ಆಳ್ವಾಸ್ ನುಡಿಸಿರಿ 2018 ರಲ್ಲಿ ITಯಿಂದ ಮೇಟಿಗೆ

ಅಸಾಮಾನ್ಯ ಸಂಘಟಕ ಡಾ| ಆಳ್ವ

[ಆಳ್ವಾಸ್ ನುಡಿಸಿರಿ ೨೦೧೮, ನವಂಬರ್ ೧೮ನೇ ತಾರೀಖಿನಂದು ನಾನು ಮಂಡಿಸಿದ ಅನಿಸಿಕೆಗಳು]

ಶ್ರೀ ಮುರಳೀಧರ ಉಪಾಧ್ಯ ಅವರ ಕೃಪೆಯಿಂದ ದೊರೆತ ವೀಡಿಯೊ. ಓದುವುದಕ್ಕಿಂತ ಇದು ಹೆಚ್ಚು ಪರಿಣಾಮಕಾರಿ.ಎಲ್ಲರಿಗೂ ನಮಸ್ಕಾರ. 

ಮೂವತ್ತು ವರ್ಷ ತುಂಬಿದ ಮೇಲೆ ಕೃಷಿ ಕೆಲಸಗಳನ್ನು ಆಸಕ್ತಿಯಿಂದ ಕಲಿತು ಕೃಷಿಕನಾಗಲು ಪ್ರಯತ್ನಿಸುತ್ತಿರುವ ಒಬ್ಬ ಸಾಮಾನ್ಯ ಕೃಷಿಕ ನಾನು. ನಾನು ಬರೆದ ಈ ಪುಸ್ತಕದ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕರೆಯಲಾಗಿದೆ. ಇಷ್ಟೊಂದು ದೊಡ್ಡ ಸಭೆಯಲ್ಲಿ ಮಂಡನೆಗೆ ಯೋಗ್ಯವಾದ ಏನೋ ಒಂದು ಗಹನತೆ “ಈ ವಿಷಯಕ್ಕೆ ಇದೆ” ಎಂದು ಇಲ್ಲಿನ ಸಂಘಟಕರು ಪರಿಗಣಿಸಿರುವುದಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೆಂದು ನನಗೆ ತಿಳಿಯದಾಗಿದೆ.

ನನಗಿರುವ ಸಮಯವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಕೆಲವು ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತೇನೆ. 

೧) ಮೊದಲನೆಯದಾಗಿ ನನ್ನ ಈಗಿನ ಕೃಷಿಕೆಲಸಗಳು ಹೇಗೆ ನನ್ನ ಸುತ್ತುಮುತ್ತಲೊಂದಿಗೆ ಅಂದರೆ ಪರಿಸರದೊಂದಿಗೆ ನನಗೆ ಇದ್ದೇ ಇರುವ ಅವಿನಾಭಾವ ಸಂಬಂಧವನ್ನು ಸದಾ ಜೀವಂತವಾಗಿಟ್ಟು ಪ್ರಕೃತಿಯೊಂದಿಗೆ ಸೇರಿ ಬದುಕುವ ಸಂಪೂರ್ಣತೆಯನ್ನು ನನಗೆ ಸಾಕಷ್ಟುಮಟ್ಟಿಗೆ ಉಂಟುಮಾಡುತ್ತಿವೆ ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. 
೨) ನಾನು ಈ ಹಿಂದೆ ಆ ಅವಕಾಶದಿಂದ ವಂಚಿತನಾಗಿದ್ದುದರ ಬಗ್ಗೆ ಮತ್ತು ನಮ್ಮೆಲ್ಲ ಹೊಸ ಉದ್ಯೋಗಗಳ ಗುರಿ ಮತ್ತು ಸಾಧನೆಗಳು ಪ್ರಕೃತಿಯಿಂದ ಪ್ರತ್ಯೇಕವಾಗುವುದೇ ಆಗಿದೆ ಎನ್ನುವುದರ ಬಗ್ಗೆ ಒಂದಷ್ಟು ಹೇಳುತ್ತೇನೆ
೩) ಕೃಷಿಯು ಉಣ್ಣುವವನ ಅನಿವಾರ್ಯತೆ. ಊಟವೆನ್ನುವುದು ಬಿತ್ತುವುದು, ಬೆಳೆಯುವುದು, ಕಟಾವು, ಒಕ್ಕಣೆ, ಅಡುಗೆ - ಈ ಪ್ರಕ್ರಿಯೆಯ ಕೊನೆಯ ಹಂತ. ಇದರಲ್ಲಿ ‘ಊಟ’ವನ್ನು ಪ್ರತ್ಯೇಕಿಸಿ ಉಳಿದವನ್ನು ಬೇರೆ ಯಾರಾದರೊಬ್ಬ ಮಾಡುತ್ತಾನೆ ಎಂದು ವಹಿಸಿಕೊಡುವುದರಿಂದ ಸಮಸ್ಯೆಗಳು ಪರಿಹಾರವಾಗವು ಎಂಬುದನ್ನು ಅರಿತು ನನ್ನ ಪತ್ನಿ ಮತ್ತು ನಾನು ಕೃಷಿಗೆ ಮರಳಿದುದರ ಬಗ್ಗೆ ತಿಳಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಮ್ಮ ಪರಿಸರ ಮತ್ತು ನಾವು

‘ಪರಿಸರ ರಕ್ಷಣೆ’ ಎಂಬ ಜನಪ್ರಸಿದ್ಧ ಪದಪುಂಜದಿಂದಾಗಿ ನಮಗೆ ‘ಪರಿಸರ’ ಎಂಬುದೊಂದು ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಇಲ್ಲಿ ನಾವು ‘ರಕ್ಷಣೆ’ ಮಾಡಬೇಕಿರುವ ಈ ‘ಪರಿಸರ’ ಎಂದರೆ ಯಾವುದು? ಅದು ಸರಕಾರದ ಸಂರಕ್ಷಿತಾರಣ್ಯಗಳೇ? ಹುಲ್ಲುಗಾವಲು, ಬೆಟ್ಟಗುಡ್ಡಗಳೇ? ಅಥವಾ ನಮ್ಮ ಮನೆ, ರಸ್ತೆ ಇವೆಲ್ಲ ಪರಿಸರ ಎಂಬುದರ ವ್ಯಾಪ್ತಿಯಲ್ಲಿದೆಯೇ ಎಂಬುದು ನಮಗೆ ಸ್ಪಷ್ಟವಾಗುತ್ತಿಲ್ಲ. ನಾವು “ಬಿಡುವಿದ್ದರೆ ರಕ್ಷಿಸಬೇಕಾದ” ಈ ಪರಿಸರವು ನಮ್ಮ ಹೊರಗಿದೆ ಎನ್ನುವುದಂತೂ ನಮಗೆ ತಿಳಿದಿದೆ.
ನಮ್ಮನ್ನು ಸುತ್ತುವರೆದು ಗಾಳಿ, ನೀರು, ಘನವಸ್ತುಗಳೆಲ್ಲ ಇವೆ. ಪ್ರತೀ ಉಸಿರಿಗೆ ನಾವು ಅರ್ಧ ಲೀಟರ್ನಷ್ಟು ಗಾಳಿಯನ್ನು ಸೇವಿಸುತ್ತ, ಅಷ್ಟೇ ಹೊರಬಿಡುತ್ತ ಇರುತ್ತೇವೆ. ಅಂದರೆ ದಿನಕ್ಕೆ ಸುಮಾರು ಹತ್ತುಸಾವಿರ ಲೀಟರ್ ಗಾಳಿಯನ್ನು, ಅಂದರೆ ‘ಪರಿಸರವನ್ನು’ ನಾವು ನಮ್ಮೊಳಗೆ ತೆಗೆದುಕೊಂಡಂತಾಯಿತು. ದಿನಕ್ಕೆ ಸುಮಾರು ನಾಲ್ಕುಲೀಟರ್ ವರೆಗೆ ನೀರು ಸೇವಿಸುತ್ತೇವೆ ಎಂದುಕೊಂಡರೆ ಅಷ್ಟು ‘ಪರಿಸರ’ ನಮ್ಮೊಳಗಿನದಾಯಿತು. ಮನುಷ್ಯ ದೇಹವು ಪ್ರತಿ ದಿನ ಕೋಟಿಗಟ್ಟಲೆಯಷ್ಟು ಹೊಸ ಜೀವಕೋಶಗಳನ್ನು ಸೃಷ್ಟಿ ಮಾಡುತ್ತದೆಯಂತೆ. ಸುಮಾರು ಅಷ್ಟೇ ಜೀವಕೋಶಗಳು ಸಾಯಲೂಬಹುದು. ಈ ಛಳಿಗಾಲದಲ್ಲಿ ನಾವು ಒಮ್ಮೆ ಚರ್ಮವನ್ನು ಉಜ್ಜಿದರೆ ಒಣಗಿದ ಚರ್ಮದ ಪದರ ಒಂದಷ್ಟು ಪರಿಸರಕ್ಕೆ ಬಿಡುಗಡೆಯಾಗುತ್ತದೆ. ನಾವು ನಮ್ಮ ಪರಿಸರದಿಂದ ಒಳಸೇವಿಸುವ ಘನಾಹಾರ ಮತ್ತು ವಿಸರ್ಜಿಸುವ ಕಲ್ಮಶಗಳು ನಮ್ಮೊಳಗಿನ ಈ ಹುಟ್ಟುಸಾವುಗಳಿಗೆ ತಾಳೆಯಾಗುತ್ತವೆ, ಒಂದಷ್ಟು ದೇಹದೊಳಗೆ ಮರುಬಳಕೆಯೂ ಆಗುತ್ತದೆ. ದೇಹದ ಕೆಲವೇ ಕೆಲವು ಭಾಗಗಳು - ಮಿದುಳಿನಲ್ಲಿ, ಹೃದಯದ ಸ್ವಲ್ಪ ಭಾಗ, ಕಣ್ಣಿನ ಮಸೂರದ ಭಾಗ ಇತ್ಯಾದಿಗಳಷ್ಟೇ ಹುಟ್ಟಿನ ಬಳಿಕ ಸಾವಿನವರೆಗೂ ನಾಶವಾಗದೆ ಉಳಿಯುತ್ತವೆ. ಉಳಿದುದೆಲ್ಲ ಕಾಲಕಾಲಕ್ಕೆ ಹೊಸದಾಗುತ್ತ ಸಾಗುತ್ತದೆ - ಪರಿಸರದಿಂದ ಕಚ್ಚಾವಸ್ತುಗಳನ್ನು ಪಡೆದು. ಒರಟಾಗಿ ಹೇಳುವುದಾದರೆ ಪ್ರತೀ ಆರೋ-ಎಂಟೋ-ಹತ್ತೋ ತಿಂಗಳಿಗೆ ನಾವು ಇಡಿಯಾಗಿ ಹೊರಕ್ಕೆ ವಿಸರ್ಜನೆಯಾಗಿ ಹೊರಗಿನಿಂದ ಪಡೆದ ವಸ್ತುಗಳಿಂದ ಮರುರಚನೆಯಾಗಿರುತ್ತೇವೆ. ಅಂದರೆ ನನ್ನ ಸುತ್ತಲಿನ ಪರಿಸರ ಮುಗಿದು ‘ನಾನು’ ಎಂದುಕೊಳ್ಳುವ ‘ನಾನು’ ಶುರುವಾಗುವುದೆಲ್ಲಿ? ಅಂಥ ಒಂದು ಗಡಿರೇಖೆಯೇ ನಿಜಕ್ಕೆಂದರೆ ಇಲ್ಲ. ನನ್ನ ಸುತ್ತಲ ಪರಿಸರವೇ ನಾನು. ನಾನೇ ಪರಿಸರ. ಆದ್ದರಿಂದ ನಮ್ಮ ಪರಿಸರದಿಂದ ನಮ್ಮನ್ನು ಪ್ರತ್ಯೇಕಿಸಲಾಗದು. We are what we eat ಎನ್ನುವ ಮಾತಿನ ಅರ್ಥ ಇದೇ ಆಗಿದೆ.

ನಮ್ಮ ಎಲ್ಲ ಆಧುನಿಕ ಉದ್ಯೋಗಗಳಲ್ಲಿ ನಮಗೆ ನಮ್ಮ ಈ immediate surrounding ನ ಜೊತೆ ಇರಲೇಬೇಕಾಗಿದ್ದ ಸಾವಯವ ಸಂಬಂಧವನ್ನು ಕಡಿದುಹಾಕಲಾಗಿದೆ. ನನ್ನ ಈ ಹಿಂದಿನ ಉದ್ಯೋಗದಲ್ಲಿ ನನ್ನನ್ನು ಸುತ್ತುವರೆದ ಪರಿಸರದ ಮೇಲೆ ಒಂದು ಸ್ಪಷ್ಟವಾದ ಅವಲಂಬನೆ ಇದ್ದುದು ತಿಳಿಯುತ್ತಿರಲಿಲ್ಲ. ನಮ್ಮ ಜೀವನವು ನಮ್ಮ ಪರಿಸರದ ಮೇಲೆ ಅವಲಂಬಿತವಾಗಿದ್ದಾಗ ಪರಿಸರದ ಕಲಿಕೆ ಮತ್ತು ರಕ್ಷಣೆ ನಮಗೆ ಒಂದು ಆಯ್ಕೆಯಾಗಿ ಉಳಿಯುವುದಿಲ್ಲ. ಅದು ಅನಿವಾರ್ಯತೆಯಾಗಿ ಬಿಡುತ್ತದೆ. ಎಲ್ಲಿಯವರೆಗೆ ಪ್ರಕೃತಿಯ ಈ ಚಕ್ರದ ಮೇಲೆ ನಮ್ಮ ಅಳಿವು, ಉಳಿವು, ಭವಿಷ್ಯ ನಿರ್ಧಾರವಾಗುತ್ತದೋ ಅಲ್ಲಿಯವರೆಗೆ ಅದರ ಸುಸ್ಥಿತಿಯನ್ನು ಬಯಸುತ್ತೇವೆ. ನಾವೊಮ್ಮೆ ಪ್ರಕೃತಿಯಿಂದ ಲಿಬರೇಟ್ ಆಗಿದ್ದೇವೆ ಅನಿಸಿಬಿಟ್ಟರೆ ಆ ಮೇಲೆ ಅದರ ನಿರ್ವಹಣೆ, ಸುಸ್ಥಿತಿ ನಮ್ಮ ಆದ್ಯತೆ ಆಗಿರುವುದಿಲ್ಲ. 

ಕೃಷಿಕನಾಗಿ ನಾನು

ಇಲ್ಲಿಯವರೆಗೆ ನಾನು ಹೇಳಿದ ವಿಷಯ ಎಷ್ಟೆಂದರೂ ಸ್ವಲ್ಪ ಥಿಯರಿಟಿಕಲ್ ಆಗಿತ್ತು.
ನಾನು ಕೃಷಿಯನ್ನು ಪ್ರೀತಿಸಿ ಮದುವೆಯಾಗಿರುವ ಒಬ್ಬ ಹೊಸ ಕೃಷಿಕ. ಹಳ್ಳಿಯಲ್ಲಿ, ಕೃಷಿಯಲ್ಲೇ ಹುಟ್ಟಿಬೆಳೆದಿದ್ದರೂ ಪೂರ್ಣಪ್ರಮಾಣದ ಕೃಷಿಗೆ ಬದಲಾದ ಮೇಲೆ ಪರಿಸರದೊಂದಿಗಿನ ನನ್ನ ವ್ಯವಹಾರದಲ್ಲಿ ಆಶ್ಚರ್ಯಕರ ಬದಲಾವಣೆಗಳಾದವು. ಒಂದು ವರ್ಷದ ಅವಧಿಯಲ್ಲಿ ಕೃಷಿಕನಾಗಿ ನನ್ನ, ಅಥವಾ ಬೇರೆ ಯಾವುದೇ ಕೃಷಿಕನ ಪಕೃತೀಸ್ಪಂದನೆ ಹೇಗಿರುತ್ತದೆ ಎಂಬುದನ್ನು ನಾನೀಗ fast forward ರೀತಿಯಲ್ಲಿ, ಸಾರಾಂಶವಾಗಿ ನಿಮಗೆ ಹೇಳಲು ಬಯಸುತ್ತೇನೆ.

