತರವನ್ನು ಎರಡನೆಯ ಮುದ್ರಣದಲ್ಲಿ ಸೇರಿಸಿದ್ದೇನೆ.

ಶತಾವಧಾನಿ ಗಣೇಶರು ನನ್ನ ಮೇಲೆ ಕರುಣೆಯಿಟ್ಟು ಫೋನ್ ಮಾಡಿ ನನಗೆ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದು ನನಗೆ ಆಮರಣಾಂತ ಸ್ಮರಣೀಯ. ಪುಸ್ತಕದ ಬಗ್ಗೆ ಸನ್ಮಾತುಗಳ ಜೊತೆಗೆ ಅವರು ಕೆಲವು ಸಲಹೆಗಳನ್ನೂ ಕೊಟ್ಟರು. ಕೃಷಿಗೆ ಪಕ್ಷಪಾತಿಯಾಗಿಯೇ ನಾನಿಲ್ಲಿ ವಾದವನ್ನು ಮಂಡಿಸಿದ್ದೇನೆ; ಹಾಗೆ ಮಾಡುವುದರಿಂದ ಕೃಷಿಯ ಮೇಲ್ಮೆಯು ಹೆಚ್ಚು ಪ್ರಕಾಶಮಾನವಾಗಿ ಕಂಡು ಇತರರು ಕಣ್ಣುಮುಚ್ಚಿ ಕೃಷಿಗೆ ಧುಮುಕಿಯಾರು ಎಂಬುದು ಅವರು ಕೊಟ್ಟ ಎಚ್ಚರಿಕೆ. ಯಾವ ನಿರ್ಮಮತೆಯಿಂದ ನಾನು ನನ್ನ ಉದ್ಯೋಗವನ್ನು ವಿಮರ್ಶಿಸಿ, ಅದನ್ನು ಬಿಡಲು ಸಾಧ್ಯವಾಗಿದೆಯೋ ಅದೇ ನಿರ್ಮಮತೆಯಿಂದ ಕೃಷಿಯ ಬಗ್ಗೆಯೂ (ಅಥವಾ ಯಾವುದೇ ವಿಷಯದ ಬಗ್ಗೆಯಾದರೂ) ಬರೆಯಬೇಕೆಂಬುದು ಅವರ ಮತ. ಕೃಷಿಗೆ ಕುರುಡಾಗಿ ಧುಮುಕಬೇಡಿರೆಂದು ನಾನು ಪುಸ್ತಕದಲ್ಲಿ ಬರೆದಿದ್ದರೂ ಅದನ್ನು ಅವರಿಗೆ ಪ್ರತುತ್ತರವಾಗಿ ಹೇಳದೆ ಅವರಿಂದ ವಿಮರ್ಶಿಸಿಕೊಳ್ಳುವ ಅನಿರ್ವಚನೀಯ ಸುಖವನ್ನಷ್ಟೇ ನಾನು ಅನುಭವಿಸಿದೆ. ಅವರ ಸಲಹೆ 'ವಿಮರ್ಶೆ'ಯ ಬಗೆಗಿನ ಒಂದು ಸಾರ್ವಕಾಲಿಕ ಪಾಠವೇ ಆಗಿದ್ದರಿಂದ ಅದನ್ನು ಹೇಳಿಸಿಕೊಳ್ಳಲು ನನಗೆ ಯಾವುದೇ ಬೇಜಾರು ಇರಲಿಲ್ಲ.

ಪುಸ್ತಕದ ವಿಚಾರ ಮತ್ತು ನನ್ನ ಅನುಷ್ಠಾನಗಳ ಬಗ್ಗೆ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸುವುದು ಇನ್ನೊಂದು ರೀತಿಯ ಪ್ರತಿವಾದ. ಅವನ್ನು ನಾನು ನಮ್ರವಾಗಿ ಒಪ್ಪಿಕೊಳ್ಳುತ್ತೇನೆ. ಅದು ನಾನಿನ್ನು ಕ್ರಮಿಸಬೇಕಾದ ಹಾದಿ. ನನ್ನ ಪ್ರತಿಪಾದನೆಗಳನ್ನು ಸೋಲಿಸಲು ಇರುವ ಅತ್ಯುತ್ತಮವಾದ ದಾರಿ ಇದು. ಇದನ್ನು ಖಾಸಗಿಯಾಗಿ ಅಥವಾ ಬಹಿರಂಗವಾಗಿ ನಾನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ.

ಇಷ್ಟು ಪೀಠಿಕೆಯ ಬಳಿಕ ಇನ್ನು ಮುಂದಿನವು ಕೆಲವು ಪ್ರತಿಕ್ರಿಯೆಗಳು.

- Akshara KV
Dear Vasant, I got your book yesterday and read it yesterday night. It is very well written with so much of clarity and commitment. The philosophy is profound but simple and practical. It is one of the rewarding books I read recently. Hearty congratulations. 
 (ಅಕ್ಷರ ಅವರು ತಮ್ಮ ಇತ್ತೀಚಿನ ಪುಸ್ತಕ 'ಶಂಕರ ವಿಹಾರ'ದಲ್ಲೂ ಪುಸ್ತಕವನ್ನು ಉಲ್ಲೇಖಿಸಿರುವುದು ನನ್ನ ಅದೃಷ್ಟ)

- ಸೂರ್ಯಪ್ರಕಾಶ ಪಂಡಿತ್
ನಿಮ್ಮ ಪುಸ್ತಕ ತುಂಬ ಅರ್ಥಪೂರ್ಣವಾಗಿದೆ; ಓದುತ್ತಿರುವೆ, ಪೂರ್ಣ ಆಗಿಲ್ಲ! ನಾನು ಹೇಳಿದ ಪ್ರಾಕೃತಿಕಲಯ (Nature's rhythm) ಬಗ್ಗೆ ಕೂಡ ಚೆನ್ನಾಗಿ ಬರೆದಿದ್ದೀರಿ. 

