ಚಳುವಳಿಗಳ ಮೇಲೆ ನಂಬಿಕೆ ಕಳೆದುಕೊಂಡು(In distrust of movements)

ಚಳುವಳಿಗಳ ಮೇಲೆ ನಂಬಿಕೆ ಕಳೆದುಕೊಂಡು(In distrust of movements)
- ವೆಂಡೆಲ್ ಬೆರ್ರಿನಾನು ಮತ್ತು ಗೆಳೆಯ ವೆಸ್ ಜಾಕ್ಸನ್ ಅದೆಷ್ಟೋ ಸರ್ತಿ ಈ ‘ಚಳುವಳಿ’ಗಳನ್ನು ಮಾಡದಿರುವುದೇ ಲೇಸು ಎಂದು ಮಾತಾಡಿಕೊಂಡದ್ದಿದೆ. ನಮಗೆ ಹಿತವೆನಿಸುವ, ಅಗತ್ಯವೆನಿಸುವ ವಿಚಾರಗಳಲ್ಲಿ ಕೂಡ - ಈ ಚಳುವಳಿಗಳು ’ತಾನೇ ಸರಿ’ ಎಂದುಕೊಂಡು ತನ್ನನ್ನು ತಾನು ಮೋಸ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುವುದನ್ನು ನೋಡಿ ನನಗೆ ಹೀಗೆನಿಸಿದೆ. ಚಳುವಳಿಗಳಲ್ಲಿರುವವರು ತಾವು ಪಡೆದ ಸ್ವಾತಂತ್ರ್ಯ, ಹಕ್ಕುಗಳನ್ನು ಇತರರಿಗೆ ಕೊಡಲು ನಿರಾಕರಿಸುವುದನ್ನು ಆಗಾಗ ಕಾಣುತ್ತೇವೆ. ತಮ್ಮ ಮೂಲ ಉದ್ದೇಶಕ್ಕೆ ವಿರುದ್ಧ ನಡೆಯುವ ಚಳುವಳಿಗಳು ಧಾರಾಳ ಇವೆ, ಇದು ಹೇಗೆಂದರೆ ’ಶಾಂತಿ ಚಳುವಳಿ’ಯೊಂದು ಜಗಳಕ್ಕೆ ಹೊರಟಂತೆ. ಅಥವಾ ಸಮಸ್ಯೆಯ ಯಾವುದೋ ಒಂದು ಸಣ್ಣ ಭಾಗವನ್ನಷ್ಟೇ ಗುರುತಿಸಿ ಕೊನೆಗೆ ಅದನ್ನು ಸಮರ್ಥಿಸಿಕೊಳ್ಳಲು ಅಷ್ಟೇ ಸಣ್ಣ ಸೂಜಿಮೊನೆಯಂಥ ದೃಷ್ಟಿಕೋನವನ್ನು ಹೊಂದಿರುವ ಅಕಾಡೆಮಿಕ್ ಬುದ್ಧಿಜೀವಿಗಳನ್ನು ಕರೆತರುವುದೂ ಆಗಾಗ ನಡೆಯುತ್ತದೆ. ಅವೆಲ್ಲ ಕೊನೆಗೆ ತಮ್ಮ ಉದ್ದೇಶವನ್ನು ಸಾಧಿಸದೆ, ಕೆಲವು ಅಡ್ಡಪರಿಣಾಮಗಳನ್ನಷ್ಟೇ ಸಾಧಿಸಿಕೊಳ್ಳುತ್ತಾವೆ ಅಥವಾ ಆ ಅಡ್ಡಪರಿಣಾಮಗಳನ್ನೇ ತಮ್ಮ ಉದ್ದೇಶಗಳನ್ನಾಗಿ ಮಾಡಿಕೊಳ್ಳುತ್ತವೆ.

ಇನ್ನಷ್ಟು ಸ್ಪಷ್ಟವಾಗಿ ನಾನು ’ಮಣ್ಣಿನ ರಕ್ಷಣೆ, ಶುದ್ಧ ನೀರಿನ ಪೂರೈಕೆ, ಶುದ್ಧ ಗಾಳಿ, ಕಾಡಿನ ರಕ್ಷಣೆ, ಸಾವಯವ ಕೃಷಿ, ಸಮುದಾಯ ಆರೋಗ್ಯ, ಮಕ್ಕಳ ಕಲ್ಯಾಣ’ ಇಂತಹ ಚಳುವಳಿಗಳ ಬಗ್ಗೆ ಕೂಡ ನನ್ನ ಅಸಮಧಾನವನ್ನು ಹೇಳಬೇಕಾಗಿದೆ. ಈ ಉದ್ದೇಶಗಳು ತೀರ ಅವಶ್ಯಕವಾದರೂ ಅವನ್ನು ಮಾತ್ರ ಒಂಟಿಯಾಗಿ ಈಡೇರಿಸುವುದು ಸಾಧ್ಯವಿಲ್ಲ. ಅವೆಲ್ಲ ತುಂಬಾ ಸಣ್ಣ ಉದ್ದೇಶಗಳನ್ನು ಹೊಂದಿವೆ, ಒಟ್ಟಂದದಲ್ಲಿ ಸಮಸ್ಯೆಯನ್ನು ನೋಡುತ್ತಿಲ್ಲ, ಮೂಲಕಾರಣವನ್ನು ಪರಿಹರಿಸದೆ ಅವುಗಳ ’ಪರಿಣಾಮವನ್ನು’ ಮಾತ್ರ ಪರಿಹರಿಸುವುದು ಸಾಧ್ಯ ಎಂದು ತಿಳಿದು ಅವು ತಮ್ಮದೇ ಸೋಲನ್ನು ಬರೆದುಕೊಳ್ಳುತ್ತವೆ. ಈ ಕಾರಣಕ್ಕೆ ಅವು ಅಪ್ರಾಮಾಣಿಕವಾಗಿವೆ. ಸಮಸ್ಯೆಯು ಇನ್ನೊಬ್ಬರಿಂದ ಇದೆ; ಕಾನೂನಿನಿಂದ ಇದನ್ನು ಪರಿಹರಿಸಲು ಸಾಧ್ಯ; ಇದಕ್ಕೆ ನಮ್ಮ ಚಾರಿತ್ರ್ಯದ/ವರ್ತನೆಯ ಬದಲಾವಣೆ ಅಗತ್ಯವಿಲ್ಲ ಎಂದೆಲ್ಲ ಅವು ಅಂದುಕೊಂಡಿವೆ. ’ಸಾವಯವ ಕೃಷಿ’ ಎಂಬುದೊಂದು ’ವಿಧಾನ’ ಎಂದು ಜನ ತಿಳಿಯುತ್ತಿರುವುದನ್ನು ಮೊದಲಿಗೆ ನೋಡಿ ನನ್ನ ತಲೆಕೆಳಗಾಯಿತು. ಅಂದರೆ ವಿಸ್ತಾರವಾದ ದಿಗಂತಕ್ಕೆ ಚಾಚಿರುವ ’ಸಾವಯವ ಏಕಬೆಳೆಗಳನ್ನು’ ಬೆಳೆಯಲು ಸಾಧ್ಯ ಎಂದು ಜನ ನಂಬಿದ್ದಾರೆ. ಈ ಕಲ್ಪನೆಯಿಂದಲೇ ಇಂದು Food irradiation(ರೇಡಿಯೇಶನ್ ಮೂಲಕ ಆಹಾರವನ್ನು ಮುಟ್ಟದೆ ಅವನ್ನು ಕೀಟಗಳಿಂದ ಮುಕ್ತಗೊಳಿಸುವ, ಬೇಗ ಹಣ್ಣಾಗದಂತೆ, ಮೊಳಕೆ ಬರದಂತೆ ಮಾಡುವ ವಿಧಾನ), ಜೈವಿಕ ತಂತ್ರಜ್ಞಾನ ಇತ್ಯಾದಿ ಕಾರ್ಪೊರೇಟ್ ಆಹಾರ ಕ್ರಾಂತಿಗಳನ್ನು ಇಂದು ಸರಕಾರ ’ಸಾವಯವ’ ಎಂದು ಘೋಷಿಸುವ ಅಂದಾಜು ಮಾಡಿದಾಗ ನನಗೆ ಆಶ್ಚರ್ಯ ಏನೂ ಆಗಲಿಲ್ಲ.  ಒಮ್ಮೆ ನಮ್ಮ ಶಬ್ದಗಳನ್ನು ’ಯಾವುದೇ ಅರ್ಥದಲ್ಲಿ’, ’ಯಾರಾದರೂ ಬಳಸುವಂತೆ’ ಬೇಕಾಬಿಟ್ಟಿ ಹರಿಯಬಿಟ್ಟಾಗ, ಅವುಗಳ ನಿಜ ಅರ್ಥದಲ್ಲಿ ಬಳಸುವುದು ಸಾಧ್ಯವೇ ಇಲ್ಲ! ’ಹೇಗಾದರೂ ಅರ್ಥಮಾಡಿಕೊಳ್ಳಬಹುದು’ ಎಂದಾದರೆ ಅದು ಅರ್ಥಹೀನವಾಗಿದೆ ಎಂದಂತೆ. ಈ ಕಾರಣಕ್ಕೆ ನಾನು ಯಾವ ಚಳುವಳಿಯೊಂದಿಗೆ ಗುರುತಿಸಿಕೊಳ್ಳುತ್ತೇನೋ ಅದಕ್ಕೆ ಹೆಸರುಕೊಡಲು ಹೆದರುತ್ತೇನೆ. ಅದರ ಘೋಷಣೆಗಳನ್ನು ಮತ್ತು ಹೆಸರುಗಳನ್ನು ಹೇಳದಿರಲು ಬಯಸುತ್ತೇನೆ.

ಉದಾಹರಣೆಗೆ ’ಮಣ್ಣಿನ ಆರೈಕೆ’ ಮಾಡುವುದು ಹೇಗೆ ಎನ್ನುವ ಬಗ್ಗೆ ಯಾವುದೇ ಹೆಸರಿಲ್ಲದ ಚಳುವಳಿ ಇದೆಯೆಂದುಕೊಳ್ಳೋಣ. ಇದನ್ನು ಚೆನ್ನಾಗಿ, ಸುದೀರ್ಘವಾಗಿ, ಕ್ರಿಯಾಶೀಲವಾಗಿ ನಡೆಸಬೇಕೆಂಬ ಉದ್ದೇಶ ನಮಗಿದೆ. ಹಾಗಾದರೆ ನಾವೇನು ಮಾಡಬೇಕು? ಎಲ್ಲಕ್ಕಿಂತ ಮೊದಲಾಗಿ ಸಮಸ್ಯೆಯನ್ನು ಇಡಿಯಾಗಿ ಅದರ ಸಂಕೀರ್ಣತೆಯೊಂದಿಗೆ ಗ್ರಹಿಸಬೇಕು. ಇದಷ್ಟು ಸುಲಭದ್ದಲ್ಲ. ನಮ್ಮ ಭೂಮಿಯನ್ನು ತಪ್ಪಾಗಿ ಉಪಯೋಗಿಸುತ್ತಿದ್ದೇವೆಂದರೆ ನಮ್ಮ ಎಕಾನಮಿ ತಪ್ಪಾಗಿದೆ ಎಂದರ್ಥ. ಎಕಾನಮಿಯೆಂದರೆ ನಿಜವಾಗಿ ಭೂ ಆಧಾರಿತ ಎಕಾನಮಿ. ಆದರೆ ಇಂದು ಪ್ರತಿಯೊಬ್ಬರ ಎಕಾನಮಿಯೂ ಇನ್ಯಾವುದೋ ಎಕಾನಮಿಯೊಂದಿಗೆ ಹೆಣೆದುಕೊಂಡಿರುವ ಈ ದಿನಗಳಲ್ಲಿ ಇದೊಂದು ಬಹಳ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ನಾವು ಭೂಮಿಯ ದುರುಪಯೋಗದ ಬಗ್ಗೆ ಯೋಚಿಸಲು ಸುರುಮಾಡಿದರೆ ನಮ್ಮ ’ಎಕಾನಮಿಯನ್ನು ವಿಮರ್ಶಿಸಲು’ ಸುರುಮಾಡಿದಂತೆ. ಸ್ಥಳೀಯ ಭೂ ಇತಿಹಾಸವನ್ನು ಸ್ವಲ್ಪ ಗಮನಿಸಿದರೆ ನಾವು ಈಗಾಗಲೇ ನಮ್ಮ ಅಸ್ಥಿಭಾರವನ್ನು ಅಲುಗಾಡಿಸುವ ಎಕಾನಮಿಯ ತೆಕ್ಕೆಗೆ ಸಿಕ್ಕಿಕೊಂಡದ್ದು ತಿಳಿಯುತ್ತದೆ. ’ಕೈಗಾರಿಕೀಕರಣ’ - ನಮ್ಮ ಈಗಿನ ಎಕಾನಮಿ, ಮತ್ತು ಹೆಚ್ಚುಕಮ್ಮಿ ಪ್ರಪಂಚದಲ್ಲಿ ಈಗಿರುವ ಒಂದೇ ಒಂದು ಎಕಾನಮಿ, ತನ್ನ ಆರಂಭದಿಂದಲೂ ಪ್ರತಿಭಟನಾತ್ಮಕವಾದದ್ದು. ಬಂಡವಾಳಶಾಹಿಯಾಗಿರಲಿ, ಸಮಾಜಶಾಹಿಯಾಗಿರಲಿ ’ಕೈಗಾರಿಕೀಕರಣವೆಂಬ ಆರ್ಥಿಕತೆ’ ಪ್ರಕೃತಿ, ಮಾನವ ಜನಾಂಗ, ಸಾಂಪ್ರದಾಯಿಕ ಕೃಷಿ, ಸ್ಥಳೀಯ ಆರ್ಥಿಕತೆ ಹೀಗೆ ತಾನು ಅವಲಂಬಿಸಿರುವ ಪ್ರತಿಯೊಂದರ ಮೇಲೂ ಹಿಂಸೆ ಮಾಡುತ್ತಲೇ ಇದೆ. ಅಂತಹ ಆರ್ಥಿಕತೆಯನ್ನು ಸಂಪೂರ್ಣ ಬದಲಾಯಿಸದೆ ಅಲ್ಪಸ್ವಲ್ಪ ಬದಲಾಯಿಸುವುದು ಸಾಧ್ಯವಿದೆಯೆ? ನನಗನಿಸುತ್ತಿಲ್ಲ. ಕೈಗಾರಿಕೀಕರಣದ ಪ್ರವಾದಿಗಳು ನಮ್ಮೆಲ್ಲರನ್ನು ವಾಸ್ತವಕ್ಕೆ ಇಳಿಯಲು ಹೇಳುತ್ತಲೇ ಇದ್ದಾರೆ. ಆದ್ದರಿಂದ ವಾಸ್ತವಕ್ಕೆ ಇಳಿಯೋಣ. ಬರೀ ನೀರು ಮತ್ತು ಗಾಳಿಯನ್ನು ಸ್ವಚ್ಚಗೊಳಿಸುವುದರಿಂದ, ಅಥವಾ ಮಣ್ಣಿನ ಸವಕಳಿ ತಡೆಯುವುದರಿಂದ, ರಾಜಕಾರಣಿಗಳನ್ನು ನಿರಾಕರಿಸುವುದರಿಂದ, ಕಾಡಿನ ರಕ್ಷಣೆಯಿಂದ ಅಥವಾ ಮಹಿಳೆಯರಿಗೆ ಮತ್ತು ಅಲ್ಪ ಸಂಖ್ಯಾತರಿಗೆ ನಾವು ಕದ್ದದ್ದರಲ್ಲಿ ಒಂದು ಪಾಲು ಕೊಡುವುದರಿಂದ  ಈಗಿನ ಆರ್ಥಿಕತೆಯನ್ನು ಸರಿಪಡಿಸಬಹುದೇ? ವಾಸ್ತವವಾದ ಒಂದು ಸೀಮಿತ ಕಾರ್ಯಕ್ರಮ ಆದರೆ ಅದು ಗೋಡೆಗಡಿಯಾರದಲ್ಲಿರುವ ಹಕ್ಕಿ ಮೊಟ್ಟೆಯಿಡಲಾರದು ಎಂದು ನಮಗೆ ತಿಳಿಸಿಕೊಡಬಹುದು, ಅಷ್ಟೆ.

ಈ ರೀತಿ ಏಕೋದ್ದೇಶದ ಸಂಘಟನೆಯ ಬದಲಿಗೆ ನಾವು ಈ ರೀತಿ ಯೋಚಿಸಬಹುದು. ನಮಗೆ ಶುದ್ಧ ನೀರು ಯಾವಾಗಲೂ ಬೇಕು; ಆದ್ದರಿಂದ ನಮಗೆ ಮಣ್ಣು ಮತ್ತು ನೀರಿನ ರಕ್ಷಣೆ ಮಾಡುವ ಏಕಬೆಳೆ, ರಾಸಾಯನಿಕಗಳ ಮೇಲೆ ಅವಲಂಬಿಸದ ಭೂಮಿಯನ್ನು ಹಿಂಸೆಮಾಡುವ ಕಾರ್ಪೊರೇಟುಗಳಿಲ್ಲದ ವ್ಯವಸ್ಥೆ ಬೇಕು. ಆದ್ದರಿಂದ ನಮಗೆ ವೈವಿಧ್ಯಮಯವಾದ, ಸಣ್ಣಮಟ್ಟದ ಭೂಮಿ ಮತ್ತು ಜನರನ್ನು ಆಧರಿಸಿದ ಆರ್ಥಿಕತೆ ಬೇಕು. ಆದ್ದರಿಂದ ನಮಗೆ ಈ ಜ್ಞಾನವನ್ನು, ಕೌಶಲ್ಯವನ್ನು, ಸದುದ್ದೇಶವನ್ನು ಹೊಂದಿರುವ ಜನರು ಬೇಕು. ಇದನ್ನೆಲ್ಲ ಮಾಡುವವರು ಬೇಕೆಂಬುದು ನಮಗೆ ಮನವರಿಕೆಯಾಗುವಾಗ ನಾವು ಸಮಸ್ಯೆಗೆ ಬಂದು ತಲುಪಿದ್ದೇವೆ.

ಜನರು ಎಲ್ಲಿದ್ದಾರೆ? ನರಳುತ್ತಿರುವ ಅಮೆರಿಕದ ಹಳ್ಳಿಗಳನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ ಹಳ್ಳಿಗಳನ್ನು ’ಮನರಂಜನೆಯ ತಾಣ’ಗಳೆಂದು ತಿಳಿದಿರುವ ಕೆಲವು ಜನರು ಮಾತ್ರ ಇಲ್ಲಿದ್ದಾರೆ. ಅವರನ್ನು ನಾವಿಲ್ಲಿ ಸೈಕ್ಲಿಂಗ್ ಅಥವಾ ಬೋಟಿಂಗ್ ಮಾಡುತ್ತ, ಬೆಟ್ಟ ಹತ್ತುತ್ತ, ಮೀನು ಹಿಡಿಯುತ್ತ ಅಥವಾ ಸುಮ್ಮನೆ ಡ್ರೈವ್ ಮಾಡುತ್ತ ದೃಶ್ಯಗಳನ್ನು ಅನುಭವಿಸುತ್ತ ಕಾಣಬಹುದು. ಮೇರಿ ಆಸ್ಟಿನ್ ನ ಮಾತುಗಳಲ್ಲಿ ಹೇಳುವುದಾದರೆ, ಅವರು ತಮ್ಮ ಛಳಿ, ಮಳೆ, ಬಿಸಿಲುಗಳನ್ನು ಇದೇ ನೆಲದಲ್ಲಿ ಕಾಣುವವರಲ್ಲ (They do not summer and winter with the land). ಈ ಭೂಮಿಯ ಮಾನವೀಯ ಮತ್ತು ನೈಸರ್ಗಿಕ ಆರ್ಥಿಕತೆ ಅವರಿಗೆ ತಿಳಿದಿಲ್ಲ. ತಿನ್ನಬೇಕು, ಕುಡಿಯಬೇಕು, ಬಟ್ಟೆತೊಡಬೇಕು, ವಾಸಮಾಡಬೇಕು ಎನ್ನುವುದಕ್ಕಿಂತ ಹೆಚ್ಚಿನದನ್ನು ಅವರು ತಿಳಿಯದಿದ್ದರೂ, ಅವರೆಲ್ಲ ಆ ಮೂಲಭೂತವಸ್ತುಗಳು ತಯಾರಾಗುವ ಮತ್ತು ಅವುಗಳ ರಕ್ಷಣೆಯಾಗುವ ಗೃಹಕೃತ್ಯವೆನ್ನುವ ಕಲೆಯಿಂದ (husbandry and wifery of land) ಬಿಡುಗಡೆ ಹೊಂದಬೇಕೆಂದು ತಿಳಿದಿದ್ದಾರೆ. ಅದನ್ನು ಮಾಡುವ ಕೆಲವೇ ಕೆಲವು ಮಂದಿ ಅದರ ಬಗ್ಗೆ ಕೀಳರಿಮೆಯನ್ನು ಹೊಂದಿದ್ದಾರೆ, ಏಕೆಂದರೆ ಅದೊಂದು ಮಾಡಬಾರದ, ಬಿಡುಗಡೆ ಹೊಂದಬೇಕಾದ ಕೆಲಸವೆಂದು ನಮ್ಮ ಶಿಕ್ಷಣ ವ್ಯವಸ್ಥೆಯು ಅವರನ್ನು ನಂಬಿಸಿದೆ. ಹೊಸಜಗತ್ತಿನ ಶಿಕ್ಷಿತ ಜನ ತಮ್ಮ ಆಹಾರ, ಬಟ್ಟೆ ಮತ್ತು ಮನೆಯ ಬಗ್ಗೆ ಯಾವುದೇ ಜ್ಞಾನ ಹೊಂದಿರುವ ಸಾಧ್ಯತೆ ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ಕೃಷಿಕರಾಗಬೇಕು ಎಂದು ನಾನು ಹೇಳುವುದಲ್ಲ ಆದರೆ ಇಂದು ಹೆಚ್ಚಿನವರು ಒಂದು ತುಂಡಾದ ಸಂಕಲೆಯ ಎರಡು ವಿರುದ್ಧ ದಿಕ್ಕಿನಲ್ಲಿದ್ದಾರೆ ಮತ್ತು ಇದು ಅಪಾಯಕಾರಿ ಎನ್ನುವುದು ನನ್ನ ಪ್ರತಿಪಾದನೆ. ಹೆಚ್ಚಿನವರು ಈಗ ತಮ್ಮ ಊಟ, ಬಟ್ಟೆ, ಆಶ್ರಯದ ಮೂಲಗಳ ಬಗ್ಗೆ ಯಾವುದೇ ಕೃತಜ್ಞತೆಯನ್ನು ಹೊಂದಿಲ್ಲ ಮತ್ತು ಯಾವುದೇ ಜವಾಬ್ದಾರಿಯನ್ನು ತೋರಿಸುತ್ತಿಲ್ಲ. ಭೂಮಿಯ ಆರೈಕೆ, ಒಳ್ಳೆಯ ಕೃಷಿ, ಹಾಳಾದ ಭೂಮಿಯ ಪುನರ್ನಿರ್ಮಾಣ, ಇನ್ನಷ್ಟು