ಮೊಟ್ಟೆಯಿಡುವ ಕೆಲಸಗಾರರು

ಒಂದೊಂದು ಕುಳಿಯೊಳಗೆ ಹತ್ತಾರು ಮೊಟ್ಟೆಯಿಟ್ಟ ಕೆಲಸಗಾರ ಹುಳಗಳು

‘ಜೇನುಪೆಟ್ಟಿಗೆಯಲ್ಲಿ ರಾಣಿಜೇನುಹುಳವೊಂದೇ ಮೊಟ್ಟೆಯಿಡಬಲ್ಲುದು. ಕೆಲಸಗಾರ ಹುಳಗಳು ಬರೀ ಕೆಲಸಮಾಡುತ್ತವಷ್ಟೆಎಂಬುದನ್ನು ಕೇಳಿ, ಪಾಠದಲ್ಲಿ ಓದಿ ನಮಗೆಲ್ಲ ಚರ್ವಿತಚರ್ವಣವಾಗಿದೆ. ಆದರೆ ಕೆಲಸಗಾರ ಹುಳಗಳೂ ಕೂಡ ರಾಣಿಯಿಲ್ಲದೆ ಅನಾಥವಾದ ಜೇನುಕುಟುಂಬದಲ್ಲಿ ಕೆಲವೊಮ್ಮೆ ಮೊಟ್ಟೆಯಿಡುತ್ತವೆಯೆಂಬುದು ನುರಿತ ಜೇನುಪಾಲಕರಿಗೆ ತಿಳಿದಿರುವ ವಿಷಯ; ನನ್ನಂಥ ಹೊಸಬರಿಗೆ ಹೊಸಕಲಿಕೆ.

ಪಾಲು ಮಾಡುವ ಎರಡು ವಿಧಾನಗಳು
ಜೇನುಪಾಲಕರು ಜೇನುಗೂಡನ್ನು ಎರಡು ರೀತಿ ಪಾಲು ಮಾಡುತ್ತಾರೆ. ತಾವಾಗಿ ಪಾಲಾಗಲು ನಿರ್ಧರಿಸಿದ, ರಾಣಿಮೊಟ್ಟೆಯಿಟ್ಟು ಪಾಲಿನ ತಯಾರಿ ನಡೆಸಿದ ಕುಟುಂಬವನ್ನು ಸೂಕ್ತವಾಗಿ ಒಡೆದು ಬೇರೆಬೇರೆ ಪೆಟ್ಟಿಗೆಗಳಿಗೆ ವರ್ಗಾಯಿಸುವುದು ಒಂದು ವಿಧಾನ. ಪಾಲಾಗುವ ಉದ್ದೇಶವಿಲ್ಲದಿದ್ದರೂ, ಚೆನ್ನಾಗಿ ಹುಳಸಂಖ್ಯೆಯಿದ್ದು, ಆಹಾರದ ದಾಸ್ತಾನೂ ಇದ್ದು, ಗಂಡುನೊಣಗಳೂ ಹೇರಳವಾಗಿರುವ ಕುಟುಂಬದಲ್ಲಿ ರಾಣಿಮೊಟ್ಟೆಗಳುಇಲ್ಲದಿದ್ದರೂಫ್ರೇಮುಗಳನ್ನು ಎತ್ತಿ ಬೇರೆ ಇಟ್ಟು ಪಾಲಾಗಲು ಪ್ರಚೋದಿಸುವುದು ಎರಡನೆಯ ವಿಧಾನ. ಎರಡು ವಿಧಾನದಲ್ಲೂ ಪಾಲು ಯಶಸ್ವಿಯಾಗದಿದ್ದರೆ - ಅಂದರೆ - ರಾಣಿಮೊಟ್ಟೆಗಳು ಸರಿಯಾಗಿ ಬೆಳೆಯದೆ / ಮಿಲನವು ಯಶಸ್ವಿಯಾಗದೆ ಅಥವಾ ಹಕ್ಕಿಗಳಿಗೆ ಆಹಾರವಾಗಿ ಹೊಸ ರಾಣಿ ತಯಾರಾಗದಿದ್ದರೆ ಹೊಸ ಪಾಲು ರಾಣಿಯಿಲ್ಲದೆ ಅನಾಥವಾಗುತ್ತದೆ. ಆಗ ಕೆಲಸಗಾರ ಹುಳಗಳು ಮೊಟ್ಟೆಯಿಡಲು ಶುರುಮಾಡುವುದುಂಟು.

