ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು
ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರುಎಂಬ ವಿಶೇಷ ಪುಸ್ತಕವು ಖಾಸಗಿ ಸಮಾರಂಭವೊಂದರಲ್ಲಿ ಇಂದು ಬಿಡುಗಡೆಯಾಯಿತು. ನನ್ನ ಸೋದರತ್ತೆ ಶ್ರೀಮತಿ ಹೇಮನಳಿನಿ ಅವರ ಪತಿಉರಿಮಜಲು ಮಾವ’ (ಅವರು ಕೋಲ್ಪೆಯೆಂಬಲ್ಲಿ ನೆಲೆಸಿದ್ದರಿಂದ ಕೋಲ್ಪೆಮಾವ) ಬಲುವಿಸ್ತಾರವಾದ ಜೀವನಾನುನುಭವವನ್ನು ಪುಸ್ತಕವೊಂದರಲ್ಲಿ ಹಿಡಿದಿಡುವ ಕಷ್ಟಕರ ಆದರೆ ಪ್ರಾಮಾಣಿಕ ಯತ್ನವು ಅದಾಗಿದೆ.


ಉರಿಮಜಲು ಮಾವನನ್ನು ನನ್ನಂಥ ಕಿರಿಯರು ನಮ್ಮ ಬಾಲ್ಯದಿಂದನೀರು ಹೇಳುವಮಾವನಾಗಿ ಕಂಡಿದ್ದೇವೆ. ‘ನೀರು ಹೇಳುವುದೆಂದರೆಆಕಾಂಕ್ಷಿಗಳ ಯಾವುದಾದರೂ ಒಂದುನಿರ್ಣಾಯಕ ಆಧಾರ ಮೇಲೆ ಅವರಿಗೆ ಭೂಮಿಯ ಯಾವ ಜಾಗದಲ್ಲಿ ಕೆರೆ/ಬಾವಿ ಅಥವಾ ಬೋರು ಕೊರೆಸಿದರೆ ನೀರು ಸಿಗಬಲ್ಲುದು ಎಂದು ತಿಳಿಸಿಕೊಡುವುದು. ಇಲ್ಲಿನಿರ್ಣಾಯಕ ಆಧಾರಅಥವಾ reference ಎಂದರೆನೀರು ಕೇಳಿ ಬಂದವನಜಾತಕ/ಅಥವಾ ಹೆಸರು/ಜನ್ಮನಕ್ಷತ್ರ/ಅಥವಾ ಕ್ಷಣದ ಗಡಿಯಾರದ ಸಮಯ - ಹೀಗೆ ಯಾವುದಾದರೂ ಒಂದರ ಸಹಾಯದಿಂದ ಆತ ಬಯಸುತ್ತಿರುವ ಆಯಾಮದಲ್ಲಿ(ವಿದ್ಯೆ/ಉದ್ಯೋಗ/ನೀರು/ಮದುವೆ ಇತ್ಯಾದಿ) ಫಲವನ್ನು ಹೇಳುವುದು.

 ಸುಮಾರು ಐವತ್ತು ವರ್ಷ ಹಿಂದೆಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಂಚಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿ ಒಂದು ದುರದೃಷ್ಟಕರ ಅಪಘಾತದಲ್ಲಿ ಕಾಲು ಸಂಪೂರ್ಣ ನಜ್ಜುಗುಜ್ಜಾಗಿ, ಊರಿಗೆ ಮರಳಿ, ತಕ್ಕಮಟ್ಟಿಗೆ ಗುಣಮುಖನಾಗಿ, ಕೌಟುಂಬಿಕ ಪರಿಸ್ಥಿತಿಯ ಅನಿವಾರ್ಯತೆಯಿಂದ ಕೃಷಿಕನಾದುದು ಒಂದು ದೊಡ್ಡ ಏರಿಳಿತದ ಹಾದಿ. ಕೃಷಿಯೊಂದಿಗೆ ಹವ್ಯಾಸವಾಗಿ ಬೆಳೆದುಬಂದ ಜಾತಕಫಲದ ಮುನ್ಸೂಚನೆಯನ್ನು ಸಂಪೂರ್ಣ ಉಚಿತಸೇವೆಯಾಗಿ ನಾಲ್ಕಾರು ದಶಕಗಳ ಕಾಲ ಬಡವಬಲ್ಲಿದರೆನ್ನದೆ ನೀಡಿದುದು ಒಂದು ಅಸಾಮಾನ್ಯ ಸೇವೆ.