ಭೂಮಿ ’ಅಭಿವೃದ್ಧಿ’ಯ ತೆಕ್ಕೆಗೆ ಸಿಕ್ಕಿ ನಲುಗಿ ಹೋಗುವುದರ ವಿರುದ್ಧ ನಡೆ ಇದ್ಯಾವುದರ ಬಗ್ಗೆಯೂ ನಗರದ ಜನತೆ, ರಾಜಕೀಯ ನಾಯಕರು, ಗ್ರಾಹಕರು ಸಂವೇದನೆಯನ್ನು ಹೊಂದಿದಂತೆ ಕಾಣುತ್ತಿಲ್ಲ. ವಾಸ್ತವ ಚಿತ್ರಣವನ್ನು ಕಾಣಲಾಗದ ಭಯಂಕರ ಸ್ಥಿತಿಯಲ್ಲಿ ನಾವಿದ್ದಂತಿದೆ. ಹೆಚ್ಚಿನವರಿಗೆ ಗೋಧಿಯೆಂದರೆ ಬ್ರೆಡ್, ಕೃಷಿಕನೆಂದರೆ ಗೋಧಿ, ಕೃಷಿಭೂಮಿಯೆಂದರೆ ಕೃಷಿಕ, ಹೀಗೆ ಒಂದೊಂದು ಸಣ್ಣ ಆಯಾಮವಷ್ಟೇ ತಿಳಿದಿದೆ. ತಮ್ಮ ಮನೆ, ಪೀಠೋಪಕರಣ ಮತ್ತು ಕಾಗದವನ್ನು ಸೃಷ್ಟಿ ಮಾಡಿದ ಕಾಡು ಮತ್ತು ಕಾಡಿನೊಳಗಿನ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲ. ತಮ್ಮ ಸ್ವಿಮ್ಮಿಂಗ್ ಪೂಲ್ ಮತ್ತು ಬಾತ್ ಟಬ್ಬನ್ನು ತುಂಬಲು ಕಾರಣವಾಗುವ ತೋಡುಗಳು ಅದಕ್ಕೆ ಕಾರಣವಾಗುವ ನೀರಿಂಗುವ ವ್ಯವಸ್ಥೆ ಮತ್ತು ಆ ನೀರಿಗೆ ಕಾರಣವಾಗುವ ಮಳೆ - ಇವ್ಯಾವುದನ್ನೂ ತಿಳಿದಿಲ್ಲ.
ದುಡ್ಡಿನಿಂದ ಆಹಾರ ಬರುವುದಿಲ್ಲ. ಆಹಾರದೊಂದಿಗೆ ತಳುಕುಹಾಕಿರುವ ತಂತ್ರಜ್ಞಾನದಿಂದಲೂ ಬರುವುದಿಲ್ಲ. ಆಹಾರ ಪ್ರಕೃತಿಯಿಂದ ಬರುತ್ತದೆ ಮತ್ತು ಶ್ರಮದಿಂದ ಬರುತ್ತದೆ. ನಮಗೆ ಆಹಾರದ ಸತತ ಸರಬರಾಜು ಇರಬೇಕಾದರೆ ನಾವು ಅದಕ್ಕಾಗಿ ಪ್ರಕೃತಿಯೊಂದಿಗೆ ದುಡಿಯಬೇಕು. ಇದಕ್ಕಾಗಿ ಹತ್ತಾರು ಸಮಸ್ಯೆಗಳಿಗೆ ಸರಿಯಾದ ಉತ್ತರಗಳನ್ನು ಕಂಡುಕೊಳ್ಳಬೇಕು. ಇದೇ ಕಾಡು ಮತ್ತು ನಿರಂತರ ನಾಟಾದ ಪೂರೈಕೆಗೂ ಅನ್ವಯಿಸುತ್ತದೆ. ನಮ್ಮ ಆರ್ಥಿಕತೆಯ ಪ್ರಜ್ಞೆಯನ್ನು ವಿಸ್ತರಿಸಬೇಕಾಗಿದೆ. ಅದಕ್ಕೆ ತಾನೇನು ಮಾಡುತ್ತಿದ್ದೇನೆ ಮತ್ತು ಮಾಡಬೇಕಾಗಿದೆ ಎಂದು ತಿಳಿಯಬೇಕಾಗಿದೆ. ಇದು ಕ್ರಾಂತಿಕಾರಕ ಎಂದೆನಿಸಬಹುದು, ಆದರೆ ಇದು ಸಾಮಾನ್ಯ ಜ್ಞಾನವೂ ಹೌದು.

ಇಷ್ಟೆಲ್ಲ ಇದೆಯೆಂದಾದ ಮೇಲೆ ಕೆಲವರು ಇದಕ್ಕಾಗಿ ಒಂದು ಚಳುವಳಿಯನ್ನು ಮಾಡಲು ಬಯಸುವುದು ಸಹಜ. ’ಆರ್ಥಿಕತೆಗೆ ತಾನೇನು ಮಾಡಬೇಕೆಂದು ಕಲಿಸಲು ಇರುವ ಚಳುವಳಿ’ ಎಂದು ಅವರದಕ್ಕೆ ಹೆಸರಿಡಬಹುದು - ಏನೋ ಒಂದು ಎಂದು ಇಟ್ಟುಕೊಳ್ಳಿ. ಈ ಚಳುವಳಿಯನ್ನು ಶುರುಮಾಡುವ ಬಗ್ಗೆ ನನಗೆ ತುಂಬ ಹಿಂಜರಿಕೆ ಇದೆ, ಆದರೆ ಅದಕ್ಕೆ ಕೆಳಗಿನ ಮೂರು ಶರತ್ತುಗಳೊಂದಿಗೆ ಒಪ್ಪಬಹುದು.