ನಿಮ್ಮ ಪುಸ್ತಕವನ್ನು (ITಯಿಂದ ಮೇಟಿಗೆ) ಈಗಷ್ಟೇ ಪೂರ್ಣವಾಗಿ ಓದಿದೆ. ಅದರ ಬಗ್ಗೆ ಬರೆಯುವುದಕ್ಕೆ ಸಾಕಷ್ಟಿದೆ. ಆದರೆ ಈ ಕ್ಷಣಕ್ಕೆ ಹೇಳಲೇ ಬೇಕಾದ ಮಾತು: ನನ್ನ ತಮ್ಮ ಎಂಥ ಪುಸ್ತಕವನ್ನು ಬರೆದಿದ್ದರೆ ನಾನು ಸಂತೋಷ ಪಡುತ್ತಿದ್ದೆನೋ ಅಷ್ಟು ಸಂತೋಷವನ್ನು ನಿಮ್ಮ ಪುಸ್ತಕದಿಂದ ಪಡೆದಿದ್ದೇನೆ; ನನ್ನ ತಮ್ಮ ಎಂಥ ಜೀವನವಿಧಾನವನ್ನು ಆರಿಸಿಕೊಂಡಿದಿದ್ದರೆ ನಾನು ಹೆಮ್ಮೆ ಪಡುತ್ತಿದ್ದೆನೋ ಅಂಥ ಹೆಮ್ಮೆ ನೀವು ಆರಿಸಿಕೊಂಡಿರುವ ಜೀವನಶೈಲಿಯಿಂದ ನಿಮ್ಮ ಬಗ್ಗೆ ಮೂಡಿದೆ. 🙏🙏🙏💐 (ತಮ್ಮ - ಎಂದಿರುವುದು ನೀವು ವಯಸ್ಸಿನಲ್ಲಿ ನನಗಿಂತ ಕಿರಿಯರು ಎಂಬ ಕಾರಣದಿಂದಷ್ಟೆ!)