ಸುಮಾರು ಮೇ ೨೪ ಕ್ಕೆ ಪತ್ತನಾಜೆಯ ದಿನ ಜೇನು ಪೆಟ್ಟಿಗೆಯಿಂದ ಕೊನೆಯ ಬಾರಿ ಜೇನು ತೆಗೆಯಬೇಕೆಂಬ ಅಲಿಖಿತ ನಿಯಮವಿದೆ. ಅದಕ್ಕಿಂತ ನಂತರ ವಾತಾವರಣದಲ್ಲಿ ಸೆಖೆ, ತೇವಾಂಶ ಮತ್ತು ಮಳೆಯ ಮುನ್ಸೂಚನೆ ಹೆಚ್ಚಿ ಗಿಡಮರಗಳು ಹೂಬಿಡುವುದರ ಬದಲಿಗೆ ಚಿಗುರುಮೊಗ್ಗುಗಳನ್ನು ಬಿಡುವುದರಿಂದ ಜೇನು ಉತ್ಪತ್ತಿ ಕಡಿಮೆಯಾಗುತ್ತದೆ, ಬಳಿಕ ಸಂಗ್ರಹವಾದ ಜೇನು ಅವುಗಳ ಉಪಯೋಗಕ್ಕೆ ಇರುವಂಥದ್ದು, ನಮಗಲ್ಲ. ಬದಲಾದ ಪ್ರಕೃತಿ, ತೇವಾಂಶ, ಉಷ್ಣಾಂಶಗಳು, ಗಿಡಮರಗಳ ವರ್ತನೆಗಳು ಹೀಗೆ ಪ್ರಾಯೋಗಿಕವಾಗಿ ಒಬ್ಬ ಜೇನುಪಾಲಕನ ಅನುಭವಕ್ಕೆ ಬರುತ್ತವೆ. ಜೂನ್ ಒಂದಕ್ಕೆ ಮಳೆ ಶುರುವಾಗಬೇಕೆಂಬ ನಿರೀಕ್ಷೆ ಎಲ್ಲರಿಗೂ ಇರುತ್ತದೆ. ನಾವು ಪ್ರತೀವರ್ಷ ಜೂನ್ ಒಂದಕ್ಕೆ ನೇಜಿ ಹಾಕುತ್ತೇವೆ. ನೇಜಿಗೆ ವಯಸ್ಸಾಗುವ ಮೊದಲೇ ಮಳೆ ಶುರುವಾಗದಿದ್ದರೆ ನಮಗೆ ಎದೆಬಡಿತ ಏರಲು ಶುರುವಾಗುತ್ತದೆ. ನನ್ನ ಹಿಂದಿನ ಉದ್ಯೋಗದಲ್ಲಿ ನನಗೆ ಕುಡಿಯಲು, ಸ್ನಾನ ಮಾಡಲು ನೀರಿನ ಕೊರತೆ ಇಲ್ಲದಿದ್ದರೆ ನನಗೆ ಮಳೆ ಯಾವಾಗ ಬಂದರೂ ತೊಂದರೆಯೇನೂ ಇರಲಿಲ್ಲ; ಪರಿಸ್ಥಿತಿ ಈಗ ಬದಲಾಗಿದೆ. ಮುಂಗಾರು ಮತ್ತು ಹಿಂಗಾರಿನ ಆರಂಭದಲ್ಲಿ ಒಮ್ಮೆ ಭರ್ಜರಿ ಸಿಡಿಲು ಹೊಡೆದು ಮಳೆಯಾಗುತ್ತದೆ. ಸಿಡಿಲಿನಿಂದ ಅದೆಷ್ಟೋ ಸಾವಿರ ಟನ್ ನೈಟ್ರೋಜನ್ ನೈಟ್ರೇಟ್ ರೂಪದಲ್ಲಿ ಭೂಮಿಗೆ ಸೇರುವುದು ನಮಗೆಲ್ಲ ತಿಳಿದೇ ಇದೆ. ಕೃಷಿಗೆ ಬರುವ ಮೊದಲು ಸಿಡಿಲು ಬಂದಾಗ ಚಾರ್ಜಿಗೆ ಇಟ್ಟ ಕರೆಂಟಿನ ಯಂತ್ರಗಳನ್ನು ಡಿಸ್ಕನೆಕ್ಟ್ ಮಾಡುವುದು ಬಿಟ್ಟರೆ ನನಗೆ ಸಿಡಿಲಿನ ಬಗ್ಗೆ ಯಾವುದೇ ಭಾವನೆ ಇರಲಿಲ್ಲ. ನಾನು ನೆಟ್ಟ ರಕ್ತಚಂದನ, ಹೊಂಗೆ ಇತ್ಯಾದಿ ಜಾತಿಯ ಮರಗಳಲ್ಲಿ ಅಂಗೈಯಷ್ಟು ದೊಡ್ಡದಾದ ಹೊಸ ಎಲೆಗಳು ಸಿಡಿಲು ಹೊಡೆದ ಕೆಲದಿನಗಳಲ್ಲಿ ಮೂಡುವುದನ್ನು ನಾನು ಈಗ ಗಮನಿಸಬಲ್ಲೆ. ಛಳಿಗಾಲ ಬಂದಾಗ ಸೂರ್ಯನ ಬಿಸಿಲು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಓರೆಯಾಗಿ ಬೀಳಲು ಶುರುವಾಗುತ್ತದೆ. ಅಡಿಕೆ ಮರಗಳು ಇದರಿಂದ ಸುಡುವುದೆಂಬ ಕಾರಣಕ್ಕೆ ನಾವು ತೆಂಕಬಿಸಿಲಿನ ಗೆರೆಗೆ, ಅಂದರೆ ದಕ್ಷಿಣದಿಂದ ಸುಮಾರು 22 ಡಿಗ್ರಿ ಕೋನದಲ್ಲಿ ಸಾಲುಸಾಲಾಗಿ ಅಡಿಕೆಗಿಡ ನೆಡುತ್ತೇವೆ. ಸೂರ್ಯನ ಬಿಸಿಲು ಬೀಳುವ ದಿಕ್ಕಿಗೆ ಸ್ಪಂದಿಸುವ ಬೇರೆಯಾವುದಾದರೂ ಉದ್ಯೋಗ ಇದ್ದರೆ ನೀವು ನನಗೆ ಹೇಳಿ. ಛಳಿಗಾಲ ಬಂದಾಗ ಭತ್ತ ಮತ್ತು ಇತರೆಲ್ಲ ಹುಲ್ಲುಗಳು ಉದ್ದುದ್ದಕ್ಕೆ ಹೂಕದಿರು ಬಿಟ್ಟು ಫಲವತಿಯರಾಗುತ್ತವೆ. ತನ್ನ ವಂಶದ ಕುಡಿಯನ್ನು ರಕ್ಷಿಸುವ ತುಡಿತದಿಂದ ಭತ್ತದ ಗಿಡ ತನ್ನ ಮೈಮೇಲೆಲ್ಲ ತುರಿಸುವ ರೋಮಧರಿಸಿ ನಿಂತಿರುತ್ತದೆ. ಕೊಯ್ಲು, ಆನೆಪಡಿಗೆ ಹೊಡೆದು ಧಾನ್ಯ ಬೇರ್ಪಡಿಸುವ ಅನುಭವ, ಅದರ ತುರಿಕೆ, ಬೆವರುಗಳನ್ನು ಉಣ್ಣುವ ಪ್ರತಿಯೊಬ್ಬನೂ ಅನುಭವಿಸಿ ನೋಡಬೇಕು. ಆಗ ಉಣ್ಣುವ ಊಟದ ರುಚಿಯೇನು ಎನ್ನುವುದು ನಿಜವಾಗಿ ತಿಳಿಯುತ್ತದೆ.
ನವರಾತ್ರಿ, ದೀಪಾವಳಿ, ಸುಬ್ರಹ್ಮಣ್ಯ ಷಷ್ಠಿ - ಹೀಗೆ ಹಬ್ಬಗಳಿಗೆ ಮಳೆಯಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಶಿವರಾತ್ರಿಯ ದಿನದ ನಂತರ ಭೂಮಿಯೊಳಗಿನ ನೀರಿನ ಮಟ್ಟ ಸರ್ರನೆ ಕೆಳಜಾರತೊಡಗುತ್ತದೆ. ವಿಜ್ಞಾನವನ್ನು ತಿಳಿಯದ ನಮ್ಮ ಹಿರಿಯರು ಹಬ್ಬಗಳನ್ನು ಮತ್ತು ಮಳೆಯನ್ನು ಹೇಗೆ ರೀತಿ ಹೊಂದಿಸಿದ್ದಾರೆ ಎನ್ನುವುದು ಹಳೆಯದನ್ನು ಮೌಢ್ಯವೆನ್ನುವ ನಮ್ಮಂಥ ಆಧುನಿಕರಿಗೆ ತಿಳಿಯದು. ಹಿಂದೆ ನನಗೆ ಹಬ್ಬದ ಮಳೆಗಳು ಮುಖ್ಯವಾಗಿರಲಿಲ್ಲ. ಆದರೆ ಈಗ ಒಂದು ಮಳೆ ಬಂದರೆ ನೀರಾವರಿಯನ್ನು ಒಂದು ವಾರ ಮುಂದೂಡಬಹುದು, ನಾವು ನೆಟ್ಟಗಿಡಗಳ ಮುಖದಲ್ಲಿ ನೆಮ್ಮದಿಯನ್ನು ಕಾಣಬಹುದು ಎಂಬ ಕಾರಣಕ್ಕೆ ಈಗ ಅವು ಬಹಳ  ಮುಖ್ಯವಾಗಿದೆ. ಇಷ್ಟಲ್ಲದೆ ಅಮವಾಸ್ಯೆ, ಹುಣ್ಣಿಮೆ ಮತ್ತು ಪಕ್ಷದ ಇಂತಿಂಥಾ ದಿನಗಳಲ್ಲಿ ಆಯಾ ಬೀಜಗಳನ್ನು ಹಾಕಿದರೆ ಪರಿಣಾಮ ಹೆಚ್ಚು ಎಂಬ ಕಾರಣಕ್ಕೆ ಚಂದ್ರನ ಸಂಕುಚನೆ, ವಿಕಸನಕ್ಕೆ ಸ್ಪಂದಿಸುವ ಕೃಷಿಕರಿದ್ದಾರೆ. ನಮ್ಮ ಸಾಕುಪ್ರಾಣಿಗಳ ಋತುಚಕ್ರ, ಬಸುರು, ಹೆರಿಗೆ, ಬಾಣಂತನಕ್ಕೆ ಸ್ಪಂದಿಸುವುದು ನಮಗೆ ಅನಿವಾರ್ಯವಾಗಿದೆ. ತೆಂಗಿನಕಾಯಿ ಒಡೆದು ಬಿಸಿಲಿಗೆ ಹಾಕಿದ ದಿನ ಒಂದು ವೇಳೆ ಮೋಡ ಕವಿದರೆ ಪ್ರತಿಯೊಂದು ಮೋಡವನ್ನು ಎಣಿಸುವಂಥ ತಳಮಳ ನಮಗೆ ಉಂಟಾಗುತ್ತದೆ.
ನಮ್ಮ ಪರಿಸರದೊಂದಿಗೆ ರೀತಿ ಬೆರೆಯುವುದು, ಕೊಡುಕೊಳ್ಳುವುದು, ಪರಿಸರದ ಬದಲಾವಣೆಗಳನ್ನು ಗಮನಿಸುವುದುಕೃಷಿಕನಿಗೆ ವಾರಾಂತ್ಯದ ಒಂದು ಐಚ್ಛಿಕ ಚಟುವಟಿಕೆಯಾಗಿರದೆ ಉಸಿರಾಡುವಂತೆ ಅನಿವಾರ್ಯವಾಗಿದೆ. ಅನಿವಾರ್ಯತೆಗೆ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವುದರಲ್ಲಿ ನಮ್ಮ ಮತ್ತು ಪರಿಸರದ ಉಳಿವು ಇದೆ.