ಯಾವುದೇ ’ಒಂದೇ ಪೆಟ್ಟಿನ’, ’ಸುಲಭದ’ ಪರಿಹಾರಗಳಿಂದ ಇದು ಸಾಧ್ಯವಿಲ್ಲ ಎನ್ನುವುದನ್ನು ಇದು ಅರಿಯಬೇಕು. ವೈಜ್ಞಾನಿಕ ಆವಿಷ್ಕಾರಗಳಿಂದ ಇದು ಸಾಧ್ಯವಿಲ್ಲ ಎಂದು ತಿಳಿಯಬೇಕು. ಇಷ್ಟು ವರ್ಷದ ಸಂಕೀರ್ಣ ಸಂಶೋಧನೆಗಳ ಹೊರತಾಗಿಯೂ ಪ್ರಪಂಚವು ಇನ್ನಷ್ಟು ಸಂಕೀರ್ಣ ಮತ್ತು ವಿಶಾಲವಾಗಿದೆ; ಕಂಡಷ್ಟೇ ಕಾಣದುದು ಇದೆ; ನಿಗೂಢವಾಗಿದೆ; ಇಲ್ಲಿ ಬೇರೊಂದು ಹತ್ತನ್ನು ಮಾಡದೆ ’ಒಂದೇ ಒಂದನ್ನು’ ಮಾಡುವುದು ಅಸಾಧ್ಯ. ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಕೃಷಿ ಮತ್ತು ಕಾಡನ್ನು ಉತ್ತಮಪಡಿಸಬೇಕು, ಇದನ್ನು ಹೆಚ್ಚಿಸಲು ನಮ್ಮ ಗ್ರಾಹಕರ ಮನೋಭಾವವನ್ನು ಬದಲಿಸಬೇಕು, ಹೀಗೆ.. ಮಾನವೀಯ ಆರ್ಥಿಕತೆಯು ನಮ್ಮನ್ನು ಮತ್ತು ಪ್ರಪಂಚವನ್ನು ಒಟ್ಟಂದದಲ್ಲಿ ನೋಡಬೇಕು. ಅಂತೂ ನಮ್ಮ ಈ ಅತೀ ದೊಡ್ಡ ಸಮಸ್ಯೆಯನ್ನು ಸಾವಿರ ಸಣ್ಣ ಸಮಸ್ಯೆಗಳನ್ನಾಗಿ ಒಡೆದು, ಆ ಒಂದೊಂದು ಸಮಸ್ಯೆಗಳಿಗೆ ಒಬ್ಬೊಬ್ಬ ಅಕಾಡೆಮಿಕ್ ತಜ್ಞ ಮತ್ತು ಅಧಿಕಾರಿಯನ್ನು ನೇಮಿಸುವುದರಿಂದ ಇಡಿಯ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುವುದನ್ನು ಮರೆತುಬಿಡಬೇಕು. ಹತ್ತು ಹಲವು ಸಾರಿ ಈ ಮಾದರಿಯನ್ನು ಪ್ರಯತ್ನಿಸಿ ನಾವು ಸೋತಾಗಿದೆ.

ನನ್ನ ಇನ್ನೊಂದು ಶರತ್ತೇನೆಂದರೆ ನಮ್ಮ ಈ ಚಳುವಳಿಯವರು ತಮ್ಮನ್ನು ತಾವು ಈ ವ್ಯವಸ್ಥೆಯ ಭಾಗವೆಂದು ತಿಳಿಯಬೇಕು. ನಾವೀಗ ಆರ್ಥಿಕತೆಗೆ ಅದು ಏನು ಮಾಡಬೇಕೆಂಬುದನ್ನು ಕಲಿಸುವವರಾದರೆ, ಮೊದಲು ನಾವೇನು ಮಾಡಬೇಕೆಂಬುದನ್ನು ಕಲಿಯಬೇಕು. ಈ ಚಳುವಳಿ ಎಷ್ಟರಮಟ್ಟಿಗೆ ಸಾರ್ವಜನಿಕವೋ ಅಷ್ಟೇ ಖಾಸಗಿಯೂ ಹೌದು. ಒಂದು ವೇಳೆ ನಿಷ್ಪ್ರಯೋಜಕ ಕಾರ್ಖಾನೆಗಳು ನಮ್ಮನ್ನೆಲ್ಲ ಹಾಳುಮಾಡುತ್ತಿದ್ದರೆ ಅದನ್ನು ನಾವು ಬೇರೆಬೇರೆ ರೀತಿಯಲ್ಲಿ ಪ್ರತಿಭಟಿಸೋಣ. ಆದರೆ ಅಷ್ಟು ಸಾಲದು. ಕೆಟ್ಟ ಆರ್ಥಿಕತೆಯು ತನ್ನಿಂತಾನಾಗಿ ಒಳ್ಳೆಯದಾಗದು. ನಾವೇ ಅಂತಹ ಆರ್ಥಿಕತೆಯೊಂದನ್ನು ಕಟ್ಟಬೇಕಷ್ಟೆ. ಈ ಕರ್ತವ್ಯ ನಮ್ಮ ಮೇಲೆ ಹೆಚ್ಚಿದೆ. ದುರಾಸೆಯ ಮ್ಯಾನೇಜರುಗಳು ಮತ್ತು ಅಜ್ಞಾನದ ಗಾಡಾಂಧಕಾರದಲ್ಲಿರುವ ಶೇರುದಾರರಿಂದ ತುಂಬಿರುವ ಬೃಹತ್ ಕಂಪನಿಗಳಿಗಿಂತ ನಮಗೇ ಬದಲಾವಣೆಯನ್ನು