ಒಂದು ಹಳೆಯ ಸವೆದ ಸ್ಲೇಟು ಮತ್ತು ಕಡ್ಡಿಯನ್ನು ಬಳಸಿತುಳುಲಿಪಿಯಲ್ಲಿ ಒಂದು ಶ್ಲೋಕವನ್ನು ಮೊದಲಾಗಿ ಅವರು ಬರೆಯುತ್ತಿದ್ದರು. ಅದನ್ನು ಒರೆಸಿ ಅತ್ಯಂತ ಅಸ್ಪಷ್ಟ ಅಕ್ಷರಗಳಲ್ಲಿ ಅದೇನೋ ಲೆಕ್ಕಾಚಾರಗಳನ್ನು ಮಾಡಿ ಸಮಸ್ಯೆ ಹೊತ್ತು ತಂದವರ ವಿವರಗಳನ್ನು ಅವರಿಗೇ ಆಶ್ಚರ್ಯವಾಗುವಂತೆ ವಿವರಿಸುವುದಕ್ಕೆ ನಾನು ಅಸಂಖ್ಯ ಬಾರಿ ಸಾಕ್ಷಿಯಾಗಿದ್ದೇನೆ. ಇದರ ಹೆಚ್ಚಿನ ವಿವರಗಳು ಪುಸ್ತಕದಲ್ಲಿವೆ. ಅವನ್ನು ಇಲ್ಲಿ ವಿವರಿಸುವುದು ನನ್ನ ಉದ್ದೇಶವಲ್ಲ.

ಉರಿಮಜಲು ಮಾವನ ಬಗ್ಗೆ ನಾನು ಕಂಡ ಕೆಲವು ಸೂಕ್ಷ್ಮವಾದ ಆದರೆ ಗಹನವಾದ ಅಂಶಗಳನ್ನು ಹೇಳಬೇಕಿದೆ.

 ಮೊದಲನೆಯದಾಗಿ ಅವರು ತಮ್ಮ ಪ್ರತಿಭೆಯಿಂದ ಕಿಂಚಿತ್ ದ್ರವ್ಯಲಾಭವನ್ನೂ ಪಡೆಯಲಿಲ್ಲ. ಆದ್ದರಿಂದ ಅದನ್ನೊಂದುಕಣ್ಕಾಟ್ಟಾಗಿನಡೆಸಿ ಅವರಿಗೆ ಆಗುವುದು ಹೋಗುವುದು ಏನೂ ಇರಲಿಲ್ಲ. ತಮ್ಮ ಕೆಲಸವನ್ನುಸೇವೆ ರೂಪದಲ್ಲಿ ನಡೆಸುವ ಕೆಲವು ಜನರುಸಮಾಜಕ್ಕೆ ತಾನೊಬ್ಬ ಉಪಕಾರಿಎಂಬ ಭಾವನೆಯ ಸುಳಿಗೆ ಸಿಲುಕುವುದನ್ನು ನಾವು ಆಗಾಗ ಕಾಣುತ್ತೇವೆ. ಭಾವವು ಆತ್ಮಘಾತುಕವಾದುದು. ಇದು ಮುಂದೆ ಬೆಳೆಬೆಳೆದುತನ್ನನ್ನು ಸಮಾಜ ಗುರುತಿಸಲಿಲ್ಲ/ನೆನಪಿಡಲಿಲ್ಲಎಂಬ ವಿಕಾರ ರೂಪಗಳಾಗಿ ಬದಲಾಗುವುದನ್ನು ನಾವು ಕಾಣುತ್ತೇವೆ. ದುಡ್ಡು ಪಡೆದು ಮಾಡುವ ಅಭಿನಯದಂಥ ಉದ್ಯೋಗಗಳನ್ನುಚಿತ್ರರಂಗಕ್ಕೆ ಸಲ್ಲಿಸಿದ ಸೇವೆಇತ್ಯಾದಿ ಪದಪುಂಜಗಳಿಂದ ವಿವರಿಸುವುದನ್ನು ಕಂಡು ನಮ್ಮ ಕಣ್ಣು ಸವೆದು ಹೋಗಿಬಿಟ್ಟಿದೆ. ಆದರೆ ಇಂಥ ಯಾವುದೇ ಉರುಳಿಗೆ ಕೋಲ್ಪೆಮಾವ ಬೀಳಲಿಲ್ಲ. ತಾನು ಮಾಡಿದುದು ಒಂದು ಮಹತ್ತಾದ ಕೆಲಸ ಎಂದುತಾನೇ ಅಂದುಕೊಳ್ಳದಿರುವ’ - ಒಬ್ಬ ನೈಜ ದಾರ್ಶನಿಕನಿಗೆ ಮಾತ್ರ ಸಿದ್ಧಿಸಬಹುದಾದ ದೃಷ್ಟಿಕೋನವು ಅವರಿಗೆ ಲಭಿಸಿದುದು ಅವರಿಗೆ ದೇವರು ಮಾಡಿದ ಅನುಗ್ರಹ. ‘ಉಪಕಾರಿ ತಾನು, ಎನ್ನುಪಕೃತಿಯು ಜಗಕೆಂಬ ವಿಪರೀತ ಮತಿಯನು ಉಳಿದು (ಬಿಟ್ಟು)’  ಅವರುಇದು ನನ್ನದಲ್ಲಎಂದಂದುಕೊಂಡು ಅದರ ಪ್ರಭಾವಳಿಯಿಂದ ಹೊರಗುಳಿದರು.

