ಜೀವನವದೊಂದು ಕಲೆ - ಪುಸ್ತಕದ ಓದು


ವಿಜಯವಾಣಿಯ ದಿನಗಳಿಂದ ಶ್ರೀ ಸೂರ್ಯಪ್ರಕಾಶ ಪಂಡಿತ್ ಅವರ ಲೇಖನಗಳನ್ನು ಸಿಕ್ಕಿದಾಗ ಓದಿ, ಕೆಲವನ್ನು ಕತ್ತರಿಸಿ ಇಟ್ಟುಕೊಂಡಿದ್ದೇನೆ. ಅವರ ಬರಹಗಳ ಬಗ್ಗೆ ಹೆಚ್ಚು ವಿವರವಾಗಿ ಬರೆಯುವ/ವಿಮರ್ಶಿಸುವ ಶಕ್ತಿ, ಓದು ಮತ್ತು ಜ್ಞಾನವ್ಯಾಪ್ತಿಯು ನನಗೆ ಇಲ್ಲ. ಆದರೆ ಪುಸ್ತಕದಲ್ಲಿ ಅವರು ಒತ್ತು ನೀಡಿರುವ ಕೆಲವು ವಿಚಾರಗಳು ನಾನು ನಂಬಿದ ಮತ್ತು ಇತ್ತೀಚೆಗೆ ‘ITಯಿಂದ ಮೇಟಿಗೆಯಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೆ ತಾಳೆಯಾಗುತ್ತಿರುವುದು ನನಗೆ ವಿಶೇಷ ಸಂತೋಷವನ್ನು ಉಂಟುಮಾಡಿವೆ.

ಜೀವನವದೊಂದು ಕಲೆಪುಸ್ತಕದ ಪುಟ ೨೮ರಲ್ಲಿ ಜಗತ್ತು ಒಳ್ಳೆಯದೋ ಕೆಟ್ಟುದೋ ಎಂಬ ಪ್ರಶ್ನೆಯೇ ಅಪ್ರಸ್ತುತ ಎಂಬ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ. ನಾನು ನನ್ನ ಐಟಿ ವೃತ್ತಿಯಿಂದ ಕೃಷಿಗೆ ಬದಲಾವಣೆ ಮಾಡುವುದೇ ಸರಿ ಎಂಬ ಸಮರ್ಥನೆಯ ಅನ್ವೇಷಣೆಯಲ್ಲಿದ್ದಾಗ ಸಮಸ್ಯೆಯಿಂದ ಬಳಲಿದ್ದುಂಟು, ಏಕೆಂದರೆ ಕಾರಣವಿಲ್ಲದೆ ವೃತ್ತಿಯನ್ನು ಬದಲಾಯಿಸುವ ಹಪಾಹಪಿ ಯಾರಿಗೂ ಇರುವುದಿಲ್ಲವಷ್ಟೆ?. ಪ್ರಯಾಗ್ ಜೋಷಿ ಎಂಬವರು ಹಿಂದೂ ಪತ್ರಿಕೆಯಲ್ಲಿವೃತ್ತಿಜೀವನದ ಸರಿತಪ್ಪುಗಳುಎಂದೊಂದು ಲೇಖನವನ್ನು ಬಹಳ ಹಿಂದೆ ಬರೆದಿದ್ದರು. ನಾನು ಇಷ್ಟಪಟ್ಟ ಲೇಖನಗಳಲ್ಲಿ ಅದು ಒಂದಾಗಿತ್ತು(ಸಾಧ್ಯವಾದರೆ ಲೇಖನವನ್ನೊಮ್ಮೆ ಓದಿ ಬರಹದ ಓದನ್ನು ಮುಂದುವರೆಸಿ). ನಾನು ಉದ್ಯೋಗ ಬಿಟ್ಟ ಮೇಲೆ ಪುಸ್ತಕವನ್ನು ಬರೆಯುವ ಹಂತದಲ್ಲಿ ಪ್ರಯಾಗ್ ಜೋಷಿಯವರೊಂದಿಗೆ ಒಮ್ಮೆ ಫೋನ್ ಸಂಭಾಷಣೆ ನಡೆಸಿ ಅವರ ಲೇಖನವನ್ನು ಇಡಿಯಾಗಿ ಅಥವಾ ಭಾಗಶ: ನನ್ನ ಪುಸ್ತಕದಲ್ಲಿ ಬಳಸಿಕೊಳ್ಳುವ ಬಗ್ಗೆ ಚಿಂತಿಸಿದೆ. ಆಗ ಅವರು ನೈತಿಕತೆಯ ಬಗ್ಗೆ ತನ್ನ ನಿಲುಮೆ ಈಗ ಬದಲಾಗಿದೆಯೆಂದೂ, ಸರಿ/ತಪ್ಪು ಎಂಬ ವರ್ಗೀಕರಣವು ಕಷ್ಟಕರವೆಂದೂ, ಪ್ರತಿಯೊಬ್ಬನೂ ತನ್ನ ಅಹಮಿಕೆಯ ದೃಷ್ಟಿಯಿಂದ ಸರಿಯಾದುದನ್ನು ಮಾಡುತ್ತಾನಷ್ಟೇ ಹೊರತುಸರಿಎನ್ನುವುದು ಒಂದು ಕೈವಲ್ಯ ಸ್ಥಿತಿ (absolute state) ಅಲ್ಲವೆಂಬುದು ತನ್ನ  ಈಗಿನ ನಿಲುಮೆಯೆಂದು ಹೇಳಿದರು. ಅವರ ಅಭಿಪ್ರಾಯವನ್ನು ನಿರಾಕರಿಸುವಂತಿರಲಿಲ್ಲ. ಆದರೆ ಪೂರ್ತಿಯಾಗಿ ಒಪ್ಪಿಕೊಳ್ಳುವುದೂ ಸಾಧ್ಯವಿರಲಿಲ್ಲ. ಒಪ್ಪಿಕೊಂಡರೆ ಎಲ್ಲ ತಪ್ಪುಗಳನ್ನೂ ಸಹಜವೆಂದು ಸಮರ್ಥಿಸಲು ಸಾಧ್ಯವಾಗಬಹುದಲ್ಲವೆ?