ತಂದುಕೊಳ್ಳುವುದು ಸುಲಭ. ನಮಗಿದು ಸಾಧ್ಯವಿರುವುದರಿಂದ, ಒಳ್ಳೆಯ ಆರ್ಥಿಕತೆಯ ಸ್ಪಂದನೆಯನ್ನು ನಮ್ಮ ಜೀವನದ ಪ್ರತಿಯೊಂದು ಆಯಾಮಗಳಲ್ಲಿ, ಮನೆಯಲ್ಲಿ, ಸಮುದಾಯಗಳಲ್ಲಿ ನಾವಿದನ್ನು ಮಾಡಬೇಕು. ನಾವು ನಮಗಾಗಿ ಮತ್ತು ನಮ್ಮ ನೆರೆಹೊರೆಯವರಿಗಾಗಿ ಹೆಚ್ಚಿನದನ್ನು ಮಾಡಬೇಕು. ಸ್ಥಳಿಯ ಆರ್ಥಿಕತೆ ಮತ್ತು ಗೃಹಕೃತ್ಯ ಎನ್ನುವ ಕಲೆಯನ್ನು ಮತ್ತೆ ಜೀವಕ್ಕೆ ತರಬೇಕು. ಜಗತ್ತಿನ ಆರ್ಥಿಕ ಸ್ವರೂಪವನ್ನು ಬದಲಿಸುವುದೆಂದರೆ ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಕನಸೇ ಆಗಿಬಿಡುತ್ತದೆ. ಹೊರಮುಖವಾಗಿರುವ ಜಗತ್ತು-ಮತ್ತು-ಆರ್ಥಿಕತೆಯ ಸಂಬಂಧವನ್ನು ಉತ್ತಮಗೊಳಿಸುವುದೆಂದರೆ ನಮ್ಮೊಳಗಿರುವ ನಾವು-ಮತ್ತು-ಪರಿಸರದಲ್ಲಿರುವ ‘ಜೀವದ ಮೂಲಶಕ್ತಿ’ ಇವೆರಡರ ನಡುವಿನ ಸಂಬಂಧವನ್ನು ಉತ್ತಮಗೊಳಿಸುವುದೇ. ಇವೆರಡೂ ಎಷ್ಟು ಹತ್ತಿರದಲ್ಲಿವೆಯೆಂದರೆ ನಾವು ಮತ್ತು ನಮ್ಮ ಚರ್ಮ ಇದ್ದಷ್ಟು! ಆದರೆ ಪ್ರತಿಯೊಂದನ್ನೂ ಅಳೆಯುವ ಹುಚ್ಚು ಹಿಡಿದಿರುವ ನಮಗೆ ಇದೊಂದನ್ನು ಅಳೆಯುವುದು ಸಾಧ್ಯವಾಗಿಲ್ಲ.

ಮೂರನೆಯದಾಗಿ ಈ ಚಳುವಳಿಯು ಬಡತನವನ್ನು ಹಾಸಿಹೊದ್ದಿರಬೇಕು. ಕಡಿಮೆ ಖರ್ಚಿನ, ಎಲ್ಲರಿಗೂ ದಕ್ಕುವಂತಹ ಪರಿಹಾರಗಳನ್ನು ಕಂಡುಕೊಳ್ಳಬೇಕು; ದುಡ್ಡು ಹೆಚ್ಚಾದ ಕೂಡಲೇ ಮನಸ್ಸು ದುಬಾರಿತನದೆಡೆಗೆ ತುಡಿಯಲು ಶುರುಮಾಡುತ್ತದೆ. ಆಧುನಿಕ ವೈದ್ಯವಿಜ್ಞಾನ ಮತ್ತು ಕೃಷಿಯ ಖರ್ಚುಗಳು ತಲೆ ಸಿಡಿದುಹೋಗುವಷ್ಟು ದುಬಾರಿಯಾಗಿವೆ; ಇದು ಸ್ವಲ್ಪಮಟ್ಟಿಗೆ ಅಥವಾ ಬಹುಮಟ್ಟಿಗೆ ಎಂದೇ ಹೇಳೋಣ ವೈದ್ಯಕೀಯ ಮತ್ತು ಕೃಷಿ ಸಂಶೋಧನೆಗೆ ಸಿಗುತ್ತಿರುವ ಅತಿಯಾದ ದುಡ್ಡಿನ ಪರಿಣಾಮವೇ. ಹೆಚ್ಚಿನ ದುಡ್ಡಿಗೆ ಸಕ್ಕರೆಗೆ ಇರುವೆ ಬರುವಂತೆ ಅಧಿಕಾರಿಗಳು ಮತ್ತು ತಜ್ಞರು ಬರುತ್ತಾರೆ; ನಮ್ಮ ವಿಶ್ವವಿದ್ಯಾಲಗಳ ಪರಿಸ್ಥಿತಿ ನೋಡಿ. ಯಾವ ಸಮಸ್ಯೆಯನ್ನು ಪರಿಹರಿಸಬೇಕಾಗಿದೆಯೋ ಅದೇ ಸಮಸ್ಯೆಯನ್ನು ಜೀವನವಿಧಾನ ಮಾಡಿಕೊಂಡಿರುವ ಸಿರಿವಂತರಿಂದ ಪರಿಹಾರ ಸಾಧ್ಯವಿಲ್ಲ. ಚಳುವಳಿಯು ಅದರ ಕಾರ್ಯಕರ್ತರ ದಿನನಿತ್ಯದ ಜೀವನಶೈಲಿಯಲ್ಲಿ ಇಂಚಿಂಚಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ ಮುಂದೆಹೋಗಬೇಕು.