ರಾಣಿಹುಳ ಇಟ್ಟ ಮೊಟ್ಟೆಗಳು - ಒಂದು ಕುಳಿಯೊಳಗೆ ಒಂದೇ ಮೊಟ್ಟೆ
ಬಾರಿ ನಾನು ಮಾಡಿದ ಒಟ್ಟು 4 ಪಾಲುಗಳು ಯಶಸ್ವಿಯಾಗಿ ಹೊಸಕುಟುಂಬಗಳಾದವು. 2 ಪಾಲುಗಳು ಸೋತವು. ಸೋತವಲ್ಲಿ ಒಂದಕ್ಕೆ ಇರುವೆ ಮುತ್ತಿ ಎಲ್ಲಾ ಹುಳಗಳು ಓಡಿಹೋದವು. ಇನ್ನೊಂದರಲ್ಲಿ ರಾಣಿ ತಯಾರಾಗದೆ ಬರೀ ಕೆಲಸಗಾರ ಮತ್ತು ಗಂಡು ಹುಳಗಳಷ್ಟೇ ಉಳಿದುಕೊಂಡಿತು. ಇದನ್ನು ನಾನು ನವಂಬರ್ ೧೦ರಂದು ಪಾಲು ಮಾಡಿದ್ದೆ. ಈಗ ನಲುವತ್ತು ದಿನಗಳ ಬಳಿಕ ಇನ್ನೂ ರಾಣಿಯಿಲ್ಲದಿದ್ದರೂ ಪೆಟ್ಟಿಗೆಯಲ್ಲಿ ಬರೀ ಕೆಲಸಗಾರ ಹುಳುಗಳು, ಗಂಡುಗಳು ಜೀವನ ನಡೆಸುತ್ತಿವೆ. ಪಾಲು ಮಾಡಿ ಸುಮಾರು 16-20 ದಿನಕ್ಕೆ ಹೊಸರಾಣಿ ತಯಾರಾಗಲಿಲ್ಲವೆಂಬ ಕಾರಣಕ್ಕೆ ಕೆಲಸಗಾರ ಹುಳಗಳು ಮೊಟ್ಟೆಯಿಡಲು ಶುರುಮಾಡಿದವು; ಅದು ಇನ್ನೂ ಮುಂದುವರೆದಿದೆ(ಪಾಲಾದ ಬಳಿಕ ಇಂದಿಗೆ ಐವತ್ತನೆಯ ದಿನದವರೆಗೆ). 


ತಂದೆಯಿಲ್ಲದ ಗಂಡುಹುಳಗಳು!
ರಾಣಿಹುಳ ಮತ್ತು ಕೆಲಸಗಾರ ಹುಳಗಳು ಒಂದೇ ರೀತಿಯ ಮೊಟ್ಟೆಯಿಂದ ತಯಾರಾಗುತ್ತವೆ ಎಂಬುದು ಜೇನು ಆಸಕ್ತರಿಗೆ ತಿಳಿದಿರುವಂಥದ್ದೇ. ರಾಣಿಮೊಟ್ಟೆಯನ್ನು ದೊಡ್ಡ ಕುಳಿಯಲ್ಲಿಟ್ಟು ವಿಶೇಷ ಆಹಾರ ನೀಡಿ ಬೆಳೆಸಲಾಗುತ್ತದೆ. ರಾಣಿ ಮತ್ತು ಕೆಲಸಗಾರ ಮೊಟ್ಟೆಗಳಿಗೆ ಗಂಡುಹುಳದಿಂದ ಪಡೆದ ವೀರ್ಯವನ್ನು ಸಂಕರಗೊಳಿಸುವುದು ಅಗತ್ಯ. ಕೆಲಸಗಾರ ಮತ್ತು ರಾಣಿ ಹುಳಗಳಲ್ಲಿ ರಾಣಿಯಿಂದ ಮತ್ತು ಗಂಡಿನಿಂದ ಪಡೆದ ಒಂದೊಂದು ಜೊತೆ ಕ್ರೋಮೋಸೋಮುಗಳು ಸೇರಿ ಒಟ್ಟು 2 ಜೊತೆ ಕ್ರೋಮೋಸೋಮುಗಳಿರುತ್ತವೆ(ಮನುಷ್ಯರಲ್ಲಿರುವಂತೆ). ಗಂಡು ಹುಳ ತಯಾರಾಗಲು ತಂದೆಯ ಅಗತ್ಯವಿರುವುದಿಲ್ಲ. ಅವುಗಳಲ್ಲಿ ಬರೀ ಒಂದು ಜೊತೆ ಕ್ರೋಮೋಸೋಮುಗಳು ಇರುತ್ತವೆ