ಜೀವವಿಕಾಸವನ್ನು ಆಸಕ್ತಿಯಿಂದ ಓದುವಾಗಲೂ ದ್ವಂದ್ವ ಆಗಾಗ ಎದುರಾಗುವುದುಂಟು. ನನಗಿಂತ ಬಹಳ ಹಿಂದೆಯೇ ಚಾರ್ಲ್ಸ್ ಡಾರ್ವಿನ್ ಬಗ್ಗೆ ತನ್ನ ಅಭಿಪ್ರಾಯವನ್ನು  ಹೇಳಿದ್ದಾನೆ. ಕ್ರೂರ/ಅಮಾನವೀಯ ಎಂದು ನಾವಂದುಕೊಳುವ ವಿಷಯಗಳು ವಿಕಾಸದ ದೃಷ್ಟಿಯಿಂದ ಕ್ರೌರ್ಯವೇನೂ ಅಲ್ಲ, ಅದು ಹೊಸ ಜೀವಜಾತಿಗಳ ಆಯ್ಕೆಯ ಒಂದು ಪ್ರಕ್ರಿಯೆಯಷ್ಟೆ; ಮನುಷ್ಯನ ಅನುಕಂಪ/ಪರೋಪಕಾರದ ನಿಲುಮೆಯ ಉತ್ಪ್ರೇಕ್ಷೆಯು ತನ್ನದೇ ಜಾತಿ(ಹೋಮೋಸೇಪಿಯನ್)ಗೆ ವಿನಾಶಕಾರಿ ಎಂದು ಅವನು ಕೆಳಗೆ ಹೇಳಿದ್ದಾನೆ.

With savages, the weak in body or mind are soon eliminated; and those that survive commonly exhibit a vigorous state of health. We civilised men, on the other hand, do our utmost to check the process of elimination; we build asylums for the imbecile, the maimed, and the sick; we institute poor-laws; and our medical men exert their utmost skill to save the life of every one to the last moment. There is reason to believe that vaccination has preserved thousands, who from a weak constitution would formerly have succumbed to small-pox. Thus the weak members of civilised societies propagate their kind. No one who has attended to the breeding of domestic animals will doubt that this must be highly injurious to the race of man. It is surprising how soon a want of care, or care wrongly directed, leads to the degeneration of a domestic race; but excepting in the case of man himself, hardly any one is so ignorant as to allow his worst animals to breed.