ಪರಿಸರದಿಂದ ವಿಮುಕ್ತಗೊಂಡ ನಮ್ಮ ಜೀವನಶೈಲಿ
ಇಂಧನ, ಸಾರಿಗೆ ಮತ್ತು ಸಂಪರ್ಕದ ವ್ಯವಸ್ಥೆಗಳು ಆಧುನಿಕವಾದಂತೆಲ್ಲ ನಮ್ಮ ಉದ್ಯೋಗಗಳು ಆಧುನಿಕವಾಗುತ್ತಾ, ಬದಲಾಗುತ್ತಾ ಸಾಗಿವೆ. ನಮ್ಮನ್ನು ಸುತ್ತುವರೆದಿರುವ ಪರಿಸರದೊಂದಿಗಿನ ನಮ್ಮ ಸಂಬಂಧವು ಶಿಥಿಲವಾಗುತ್ತ ಸಾಗಿದೆ. ನಮ್ಮ ಅವಲಂಬನೆಯು ನಮ್ಮನ್ನು ಸುತ್ತುವರೆದಿರುವ ಪರಿಸರದ ಮೇಲಿರದೆ ದೂರದೂರದ ಊರುಗಳ ಹಣಕಾಸು ವ್ಯವಸ್ಥೆಗಳೆಡೆಗೆ ಬದಲಾಗಿದೆ.
ನನ್ನ ಈ ಹಿಂದಿನ software ಉದ್ಯೋಗದಲ್ಲಿ ಇದ್ದ ಪರಿಸರದೊಂದಿಗಿನ ನನ್ನ ಸಂಬಂಧ ಮತ್ತು ಈಗಿನ ಕೃಷಿಜೀವನದಲ್ಲಿನ ಸಂಬಂಧದ ಮಧ್ಯೆ ಅಂತರವು ಅಜಗಜಾಂತರವಾಗಿದೆ. ನಾನೊಬ್ಬ software engineer ನ ಪಾತ್ರದಲ್ಲಿ ವ್ಯವಹರಿಸುವಾಗ ಸಹಜವಾಗಿ retail marketing, share market, telecommunication, banking ಇತ್ಯಾದಿ ಕ್ಷೇತ್ರಗಳಲ್ಲಿ ವ್ಯವಹರಿಸಬೇಕಾಗುತ್ತದೆ. ನಾವೀಗ ಈ ಸೇವೆಗಳನ್ನು ಪ್ರಪಂಚದಾದ್ಯಂತ ಹರಡಿರುವ ಎಲ್ಲ ದೇಶಗಳ ಕಂಪನಿಗಳಿಗೂ ಕೊಡುತ್ತಿದ್ದೇವೆ. ಈ ಕಂಪನಿಗಳ ತಮ್ಮ ಪರಿಸರದೊಂದಿಗಿನ ವ್ಯವಹಾರವು ಹೆಚ್ಚಿನ ಮಟ್ಟಿಗೆ extractive/ಬಗೆಯುವಿಕೆಯಷ್ಟೇ ಆಗಿದೆ. ಅವುಗಳ ಮೇಲ್ಪದರಕ್ಕೆ ಬೇಕಾದ software ಸೇವೆಗಳು ಹೆಚ್ಚಿನೆಲ್ಲ ರೀತಿಯಿಂದ ಪರಿಸರದ ಸಂಪರ್ಕವನ್ನು ಕಡಿದುಕೊಂಡಿವೆ.

ನಾನು ಹಿಂದೆ ಇಂಗ್ಲೆಂಡ್ ನ ಕಸ್ಟಮರ್ ಗಳೊಂದಿಗೆ ವ್ಯವಹರಿಸುತ್ತಿದ್ದೆ. ಈ ಉದ್ಯೋಗದಲ್ಲಿ ಮೇಲೆ ವಿವರಿಸಿದ ಮಳೆ/ಗಾಳಿ/ಬಿಸಿಲುಗಳ ಅವಲಂಬನೆ ನನ್ನ ಉದ್ಯೋಗಕ್ಕೆ ಇರಲಿಲ್ಲ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂಗ್ಲೆಂಡ್ ಮತ್ತು ಭಾರತದ ನಡುವೆ ಸಮಯದ ವ್ಯತ್ಯಾಸ ವರ್ಷದಲ್ಲಿ 6 ತಿಂಗಳು 4.5ಘಂಟೆ ಮುಂದಿನ ಆರು ತಿಂಗಳು 5.5 ಘಂಟೆ. ಇದು ಇಂಗ್ಲೆಂಡಿನ ಛಳಿ/ಬೇಸಿಗೆಗಾಲಗಳ ಮೇಲೆ ಅವಲಂಬಿತ. ಅದಕ್ಕೆ ಅನುಗುಣವಾಗಿ ಅವರೊಂದಿಗೆ ನಮ್ಮ ವ್ಯವಹಾರ ಬದಲಾಗುತ್ತಿತ್ತು. ಅಂದರೆ ನನ್ನ ಸಾಫ್ಟ್ವೇರ್ ಉದ್ಯೋಗವು ಇಂಗ್ಲೆಂಡಿನ ಪರಿಸರದ ಬದಲಾವಣೆಗೆ ಇಷ್ಟರಮಟ್ಟಿಗೆ ಸ್ಪಂದಿಸುತ್ತಿತ್ತು, ಅದು business hours ಗೆ ಸಂಬಂಧಿಸಿದ್ದರಿಂದ. ಅಮೆರಿಕದೊಂದಿಗೆ ವ್ಯವಹರಿಸುವವರು  ರಾತ್ರಿಯ ಹೊತ್ತು ಕಾಲ್ ಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿಯ ಹ್ಯಾಲೋವೀನ್, Thanksgiving day ಇದಕ್ಕೆಲ್ಲ ಭಾರತದಲ್ಲಿರುವ ಇಂಜಿನಿಯರುಗಳು ಸ್ಪಂದಿಸುತ್ತಾರೆ. ಗ್ರೀಸ್ ಮತ್ತು ಅಮೆರಿಕಾ ದೇಶಗಳ ಆರ್ಥಿಕ ಕುಸಿತದ ಕಾರಣಕ್ಕೆ ಕೆಲವೊಮ್ಮೆ ಕೆಲಸ ಕಳೆದುಕೊಳ್ಳುತ್ತಾರೆ. ಇಲ್ಲಿ ನಮ್ಮ connection ಎಷ್ಟು ದೂರದ ಪ್ರದೇಶದೊಂದಿಗೆ ಇದೆ ಎನ್ನುವುದನ್ನು ಗಮನಿಸಿ. ನಿಜಕ್ಕೆಂದರೆ ನಮಗೆ ಇಲ್ಲಿ connection ಇಲ್ಲ, ಇದು disconnection ಅಷ್ಟೆ. ‘ಪೊಂಗಾರೆ ಪೂಪೋನಾಗ ಕೊಡ್ಡೈ ಮೀನ್ ರುಚಿ ಉಪ್ಪುಂಡು’ - ಹೊಂಗಾರೆ ಮರ ಹೂಬಿಡುವ ಸಮಯದಲ್ಲಿ ಕೊಡ್ಡೈ ಮೀನು ರುಚಿಯಾಗಿರುತ್ತದೆ - ಎಂದು ತುಳುವಿನಲ್ಲಿ ಒಂದು ನಾಣ್ಣುಡಿ ಇದೆ. ಎಲ್ಲಿಯ ಹೊಂಗಾರೆ ಮರದ ಹೂವು? ಎಲ್ಲಿಯ ಕೊಡ್ಡೈ ಮೀನು? ಇವೆರಡರ ಸಂಬಂಧವನ್ನು ಗುರುತಿಸಬೇಕೆಂದರೆ ನಮ್ಮ ಜನರಿಗಿದ್ದ ಪರಿಸರ ಜ್ಞಾನವೆಷ್ಟು? ನಾವೀಗ ಎಲ್ಲಿಗೆ ಬಂದಿದ್ದೇವೆ? ಎನ್ನುವ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ.