ಡಿ.ಬಿ.ರಾಘವೇಂದ್ರ ರಾವ್
೧೨-೦೭-0೧೮
ಐಟಿ ಇಂದ ಮೇಟಿಗೆ
ವಿವಿಧ ವಿಷಯಗಳ ಮೇಲೆ ಕೆಲವು ಪುಸ್ತಕ ಗಳನ್ನು (ಹೆಚ್ಚೇನು ಅಲ್ಲ), ಪದವಿ ವಿರಮಣನಾದ ಮೇಲೆ ನಾನು ಓದಿದ್ದೇನೆ ( ಕಳೆದ ಐದು ವರ್ಷ ಗಳಲ್ಲಿ ). ಇವುಗಳಲ್ಲಿ ಹೆಚ್ಚಿನವು ಆಂಗ್ಲ ಮತ್ತು ಕನ್ನಡ ಭಾ಼ಷೆಯವು. ಆತ್ಮ ಚರಿತ್ರೆ , ವೈಜ್ಞಾನಿಕ , ವೈಚಾರಿಕ ಹಾಗು ಕಾದಂಬರಿ ಗಳು . . ಸಂಖ್ಯೆ ಸುಮಾರು ನೂರು ಇರ ಬಹುದು. ಇವುಗಳಲ್ಲಿ ನನಗೆ ಹೆಚ್ಚು ಹಿಡಿಸಿದವು ಡಾ. ಹೆಚ್.ಎನ್ ಅವರ ಆತ್ಮ ಚರಿತ್ರೆ ಮತ್ತು ಡಾ.ಕಲಾಮ್ ಅವರ ಪುಸ್ತಕ ಗಳು. ಇವು ನನ್ನ ' ವಿಶಿಷ್ಟ ಪುಸ್ತಕ ಗಳು '. ಪುಸ್ತಕಗಳ ಪಟ್ಟಿಯಲ್ಲಿ ಈಗ ಒಂದು ಹೊಸದಾದ ಪುಸ್ತಕ ಸೇರ್ಪಡೆ ಯಾಗಿದೆ; ಅದುವೆ ಮೇಲೆ ತಿಳಿಸಿದ ಪುಸ್ತಕ.
      ಯುವಕರಾದ ಶ್ರೀ ವಸಂತ ಕಜೆಯವರು , ಐಟಿ ವಲಯದಲ್ಲಿ , ಉನ್ನತ ಪದವಿಯಲ್ಲಿದರೂ, ಏನೊ ಒಂದು ದುಗುಡ ಅವರಲ್ಲಿ ಇತ್ತು. ವಂಶ ಪಾರಂಪರ್ಯವಾಗಿ ಬಂದ ಕೃಷಿ ಕ್ಷೇತ್ರ ದಲ್ಲಿ ತಮ್ಮನ್ನು ಏಕೆ ತೊಡಗಿಸಿ ಕೊಳ್ಳಬಾರದೆಂದು ? ಆಳವಾಗಿ ಆಲೋಚಿಸಿದ ನಂತರ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ಪೂರ್ಣ ವಾಗಿ ಸೇರಿಕೊಂಡರು. ಅವರ ಮಡದಿ, ಮಾವನವರು, ತಂದೆ ತಾಯಿಯರ ಪ್ರೋತ್ಸಾಹ, ಸಹಕಾರ ದೊರೆತದ್ದು, ಅವರ ಸುದೈವ. ಅವರ ಮಗನನ್ನು ಈಗಿನಿಂದಲೇ ಕೃಷಿ ವಲಯದಲ್ಲಿ ಇಟ್ಟು ಪ್ರಕೃತಿಯ ಮಡಿಲಲ್ಲಿ ಬೆಳೆಯತ್ತಿರುದ ನೋಡಿ,ಆನಂದ ಪಡುತ್ತಿರುವ ತಂದೆ ಕಜೆಯವರು.
      ನಮಗೆಲ್ಲರಿಗೂ ದುಡ್ಡು ಸ್ವಲ್ಪ ಮಟ್ಟಿಗೆ ಬೇಕು, ಆದರೆ ಅದೇ ಸರ್ವಸ್ವವಲ್ಲ. ಅದರಿಂದ ಸಿಗುವ ಸನ್ಮಾನ ಕ್ಷಣಿಕ ಹಾಗೂ ಅಸಂತೃಪ್ತಿಕರ . ಆರೋಗ್ಯಕ್ಕು ಹಾನಿಕರ. ಅದೇ ಕೃಷಿಯಲ್ಲಿ ತೊಡಗಿಸಿಕೊಂಡು, ಗಿಡ  ಮರಗಳ ಮಧ್ಯೆ ಇದ್ದು , ಹಸು ಮೊದಲಾದ ಪ್ರಾಣಿಗಳ ಜೊತೆ ಕಾಲ ಕಳೆಯುವುದು ನಿಜಕ್ಕೂ ಮಹದಾನಂದ ದಾಯಕವೆಂದು ಅವರು ಪುಸ್ತಕ ದಲ್ಲಿ ಪರಿಣಾಮಕಾರಿ ಯಾಗಿ ಪ್ರತಿಪಾದಿಸಿದ್ದಾರೆ. ಎಲ್ಲದಕ್ಕು ತಾರ್ಕಿಕ ಕಾರಣಗಳನ್ನು  ( logical reasoning ) ಕೊಟ್ಟಿದ್ದಾರೆ. ಇಂಥವರು ವಿರಳ , ಇಂಥವರ ಮಾದರಿ ಮೂರ್ತಿಗಳು ವಿರಳ
       ತಮ್ಮ ಹೊಲದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ನೇರವಾಗಿ ಬಳಕೆದಾರರಿಗೆ ಒದಗಿಸಿ ಬಂದ ಆಯದಲ್ಲಿ ಸಂತೃಪ್ತ ಜೀವನ ನಡೆಸುತ್ತಿರುವುದು, ನಿಜವಾಗಿಯೂ ಕಜೆಯವರ ಮಹತ್ಸಾಧನೆ.
      ರೋಚಕ ವಾದ ಕಥೆ ಯನ್ನು ಸಮಸ್ತ ಕನ್ನಡಿಗರು ಓದಿ , ಜೀರ್ಣಿಸಿ ಕೊಂಡು ಕೆಲವರಾದರೂ ಇವರ ಹೆಜ್ಜೆಗುರುತನ್ನು ಪಾಲಿಸಿದರೂ ಇವರು ಪಟ್ಟ ಶ್ರಮ ಸಾರ್ಥಕವಾಗುವುದು . ಇದನ್ನು ಇತರ ಭಾಷೆಗಳಲ್ಲಿಯೂ ಅನುವದಿಸಿ ಎಲ್ಲರಿಗೂ ಉಪಯೋಗವಾಗುವಂತೆ ಮಾಡ ಬೇಕು. ಇವರ ನೂತನ ಕಾಯಕ ಯಶಸ್ವಿ ಆಗಲೆಂದು ಹಾರೈಸುವೆ ಹಾಗೂ ದೇವರಲ್ಲಿ ಕೋರುವೆ.
      ಇಂತಹ ಅದ್ಭುತ ಪುಸ್ತಕವನ್ನು ಪ್ರಕಟಿಸಿದ ಡಿವಿಜಿ ಬಳಗ ಪ್ರತಿಷ್ಠಾನದ ಶ್ರೀ ಕನಕರಾಜು ದಂಪತಿ ಗಳು ಅಭಿನಂದನೀಯರು. ಇದರ ವಿಕ್ರಯದಿಂದ ಬರುವಹಣವನ್ನು ಒಂದು ಪ್ರಭುತ್ವ ಪಾಠಶಾಲೆಯ ಅಭಿವೃದ್ಧಿಗೆ ಬಳುವಳಿಯಾಗಿ ನೀಡುತ್ತಿರುವುದು ಶ್ಲಾಘನೀಯ.


ಆಳ್ವಾಸ್ ನುಡಿಸಿರಿಯಲ್ಲಿ ಆಳ್ವರೊಂದಿಗೆ - 'ITಯಿಂದ ಮೇಟಿಗೆ' ಎನ್ನುವ ವಿಷಯ ಮಂಡನೆಗೆ ಮೊದಲು

- ಸಂಜೀವ ಸಿರನೂರಕರ್, ದೆಹಲಿ
ಒಂದು ವಿಶೇಷ ಪುಸ್ತಕ ಹಾಗೂ ಅಪರೂಪದ ವ್ಯಕ್ತಿಯ ಬಗ್ಗೆ ನನ್ನ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ.
ಇತ್ತೀಚೆಗೆ ಮಂಗಳೂರಿನಲ್ಲಿ ಒಂದು ಪುಸ್ತಕ ಬಿಡುಗಡೆಯಾಯಿತು, ಪುಸ್ತಕದ ಹೆಸರು “ಐಟಿಯಿಂದ ಮೇಟಿಯವರೆಗೆ- ಪಡೆದ ಜೀವನವನ್ನೇ ಬಯಸಿದಂತಿದೆ”, ಲೇಖಕರು ಶ್ರೀ ವಸಂತ ಕಜೆ.

ಸುಮಾರು ವರ್ಷಗಳ ಕಾಲ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಅಲ್ಲಿನ ಭಾವನಾಶೂನ್ಯ ಕೃತಕ ವಾತಾವರಣದಿಂದ ಬೇಸತ್ತು ತಮ್ಮ ಸ್ವಗ್ರಾಮಕ್ಕೆ ಮರಳಿ ಪೂರ್ಣಪ್ರಮಾಣದಲ್ಲಿ ಕೃಷಿಕರಾಗಿ ಮಾರ್ಪಾಡಾಗಿ ಸಂತೋಷದಿಂದ ಜೀವನ ಸಾಗಿಸುತ್ತಿರುವ ವಸಂತ ಕಜೆಯವರ ಪ್ರೇರಣಾದಾಯಿ ಗಾಥೆ ಈ ಪುಸ್ತಕದಲ್ಲಿದೆ. 
ಸನಾತನ ಭಾರತೀಯ ಜೀವನ ಪದ್ಧತಿಯ (ಪರಿಸರ ಸ್ನೇಹಿ, ಗೋ ಆಧಾರಿತ ಕೃಷಿ ಅವಲಂಬಿತ ಬದುಕು) ಪರಿಕಲ್ಪನೆ ಹಾಗೂ ಅದರ ಪ್ರಸ್ತುತತೆ, ಅವಶ್ಯಕತೆಯನ್ನು ಸೂಕ್ಷ್ಮವಾಗಿ, ಎಳೆ ಎಳೆಯಾಗಿ ಈ ಕೃತಿಯಲ್ಲಿ ಕಜೆಯವರು ಬಿಚ್ಚಿಟ್ಟಿದ್ದಾರೆ. 

ಹೇಗೆ ಬದುಕಬೇಕು? ಎಂಬ ಪ್ರಶ್ನೆಗೆ ಅದ್ಭುತ ಉತ್ತರವನ್ನು ಶ್ರೀ ವಸಂತ ಕಜೆಯವರು ಈ ಅಪರೂಪದ ಕೃತಿಯಲ್ಲಿ ನೀಡಿದ್ದಾರೆ, ನನಗಂತೂ ಉತ್ತರ ಸಿಕ್ಕಿತು, ದಾರಿ ಹಾಗೂ ಗಮ್ಯ ಎರಡೂ ದೊರಕಿತು, ನಿಮಗೂ ಇದರ ಅನುಭವವಾಗಬೇಕಾದರೆ ದಯವಿಟ್ಟು ಓದಿ. 

ಇನ್ನೊಂದು ಮುಖ್ಯ ಅಂಶವೆಂದರೆ, ಈ ಪುಸ್ತಕವನ್ನು ಸಮೂಹ ಪ್ರಕಾಶನದ ಮಾದರಿಯೊಂದಿಗೆ ಪ್ರಕಟಿಸಲಾಗಿದೆ. 47 ಸಾಹಿತ್ಯಾಸಕ್ತರ ಧನ ಸಹಾಯದಿಂದ ಈ ಪುಸ್ತಕವನ್ನು ಮಂಗಳೂರಿನ ಡಿ.ವಿ.ಜಿ ಗೆಳೆಯರ ಬಳಗವು ಪ್ರಕಟಿಸಿದೆ, ಆ 47 ಜನರಲ್ಲಿ ನಾನೂ ಒಬ್ಬ ಎಂಬ ಸಾರ್ಥಕ ತೃಪ್ತಿ ನನಗಿದೆ.


ಛೇಂಬರಿಗೆ ಕರೆಸಿ ಪುಸಕ ಪಡೆದು ಓದಿ ಮೆಚ್ಚಿ, ಅಕ್ಷರತಪ್ಪುಗಳನ್ನೂ ತೋರಿಸಿಕೊಟ್ಟ ಹೃದಯವಂತ ಶ್ರೀ ಎಮ್.ಎಸ್. ಮಹಾಬಲೇಶ್ವರ್.
- ಡಾ| ಮನೋಹರ ಉಪಾಧ್ಯ, ಮಂಗಳೂರು
ವಸಂತ ಕಜೆಯವರ ಪುಸ್ತಕ ೨ ಬೇರೆ ಬೇರೆ ದಿನಗಳ ಪ್ರಯಾಣದಲ್ಲಿ ಓದಿ ಮುಗಿಸಿತು. ಕ್ರಷಿಯ ಒಡನಾಟ ಇದ್ದ, ಇಲ್ಲದವರಿಗೂ ಒಳ್ಳೆಯ ರಿವ್ಯೂ ಅಂದರೆ ಪುನರ್ ನೋಟ. ಅರವತ್ತಕ್ಕೆ ಹೇಳಬೇಕಾದ್ದನ್ನೆಲ್ಲ ಮುವತ್ನಾಲ್ಕಕ್ಕೆ ಹೇಳಿದ ಸಾಹಸ.   

ದುಡ್ಡಿಟ್ಟು ಆಡುವ ಇಸ್ಪೀಟ್ ಆಟದಲ್ಲಿ ಒಬ್ಬ ಹಣ ಕಳೆಯುತ್ತಾನೆ, ಒಬ್ಬ ಗಳಿಸುತ್ತಾ ನೆ. ಅಲ್ಲಿ ಒಟ್ಟೂ ಮೊತ್ತ ದ್ವಿಗುಣ ಆಗುವುದಿಲ್ಲ. ಹಾಗೆಯೇ ಶೇರು ಮಾರುಕಟ್ಟೆ. ಭತ್ತವಾದರೋ ಒಂದು ಬೀಜವು ಗಿಡವಾಗಿ ನೆಲದ ಸತ್ವ ಮತ್ತು ಮಾನವ ಪ್ರಯತ್ನದಿಂದ ನೂರು ಬೀಜ ವಾಪಾಸು ಕೊಡುತ್ತದೆ. ನೀವು ಶೇರ್ಸ್ ನಲ್ಲಿ ತೊಡಗಿಲ್ವ ಅಂತ ಹೇಳಿದರೆ ಎಲ್ಲಿ ಅವರಿಗೆ ನೋವಾಗುತ್ತದೋ ಎಂದು ಮೇಲಿನ ಸಬೂಬು ಹೇಳಲು ಹಿಂಜರಿಯುತ್ತೇನೆ. ಮತ್ತೆ ನಮ್ಮ ಪರಿಚಯದವರೇ ಅದರಲ್ಲಿ ತೊಡಗಿದ್ದರೆ ಅವರಿಗೆ ಇರುಸು ಮುರುಸು ಆಗಬಾರದೆಂಬ ನೋಟ. ವಸಂತರು ಇಂತಹ ಅನೇಕ ಸಂಧರ್ಭಗಳನ್ನು ಬಹಳ ನಾಜೂಕಾಗಿ ನೋವಿಲ್ಲದೆ ತೆರೆದಿಟ್ಟಿದ್ದಾರೆ. 