The aid we feel impelled to give to the helpless is mainly an incidental result of the instinct of sympathy, which was originally acquired as part of the social instincts, but subsequently rendered, in the manner previously indicated, more tender and more widely diffused. Nor could we check our sympathy, even at the urging of hard reason, without deterioration in the noblest part of our nature. The surgeon may harden himself whilst performing an operation, for he knows that he is acting for the good of his patient; but if we were intentionally to neglect the weak and helpless, it could only be for a contingent benefit, with an overwhelming present evil. We must therefore bear the undoubtedly bad effects of the weak surviving and propagating their kind; but there appears to be at least one check in steady action, namely that the weaker and inferior members of society do not marry so freely as the sound; and this check might be indefinitely increased by the weak in body or mind refraining from marriage, though this is more to be hoped for than expected. (Chapter 5)


ಅಂದರೆ ನಾವು ಪಾಲಿಸಲೇ ಬೇಕಾದುದು ಎಂದುಕೊಳ್ಳುವ ಸಜ್ಜನಿಕೆ, ಮನುಷ್ಯ-ಮತ್ತು-ಇತರ-ಜೀವಿಗಳ ಬಗ್ಗೆ ತೋರಿಸಬೇಕಾದ ಪ್ರೇಮ, ಅನುಕಂಪಗಳು ಕಾಡಿನ ನ್ಯಾಯದ ಪ್ರಕಾರ ಯಾವುದೇ ಮಹತ್ವವನ್ನು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ಜೀವವಿಕಾಸದ ಓದು (ಅಥವಾ ಬರೀ ಸಾಮಾನ್ಯಜ್ಞಾನದ ದೃಷ್ಟಿ) ಉಂಟುಮಾಡುತ್ತದೆ. ಪರಿಸರನಾಶ ಇತ್ಯಾದಿ ವಿಧ್ವಂಸಕತೆಯನ್ನು, ಬಹುರಾಷ್ಟ್ರೀಯ ಕಾರ್ಪೊರೇಟ್ ಆರ್ಥಿಕತೆಯ ತಪ್ಪುಗಳು ಎಂದು ನಾನಂದುಕೊಂಡುದನ್ನುತಪ್ಪುಎಂದು ಪ್ರತಿಪಾದಿಸುವುದು ಹೇಗೆ ಎಂಬ ಸಮಸ್ಯೆಯು ನನ್ನನ್ನು ಕಾಡಿದ್ದುಂಟು. ಬಗ್ಗೆ ನನ್ನ ಪಕ್ವಗೊಂಡ ಅಭಿಪ್ರಾಯವನ್ನು ನನ್ನ ಪುಸ್ತಕದ ಪುಟ 103 (ಸೀಮಾ ಬುಕ್ಸ್ ಮರುಮುದ್ರಣ)ರಲ್ಲಿ ರೀತಿ ಬರೆದಿದ್ದೇನೆ

[ನ್ಯಾಯನೀತಿ ಎಂದರೆ ಏನು ಎಂದು ತಿಳಿಯುವುದು ಬಹಳ ಸುಲಭವೆಂದು ನಾನು ಅಂದುಕೊಂಡರೆ, ಅದರಂತೆ ಜಗತ್ತಿನ ಎಲ್ಲ ವ್ಯವಹಾರಗಳನ್ನೂ ಅಳೆದು ತೂಗಬಹುದು ಎನ್ನುವುದು ನನ್ನ ಭಾವನೆಯಾದರೆ ಅದು ನನ್ನ ಮೂರ್ಖತನವಾದೀತಷ್ಟೆ. ಜಗತ್ತಿನಲ್ಲಿ ಒಳಿತನ್ನಷ್ಟೇ ಉಳಿಸಿ ಬೆಳೆಸಬೇಕೆಂಬ ಆಶಯವನ್ನು ಹೊಂದಿ ಎಲ್ಲಾ ರೀತಿಯ ಭಕ್ತಿಪಂಥಗಳು, ಚಿಂತಕರು, ದಾಸರು, ಸಮಾನತೆಯ ಹೋರಾಟಗಾರರು, ಶಾಲಾ ಶಿಕ್ಷಕರು, ಮಕ್ಕಳ ತಂದೆತಾಯಂದಿರು - ಹೀಗೆ ಎಲ್ಲರೂ ತಮ್ಮ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಸ್ವಭಾವ ವೈಪರೀತ್ಯಗಳು, ಒಳಿತು ಕೆಡುಕುಗಳು, ರಾಗದ್ವೇಷಗಳು ಎಲ್ಲಾ ಕಾಲದಲ್ಲಿ, ಜಗತ್ತಿನೆಲ್ಲೆಡೆ, ಎಲ್ಲಾ ಜೀವಪ್ರಬೇಧಗಳಲ್ಲಿ ಇದ್ದಿರುವಂಥವು. ಅದು ಲೈಂಗಿಕ ವಂಶಾಭಿವೃದ್ಧಿಯಿಂದ ಉಂಟಾಗುವ ವಂಶವಾಹಿ ವೈವಿಧ್ಯದ ಪ್ರಭಾವ. ಅದನ್ನು ಇಸ್ತ್ರಿಹಾಕಿದಂತೆ ಬದಲಾಯಿಸಿ ಏಕರೂಪಗೊಳಿಸುವುದೆಂದರೆ ಜೀವವಿಕಾಸವನ್ನು ನಿಲ್ಲಿಸಿಬಿಟ್ಟಂತೆ. ಆದ್ದರಿಂದ ವಾಸ್ತವ ಮತ್ತು ಮನುಷ್ಯರ ಸದಾಶಯಗಳು ಪೂರ್ತಿಯಾಗಿ ಹೊಂದಾಣಿಕೆ ಆಗಲಾರವು. ಪ್ರತಿಯೊಬ್ಬನೂ ‘ತನ್ನ ಮಟ್ಟಿಗೆ’ ಸರಿ/ಒಳಿತು ಎಂದುಕೊಂಡುದನ್ನೇ ಮಾಡಲು ಬಯಸುವುದರಿಂದ, ಒಟ್ಟು ಜೀವಿಗಳೆಷ್ಟೋ’ಸರಿ/ಒಳಿತು’ಗಳೂ ಅಷ್ಟೇ ಇರುವುದರಿಂದ ಭಿನ್ನತೆಗಳು ಹಾಗೆಯೇ ಎಂದೆಂದೂ ಉಳಿದುಕೊಳ್ಳುವವು.