ಈ disconnection ನ ಪರಿಣಾಮವು ಅಗಾಧವಾಗಿದೆ. ಇದರಿಂದ ನಮ್ಮ ಯುವಜನತೆಗೆ ದೂರದೂರಿನ, ವಿದೇಶದ ಆರ್ಥಿಕ ಸಂಕೀರ್ಣತೆಗಳು ಅರ್ಥವಾಗಿದೆ ಎನ್ನುವುದು ನಿಜ. ಆದರೆ ತಮ್ಮ ಕಾಲಬುಡದ ಜ್ಞಾನವೆಲ್ಲ ಮರೆತೇ ಹೋಗಿದೆ.
ಇಂದು ನಮಗೆ ಬೆಳ್ತಿಗೆ ಅಕ್ಕಿ ಮತ್ತು ಕುಚ್ಚಿಲಕ್ಕಿಗಳು ಒಂದೇ ಜಾತಿಯ ಭತ್ತದಿಂದ ತಯಾರಾಗಬಲ್ಲವು ಎಂದು ಊಟಮಾಡುವ ಎಷ್ಟು ಜನರಿಗೆ ಇಂದು ತಿಳಿದಿದೆ ಹೇಳಿ? ಬಾಳೆಗಿಡವೊಂದನ್ನು ಬೆಳೆಸಲು ಕಂದು ನೆಡಬೇಕೆಂಬುದು ನಮ್ಮ ಜನಕ್ಕೆ ಗೊತ್ತಿಲ್ಲ. ph.d ಮಾಡಲು ಹೊರಟಿದ್ದ ಒಬ್ಬಾಕೆ ವಿದ್ಯಾರ್ಥಿನಿ ತಾವರೆಯ ಎಲೆಯನ್ನು ನೋಡಿ ‘ಓಓ ಇಷೊಂದು ದೊಡ್ಡ ಒಂದೆಲಗಾನಾ?’ ಎಂದು ಕೇಳಿದ್ದಾಳೆ. ಹೋರಿಯನ್ನು ನೋಡಿ ‘ಈ ದನಕ್ಯಾಕೆ ಒಂದೇ ಮೊಲೆ ಇದೆ?!’ ಎಂಬ ಪ್ರಶ್ನೆ ಕೇಳಿದ್ದಾರೆ. ಇಂಥ ಬೇಕಾದಷ್ಟು ಉದಾಹರಣೆಗಳನ್ನು ನಾವು ಪಟ್ಟಿ ಮಾಡುತ್ತ ಹೋಗಬಹುದು. ‘ನಮ್ಮ ಮಕ್ಕಳಿಗೆ ಮುಳ್ಳುಸೌತೆ, ತೊಂಡೆ, ಹಾಗಲಕಾಯಿ, ಅರಸಿನ ಇಷ್ಟು ಗಿಡಗಳನ್ನು ತೋರಿಸಿ ಇದರಲ್ಲಿ ಆಗುವ ಖಾದ್ಯ ವಸ್ತುಗಳನ್ನು ಹೆಸರಿಸಿ’ ಎಂದು ಹೇಳಿದರೆ ನಮ್ಮ ಹೈಸ್ಕೂಲು ವಿದ್ಯಾರ್ಥಿಗಳು ಹೇಳುವ ಸ್ಥಿತಿಯಲ್ಲಿಲ್ಲ; ಆದರೆ ಅವರಿಗೆ ಮಕ್ಕಳನ್ನು ಮಾಡುವುದು ಹೇಗೆಂಬುದನ್ನು ಮೊಬೈಲ್ ಮೂಲಕ ನೋಡಿ ಚೆನ್ನಾಗಿ ಗೊತ್ತಿದೆ - ಇದು ನಮ್ಮ ಮಾಹಿತಿ ತಂತ್ರಜ್ಞಾನವು ಮಾಡಿರುವ ಕ್ರಾಂತಿ. ಸ್ಥಳೀಯ ಆಹಾರ, ವಿಹಾರ ಮತ್ತು ಸ್ವಾಯತ್ತ/ಸ್ವತಂತ್ರ ಜೀವನಕ್ರಮ ದ ಕುರಿತ ಪ್ರಾಯೋಗಿಕ ಅರಿವಿಗಿಂತ ಅಂತರರಾಷ್ಟ್ರೀಯ ರಾಜಕೀಯ, ಆರ್ಥಿಕ, ಕ್ರೀಡಾಕೂಟಗಳು - ಮುಖ್ಯವಾಗಿ ಇವೆಲ್ಲವುಗಳ ಬಗ್ಗೆ ಮಾಹಿತಿಯ ರಾಶಿ ನಮಗೆ ಅತೀ ಮುಖ್ಯವಾದುದಾಗಿದೆ. ಥಿಯರಿಟಿಕಲ್ ಆದ ಮಾಹಿತಿ ಮತ್ತು ಪ್ರಾಯೋಗಿಕ ಕ್ರಿಯಾಜ್ಞಾನಗಳ ಮಧ್ಯೆ ಭೂಮ್ಯಾಕಾಶದ ವ್ಯತ್ಯಾಸ ಇದೆ; ಅವೆರಡೂ ಒಂದೇ ಅಲ್ಲ. ಒಂದು ಉದಾಹರಣೆ ಕೊಡುತ್ತೇನೆ - ಟೆನಿಸ್ ನಲ್ಲಿ backhand, forehand ಎಂದು ಎರಡು ರೀತಿಯಲ್ಲಿ ಎದುರಾಳಿಯನ್ನು ಉತ್ತರಿಸುತ್ತಾರೆ. ನಮ್ಮ ಜಗತ್ಪ್ರಸಿದ್ಧ ಆಟಗಾರರ backhand ಹೇಗೆ? forehand ಹೇಗೆ?  ಎಂದು ವಿವರವಾಗಿ ವಿಶ್ಲೇಷಿಸುವ ಇಂದಿನ ಟಿವಿಗೆ, ಮೊಬೈಲಿಗೆ ಅಂಟಿದ ನೋಡುಗರಿಗೆ ಸ್ವತ: ಒಂದು ಸರ್ವ್ ಮಾಡಲು ಗೊತ್ತಿರುವುದಿಲ್ಲ. ಆದರೆ ನಮ್ಮ ಮನೆಯಲ್ಲಿ ಒಬ್ಬ ಕೃಷ್ಣ ಎನ್ನುವ ಹುಡುಗ ಇದ್ದಾನೆ. 2 kg ತೂಕದ ಕತ್ತಿ ಹಿಡಿದು ಗಿಡಗಂಟಿ ಬೆಳೆದಿರುವ ಜಾಗವನ್ನು  ಅವನು ಸವರುವ ಸೌಂದರ್ಯವನ್ನು ನೀವುಗಳೊಮ್ಮೆ ನೋಡಬೇಕು. ಫೆಡರರ್ ನ ಹೊಡೆತದ ಬಗ್ಗೆ ವಿಶ್ಲೇಷಿಸಲು ಮಾತ್ರ ತಿಳಿದಿರುವ ಮಾಹಿತಿವೀರರ, ಕ್ರಿಯಾಜ್ಞಾನವಿಹೀನರ ಎದುರು ಎಡಗೈಯಲ್ಲೂ, ಬಲಗೈಯಲ್ಲೂ, backhand ಮತ್ತು forehand ಎರಡರಲ್ಲೂ ವೀರಾವೇಶದಿಂದ ಕೆಲಸಮಾಡಿ ಐದು ನಿಮಿಷದಲ್ಲಿ ಈ ವೇದಿಕೆಯಷ್ಟು ಜಾಗವನ್ನು ಸ್ವಚ್ಛಗೊಳಿಸುವ ನಮ್ಮ ಕೃಷ್ಣನ ಶ್ರೇಷ್ಠತೆಯೆದುರು ನನಗಂತೂ ಸಂಶಯರಹಿತವಾಗಿದೆ. 

ಇದಕ್ಕಿಂತ ಭಿನ್ನವಾಗಿ ವಾರಾಂತ್ಯಗಳಲ್ಲಿ ಸೈಕ್ಲಿಂಗ್, ಬೋಟಿಂಗ್, ಟ್ರೆಕ್ಕಿಂಗ್, ಹೋಮ್-ಸ್ಟೇಯಿಂಗ್, ಕ್ಯಾಂಪಿಂಗ್ ಇತ್ಯಾದಿಗಳನ್ನು ನಡೆಸುವ, ದೊಡ್ಡ ಕ್ಯಾಮರಾದೊಂದಿಗೆ ಪ್ರಕೃತಿ, ಗಿಡಮರ, ಇಬ್ಬನಿ, ಪಕ್ಷಿಗಳು ಇತ್ಯಾದಿಗಳ ಚಿತ್ರ ತೆಗೆಯುವ, ವೈಜ್ಞಾನಿಕ ಹೆಸರುಗಳೊಂದಿಗೆ ಅಧ್ಯಯನ ನಡೆಸುವ ಬಹಳ ಮಂದಿ ನಗರದ ಉದ್ಯೋಗಿಗಳು ಇಂದು ಇದ್ದಾರೆ. ಇವರ ಸಂವೇದನೆಯ ಬಗ್ಗೆ ನನಗೆ ಸದಭಿಪ್ರಾಯವೇನೋ ಇದೆ; ಆದರೆ landscape ಎನ್ನುವುದು ಅವರಿಗೆ ವಿಹಾರತಾಣವಾಗಿದೆಯಷ್ಟೇ ಹೊರತು ತಾಯ್ನೆಲವಾಗಿಲ್ಲ. ತಮಗೆ ಉಣಿಸು ನೀಡುವುದೆನ್ನುವ, ತಮ್ಮ ಆರೈಕೆ ಬೇಡುವುದೆನ್ನುವ ಅವಿನಾಭಾವ ಸಂಬಂಧವನ್ನು ಅವರು ಭೂಮಿಯೊಂದಿಗೆ ಹೊಂದಿಲ್ಲ. ಅವರು ಭೂಮಿಯ ಆರ್ಥಿಕತೆಯೊಂದಿಗೆ, land based economy ಯೊಂದಿಗೆ ಬೆಸೆದುಕೊಂಡಿಲ್ಲ. ತಮ್ಮ ಭೂಪ್ರದೇಶವು ಇನ್ನೊಂದು ಹೊಸ ಇಂಡಸ್ಟ್ರಿಗೆ ಜಪ್ತಿಯಾದರೆ ಅದು ಅವರ ಹೊಟ್ಟೆಯೊಳಗೆ ಕಂಪನ ಉಂಟುಮಾಡುವುದಿಲ್ಲ. ಭೂಮಿಯಲ್ಲದಿದ್ದರೆ ಅವರಿಗೆ ಅಂಥದ್ದು ಇನ್ನೊಂದು ಸಿಗಬಲ್ಲುದು. ಒಟ್ಟಿನಲ್ಲಿ ಅವರು ಭೂಮಿಯೊಂದಿಗೆ ಹಗಲು ರಾತ್ರಿಗಳನ್ನು, ಬೇಸಿಗೆ, ಮಳೆ, ಛಳಿಕಾಲಗಳನ್ನು ಕಳೆಯುವುದಿಲ್ಲ - They do not summer and winter with the land. 