ಕಾಲಿಗೆ ಚಪ್ಪಲಿ, ಕೈಗೆ ಕಾರು, ಕಿಸೆಯಲ್ಲಿ ಅಂಡ್ರಾಯ್ಡ್ ಫೋನ್ ಬಂದ ನಂತರ ಪರಿಸರದ ಬಗ್ಗೆ  ನಾವು ಮಾತನಾಡುವಾಗ ನಮ್ಮ  ದ್ವಂದ್ವ ಹೆಚ್ಚು ಕಾಣುವುದು ಸಹಜ. ದ್ವಂದ್ವವನ್ನು ಕಡಿಮೆ ಮಾಡಿಕೊಳ್ಳಲು ಮತ್ತು   ನುಡಿದಂತೆ ನಡೆಯುವ ಮಾರ್ಗೋಪಾಯಗಳನ್ನು ವಸಂತರು ಚೆನ್ನಾಗಿ ವರ್ಣಿಸಿದ್ದಾರೆ. 

ಮಕ್ಕಳನ್ನು ಸಾಕುವ ಬಗ್ಗೆ (ಮುಂದಿನ ಜನಾಂಗ ತಯಾರು ಮಾಡುವ ) ಒಳ್ಳೆಯ ಮಾತುಗಳು ಬಹಳ ಮೌಲ್ಯ ಯುತ. 

ಚೀನಾದಲ್ಲಿ ಕಸರಾಶಿ ಹಾಕಿಕೊಂಡ ಬಗ್ಗೆ ಬಹಳ ಖೇದವಾಯ್ತು.

ಕ್ರಷಿ ಮತ್ತು ಅದರಿಂದ ಹುಟ್ಟುವ ಭಾವ/ಸಂಸ್ಕ್ರತಿ ಯು ಬದುಕಿಗೆ ಅನಿವಾರ್ಯ ಎಂಬ ಭಾವ ಇಡೀ ಪುಸ್ತಕ ನಿರಂತರವಾಗಿ ಕಟ್ಟಿಕೊಡುತ್ತಾ ಹೋಗುತ್ತದೆ. 

ಹತ್ತು ಜನರಿಗೆ ಹಂಚಬೇಕಾದ, ಓದಲು ಕೊಡಬೇಕಾದ ಪುಸ್ತಕ. 
ವಸಂತ ಕಜೆ ಮತ್ತು ಡಿವಿಜಿ ಬಳಗದ ಶ್ರಮ ಸಾರ್ಥಕ.


ಶ್ರೀವತ್ಸ ಜೋಶಿಯವರು ನನ್ನನ್ನು ಅಲ್ಲಲ್ಲಿ ಸಣ್ಣಪುಟ್ಟ ಸಾಧನೆಗಳಿಗಾಗಿ ಗುರುತಿಸಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಕವೂ ಅದಕ್ಕೆ ಒಂದು ಸೇರ್ಪಡೆ. (ಕೆಳಗಿನದು ಅವರ ವಿಶ್ವವಾಣಿ ಪತ್ರಿಕೆಯ ಅಂಕಣದಿಂದ). ಜೋಶಿಯವರಿಗೆ ಮತ್ತು ಶ್ರೀಮತಿ ವಿದ್ಯಾ ದತ್ತಾತ್ರಿಯವರಿಗೆ ವಂದನೆಗಳು.