ಕೋಲ್ಪೆಮಾವ ನೀಡುತ್ತಿದ್ದ ನೀರಿನ ಅಥವಾ ಭವಿಷ್ಯದ ಮುನ್ಸೂಚನೆಯಲ್ಲಿ ನೂರಕ್ಕೆ ನೂರು ಭಾಗ ನಿಜವಾಗುತ್ತಿರಲಿಲ್ಲವೆನ್ನುವುದು ನಿಜ. ಇದಕ್ಕೆ ಕೆಲವು ಕಾರಣಗಳು ಇರಬಹುದು. ಆಕಾಂಕ್ಷಿಯುಭವಿಷ್ಯವೆಂಬ ವಿದ್ಯೆಯನ್ನು ನೈಜ ನಂಬಿಕೆಯಿಂದ ಆತುಕೊಳ್ಳದೆ ಕೇವಲ ಪರೀಕ್ಷಕ ದೃಷ್ಟಿಯಿಂದಇದನ್ನೂ ಒಂದು ಕೈ ನೋಡೋಣಎಂಬ ಉಡಾಫೆಯಿಂದ ನೋಡುವುದು ಅಥವಾ ನನಗೆ ತಿಳಿಯದ ಇನ್ನೂ ಬೇರೇನೋ ಕಾರಣಗಳಿರಬಹುದು. ಆದರೆ ಸತ್ಯವಾಗುತ್ತಿದ್ದುದರಶ್ರೇಯವನ್ನುಅವರೆಂದೂ ಹೊತ್ತುಕೊಳ್ಳದುದರಿಂದನಿಜವಾಗದುದರ ಭಾರವನ್ನೂಅವರು ಹೊರಬೇಕಾಗಲಿಲ್ಲ. ತಾನು ಮಾಡುವಕರ್ಮದಫಲದಿಂದ ಅವರು ವಿಮುಕ್ತರಾಗಿದ್ದುದು, ಆದರೆ ಕರ್ಮದಲ್ಲಿ ದಶಕಗಳ ಕಾಲ ತಾದಾತ್ಮ್ಯದಿಂದ ತೊಡಗಿದ್ದುದು ಭಗವದ್ಗೀತೆಯ ಸಂದೇಶದ ನೈಜ ಅನುಷ್ಠಾನವಾಗಿದೆ ಎಂಬುದನ್ನು ಗಮನಾರ್ಹವಾಗಿದೆ. ಗೀತಾಸಾರದ ಅನುಷ್ಠಾನವು ಸಾಮಾನ್ಯರಿಗೆ ಸಿದ್ಧಿಯಾಗುವಂಥದ್ದಲ್ಲ.