ಮೊಟ್ಟೆಯಿಡುವ ಕೆಲಸಗಾರರು
ರಾಣಿಯಿಲ್ಲದಿದ್ದರೂ ಪೆಟ್ಟಿಗೆಯಲ್ಲಿ ಒಂದು ಮಟ್ಟಿನ ಹೊಂದಾಣಿಕೆ, ಕೆಲಸಗಾರಿಕೆ ಮುಂದುವರೆಯುವುದನ್ನು ನಾವು ಗಮನಿಸಬಹುದು. ಕಳೆದ ಒಂದೂವರೆ ತಿಂಗಳಿಂದ ಪೆಟ್ಟಿಗೆಯಲ್ಲಿ ಜೇನಿನ, ಪರಾಗದ ದಾಸ್ತಾನನ್ನು ಅವು ಮುಂದುವರೆಸಿವೆ. ರಾಣಿಯಿದ್ದಾಗಲೂ ಒಂದು ಸಣ್ಣ ಪ್ರಮಾಣದ ಕೆಲಸಗಾರ ಹುಳಗಳಲ್ಲಿ ಚೆನ್ನಾಗಿ ಬೆಳೆದ ಗರ್ಭಾಶಯ ಇರುತ್ತವಂತೆ. ಆದರೆ ರಾಣಿಯ ಫೆರಮೋನ್ ನಿಂದಾಗಿ ಅಥವಾ ಬೇರೆ ಕೆಲಸಗಾರರು ತಡೆಯುವುದರಿಂದ(?) ಕೆಲಸಗಾರರು ಮೊಟ್ಟೆಯಿಡುವ ಸಾಹಸ ಮಾಡುವುದಿಲ್ಲ. ರಾಣಿಯಿಲ್ಲದೆ ಅನಾಥವಾದ ಪೆಟ್ಟಿಗೆಯಲ್ಲಿ ಕೆಲಸಗಾರ ಹುಳಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಕೆಲಸಗಾರ ಹುಳಗಳಲ್ಲಿರುವಸ್ತ್ರೀತ್ವ ಉದ್ದೀಪನಗೊಳ್ಳುತ್ತದೆ.

ಕೆಲಸಗಾರ ಹುಳಗಳು ಒಂದೊಂದು ಕುಳಿಯಲ್ಲಿ ಒಂದೊಂದು ಮೊಟ್ಟೆಯಿಡುವ ಬದಲಿಗೆ ನಾಲ್ಕೈದು ಅಥವಾ ಕೆಲವೊಮ್ಮೆ ಹತ್ತಾರು ಮೊಟ್ಟೆಗಳನ್ನಿಡುತ್ತವೆ. ಇಟ್ಟ ಮೊಟ್ಟೆಗಳಿಗೆ ಸಂಕರಗೊಳಿಸಲು ಕೆಲಸಗಾರರಲ್ಲಿ ವೀರ್ಯದ ದಾಸ್ತಾನು ಇಲ್ಲದಿರುವುದರಿಂದ ಅವು ಬರೀ ಗಂಡು ಮರಿಗಳನ್ನು ತಯಾರಿಸಲು ಶಕ್ತವಾಗುತ್ತವೆ. ಕೆಲಸಗಾರರ ಹುಳಗಳಿಗೆ ದಿನಗಳೆದಂತೆ ವಯಸ್ಸಾಗುತ್ತಾ ಹೋಗುವುದಷ್ಟೆ? ವಯಸ್ಸಿನ ಲಕ್ಷಣವೆಂದರೆ ಹುಳಗಳ ಮೈಯ ಹಳದಿ-ಕಪ್ಪು ಪಟ್ಟಿಯಲ್ಲಿ ಹಳದಿಯ ಭಾಗ ಕಡಿಮೆಯಾಗಿ ಕಪ್ಪು ಬಣ್ಣವಷ್ಟೇ ಎದ್ದು ಕಾಣುವುದು. ಕೆಲಸಗಾರರು ಸಾಯುತ್ತ ಹೋದಂತೆ ಗಂಡು ಹುಳಗಳ ಪ್ರಮಾಣ ಹೆಚ್ಚುತ್ತ ಸಾಗುವುದು