ಪ್ಯಾರಾಗಳಲ್ಲೆಲ್ಲ ನಾನು ವಿಮರ್ಶಿಸುತ್ತಿರುವಅವರು/ಅವರಿಗೆಅನ್ನುವ ಸ್ಥಾನದಲ್ಲಿ ಹಿಂದೆ ನಾನು ಇದ್ದೆ ಎನ್ನುವುದನ್ನು ಗಮನಿಸಿ. ನನ್ನಿಂದ ವಿಮರ್ಶೆಗೊಳಗಾಗುತ್ತಿರುವಅವರುಬಹಳ ಸಂದರ್ಭಗಳಲ್ಲಿ ನನ್ನ ಆತ್ಮೀಯರೇ ಆಗಿದ್ದಾರೆ ಮತ್ತು ಅದೆಷ್ಟೋ ಬಾರಿಸ್ವತ: ನಾನೇ’. ನನ್ನ ವಿಮರ್ಶೆಯ ವಿರೋಧಾಭಾಸದಿಂದ ಒಂದುಮಟ್ಟಿಗೆ ಹೊರಬರಲು ನಾನು ಕೃಷಿಜೀವನವನ್ನು ಆಯ್ದುಕೊಂಡೆ.

ನಮ್ಮೆಲ್ಲ ಬೇರೆ ಬೇರೆ ಅಜ್ಞಾನಗಳು ಇಂದು ವಿಶೇಷವಾಗಿ ಲಾಭದಾಯಕವಾಗಿವೆ. ನಮ್ಮ ಅಜ್ಞಾನವು ಜಿಡಿಪಿಗೆ ಬಹಳ ದೊಡ್ಡ ಕೊಡುಗೆಯನ್ನು ಕೊಡುತ್ತಿವೆ. ಅಕ್ಕಿಯ ತೌಡು ನಮಗೆ ಅನಗತ್ಯ ಎಂಬ ನಮ್ಮ ಅಜ್ಞಾನವು “ರೈಸ್ ಬ್ರಾನ್ ಆಯಿಲ್” ನ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ನಮ್ಮ ಕರಿದ ತಿಂಡಿಗಳು, ಸೌಂದರ್ಯವರ್ಧಕ ವಸ್ತುಗಳು ತಯಾರಾಗಲು ಬಹಳ ಅನುಕೂಲವಾಗಿ ವ್ಯಾಪಾರ ವಹಿವಾಟು ವೃದ್ಧಿಸಿದೆ. ತೆಂಗಿನೆಣ್ಣೆ, ಕಡಲೆ ಎಣ್ಣೆಗಳ ನೈಜ ಅಸಲು ಎಷ್ಟು ಎನ್ನುವುದರ ಬಗೆಗಿನ ನಮ್ಮ ಅಜ್ಞಾನದ ಕಾರಣದಿಂದ ಇಂದು transformer oil ನ ಕಲಬೆರಕೆ ಸಾಧ್ಯವಾಗಿದೆ. ಎಳ್ಳೆಣ್ಣೆ ಖರೀದಿಸುವಾಗ ಅಡುಗೆಗಾ? ಅಥವಾ ದೀಪ ಉರಿಸಲಾ? ಎಂಬ ಪ್ರಶ್ನೆಯು ಎಳ್ಳೆಣ್ಣೆಯ ಹಣೆಬರಹವನ್ನು ಸಾರಿ ಹೇಳುತ್ತಿದೆ. Contains no fruit juice, Natural and nature identical flavours ಎಂಬ ತಲೆಬರಹದ ಆಹಾರದ ಪೊಟ್ಟಣಗಳನ್ನು ವಿದ್ಯಾವಂತರಾದ, ಮಾಹಿತಿಗಳಿಂದ ತುಂಬಿತುಳುಕುತ್ತಿರುವ ನಾವು ಖರೀದಿಸಿ ಹೆಮ್ಮೆಯಿಂದ ತಿನ್ನುತ್ತಿದ್ದೇವೆ. ನೀರು ಕಲುಷಿತವಾದ್ದರಿಂದ ಇಂದು ಶುದ್ಧೀಕರಿಸುವ ಯಂತ್ರಗಳಿಗೆ ಬಹುಬೇಡಿಕೆಯಿದೆ. ಸಮುದ್ರದ ನೀರನ್ನು ಸಿಹಿನೀರು ಮಾಡುವ ಯಂತ್ರ ಮಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ. 2019ರ ವೇಳೆಗೆ ಶುದ್ಧನೀರಿನ ‘ವೈಕುಂಠ ಸಮಾರಾಧನೆ’ಯ ಈ ಘಟಕವನ್ನು ನಾವು ಚಪ್ಪಾಳೆತಟ್ಟಿ ಉದ್ಘಾಟಿಸಲಿದ್ದೇವೆ. ಮಾಲಿನ್ಯವು ಇಂದು ಅತಿ ದೊಡ್ಡ ಉದ್ದಿಮೆಗಳಲ್ಲಿ ಒಂದಾಗಿದೆ. ಮಾಲಿನ್ಯವು ನಮ್ಮ ಜಿಡಿಪಿಗೆ ಕೊಡುತ್ತಿರುವ ಕೊಡುಗೆ ಅಪಾರ. 
ಇವೆಲ್ಲವುಗಳ ಬಗೆಗಿನ ಮಾಹಿತಿ ಇಂದು ನಮ್ಮ ಬೆರಳ ತುದಿಯಲ್ಲಿ ಅನಿಯಮಿತ ಇಂಟರ್ನೆಟ್ ಕನೆಕ್ಷನ್ ಮೂಲಕ ಸಿಗುತ್ತಿದೆ. ಅಂದರೆ ಮಾಹಿತಿಯು ಈ ರೋಗಕ್ಕೆ ಮದ್ದಲ್ಲವೆಂಬುದು ನಿಸ್ಸಂಶಯ. 

ಇಂದಿನ ಉದ್ದಿಮೆಗಳಲ್ಲಿ ಕೆಲಸದ ಜವಾಬ್ದಾರಿಯು ನೂರಾರು ವಿವಿಧ ಹಂತಗಳಲ್ಲಿ ಹಂಚಿಹೋಗಿದೆ. ಈ ರೀತಿಯ ಉದ್ಯೋಗಗಳ ಒಂದು ಮುಖ್ಯ ಲಕ್ಷಣವೆಂದರೆ transfer of responsibility. ಲಾಭದಲ್ಲಿ ಎಲ್ಲರೂ ಪಾಲು ತೆಗೆದುಕೊಳ್ಳುತ್ತಿದ್ದಾರೆ, ಆದರೆ ನೈತಿಕ ಜವಾಬ್ದಾರಿಯಲ್ಲಿ ಯಾರೂ ಪಾಲು ತೆಗೆದುಕೊಳ್ಳುತ್ತಿಲ್ಲ. 
ಟಿವಿಯಂತಹ ಯಾವುದೇ ಉತ್ಪನ್ನವನ್ನು ಮಾರುವವರು ಲೋಪದೋಷಗಳಿದ್ದರೆ ಕಂಪನಿಯ ಸಪೋರ್ಟ್ ತಂಡಕ್ಕೆ ವರ್ಗಾಯಿಸುತ್ತಾರೆ; ಸಮಸ್ಯೆಯ ಹೊಣೆಯನ್ನು ಅವರೂ ಹೊರದೆ ಕ್ವಾಲಿಟ್ ಕಂಟ್ರೋಲ್ ನೆಡೆಗೆ ಕೈತೋರಿಸುತ್ತಾರೆ; ಅವರು ಮತ್ತೆ ಪ್ರೊಡಕ್ಷನ್ ನವರೆಡೆಗೆ, ಒಳಸುರಿಗಳ ತಯಾರಕರೆಡೆಗೆ ಹೀಗೆ ವರ್ಗಾಯಿಸುತ್ತಾ ನಡೆಯುತ್ತಾರೆ. ಉತ್ಪನ್ನದ ಜವಾಬ್ದಾರಿಯನ್ನೇ ಹೊರದವರು ಅದರ ಪಾರಿಸರಿಕ ಜವಾಬ್ದಾರಿಯನ್ನು ಗಣನೆಗೂ ತೆಗೆದುಕೊಳ್ಳುವುದಿಲ್ಲ. ಅಷ್ಟಲ್ಲದೆ, ಇಂದಿನ ಕಂಪನಿಗಳಿಗೆ ಉತ್ಪನ್ನಗಳು ‘ಹಾಳಾಗುವುದೂ’ ಒಂದು ಬ್ಯುಸಿನೆಸ್ ಸ್ಟ್ರಾಟಜಿಯೇ ಆಗಿದೆ. ವಸ್ತುಗಳು ಹಾಳಾದಷ್ಟು ಹೊಸತನ್ನು ಕೊಳ್ಳುವುದು ಅನಿವಾರ್ಯ. ಆದ್ದರಿಂದ ‘ಜವಾಬ್ದಾರಿ’ ಹೊರುವಂತಹ ಒಂದು ಸಮಸ್ಯೆ ಅಲ್ಲಿ ಇದೆ ಎಂದು ಅದೆಷ್ಟೋ ಸಂದರ್ಭದಲ್ಲಿ ಕಂಪನಿಗಳು  ಯೋಚಿಸಲಾರವು.