ಕಳೆದ ಭಾನುವಾರ ಮಂಗಳೂರಿನಲ್ಲಿ ವಸಂತ ಕಜೆ ಅವರ ‘ಐಟಿಯಿಂದ ಮೇಟಿಗೆ’ ಪುಸ್ತಕದ ಲೋಕಾರ್ಪಣೆ ಆಯಿತು. ಮಂಗಳೂರಿನ ಡಿವಿಜಿ ಪ್ರತಿಷ್ಠಾನವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾಫ್ಟ್‌ವೇರ್ ಉದ್ಯೋಗ ತೊರೆದು ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡ ವಸಂತ ಕಜೆಯ ಬಗ್ಗೆ ಮೊನ್ನೆ ತಾನೆ ಅಂಕಣದಲ್ಲಿ ಉಲ್ಲೇಖಿಸಿದ್ದೆ. ಕಸಬರಿಗೆಯನ್ನು ಕುರಿತ ಆ ಲೇಖನದಲ್ಲಿ ವಸಂತ ಕಜೆಯ ಅಮ್ಮ ತೆಂಗಿನಕಡ್ಡಿಗಳಿಂದ ಕಸಬರಿಗೆ ಮಾಡುತ್ತಿರುವ ಚಿತ್ರವೂ ಇತ್ತು. ‘ಐಟಿಯಿಂದ ಮೇಟಿಗೆ’ ಪುಸ್ತಕದ ಬಗ್ಗೆ ಸಾಕಷ್ಟು ಕುತೂಹಲವಿದ್ದವರಲ್ಲೊಬ್ಬರು ವಿದ್ಯಾ ದತ್ತಾತ್ರಿ. ಬೆಂಗಳೂರಿನಲ್ಲಿದ್ದರೂ ತನ್ನ ಮಲೆನಾಡ ತವರೂರನ್ನು ಕುವೆಂಪುರವರಂತೆ ‘ನೆನೆನೆನೆದುಬ್ಬುವ’ ಹೊನ್ನಿನ ಮನಸ್ಸಿನ ಹೆಣ್ಣು. ತಿಳಿರುತೋರಣದ ನಿಯಮಿತ ಓದುಗಾರ್ತಿ. ಪತ್ರಿಕೆಗಳಿಗೆ ಲೇಖನ, ಕಥೆ ಇತ್ಯಾದಿ ಬರೆಯುವ ಬರಹಗಾರ್ತಿ ಕೂಡ. ಹಳೆಯ ಪಠ್ಯಪುಸ್ತಕಗಳ ಪುಟಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡ ಸಿಂಗಾಪುರದ ಸಂಧ್ಯಾ ಹೊಸಕೊಪ್ಪರ ಬಗ್ಗೆ ನಾನು ಬರೆದಿದ್ದ ಅಂಕಣ ನಿಮಗೆ ನೆನಪಿದೆಯಾದರೆ ಅದರಲ್ಲಿ ಸಂಧ್ಯಾ-ವಿದ್ಯಾ ಅಕ್ಕತಂಗಿಯರೆಂದು ಪರಿಚಯಿಸಿದ್ದೆ. ಇರಲಿ, ವಸಂತ ಕಜೆಯ ಪುಸ್ತಕದ ಬಗ್ಗೆ ವಿದ್ಯಾಗೆ ಕುತೂಹಲವಿರಲು ಕಾರಣ- ಒಂದನೆಯದು ಹಳ್ಳಿಜೀವನದ ಒಲವು, ಎರಡನೆಯದು ಪುಸ್ತಕ ಪ್ರಕಟಣೆಗೆ ನೆರವಾದವರೊಬ್ಬರು ಆಕೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲೇ ಇರುವವರಂತೆ. ‘ಪುಸ್ತಕ ಕೈಗೆ ಸಿಕ್ಕಿ ಓದಿ‌ಆದ ಮೇಲೆ, ಅದರ ಬಗ್ಗೆ ಒಂದು ಚಿಕ್ಕ ಟಿಪ್ಪಣಿಯನ್ನು ನೀವು ಬರೆಯಬೇಕು’ ಎಂದು ವಿದ್ಯಾಗೆ ನಾನು ಎಸೈನ್‌ಮೆಂಟ್ ರೀತಿಯ ಕೋರಿಕೆ ಸಲ್ಲಿಸಿದ್ದೆ. ಪುಸ್ತಕ ಹೇಗಿದೆಯೆಂದು ನನಗೂ ತಿಳಿಯುತ್ತದೆಂಬ ಕಾರಣಕ್ಕೂ ಹೌದು; ಪುಸ್ತಕದಿಂದ ಆಕೆಗಾದ ಖುಷಿ ಕಂಡುಕೊಳ್ಳುವುದಕ್ಕೂ ಹೌದು. ವಿದ್ಯಾ ಒಪ್ಪವಾಗಿ ಬರೆದ ಟಿಪ್ಪಣಿ ಇಲ್ಲಿದೆ:

‘ಮಲೆನಾಡಿನಲ್ಲಿ ಹುಟ್ಟಿ ಬೆಳೆದು ಅಡಿಕೆ ಕೃಷಿಯೊಂದಿಗೆ ಜೀವನವನ್ನು ಹಾಸುಹೊಕ್ಕಾಗಿಸಿಕೊಂಡು ಆಮೇಲೆ ಅನಿವಾರ್ಯ ಕಾರಣಗಳಿಂದಾಗಿ ಪೇಟೆ ಸೇರಿದ ನನ್ನಂಥವರಿಗೆ ಇದೊಂದು ರೀತಿಯ ನಿತ್ಯಪಾರಾಯಣದ ಪುಸ್ತಕದಂತಿದೆ. ಎಂಟು ವರ್ಷ ಐಟಿ ಕ್ಷೇತ್ರದಲ್ಲಿ ಮಿಥ್ಯದ ಮಣ್ಣು ಹೊತ್ತು ಈಗ ತಮ್ಮ ತೋಟದಲ್ಲೇ ಬುಟ್ಟಿಯಲ್ಲಿ ನಿಜವಾದ ಮಣ್ಣು ಹೊರುವಂತಾಗಿದ್ದು ಹೇಗೆ ಎಂದು ವರ್ಣಿಸಿದ ಕಥೆ. ನಮ್ಮ ಹಳ್ಳಿ ಜೀವನದ ಸೊಗಡು, ಅಲ್ಲಿನ ಕೆಲಸಗಳಲ್ಲೇ ನಾವು ಕಂಡುಕೊಳ್ಳುವ ಆನಂದ, ಸಂತೃಪ್ತಿ ನಿಜಕ್ಕೂ ಬೆಲೆಕಟ್ಟಲಾಗದ್ದು ಎಂದು ಅವರದೇ ಶೈಲಿಯಲ್ಲಿ ವಸಂತ ಕಜೆ ತುಂಬಾ ಸುಂದರವಾಗಿ ನಿರೂಪಿಸಿದ್ದಾರೆ. ಈ ಪುಸ್ತಕದಲ್ಲಿ ಪ್ರತಿ ಪುಟದಲ್ಲೂ ನನಗೆ ನನ್ನಮ್ಮ, ನನ್ನ ತಂಗಿ ಮತ್ತು ನನ್ನ ಸೋದರಮಾವ ಕಾಣಸಿಗುತ್ತಾರೆ. 20 ವರ್ಷಗಳ ಹಿಂದೆ ಬೆಂಗಳೂರು ತೊರೆದು ಊರು ಸೇರಿ ಕೃಷಿಯನ್ನು ಸವಾಲೆಂಬಂತೆ ಸ್ವೀಕರಿಸಿ 15ಕ್ಕಿಂತಲೂ ಹೆಚ್ಚು ಬೇರೆಬೇರೆ ರೀತಿಯ ಬೆಳೆಗಳನ್ನು ಬೆಳೆದು, ಕೆಲವೇಕೆಲವು ಬೆಳೆಗಳಲ್ಲಿ ಗೆದ್ದು, ಹಲವಾರಲ್ಲಿ ಸೋತು, ಅನನುಕೂಲತೆಗಳ ಹೊರತಾಗಿಯೂ ಸೃಜನಶೀಲತೆಯನ್ನು ಕಂಡು ‘ಕೃಷಿಯೇ ಆತ್ಮಸಾಕ್ಷಾತ್ಕಾರಕ್ಕೆ ಸಾಧನ’ ಎಂಬ ಮಂತ್ರ ಪಠಿಸುವ ನನ್ನ ಸೋದರಮಾವ ನನಗೆ ಮಾದರಿ. ಎಂಟನೆಯ ತರಗತಿಯಿಂದ ಶುರುಮಾಡಿ ಸಾಗರದ ಕಾಲೇಜಿನಲ್ಲಿ ಎಂ.ಕಾಂ. ಮುಗಿಸುವವರೆಗೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಹಾಲು ಕರೆಯುತ್ತಿದ್ದ, ಆಮೇಲೊಂದು ದಿನ ನಮ್ಮ ಮನೆಯ ಕೊಟ್ಟಿಗೆಯನ್ನು ಖಾಲಿ ಮಾಡಬೇಕಾದ ಸಂದರ್ಭದಲ್ಲಿ ಕಣ್ಣಲ್ಲಿ ನೀರು ಸುರಿಸಿದ ನನ್ನ ತಂಗಿ ವಿಮಾ, ಈ ಪುಸ್ತಕದಲ್ಲಿನ ‘ಕೃಷಿ ಮನೆಯೆಂಬ ಸಮೃದ್ಧಿಯ ನೆಲೆವೀಡು’ (ಪುಟ ಸಂಖ್ಯೆ 14) ಅಧ್ಯಾಯದ ರೇಖಾಚಿತ್ರಕ್ಕೆ ರೂಪದರ್ಶಿಯಾಗಿ ನಿಲ್ಲುತ್ತಾಳೆ. ಇನ್ನು, ತನ್ನ 66ನೆಯ ವಯಸ್ಸಿನಲ್ಲೂ ಊರಿನ ನಮ್ಮ ಮನೆಯಲ್ಲೇ ಒಂಟಿಯಾಗಿ, ಕೈಕಾಲು ಗಟ್ಟಿ ಇರುವವರೆಗೆ ಈ ತೋಟ ಮನೆ ಬಿಟ್ಟು ಯಾವ ಮಕ್ಕಳ ಮನೆಯಲ್ಲೂ ಬಂದು ಕುಳಿತುಕೊಳ್ಳಲಾರೆ ಎಂದು ನಮ್ಮ ಮೂರು ಎಕರೆ ಅಡಿಕೆ ತೋಟವನ್ನು ಯಾವ ಗಂಡಸರಿಗೂ ಕಡಿಮೆ ಇಲ್ಲದಂತೆ ಉತ್ತಮವಾಗಿ ಕೃಷಿ ಮಾಡಿಸಿ, ಒಮ್ಮೆ ತೋಟದಲ್ಲಿ ಓಡಾಡಿ ಬಂದರೆ ಮನಸ್ಸೆಲ್ಲ ಹಗುರ ಎನ್ನುವ ಸ್ವಾಭಿಮಾನಿ ನನ್ನಮ್ಮ ಪುಟಪುಟದಲ್ಲೂ ನನಗಿದರಲ್ಲಿ ಕಾಣುತ್ತಾರೆ. ಈ ಪುಸ್ತಕದ ಅನೇಕ ಪುಟಗಳನ್ನು ನಾನು ಫೋನ್‌ನಲ್ಲಿಯೇ ಅಮ್ಮನಿಗೆ ಓದಿ ಹೇಳಿದಾಗ, ತನಗೊಂದು ತನ್ನ ಅಣ್ಣ-ತಮ್ಮಂದಿರಿಗೆ ಒಂದೊಂದು ಪ್ರತಿಗಳನ್ನು ತೆಗೆದುಕೊಂಡು ಬಾ ಎಂದು ಹೇಳಿದಾಗ ನನಗೆ ವಸಂತ ಕಜೆಯವರ ಪುಸ್ತಕದ ಯಶಸ್ಸಿಗೆ ಯಾವ ಬಹುಮಾನ ಘೋಷಿಸುವ ಮಾರ್ಕೆಟಿಂಗ್ ಟೆಕ್ನಿಕ್‌ನ ಅಗತ್ಯ ಕಿಂಚಿತ್ತೂ ಇಲ್ಲ ಎಂದೆನಿಸಿತು.