ಇಷ್ಟೆಲ್ಲ ಸಮಸ್ಯೆಗಳು, ಪರಿಹಾರಗಳು, ಆತಂಕ, ನಿರೀಕ್ಷೆ, ಅಭಯಗಳನ್ನೆಲ್ಲ ಚರ್ಚಿಸಿಯಾದ ಮೇಲೆ ನಾನೀಗ ಸ್ವಲ್ಪ ಸಂತಸ ಉಂಟುಮಾಡುವಂತಹುದನ್ನೇನಾದರೂ ಹೇಳಬೇಕಾಗಿದೆ. ಇಲ್ಲಿಯವರೆಗೆ ಈ ಭೂಮಿ ಮತ್ತು ಅದರಿಂದ ಉದಯಿಸುವ ಅತಿಸುಂದರ ಸೃಷ್ಟಿಯ ಬಗ್ಗೆ ನಮ್ಮ ಗೌರವ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದೆವು. ಆದರೆ ಈ ಗೌರವವನ್ನು ಪ್ರಾರ್ಥನಾ ಗೀತೆಗಳಲ್ಲಿ, ಗೋಡೆಗೆ ನೇತುಹಾಕುವ ಚಿತ್ರದಲ್ಲಿ, ಸಹಜಕಾಡಿನ ದಾರಿಗಳನ್ನು ಎಲ್ಲಾದರೂ ಉಳಿಸಿಕೊಳ್ಳುವುದರಲ್ಲಿ ನಾವು ತೋರ್ಪಡಿಸಿದರೆ ಸಾಲದು (ಅದೆಲ್ಲ ಇರಲಿ, ಬೇಡವೆಂದಲ್ಲ). ಈ ಭೂಮಿ ಮತ್ತು ಅದರ ಜನ್ಯ ಸಂಪತ್ತಿನಲ್ಲಿ ನಮ್ಮ ಪಾಲಿಗೆ ಬಂದದ್ದನ್ನು ಅತ್ಯಂತ ಪ್ರೀತಿಗೌರವಗಳಿಂದ ಉಪಯೋಗಿಸುವುದರಲ್ಲಿ ನಾವು ನಮ್ಮ ಚಳುವಳಿಯನ್ನು ನಡೆಸಬಹುದು. ಈ ಸದುಪಯೋಗ, ಪರಿಸರ ಮತ್ತು ನಮ್ಮ ಮಧ್ಯೆಯ ಪರಸ್ಪರ ಪ್ರೀತಿಗೌರವವನ್ನು ಹೆಚ್ಚಿಸುವ ಸದುಪಯೋಗವಾಗಬೇಕು. ಗೃಹಕೃತ್ಯ ಎಂದು ನಾನು ಕರೆದಿರುವ ನೂರಾರು ಕೌಶಲ್ಯಗಳು - ತೋಟದಿಂದ ಸುರುವಾಗಿ ತಟ್ಟೆಯಲ್ಲಿ ತಯಾರಾದ ಊಟದವರೆಗೆ, ಭೂಮಿಯ ಸೇವೆಯಿಂದ ನಮ್ಮ ಬಂಧುಮಿತ್ರರು, ಅಪರಿಚಿತರೊಂದಿಗಿನ ನಮ್ಮ ವ್ಯವಹಾರದವರೆಗೆ ಎಲ್ಲೆಡೆ ನಮ್ಮ ನಿತ್ಯಜೀವನದಲ್ಲಿ ವ್ಯಾಪಿಸಬೇಕು. ಪೂರ್ಣಾನಂದವನ್ನು ಕೊಡುವ, ತಾಳ್ಮೆ ಬೇಡುವ ಈ ಕೆಲಸ ಆಧುನಿಕ ಜಗತ್ತು ’ಕಲೆ’ (ಫೈನ್ ಆರ್ಟ್) ಎಂದು ಕರೆದು ಕೊಂಡಾಡುವ ಕೆಲಸಕ್ಕಿಂತ ಹಿರಿದಾದುದು[ಬೆರಿಯವರಿಗೆ ಫೈನ್ ಆರ್ಟ್ ಬಗ್ಗೆ ಅಗೌರವವಿದೆ ಎಂದು ಇದರ ಅರ್ಥವಲ್ಲ. ಅದು ಬರಿಯ ಗೋಡೆಯ ಕಲೆಯಾಗಿದೆ, ಜೀವನಕಲೆಯಾಗಿಲ್ಲ ಎಂಬುದು ಅವರ ಅಸಮಾಧಾನ ಅಷ್ಟೆ.]. ಇದನ್ನು ಕಲಿಯಲು ’ಮನಸ್ಸಿಟ್ಟು ಮಾಡುವ ದುಡಿಮೆ ಮತ್ತು ಶ್ರಮ’ಕ್ಕಿಂತ ಮಿಗಿಲಾದ ದಾರಿ ಬೇರೇನೂ ಇಲ್ಲ. ಪ್ರತಿಯಾಗಿ ಸಿಗುವುದೇನೆಂದರೆ ಜೀವನದಲ್ಲಿ ಸಮೃದ್ಧಿ ಮತ್ತು ಮನಸ್ಸಿಗೆ ಸಂತೋಷ!

[ಇದು ನನ್ನ ಆತ್ಮೀಯರೊಬ್ಬರ ಖಾಸಗಿ ಓದಿಗಾಗಿ ನಾನು ಮಾಡಿದ ಅನುವಾದ. ಮೂಲ ಆಕರ ಇಲ್ಲಿದೆ. 
https://orionmagazine.org/article/in-distrust-of-movements/
'ವೆಂಡೆಲ್ ಚಳುವಳಿ ಮಾಡುವುದನ್ನು ಖಂಡಿಸಿದ್ದಾರೆ' ಎಂದು ಈ ಲೇಖನದ ಭಾವಾರ್ಥವನ್ನು ಗ್ರಹಿಸಬಾರದು. ಚಳುವಳಿಗಳು ಹೇಗಿರಬೇಕು ಎಂಬುದನ್ನು ಅವರಿಲ್ಲಿ ಹೇಳಿದ್ದಾರಷ್ಟೆ. ತಾಳ್ಮೆಯಿಂದ ಓದಿದರೆ ನಮಗದು ತಿಳಿಯುತ್ತದೆ]
ವಸಂತ ಕಜೆ
ಕಜೆ ವೃಕ್ಷಾಲಯ
Comments

  1. ಮಾನ್ಯರೆ,ನಮನಗಳು.ನಿಮ್ಮ ಪುಸ್ತಕ ಐಟಿಯಿಂದಮೇಟಿಗೆ ಡಿವಿಜಿ ಬಳಗದಿಂದ ಸಿಕ್ಕಿತು.ಓದಿದೆ.ಹಾಗೆಯೇ ನಿಮ್ಮ ಆಕಾಶವಾಣಿ ಸಂದರ್ಶನ ವನ್ನೂ ಕೇಳಿದೆ.ಖುಷಿಯಾಯಿತು.ನೊಮ್ಮ ಪುಸ್ತಕ ಸರಳವಾದ ವಿವರಣೆಗಳಿಂದ,ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಧನ್ಯವಾದಗಳು.

    ReplyDelete
  2. ನಾನು ಸುಬ್ಬಲಕ್ಷ್ಮಿ ಅಂತ ಕೋಲಾರದಿಂದ.9449974023

    ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!