ಮೊಟ್ಟೆಯಿಡುವ ಕೆಲಸಗಾರರ ಉದ್ದೇಶವೇನಿರಬಹುದು?
ಜೀವವಿಕಾಸವೆನ್ನುವುದು ಬಹಳ ಬುದ್ಧಿವಂತ ಯಂತ್ರ. ಅದು ಜೀವಿಗಳ ಶರೀರ, ವರ್ತನೆಗಳನ್ನು ತಿದ್ದಿತೀಡಿ (ತನ್ನಿಂದ ಎಂದೂ ಸಾಧಿಸಲಾಗದ) ಪರಿಪೂರ್ಣತೆಯತ್ತ ಅವುಗಳನ್ನು ಕೊಂಡೊಯ್ಯುತ್ತಿರುತ್ತದೆ. ಉದಾಹರಣೆಗೆ ಸೋದರ ಸಂಬಂಧವನ್ನು ತಡೆಯಬೇಕೆಂಬ ಜೀವಿಗಳ ತಹತಹಿಕೆಯನ್ನು ಗಮನಿಸಿ. ಮನುಷ್ಯರು ತಾವು ಬೇರೆಬೇರೆ ಋಷಿಗಳ ವಂಶಜರೆಂದು ಗುರುತಿಸಿಕೊಂಡು ಸಗೋತ್ರ ವಿವಾಹವನ್ನು ವರ್ಜಿಸಿದ್ದಾರೆ; ನೇರ ಅಣ್ಣ-ತಂಗಿ ಸಂಬಂಧವನ್ನು ಮನುಷ್ಯರು ಸಂಪೂರ್ಣ ತ್ಯಜಿಸಿದ್ದಾರೆ. in-breeding ನ್ನು ಸಂಸ್ಕೃತಿಯ ಭಾಗವಾಗಿ ಮನುಷ್ಯ ತ್ಯಜಿಸಿರುವುದನ್ನು ಗಮನಿಸಬಹುದು. ಆದರೆ ಸಸ್ಯಗಳಿಗೆ ಸಂಸ್ಕೃತಿಯೆಂಬುದು ಇಲ್ಲವಷ್ಟೆ?! ಆದರೆ ಸಸ್ಯಗಳೂ ಪರಕೀಯ ಪರಾಗಸ್ಪರ್ಶವನ್ನು ಸಾಧಿಸಲು ಚಿಟ್ಟೆ/ದುಂಬಿ/ಹಕ್ಕಿ/ನೀರು/ಗಾಳಿ ಮತ್ತು ಪ್ರಾಣಿಗಳನ್ನು ಪರಾಗವಾಹಕವಾಗಿ ನೇಮಿಸಿಕೊಂಡಿವೆ. ಅದೇ ಹೂವಿನ ವೀರ್ಯಾಣು ಅದೇ ಹೂವಿನ ಶಲಾಕೆಯೊಳಗೆ ಇಳಿಯದಂತೆ ಅಡೆತಡೆಗಳನ್ನು ಮಾಡಿಟ್ಟಿವೆ. ಅಂದರೆ ಜೀವವಿಕಾಸಯಂತ್ರವು ಜೀವಿಯ ಪ್ರತಿಯೊಂದು ನಡೆಗೂ ಒಂದು ಉದ್ದೇಶವನ್ನು ಇಟ್ಟಿದೆ ಎಂದಾಯಿತು