ಆದರೆ ಕೃಷಿಯಲ್ಲಿ ನಮ್ಮ ಕೆಲಸಗಳಿಗೆ ನಾವೇ ಜವಾಬ್ದಾರರಾಗಿದ್ದೇವೆ. ನಮ್ಮ ತಾಯಂದಿರು ಮನೆಯವರಿಗೆ ಅಡುಗೆ ಮಾಡಿ ಹೊಟ್ಟೆ ತುಂಬಿಸುವುದಕ್ಕೆ ತಾವೇ ಜವಾಬ್ದಾರರಾಗಿದ್ದಾರೆ. ನಮ್ಮ ಯಾವುದೇ ಸಮಸ್ಯೆಯ ಕಾರಣದಿಂದ ಕೊಯ್ಲು ಮಾಡಲು ಸಾಧ್ಯವಾಗದೆ ಗದ್ದೆಯಲ್ಲಿ ಭತ್ತ ಉದುರಿಹೋದರೆ ಅದರ ನಷ್ಟವನ್ನು ನಾವೇ ಹೊರಬೇಕಷ್ಟೆ. ಬೈಹುಲ್ಲು ಒಣಗುವ ಮೊದಲೇ ಮಳೆ ಬಂದರೆ, ಕೊಳೆರೋಗದಲ್ಲಿ ನಷ್ಟವಾದರೆ ಅದರ ಹೊರೆಯನ್ನು ನಾವು ಇತರರಿಗೆ ಹೊರಿಸುವಂತಿಲ್ಲ. ಕೃಷಿಕನಿಗೆ ಆರ್ಥಿಕವಾಗಿ ನಷ್ಟದಾಯಕವಾದ ಈ ಹೊಣೆಗಾರಿಕೆಯು ನಿಜಕ್ಕೆಂದರೆ ಸಹಜವಾದ, ಸಮಾಜದಲ್ಲಿ ಪ್ರತಿಯೊಬ್ಬರೂ, ಪ್ರತಿಯೊಂದು ಸಂಸ್ಥೆಯೂ ಪಾಲಿಸಬೇಕಾದ ಉತ್ತರದಾಯಿತ್ವವಾಗಿದೆ.

ಮರಳಿ ಕೃಷಿಯೆಡೆಗೆ
ಹಳ್ಳಿಯ ಕೃಷಿಮನೆಯಲ್ಲಿ ಹುಟ್ಟಿ ಬೆಳೆಯುವ ಸುಯೋಗವನ್ನು ನಾನು ಹೊಂದಿದ್ದೆ. ನನ್ನ ಹಳ್ಳಿಮನೆ ಮತ್ತು ಉದ್ಯೋಗದ ಪರಿಸರದ ಮಧ್ಯೆ ಈ ರೀತಿ ಕಣ್ಣಿಗೆ ರಾಚುವಂತಹ ವ್ಯತ್ಯಾಸಗಳಿದ್ದವು. ನಿಜಮೌಲ್ಯವು ನನ್ನ ಕೃಷಿಭೂಮಿಯಲ್ಲಿದೆ ಎನ್ನುವುದು ನನಗೆ ಸ್ಪಷ್ಟವಾಗಿತ್ತು.
ಉದ್ಯೋಗದ ಜಗತ್ತನ್ನು ಪ್ರವೇಶಿಸಿದ ಮೇಲೆ ನನಗೆ ಜಗತ್ತಿನ ಹಣಕಾಸಿನ ಯಂತ್ರ ಕೆಲಸಮಾಡುವ ವಿಧಾನ ತಿಳಿಯಿತು. ಕೊಳ್ಳುಬಾಕತೆಯು ಇಂಧನವಾಗಿರುವ ಈ ಯಂತ್ರದ ನಟ್ಟು,ಬೋಲ್ಟು, ಗೇರುಗಳು ಯಾವುದೆಂಬುದು ನನಗೆ ತಕ್ಕಮಟ್ಟಿಗೆ ಗೊತ್ತಾಯಿತು. ನನಗಿದ್ದ ಹಳ್ಳಿಜೀವನದ ಪ್ರಾಥಮಿಕ ಜ್ಞಾನದ ಸಹಾಯದಿಂದ ನಮ್ಮ ಆರ್ಥಿಕತೆ, ಅಭಿವೃದ್ಧಿ ಮತ್ತು  ಸಮಾಜವು ಆದರಣೀಯವೆಂದು ಭಾವಿಸಿದ್ದ ನನ್ನ ವೃತ್ತಿಯನ್ನು ವಿಮರ್ಶಿಸಲು ಸಾಧ್ಯವಾಯಿತು. ಆ ಬಳಿಕ ನಾನು ಪಡೆದುದು ಒಂದು ಹೊಸ ರೀತಿಯ ಕಲಿಕೆ, ಹೊಸ ದೃಷ್ಟಿಕೋನ. ಈ ಹೊಸ ದಿಕ್ಕಿನಿಂದ ನೋಡಲು ಒಮ್ಮೆ ಕಲಿತರೆ ಮತ್ತೆ ಅದನ್ನು ಮರೆಯುವುದು ಕಷ್ಟ. ನಮ್ಮ ಈ ಮಾಹಿತಿಪೂರ್ಣ ಅಜ್ಞಾನದ ಅನಾಹುತಗಳನ್ನು ನೀವೊಮ್ಮೆ ಗುರುತಿಸಬಲ್ಲಿರಾದರೆ ಅದು ನಿಮ್ಮನ್ನು ಕಾಡದೆ ಇರಲಾರದು. 

ನನ್ನ ಸ್ನೇಹಿತೆಯೊಬ್ಬಳು ಶಿಪ್ಪಿಂಗ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಳು. ಮುಂದುವರೆದ ದೇಶಗಳು ತಮ್ಮ ತ್ಯಾಜ್ಯವಸ್ತುಗಳನ್ನು ಕಂಟೈನರ್ ಗಳಲ್ಲಿ ಒತ್ತಿ ನಮ್ಮ ದೇಶಕ್ಕೆ ಕಳುಹಿಸುತ್ತಿರುವುದನ್ನು ನೋಡಿ ರೋಸಿಹೋಗಿದ್ದರ ಬಗ್ಗೆ ನನಗೆ ಅವಳು ವಿವರಿಸಿದಳು. 
ಇದಕ್ಕೆ ವ್ಯತಿರಿಕ್ತವಾದ ಒಂದು ಜೀವನಪದ್ಧತಿ ನಮ್ಮಲ್ಲಿ ಜೀವಂತವಾಗಿದ್ದುದನ್ನು ನಿಮ್ಮಲ್ಲಿ ಹಳಬರೆಲ್ಲ ನೋಡಿಯೇ ಇದ್ದೀರಿ. ಮಾದರಿ ಬಳ್ಳಿಯಿಂದ ಬುಟ್ಟಿಹೆಣೆಯುವ ಕಸುಬಿನವರು ಬುಟ್ಟಿ ಹೆಣೆದುಕೊಡಬೇಕೆ ಎಂದು ಕೇಳಿಕೊಂಡು ನಮ್ಮ ಮನೆಗಳಿಗೆ ಬರುತ್ತಿದ್ದರು. ನಮ್ಮದೇ ಗುಡ್ಡದಿಂದ ಬಳ್ಳಿ ಸಂಗ್ರಹಿಸಿ ಬುಟ್ಟಿಹೆಣೆದು ಕೊಟ್ಟು ಅದು ನಮ್ಮ ಮನೆಯಲ್ಲೇ ಸವೆದು ಮಣ್ಣಾಗಿ ಹೋಗುತ್ತಿತ್ತು. ಉಂಡ ಮೇಲೆ ನೆಲದಲ್ಲಿ ಪಚನವಾಗುವ ಬಾಳೆಲೆ, ಹಸಿತ್ಯಾಜ್ಯಗಳನ್ನು ತಕ್ಷಣ ಪಚನಗೊಳಿಸುವ ಅಕ್ಕಚ್ಚಿನ/ಕಲಗಚ್ಚಿನ ಬಾಲ್ದಿ, ಜೈವಿಕವಾದ ಪ್ರತಿಯೊಂದು ತ್ಯಾಜ್ಯವನ್ನು ಗೊಬ್ಬರವಾಗಿಸುವ ತರಕಾರಿ ಮತ್ತು ಗದ್ದೆತೋಟಗಳು - ಹೀಗೆ ಒಂದೊಂದನ್ನೂ ನಾವು ನಾಶಗೊಳಿಸಿ ಎಲ್ಲವನ್ನೂ ಕೃತಕವಾಗಿ ಜೀರ್ಣಿಸುವ ಯಂತ್ರಗಳನ್ನು ತಯಾರಿಸುವತ್ತ, ಕೊಂಡುತರುವತ್ತ ಹೊರಟದ್ದೇವೆ! ನನ್ನ ಕಣ್ಣೆದುರಿಗೆ ಇರುವ, ಇನ್ನೂ ತನ್ನ ನೈತಿಕ ಮೌಲ್ಯವನ್ನು ಬಹುಮಟ್ಟಿಗೆ ಉಳಿಸಿಕೊಂಡಿರುವ ನನ್ನ ಕೃಷಿಭೂಮಿಯನ್ನು ಕಂಡರೂ ನಾನೇಕೆ ಒಪ್ಪಿಕೊಳ್ಳಬಾರದು? ಎಂದು ನನ್ನನ್ನು ನಾನು ಬಹುಕಾಲ ಪ್ರಶ್ನಿಸಿಕೊಂಡೆ.