ಬೆಳೆಗೆರೆ ಕೃಷ್ಣಶಾಸ್ತ್ರಿಯವರಯೇಗ್ದಾಗೆಲ್ಲಾ ಐತೆ ಒಂದು ಕಥೆ ನನಗಿಲ್ಲಿ ನೆನಪಾಗುತ್ತಿದೆ. ಒಂದು ಹಳ್ಳಿಯ ಮೂಲೆಯಲ್ಲಿ ಒಂದು ಮಗು ಖಾಯಿಲೆಯಿಂದ ಒದ್ದಾಡುತ್ತ ಮರಣ ಶಯ್ಯೆಯಲ್ಲಿತ್ತು. ತಾಯಿ ರೋದಿಸುತ್ತಿದ್ದಳು. ವೈದ್ಯರನ್ನು ಬರಹೇಳಲಾಗಿದ್ದುದರಿಂದ ಮನೆಯವರು ಕಾಯುತ್ತಿದ್ದರು. ರೋದನವನ್ನು ಕೇಳಿ ಕೃಷ್ಣಶಾಸ್ತ್ರಿಗಳು ಗುರು ಮುಕುಂದೂರು ಸ್ವಾಮಿಗಳೊಂದಿಗೆ ಅಲ್ಲಿ ನಡೆದು ಕುತೂಹಲದಿಂದ ನೋಡುತ್ತಾರೆ. ವೈದ್ಯ ಬಂದು ಇದಕ್ಕೆ ಬೇಕಾದ ಔಷಧ ತನ್ನಲ್ಲಿಲ್ಲ. ಪೇಟೆಗೆ ಹೋಗಿ ತರುವುದರಿಂದ ಏನೂ ಲಾಭವಿಲ್ಲ - ಏಕೆಂದರೆ ಅಷ್ಟುಹೊತ್ತು ಮಗು ಬದುಕಲಾರದು ಎಂದು ಕೈಚೆಲ್ಲುತ್ತಾನೆ. ಆಗ ಮುಕುಂದೂರು ಸ್ವಾಮಿಗಳು ಮಧ್ಯೆ ಪ್ರವೇಶಿಸಿ, ‘ಸರಿಯಾಗಿ ನೋಡಿ, ನಿಮ್ಮ ಬ್ಯಾಗಿನಲ್ಲಿ ಅದು ಇರಬಹುದುಎಂದು ಸಲಹೆ ನೀಡುತ್ತಾರೆ. ವೈದ್ಯ ತನ್ನಲ್ಲಿ ಅದು ಇಲ್ಲವೆಂದು ಮತ್ತೆ ಮತ್ತೆ ಹೇಳುತ್ತಾನೆ. ಮುಕುಂದೂರು ಸ್ವಾಮಿಗಳು ಮತ್ತೆ ನೋಡಿರೆಂದು ಒತ್ತಾಯ ಮಾಡುತ್ತಾರೆ. ಕೊನೆಗೆ ವೈದ್ಯ ಕೋಪಗೊಂಡು ತನ್ನ ಇಡಿಯ ಬ್ಯಾಗನ್ನು ತಲೆಕೆಳಗು ಮಾಡಿ ಔಷಧಿಯನ್ನೆಲ್ಲ ಹೊರಚೆಲ್ಲುತ್ತಾನೆ. ಅವನಿಗೆ ಪರಮಾಶ್ಚರ್ಯವಾಗುವಂತೆ ಔಷಧ ಅಲ್ಲಿ ಕಾಣಿಸುತ್ತದೆ. ಅದನ್ನು ನೀಡಿದಾಗ ಮಗು ಮರಣದಿಂದ ಹೊರಬಂದು ಗುಣಮುಖವಾಗುತ್ತದೆ. ಕೃಷ್ಣಶಾಸ್ತ್ರಿಗಳು, ಮುಕುಂದೂರು ಸ್ವಾಮಿಗಳೊಂದಿಗೆ ಅಲ್ಲಿಂದ ಹೊರಡುತ್ತಾರೆ. ಪಕ್ಕಕ್ಕೆ ಸರಿದ ಮೇಲೆಔಷಧಿಯನ್ನು ನೀವೇ ವೈದ್ಯನ ಬ್ಯಾಗಿನೊಳಗೆ ಇಟ್ಟಿರಿ, ಅದನ್ನೇಕೆ ವೈದ್ಯನಿಗೆ ತಿಳಿಯಪಡಿಸಲಿಲ್ಲ?’ ಎಂಬರ್ಥದ ಪ್ರಶ್ನೆಯನ್ನು ಕೇಳುತ್ತಾರೆ. ಆಗ ಸ್ವಾಮಿಗಳುಸಾಹುಕಾರನ ಬಳಿ ಇರುವ ಸಂಪತ್ತಿನಂತೆಯೇ, ಸನ್ಯಾಸಿಯ ಬಳಿಯಿರುವ ಸಿದ್ಧಿ. ಅದು ಇದೆಯೆಂಬ ಅಹಂಕಾರ ತಲೆಗೆ ಹತ್ತಿದರೆ ಅವನತಿಎಂಬರ್ಥದ ಉತ್ತರವನ್ನು ಕೊಡುತ್ತಾರೆ [ನನ್ನ ಹಳೆಯ ಓದಿನ ನೆನಪಾದಂತೆ ಇಲ್ಲಿ ಕಥೆಯನ್ನು ಬರೆದಿದ್ದೇನೆ, ಯಥಾರೂಪವಲ್ಲ]. 