ಆದರೆ ಈ ಹಿಂದಿನ, ಕೈಗಾರಿಕಾ ಕ್ರಾಂತಿಯ ಮೊದಲಿನ ಕಾಲದಲ್ಲಿ ವ್ಯಕ್ತಿಯೊಬ್ಬನ ಸ್ವಭಾವದ ಏರಿಳಿತ - ಅದು ಒಳಿತಾಗಲೀ ಕೆಡುಕಾಗಲೀ - ಬಹಳ ಸ್ಥಳೀಯವಾಗಿ ಪರಿಣಾಮ ಬೀರುವಂತಿತ್ತು. ಪರಸ್ಪರ ಜಗಳ, ಪತಿ/ಪತ್ನಿಯ ಮೇಲಿನ ದೌರ್ಜನ್ಯ, ಮಕ್ಕಳ ಮೇಲಿನ ಅತಿ-ಹೊಡೆತ, ಸಮಾಜವನ್ನು ಒಗ್ಗೂಡಿಸಿ ಕೆಟ್ಟದ್ದು ಎಂದು ಗುರುತಿಸಬಹುದಾದ ಕೆಲಸಗಳನ್ನು ಮಾಡಿಸಿಕೊಳ್ಳುವುದು ಹೀಗೆ ಬೇರೆಬೇರೆ ರೀತಿಯಲ್ಲಿ ಕೆಡುಕುಗಳು ವ್ಯಕ್ತವಾಗುತ್ತಿದ್ದವು. ಆದರೆ ಕೈಗಾರಿಕೀರಣ ತಂದುಕೊಡುವ ವೇಗ ಅದರಲ್ಲಿರಲಿಲ್ಲ. ಜಗತ್ತಿನಾದ್ಯಂತ ಹರಡಿಕೊಂಡಿರುವ ಸುವಿಶಾಲ, ಅನಾದಿ-ಅನಂತವೆನ್ನಬಹುದಾದ, ನಮ್ಮ ಅಳತೆಗೆ ಸಿಗದ ಸಂಪನ್ಮೂಲಗಳನ್ನು ಕರಗಿಸುವ, ನಮ್ಮ ಜೀವಾವಾಸದ ಅಸ್ಥಿಭಾರವನ್ನು ನಾಶಮಾಡುವ ಶಕ್ತಿಸಾಮರ್ಥಗಳು ನಮ್ಮ ಯಾವ ವ್ಯವಹಾರಕ್ಕೂ ಇರಲಿಲ್ಲ. ಅದೆಷ್ಟು ಜನರನ್ನು ಒಗ್ಗೂಡಿಸಿದರೂ ಅಂತರ್ಜಲ ಮಟ್ಟ, ಮೇಲ್ಮಣ್ಣಿನ ಆರೋಗ್ಯ, ಭೂಮಿಯ ಮೇಲಿನ ಅರಣ್ಯದ ಒಟ್ಟು ಪ್ರಮಾಣ, ಸಾಗರದ ಸ್ವಚ್ಛತೆ, ನದೀತೀರದ ಮರಳಿನ ಪ್ರಮಾಣ, ರಾತ್ರಿಯ ಕತ್ತಲಿನ ಪ್ರಮಾಣ, ಧ್ರುವಪ್ರದೇಶದ ಹಿಮದ ಪ್ರಮಾಣ, ಮಳೆ/ಬಿಸಿಲು/ಛಳಿಗಾಲಗಳು, ಓಝೋನ್ ಪದರ ಇವನ್ನೆಲ್ಲ ಬದಲಾಯಿಸಲು, ಕ್ಷೀಣಗೊಳಿಸಲು ಸಾಧ್ಯವಿರಲಿಲ್ಲ. ಕೆಟ್ಟವನೆನಿಸಿಕೊಂಡವನು ತನಗೆ, ತನ್ನವರಿಗೆ ಕೆಟ್ಟವನಾಗಿದ್ದ ಅಷ್ಟೆ. ಆದರೆ ಇಂದು ಕೆಟ್ಟುದು ಇಡಿಯ ಜಗತ್ತನ್ನು ಕ್ಷಣಾರ್ಧದಲ್ಲಿ ಕೆಡಿಸಬಲ್ಲುದು. ಅದನ್ನು ಸಾಫ್ಟ್ವೇರ್ ಸಾಧ್ಯಗೊಳಿಸಿದೆ.  ಆದರೆ ಒಳ್ಳೆಯದು ವೇಗವಾಗಿ ಹರಡದು. ಅದು ಅಷ್ಟೊಂದು ಆಕರ್ಷಕವಲ್ಲ……] - ಪುಸ್ತಕದ ಭಾಗ ಇಲ್ಲಿಗೆ ಮುಗಿಯಿತು.

ನಾಟಕ, ಚಲನಚಿತ್ರ ಇತ್ಯಾದಿಗಳ ನಿರ್ದೇಶಕರೂ ಸತ್-ಸಂದೇಶವನ್ನು ನೀಡುವುದು ತಮ್ಮ ಕೃತಿಯ ಉದ್ದೇಶವಲ್ಲ (ಆ ನಿರೀಕ್ಷೆಯೂ ನಿಮಗೆ ಇರಬಾರದು) ಎಂಬಂಥ ಹೇಳಿಕೆಯನ್ನು ನೀಡುವುದನ್ನು ನಾನು ಹಿಂದೆ ಗಮನಿಸಿದ್ದೇನೆ. ‘ಜೀವನವದೊಂದು ಕಲೆ’ ಪುಸ್ತಕದ ಪುಟ ೨೮ರ ಅಭಿಪ್ರಾಯವು ಈ ವಾಕ್ಯಕ್ಕೆ ದನಿಗೂಡಿಸುವಂತೆ ಮೇಲ್ನೋಟಕ್ಕೆ ಇದೆ. ಬಹುಕೋಟಿ ರುಪಾಯಿಯ ಒಂದು ದುಬಾರಿ ಕಲಾಸೃಷ್ಟಿಯು ಕನಿಷ್ಟ ಸಮಾಜಕ್ಕೆ ಒಳಿತಿನ (ಕನಿಷ್ಟಪಕ್ಷ ಪರೋಕ್ಷ) ಸಂದೇಶ ನೀಡುವ ಜವಾಬ್ದಾರಿಯಿಂದ ಜಾರಿಕೊಳ್ಳುವುದು ನನಗೆ ಸರಿಯೆನಿಸಲಿಲ್ಲ (ಚಲನಚಿತ್ರಗಳ ಉದ್ದೇಶದ ಬಗ್ಗೆ ನನ್ನ ಆತ್ಮೀಯರೊಂದಿಗೆ ನಡೆದ ಈ ಚರ್ಚೆ ಕೆಲವರ್ಷಗಳ ಹಿಂದೆ ನಡೆದುದು). ‘ಜೀವನವದೊಂದು ಕಲೆ’ ಪುಸ್ತಕದ ಪುಟ ೩೦ರ ಎರಡನೆಯ ಪ್ಯಾರಾವು ನನ್ನ ಈ ಆತಂಕಕ್ಕೆ ಉತ್ತರವನ್ನಿತ್ತಿದೆ. ಆನಂದ ಕುಮಾರಸ್ವಾಮಿಯವರ ಅಭಿಪ್ರಾಯವನ್ನು ಪೂರ್ಣವಾಗಿ ಗ್ರಹಿಸುವಷ್ಟು ವಿವರಣೆ ಪುಸ್ತಕದಲ್ಲಿ ಇಲ್ಲದಿದ್ದರೂ ನೈತಿಕ ಮಾನದಂಡದಿಂದ ಕಲೆಯನ್ನು ಅಳೆಯುವುದು ಅಗತ್ಯ ಎಂಬ ಅರ್ಥವನ್ನು ನಾನು ಇಲ್ಲಿ ಗ್ರಹಿಸಿದ್ದೇನೆ.

ಪುಟ ೩೨ರಲ್ಲಿ ‘ಕೆಲಸಗಾರರು ಮತ್ತು ಕಲಾವಿದರು’ ಎಂಬ ಭಾಗವು ನನಗೆ ವಿಶೇಷವಾಗಿ ಇಷ್ಟವಾಯಿತು. ಕಲೆಯು ಜೀವನದೊಂದಿಗೆ ಮಿಳಿತಗೊಳ್ಳಬೇಕು ಎಂಬ ವಿಷಯವನ್ನು ಒತ್ತಿ ಹೇಳುವುದು ಇಂದಿನ ಕಾಲದ ಅಗತ್ಯವಾಗಿದೆ ಎಂದು ನನಗನಿಸುತ್ತದೆ. ಕಲೆ ಮತ್ತು ಜೀವನಗಳ ಮಧ್ಯೆ  ಇಂದು ಬಹಳ ದೊಡ್ಡ ಅಂತರ ಬಂದುಬಿಟ್ಟಿದೆ. ನಮ್ಮ ಕೆಲಸವನ್ನು ಕಲೆಯೆಂದು ಪರಿಗಣಿಸುವ ಮನಸ್ಥಿತಿ ಹೋಗಿಬಿಟ್ಟಂತಿದೆ. ಹಿಂದೆಲ್ಲ ಹಾರೆ, ಕತ್ತಿಗಳಿಗೆ ಕೆಲಸಗಾರರು ಮಾಡುತ್ತಿದ್ದ ಮರದ ಹಿಡಿಕೆಗಳಲ್ಲಿ, ಸುಗ್ಗಿ ಬೆಳೆಗೆ ಗದ್ದೆಯ ಬದುವಿಗೆ ಕೆಸರು ಮೆತ್ತಿ ಸಜ್ಜುಗೊಳಿಸುವುದರಲ್ಲಿ, ಗೃಹಿಣಿಯರ ಮನೆಕೆಲಸದಲ್ಲಿ, ನುರಿತ ಕೆಲಸಗಾರರ ಮಣ್ಣಿನ ಕೆಲಸದಲ್ಲಿ ಕಲೆಗಾರಿಗೆ ಎದ್ದುತೋರುವಂತಿರುವುದಿತ್ತು. ಈಗೀಗ ಬಹಳಷ್ಟು ಕೆಲಸಗಳು ಯಾಂತ್ರೀಕೃತಗೊಂಡಿವೆ. ಕೆಲಸಗಾರರು ಒಂದು ಕೌಶಲಕ್ಕೆ ಅಂಟಿಕೊಳ್ಳದೆ ಇಂದು ಮೇಸ್ತ್ರಿ ಕೆಲಸ, ನಾಳೆ ಮೊಬೈಲ್ ರಿಚಾರ್ಜ್ ಮಾಡುವ ಕೆಲಸ ಎಂಬಂತೆ ವಲಸೆ ಹೋಗುತ್ತ ಒಂದು ಕೆಲಸದೊಳಗಿನ ಕಲೆಗಾರಿಕೆಯ ಆಳಕ್ಕೆ ಹೋಗದೆ ಮೇಲ್ಸ್ತರಕ್ಕೆ ಸೀಮಿತರಾಗುತ್ತಿದ್ದಾರೆ. ಕ್ಯೂಬಿಕಲ್ ಒಳಗಿನ ಕೆಲಸಗಳ ಬಗ್ಗೆ ವಿಮರ್ಶೆ ಮಾಡಲು ನನಗೆ ಅಷ್ಟೊಂದು ಆಸಕ್ತಿ ಬರುತ್ತಿಲ್ಲ. ನಮ್ಮ‌ಕೆಲಸಗಳಲ್ಲಿ ಇರುವ, ಇರಬೇಕಾದ ಕಲೆಯ ಬಗ್ಗೆ ‘ITಯಿಂದ ಮೇಟಿಗೆ’ ಯ ಪುಟ ೧೭ ರಲ್ಲಿ ಈ ರೀತಿ ಪ್ರಸ್ತಾಪವಾಗಿದೆ.