ಹಾಗಾದರೆ ಕೆಲಸಗಾರರು ಬರೀ ಗಂಡು ಮೊಟ್ಟೆಗಳನ್ನು ಇಡುವ ಉದ್ದೇಶವೇನಿರಬಹುದು? ನನಗೆ ಹುಡುಕಿದರೂ ಸೂಕ್ತ ಮಾಹಿತಿ ದೊರೆಯಲಿಲ್ಲ. ಆದರೆ ಹುಟ್ಟಿದ ಎಲ್ಲ ಜೀವಿಗಳ ಉದ್ದೇಶ ತಮ್ಮ ವಂಶವಾಹಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವುದೇ ಆಗಿದೆ. ನಮ್ಮ ಪ್ರೀತಿಪ್ರೇಮಗಳು, ಅದನ್ನು ಬೇರೆಬೇರೆ ರೀತಿ ಚಿತ್ರಿಸುವ ಕಾವ್ಯ, ಸಾಹಿತ್ಯ, ಚಲನಚಿತ್ರಗಳ ಉದ್ಯಮಗಳು, ಮ್ಯಾಟ್ರಿಮೊನಿ ವೆಬ್ಸೈಟುಗಳು, ಚಿನ್ನ ಸೀರೆ ವ್ಯಾಪಾರಗಳು - ರೀತಿ ಕೋಟ್ಯಂತರ ರೂಪಾಂತರಗಳ, ಅಳತೆಗೆ ಮೀರಿದ ವಹಿವಾಟುಗಳೆಲ್ಲ ನಡೆಯುತ್ತಿರುವುದು ನಮ್ಮ ವಂಶವಾಹಿಯನ್ನು ಉಳಿಸಬೇಕೆಂಬ ಮನುಷ್ಯನ ಮೂಲ ಹುಟ್ಟರಿವಿನ ಅಭಿವ್ಯಕ್ತಿಯಾಗಿ ತಾನೇ


ಅದೇ ರೀತಿ ಕೆಲಸಗಾರ ಜೇನುಹುಳಗಳಿಗೂ ತಮ್ಮ ಕುಟುಂಬದ ಉಳಿವು ಇನ್ನು ಅಸಾಧ್ಯ ಎನ್ನುವುದು ತಿಳಿದಿರಬಹುದೆ? ಇನ್ನು ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸಾಧ್ಯವಾದಷ್ಟು ಗಂಡುಹುಳಗಳನ್ನು ಹುಟ್ಟಿಸಿ ಬೇರೆ ರಾಣಿಕನ್ಯೆಯೊಂದಿಗೆ ಸಂಕರಕ್ಕೆ ಅನುವುಮಾಡಿಕೊಟ್ಟು ನಮ್ಮತನವನ್ನು ಉಳಿಸಿಕೊಳ್ಳುವುದು ಮಾತ್ರ ಎಂಬುದು ಅವಕ್ಕೆ ಅರಿವಾಗಿರಬಹುದೇ? ಅಂದರೆ ಅವುಗಳ ಸುಪ್ತಪ್ರಜ್ಞೆಗೆ (ಅಂದರೆ ನಮ್ಮ ವಿಕಾಸಯಂತ್ರಕ್ಕೆ) ಎಲ್ಲೋ ಬೇರೊಂದೆಡೆ ಬೇರೆ ಪೆಟ್ಟಿಗೆಯೊಳಗೆ ಒಂದು ರಾಣಿ ತಯಾರಾಗುತ್ತಿದೆ ಎಂದು ತಿಳಿದಿದೆಯೆಂದಾಯಿತಲ್ಲವೆ? ಉತ್ತರ ನನಗೆ ತಿಳಿಯದು.

ಚಿತ್ರಗಳು : ತೇಜಸ್ವಿ ರಮಣ ಕಜೆ

Comments

  1. ಸರ್ ನಮಸ್ಕಾರ.. ಜೇನುಹುಳುಗಳು ಬದಲಾಗುತ್ತಿರುವ ಪರಿಸರದ ಸನ್ನಿವೇಶದಲ್ಲಿ ತಮ್ಮ ಜೀವನಶೈಲಿ ಅಥವಾ ಆಹಾರ ಕ್ರಮ,ದೇಹ ರಚನೆ ಸಂತಾನೋತ್ಪತ್ತಿ ,ಚಲನೆ ಇವುಗಳಲ್ಲಿ ಬದಲಾವಣೆ ಮಾಡಿಕೊಂಡಿವೆಯೇ?

    ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!