ನನ್ನ ಪ್ರತೀ ದಿನ, ಕ್ಷಣಗಳನ್ನು ಅದು ಬಾಧಿಸತೊಡಗಿತು. ಈ ವಿಷಯಗಳನ್ನು ಅರ್ಥಮಾಡಿಕೊಂಡು ವಿಮರ್ಶಾತ್ಮಕ ಲೇಖನಗಳನ್ನು ಬರೆದು ಚಿಂತಕ ಅನ್ನಿಸಿಕೊಳ್ಳುವುದು ಬಹಳ ಸುಲಭ.  ಮೊದಮೊದಲಿಗೆ ನಾನೂ ಕೆಲವು ಲೇಖನಗಳನ್ನು ಬರೆದು ಮೆಚ್ಚುಗೆ ಪಡೆದೆ. ಒಂದೆರಡು ವರ್ಷಗಳಲ್ಲಿ ನನಗೆ ಇದು ಸಾಲದು ಅನ್ನಿಸಿತು. ಪುಸ್ತಕ ಬರೆಯುವುದೇ ಒಂದು ಸಾಧನೆ ಎಂದು ನನಗೆ ಅನಿಸುವುದಿಲ್ಲ. ಬರೆದ ಪುಸ್ತಕದಲ್ಲಿ ಪ್ರತಿಪಾದಿಸಿದ ಮೌಲ್ಯಗಳಂತೆ ಜೀವಿಸಲು ಪ್ರಯತ್ನಿಸುವುದರಲ್ಲಷ್ಟೇ ಪುಸ್ತಕದ ಲೇಖಕನ ಸಾರ್ಥಕತೆ ಇದೆ. ಉದ್ಯೋಗದಲ್ಲಿ ನಾನು ಪಾಲಿಸಬೇಕಾದ ಮೌಲ್ಯಗಳು ಮತ್ತು ನಾನು ನಂಬಿದ ಕೃಷಿಜೀವನದ ಮೌಲ್ಯಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದವು. ಈ ಸಂಕೀರ್ಣತೆಗಳನ್ನು ನಾನು ಪುಸ್ತಕದಲ್ಲಿ ವಿವರವಾಗಿ ಬರೆದಿದ್ದೇನೆ. ಈ ಎರಡು ದೋಣಿಯ ಪಯಣ ಬಹುಕಾಲ ನಡೆಸುವುದು ನನ್ನಿಂದ ಸಾಧ್ಯವಿರಲಿಲ್ಲ. ಕೊನೆಗೊಂದು ದಿನ ನನ್ನ ಪತ್ನಿ ಮತ್ತು ನಾನು ಪೂರ್ಣ ಪ್ರಮಾಣದ ಕೃಷಿಗೆ ಮರಳಿದೆವು. ಆ ಮೇಲೆ ಈ ಪುಸ್ತಕ ಬರೆದು ಪ್ರಕಟವಾಯಿತು.

ಹಗಲಿನಲ್ಲಿ ನಮ್ಮನ್ನು ಬಿಸಿಲಿಗೆ ಒಡ್ಡುವ, ಬೆವರಿ ದುಡಿದುಣ್ಣುವ ಉದ್ಯೋಗಗಳನ್ನು ಮಾಡುವುದು, ಋತುಮಾನದ ಬದಲಾವಣೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು - ಮಳೆ, ಛಳಿ, ಸೆಖೆಗಳನ್ನು ಒಂದಷ್ಟು ಮಟ್ಟಿಗೆ ಅನುಭವಿಸುವುದು ನಮ್ಮ ಒಳ್ಳೆಯ ದೇಹಾರೋಗ್ಯ ಸಾಧನೆಗೆ ಸುಲಭ ಪರಿಕರಗಳಾಗಿವೆ. ಪತಿಪತ್ನಿಯರು, ಮಕ್ಕಳು, ಹಿರಿಯರು ಒಟ್ಟಾಗಿ ಒಂದು ಕುಟುಂಬವನ್ನು ಮತ್ತು ಕೃಷಿಯ ಗೃಹಕೃತ್ಯವನ್ನು ನಡೆಸುವುದಕ್ಕಿಂತ ಮೇಲ್ಮಟ್ಟದ ಉದ್ಯೋಗವೊಂದು ಇಲ್ಲ - ಎಂದು ನನ್ನ ಮಾನಸಗುರುಗಳಾದ ವೆಂಡೆಲ್ ಬೆರಿ ನುಡಿಯುತ್ತಾರೆ. ಆಹಾರವು ಎಂದೆಂದಿಗೂ ಪರಿಸರದಿಂದ ಮತ್ತು ನೀರು, ಬಿಸಿಲು, ಗಾಳಿ, ಋತುಮಾನಗಳ ಚಕ್ರದಿಂದ ಬರುತ್ತದೆ. “ಆಹಾರವು ದುಡ್ಡಿನಿಂದ ಬರುತ್ತದೆ” ಎಂಬುದು ಇಂದು ಪ್ರತಿಷ್ಠಾಪನೆಗೊಂಡಿರುವ ಅತೀ ದೊಡ್ಡ ತಪ್ಪುಕಲ್ಪನೆಯಾಗಿದೆ. ಹಳೆಯ ಕಾಲದ ನೆಲಮೂಲದ ಆಚರಣೆಗಳನ್ನು ತೊಡೆದು ಹೊಚ್ಚಹೊಸದಾದ ಈ ಆಧುನಿಕ ಮೌಢ್ಯಗಳನ್ನು ಗೌರವಾದರಗಳಿಂದ ಬರಮಾಡಿಕೊಳ್ಳುತ್ತಿರುವುದು ಈ ಕಾಲದ ಸಾಧನೆಯಾಗಿದೆ. ನಾನು ನನ್ನ ಮಿತಿಯಲ್ಲಿ ಇದರಿಂದ ಹೊರನಡೆಯಲು ಬಯಸಿದ್ದೇನೆ. ಈ ಭಾಷಣದ ಕಾಲಮಿತಿಯಲ್ಲಿ ನನಗೆ ಸ್ಪಷ್ಟಪಡಿಸಲು ಸಾಧ್ಯವಾಗದ ಅದೆಷ್ಟೋ ವಿಚಾರಗಳನ್ನು ಕೇಳುಗರಲ್ಲಿ ಆಸಕ್ತರು ಪುಸ್ತಕದಿಂದ ಓದಿಕೊಳ್ಳಬಹುದು. ಓದಿದ ಮೇಲೂ ಸ್ಪಷ್ಟವಾಗದ ಸಂಗತಿಗಳು ಇರಬಹುದು, ಅಂಥವಕ್ಕೆ ಕಾಲವು ಉತ್ತರಿಸಬಹುದು; ಏಕೆಂದರೆ ನನ್ನೆಲ್ಲ ಪ್ರಶ್ನೆಗಳಿಗೆ ನಾನೇ ಇನ್ನೂ ಉತ್ತರ ಕಂಡುಕೊಂಡಿಲ್ಲ. 

ನಿಮ್ಮ ಕೇಳ್ಮೆಗಾಗಿ ವಂದನೆಗಳು.

ಇಲ್ಲಿ ವಿಚಾರ ಮಂಡಿಸಲು ಅವಕಾಶ ಮಾಡಿಕೊಟ್ಟ ಡಾ|ಮೋಹನ ಆಳ್ವ ಅವರಿಗೆ ಅವರಿಗೆ, ನನ್ನೊಂದಿಗೆ ಸಂಪರ್ಕದಲ್ಲಿದ್ದು ಸುವ್ಯವಸ್ಥೆಯನ್ನು ಖಾತರಿಪಡಿಸಿಕೊಂಡ ಶ್ರೀ ಗಣಪತಿ ನಾಯಕ್, ಶ್ರೀ ರಾಘವೇಂದ್ರ ರಾವ್ ಅವರಿಗೆ ನನ್ನ ವಂದನೆಗಳು.
ಸಹೃದಯಿ ಅತಿಥೇಯ, ಅದಮ್ಯ ಕೃಷಿ ಆಸಕ್ತ ಶ್ರೀ ಡಾ| ರಾಘವೇಂದ್ರ ರಾವ್
ಆಯೋಜನೆಯನ್ನು ಹೃದಯದಿಂದ ನಡೆಸಿಕೊಟ್ಟ ಶ್ರೀ ಗಣಪತಿ ನಾಯಕ್

Comments

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!