[ಕಲೆಯೆಂದರೆ ಶ್ರೀಮಂತ ಚಾವಡಿಯಲ್ಲಿ ಸುಮ್ಮನೇ ನೇತುಹಾಕುವ ಕೊಂಡುತಂದ ವಸ್ತುಗಳು ಮಾತ್ರವೆ? ನಮ್ಮ ನಿತ್ಯಜೀವನದಲ್ಲಿ ಕಲೆ ಇರಲಾರದೇ? ಯಾವುದನ್ನೇ ಆಗಲಿತಿಳಿಯುವುದು ವಿಜ್ಞಾನ, ಮಾಡುವುದು ಕಲೆಎಂದಿದ್ದಾರೆ ನನ್ನ ಅಚ್ಚುಮೆಚ್ಚಿನ ಇಂಗ್ಲಿಷ್ ಲೇಖಕ, ಅಮೆರಿಕದ ಈಗ ೮೦ ವರ್ಷದ ಕೃಷಿಕ ವೆಂಡೆಲ್ ಬೆರ್ರಿ.]

ಕೆಲಸ ಮತ್ತು ಕಲೆಯ ನಡುವಿನ ಅಂತರದಂತೆ ಊಟ ಮತ್ತು ಕೃಷಿಗಳ ಮಧ್ಯೆಯೂ ಇದೇ ಕಂದಕವಿದೆ. ಬಾಡೂಟ ಮತ್ತು ಪ್ರಾಣಿಗಳ ಸಾಕಣೆ/ವಧೆಯೂ ಇಂದು ಭೂಮ್ಯಾಕಾಶದಷ್ಟು ದೂರ ಸರಿದಿವೆ. ಇಂದು ಮಾಂಸದೂಟ ಉಣ್ಣುವ ನೂರಕ್ಕೆ ೯೯ ಮಂದಿ ಇಂದು ಸ್ವತ: ವಧೆಯಲ್ಲಿ ಭಾಗವಹಿಸುವುದಿಲ್ಲ, ನೋಡಿಯೂ ಇರುವುದಿಲ್ಲ. ಆದರೆ ನನ್ನ ಬಾಲ್ಯದಲ್ಲಿ ಸ್ವಲ್ಪ ಬೆಳೆದ ಮಕ್ಕಳು ಸ್ವತ: ಕೋಳಿಯ ಕುತ್ತಿಗೆ ಮುರಿದು ಅಡುಗೆಗೆ ಒಪ್ಪಿಸುತ್ತಿದ್ದರು. ಈ Disconnection ಆಧುನಿಕ ಸಿದ್ಧವಸ್ತುಗಳ ವಿಜೃಂಭಣೆಯ ಇಂದಿನ ಯುಗದಲ್ಲಿ ಸರ್ವೇಸಾಮಾನ್ಯವಾಗಿದೆ. ಕಲೆಯೂ ಕೊಂಡು ತರುವ commodity  ಆಗಿ ಬದಲಾವಣೆಯಾಗಿರುವುದು ನಾವು ರೂಪಿಸಿರುವ ಆರ್ಥಿಕತೆಯ ಪ್ರಾತಿನಿಧಿಕ ಲಕ್ಷಣವೇ ಆಗಿದೆ. ಕಲೆಯು ಒಂದು ಸರಕಾಗುವ ಇಂದಿನ ಪರಿಸ್ಥಿತಿಯ ಬಗ್ಗೆ (ITಯಿಂದ ಮೇಟಿಗೆಯ) ಪುಟ ೩೪, ೩೫ ಮತ್ತು ೧೨೫, ೧೨೬ ರಲ್ಲಿಯೂ ನಾನು ಚುಟುಕಾಗಿ ಪ್ರಸ್ತಾಪಿಸಿದ್ದೇನೆ. ‘ಜೀವನವದೊಂದು ಕಲೆ’ ಪುಸ್ತಕದ ಮೊದಲರ್ಧವು ನನ್ನ ಮನಸ್ಸಿನಲ್ಲಿದ್ದ  ಈ ವಿಚಾರಗಳಿಗೆ ಪೂರಕವಾಗಿದ್ದುದರಿಂದ ನನಗೆ ಆಪ್ತವಾಗಿದೆ.