ಅನೇಕ ಬಾರಿ ಪೇಟೆ ಮಂದಿಗೆ ನಮ್ಮ ಹಳ್ಳಿ ಜೀವನದ ಶ್ರೀಮಂತಿಕೆಯನ್ನು ವಿವರಿಸುವಾಗ ನಾನು ಸೋತಿದ್ದೇನೆ. ಏಕೆಂದರೆ ಅನೇಕ ಕಥೆ-ಕಾದಂಬರಿಗಳಲ್ಲಿ ಹಳ್ಳಿಯ ಜೀವನವನ್ನು ಚಿತ್ರಿಸುವಾಗ ದಾಯಾದಿ ಕಲಹ, ಮೇಲ್ಜಾತಿಯವರಿಂದ ತುಳಿತ, ಅಂತರ್ಜಾತಿ ಅನೈತಿಕ ಸಂಬಂಧಗಳು, ಹಳ್ಳಿಯ ಮೂಲಭೂತ ಸಮಸ್ಯೆ... ಇವಿಷ್ಟೇ ಕಥಾಹಂದರವಾಗಿರುತ್ತವೆ. ಹಳ್ಳಿಗಳಲ್ಲಿರುವ ಒಳ್ಳೆಯ ಅಂಶಗಳನ್ನು ಲೇಖಕರು ಎತ್ತಿ ಹಿಡಿಯುವುದೇ ಇಲ್ಲ. ಹಾಗಾಗಿ ಕೆಲವು ಪೇಟೆ ಮಂದಿ ಹಳ್ಳಿ ಎಂದರೆ... ವ್ಯಾಕ್ ಎಂದು ಕೆಟ್ಟ ಚಿತ್ರಣವೊಂದನ್ನು ಅಳಿಸಲಾರದೆ ತುಂಬಿಕೊಂಡಿರುತ್ತಾರೆ. ಹೀಗಿರುವಾಗ ಈಗಿನ ಉದ್ಯೋಗ ಬಿಟ್ಟು ಊರು ಸೇರಬೇಕೆಂದು ದ್ವಂದ್ವದಲ್ಲಿರುವವರು ಮಾತ್ರವಲ್ಲದೆ ಎಲ್ಲರೂ ಸರಳತೆಯ ಪಾಠ ಕಲಿಯಲು ಓದಲೇಬೇಕಾದ ಪುಸ್ತಕ ಇದು. ಆವಶ್ಯಕತೆಗಿಂತ ಹೆಚ್ಚಾಗಿ ಕೂಡಿಟ್ಟ ದುಡ್ಡು ಮತ್ತು ದೇಹದ ಬೊಜ್ಜು ಎರಡೂ ಹೇಗೆ ಒಂದೇ ಆಗಿವೆ ಎಂದು ಪುಸ್ತಕದ ಅನೇಕ ಕಡೆ ಉದಾಹರಣೆ ಸಹಿತ ವಿವರಣೆ ತುಂಬಾ ಹೊತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಪುಸ್ತಕದಲ್ಲಿ ಪರಿಚಯಿಸಿದ, ಎ.ಪಿ ಚಂದ್ರಶೇಖರ, ತಮಿಳುನಾಡಿನ ಶ್ರೀರಾಮ್ ಮತ್ತು ಕರ್ಪಗಂ ದಂಪತಿ, ಅಮೆರಿಕದ ವೆಂಡೆಲ್ ಬೆರ್ರಿಯವರು ಹೇಗೆ ವಸಂತ ಕಜೆಯವರಿಗೆ ಊರಿಗೆ ಮರಳಲು ಮಾದರಿಯಾದರೋ ಹಾಗೆ ಈ ಪುಸ್ತಕವನ್ನು ಓದಿದವರು ಊರಿಗೆ ಮರಳುವ ಆಲೋಚನೆಯನ್ನು ಕೇವಲ ‘ಮನಸ್ಸಿನಲ್ಲಿ ಹಾದು ಹೋಗುವ’ ಆಲೋಚನೆಯಾಗಿಡದೆ ಕಾರ್ಯರೂಪಕ್ಕೆ ತಂದರೆ ಪುಸ್ತಕಕ್ಕೂ ಸಾರ್ಥಕ್ಯ; ಅದೇ ನಾವು ಉಣ್ಣುವ ಅನ್ನಕ್ಕೆ ಮತ್ತು ನಮ್ಮನ್ನು ಹೊತ್ತ ಭೂಮಿತಾಯಿಗೆ ನಾವು ಸಲ್ಲಿಸುವ ಅಪ್ರತಿಮ ಕಾಣಿಕೆ. ‘ನನಗೆ ವಿಧ್ವಂಸಕ ಎನಿಸುವ ದೊಡ್ಡ ಕನಸುಗಳಿಲ್ಲ, ನಾನು ಪಡೆದ ಜೀವನವನ್ನೇ ಬಯಸಿದಂತಿದೆ’ ಎನ್ನುವ ವಸಂತ ಕಜೆಯವರ, ತನ್ನ ದಾರಿ ತಾನೇ ಕಂಡುಕೊಂಡು ಬೆಳೆಯುವ ಪುಟ್ಟಪುಟ್ಟ ಕನಸುಗಳೆಲ್ಲವೂ ನನಸಾಗಲಿ ಎಂದು ಆಶಿಸುತ್ತೇನೆ. -ವಿದ್ಯಾ ದತ್ತಾತ್ರಿ.’

ಪುಸ್ತಕದ ೨, ೩ ನೆಯ ಮುದ್ರಣಗಳನ್ನು ವಿತರಿಸಿದ ಸಾವಣ್ಣ ಅವರೊಂದಿಗೆ

ಫೇಸ್ಬುಕ್ ನಲ್ಲಿ ಬಹಳ ಮಂದಿ ಸನ್ಮಿತ್ರರು ಅಭಿಪ್ರಾಯ ವ್ಯಕ್ತಪಡಿಸಿದಾರೆ. ಅವೆಲ್ಲವೂ ನನಗೆ ಟ್ಯಾಗ್ ಆಗಿರುವುದರಿಂದ ನಾನು ಇಲ್ಲಿ ಪ್ರತ್ಯೇಕವಾಗಿ ಬರೆಯಲು ಹೋಗುವುದಿಲ್ಲ. ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀ ಭಾರವಿ ದೇರಾಜೆ ಹೀಗೆ ಅದೆಷ್ಟೋ ಮಂದಿ ಕಲಾವಿದರು, ಬರಹಗಾರರು, ಸ್ನೇಹಿತರು ನನ್ನ ಬೆನ್ನು ತಟ್ಟಿದ್ದು ನನಗೆ ಎಂದೆಂದಿಗೂ ಸ್ಮರಣೀಯ.(https://www.facebook.com/vasanth.kaje)

ಮೂರನೆಯ ಮುದ್ರಣದಲ್ಲಿ ಮುದ್ರಣ ಸಂಖ್ಯೆ ಎರಡು ಎಂದು ಇರಲಿದೆ. ಅನುಕ್ರಮಣಿಕೆ ಹೀಗಿದೆ ( 0 - ಡಿವಿಜಿ ಬಳಗ, 1 ಮತ್ತು 2 ಸೀಮಾ ಬುಕ್ಸ್).

ವಂದನೆಗಳು,
ವಸಂತ ಕಜೆ.

Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!