ಒಮ್ಮೆ ನನ್ನ ಸಂಬಂಧಿಯೊಬ್ಬರು ನಮ್ಮ ಮನೆಯ ಒಂದು ಕಾರ್ಯಕ್ರಮದ ದಿನ ಕೋಲ್ಪೆಮಾವನಲ್ಲಿ ಉಭಯಕುಶಲೋಪರಿ ಮಾತನಾಡುತ್ತಿದ್ದರು. ಅವರು ವಿವಾಹಾಕಾಂಕ್ಷಿಯಾಗಿದ್ದುದರಿಂದ ಮದುವೆ ಯಾವಾಗ ಆಗಬಹುದೆಂದು ಕೇಳಿದರು. ಜಾತಕ ಇತ್ಯಾದಿಗಳೊಂದಿಗೆ ಉದ್ದೇಶಪೂರ್ವಕ ಅವರು ಕೇಳಿರಲಿಲ್ಲ, ಕೋಲ್ಪೆಮಾವ ಸಿಕ್ಕಿದುದರಿಂದ ಕೇಳಿದರಷ್ಟೆ. ಮಾವ ಗಡಿಯಾರದಲ್ಲಿ ಸಮಯ ನೋಡಿನೀನೊಂದು ಹುಡುಗಿಯನ್ನು ಇಷ್ಟಪಟ್ಟಂತಿದೆಯಲ್ಲ, ಮುಂದುವರೆಸುಎಂದು ಹೇಳಿದರು. ಕೇಳಿದವರು ಅಪ್ರತಿಭನಾಗಿ ಕರೆಂಟ್ ಶಾಕ್ ಹೊಡೆದಂತಾಗಿದ್ದರು. ಆಮೇಲೆ ಅದೇ ಹುಡುಗಿಯೊಂದಿಗೆ ಅವರ ಮದುವೆಯಾಗಿ ಈಗ ಮೀಸೆಯೆತ್ತರದ ಮಗನಿದ್ದಾನೆ.

ಕೋಲ್ಪೆಮಾವನ ಸಿದ್ಧಿಯಿಂದ ಉಪಕೃತರಾದವರು, ಅದರ ಬಗ್ಗೆ ಕಥೆ ಹೇಳಬಲ್ಲವರು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲೆಲ್ಲ ಇದ್ದಾರೆ. ಆದರೆ ಮುಕುಂದೂರು ಸ್ವಾಮಿಗಳಂತೆ ಕೋಲ್ಪೆಮಾವನೂ ತನ್ನ ಸಿದ್ಧಿಯ ಶಿಲುಬೆಯನ್ನು ಹೊರದೆ ಹಗುರವಾಗಿದ್ದರು. ಬೋರ್ವೆಲ್ ಪಾಯಿಂಟುಗಳು ಇನ್ನೊಬ್ಬರ ನೀರನ್ನು ಕಸಿಯತೊಡಗಿದೆ ಎಂದು ತಿಳಿದ ದಿನದಿಂದ ನೀರು ಹೇಳುವುದನ್ನು ಬಿಟ್ಟೇ ಬಿಟ್ಟರು - ಆಮೇಲೆ ತಮ್ಮ ಆತ್ಮೀಯ ಸಂಬಂಧಿಕರಿಗೂ ಇಲ್ಲ. ಅವರಂತೆ ಭವಿಷ್ಯ ನುಡಿಯಲು ನಾವು ಕಲಿಯಬೇಕಿಲ್ಲ. ಆದರೆ ಅವರಂತೆ ಜೀವಿಸುವುದನ್ನು, ನಮ್ಮ ನಮ್ಮ ಸಿದ್ಧಿಯಿಂದ ಮುಕ್ತರಾಗುವುದನ್ನು ನಾವು ಕಲಿಯಬೇಕಿದೆ. ಇದು ಅವರು ಕಲಿಸದೆಯೆ ಕಲಿಸುವ ಪಾಠ.


Comments

  1. ತುಂಬಾ ಚೆನ್ನಾಗಿ ಬರೆಯುತ್ತಿರಿ..... ನಾನು ,ಯೋಗ್ದಗೆಲ್ಲ ಐತಿ ಓದಿದ್ದೇನೆ.....ಹೇಗಿದ್ದೀರಿ.... ಬಹಳ ವರ್ಷಗಳಾಯಿತು. ನಿಮ್ಮ್ ಕಾಂಟ್ಯಾಕ್ಟ್ ನಂಬರ್ ಏನು. ಮಕ್ಕಳು ಮುದ್ದಾಗಿದ್ದಾರೆ

    ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

Seeds as gifts and souvenirs!