ಆನಂದ ಕುಮಾರಸ್ವಾಮಿಯವರು ಕೃಷಿಗೆ ಸಂಬಂಧಿಸಿ ಏನಾದರೂ ಬರೆದಿರಬಹುದೇ ಎನ್ನುವ ಬಗ್ಗೆ ನನಗೆ ಕುತೂಹಲವಿದೆ. ಅವರೊಂದು ವೇಳೆ ವೆಂಡೆಲ್ ಬೆರಿಯವರಂತೆ ಕೃಷಿಕರಾಗಿ ತಮ್ಮ ಈ ಅಧ್ಯಯನ, ಕಾಣ್ಕೆಗಳನ್ನು ಕಂಡಿದ್ದಿದ್ದರೆ ಎಷ್ಟೊಂದು ಚೆನ್ನಾಗಿತ್ತು ಎಂದು ನನಗನಿಸುತ್ತಿದೆ. ನನ್ನಂಥವರು ಆರಾಧಿಸುವಂತೆ ಸಾಹಿತ್ಯ ರಚಿಸುವುದರ ಜೊತೆಗೆ ವೆಂಡೆಲ್ ಅವರು ಮನುಷ್ಯನ ಮೂಲವೃತ್ತಿಗಳಲ್ಲೊಂದಾದ ಕೃಷಿಯನ್ನು ನಡೆಸುತ್ತಾ, ತಮ್ಮ ಪತ್ನಿಯೊಂದಿಗೆ ಸುದೀರ್ಘ, ಸಪ್ರೇಮ ದಾಂಪತ್ಯ ಜೀವನವನ್ನು ನಡೆಸಿದವರು. ವೆಂಡೆಲ್ ಅವರ ಲಿಖಿತ ಬರಹಗಳು ಕೊಡುವ ಸಂದೇಶವನ್ನು ಬದಿಗಿಟ್ಟರೂ ಅವರ ವೈಯಕ್ತಿಕ ಜೀವನವೇ ಒಂದು ಮಟ್ಟಿನ ಸಂದೇಶವನ್ನು ಕೊಡುವಷ್ಟು ಸಶಕ್ತವಾಗಿದೆ. ಆನಂದ ಕುಮಾರಸ್ವಾಮಿಯವರ ವೈಯಕ್ತಿಕ 
ಜೀವನದ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ.

ಒಟ್ಟಿನಲ್ಲಿ ಶ್ರೀ ಸೂರ್ಯಪ್ರಕಾಶ ಪಂಡಿತರ ‘ಜೀವನವದೊಂದು ಕಲೆ’ ಪುಸ್ತಕವು ನನ್ನಲ್ಲಿ ಹುಟ್ಟಿಸಿದ ಯೋಚನೆಗಳ ಒಂದು ಒರಟಾದ ಟಿಪ್ಪಣಿ ಇದಾಗಿದೆ. ಇದನ್ನು ಒಂದು ತಿದ್ದಿ ತೀಡಿ ಬರೆದ ಲೇಖನವೆಂದು ಪರಿಗಣಿಸದೆ ಓದಬೇಕೆಂದು ನನ್ನ ಅರಿಕೆ.

Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!