ಹಳದಿ ಚಿಟ್ಟೆಯ ಪ್ರಸವ ದರ್ಶನ

ಅವಕಾಶಗಳು ಕಾಲಿಗೆ ತೊಡರುವುದು ಎಂದೊಂದಿದೆಯಲ್ಲಅಂಥದ್ದೊಂದು ಇಂದು ನನಗೆ ಆಯಿತುನಮ್ಮ ಮನೆಯ ಜಗಲಿಯ ಬದಿಯೇ ಕಾಡುಹುಣಸೆ ಬೋನ್ಸೈಗಿಡದ ಮೇಲೆ, ಚಿಟ್ಟೆಯೊಂದು(common grass yellow butterfly - Eurema hecabe) ಕೋಶದಿಂದ ಹೊರಬರುವುದನ್ನು ನೋಡುವ ಸುವರ್ಣಾವಕಾಶ ಅದುಸಣ್ಣ ವಯಸ್ಸಿನಿಂದ ಪಾಠದಲ್ಲಿ ಓದಿದ್ದನಾನೆಂದೂ ಕಣ್ಣಾರೆ ಕಂಡಿರದ ವಿಷಯಅಕ್ಷರಶ: ಸುವರ್ಣಾವಕಾಶಏಕೆಂದರೆ ಅದೇ ಬಂಗಾರದ ಬಣ್ಣ! ಹಚ್ಚ ಹಸಿರಿನ ಹುಳವೊಂದುಹಚ್ಚ ಹಸಿರಿನ ಎಲೆಯನ್ನು ಕಬಳಿಸಿ, ಕೋಶ ಕಟ್ಟಿದ ಮೇಲೆ ಹೊನ್ನಬಣ್ಣ ಪಡೆಯುವುದೆಂದರೆ!! ವಿಸ್ಮಯವೆಂದು ನಾವಂದರೆ ಅದು ವಿಸ್ಮಯ, ಸಾಮಾನ್ಯವೆಂದಂದರೆ ಅತಿ ಸಾಮಾನ್ಯ - ಪ್ರಕೃತಿಯೆಂಬ ದೊಡ್ಡ ವಾಹನದಲ್ಲಿ ಸಣ್ಣ ಕೈಗಡಿಯಾರದೊಳಗಿನ ಗಾಲಿಯಂಥ ಹಲ್ಲುಚಕ್ರವೊಂದು ಒಂದು ಸುತ್ತು ತಿರುಗಿದಂತೆ, ಏನೇನೂ ಅಲ್ಲ.
ಹಸುರು ಕೋಶದೊಳಗೆ ಹಳದಿ ಚಿಟ್ಟೆ, ಹಿನ್ನೆಲೆಯಲ್ಲಿ ಲಾರ್ವ(ಚಿಟ್ಟೆ ಕೋಶದಿಂದ ಹೊರಬರುತ್ತಿರುವ ವೀಡಿಯೋ)

ದೇವರೋ ಪ್ರಕೃತಿಯೋಯಾವುದೆಂದು ತಿಳಿಯದೊಂದು ಶಕ್ತಿಯು ಸಂತತವಾದಕೊನೆಮೊದಲಿಲ್ಲದಸಕಲ ಜೀವರಾಶಿಗಳ ಚಕ್ರವನ್ನು ನಡೆಸುತ್ತಾ ಬಂದಿದೆಯಷ್ಟೆಒಬ್ಬನೇ ಕುಳಿತು ಈಕೆಲಸವನ್ನು ಮಾಡುವುದು ಆಗುವ ಹೋಗುವ ಮಾತಲ್ಲವೆಂದು  ಶಕ್ತಿಯು ನಮಗೆಲ್ಲ ಈ ಕೆಲಸವನ್ನು ಹಂಚಿಬಿಟ್ಟಿದೆನಮಗರಿಯದೆಯೇ  ಮಹದು ಜವಾಬ್ದಾರಿಯನ್ನು  ಹೊತ್ತುಕೊಂಡಿರುವ ಜೀವಮಂಡಲದ ಒಂದೊಂದು ಜೀವಗಳು ತಮ್ಮದೇ ವಂಶವನ್ನುಮತ್ತು ಪರೋಕ್ಷವಾಗಿ ನೂರಾರುಜಾತಿಯ ಇತರ ವಂಶಗಳನ್ನು  ಸೃಷ್ಟಿಸುವಲ್ಲಿ ಪಾಲ್ಗೊಳ್ಳುತ್ತಿವೆಮಾತ್ರೆಯ ಹೊರಗಿನ ಸಿಹಿಯಂತೆಆಪಾಲ್ಗೊಳ್ಳುವಿಕೆಯಲ್ಲಿ ಒಂದು ಸುಖಆನಂದನೆಮ್ಮದಿಯ ಅನುಭೂತಿ ಅಡಕವಾಗಿ ಇರುವುದರಿಂದಲೇ  ಕೆಲಸ ಕೋಟ್ಯಂತರ ವರುಷಗಳಿಂದ ಅನೂಚಾನವಾಗಿ ನಡೆದುಕೊಂಡುಬಂದಿದೆ. ಜೀವಜಾಲದ ‘ಹೃದಯ ಬಡಿತ’ ಎಂದು ನಾವು ಏನನ್ನಾದರೂ ಕರೆಯುವುದಿದ್ದರೆ ಅದು ಒಂದು ಹುಟ್ಟು - ಒಂದು ಸಾವನ್ನು ಎನ್ನಬಹುದೇನೋ, ಅದೇ ಜೀವಜಾಲದ ಲಬ್-ಡಬ್. ಹುಟ್ಟು ಸಾವುಗಳು ಅದೆಷ್ಟು ಸಾಮಾನ್ಯವೆಂದರೆ, ಒಂದು ಮಳೆಬಿದ್ದರೆ ಕೋಟಿಗಟ್ಟಲೆ ಸೊಳ್ಳೆಗಳು ಹುಟ್ಟುತ್ತವೆ, ಒಂದು ಸಣ್ಣ ಸತ್ತ ಇಲಿಯನ್ನು ಹಾಗೇ ಬಿಟ್ಟರೆ ಅದು ಕೊಳೆತು ನಾರಿ, ಹುಳಗಳು ಮಿಜಿಳಲು ಶುರುವಾಗಿ ಬಿಡುತ್ತದೆ. ಈ ಸಾಮಾನ್ಯತೆಯು ಹುಟ್ಟನ್ನು, ಸಾವನ್ನು ಕುತೂಹಲಿಸಲು, ಆಸ್ವಾದಿಸಲು ದೊಡ್ಡ ತೊಡಕಾಗಿದೆ ಅನಿಸುತ್ತದೆ. ಆದರೆ ಈ ತೊಡಕನ್ನು ಮೀರಿದರೆ ನಮಗೆ ಸಿಗುವ ಅನುಭವ ಅನನ್ಯ.

೨ ವಾರಗಳ ಹಿಂದೆ ನಾನು ನನ್ನ ಕಾಣ್ಮೆಯ ಮಟ್ಟಿಗೆ ಅತೀ ದೊಡ್ಡ ಕಂಬಳಿ ಹುಳವನ್ನು ನೋಡಿದೆ. ಸಣ್ಣ ಮೊಲದಷ್ಟು ವೇಗವಾಗಿ ಗಿಡವೊಂದನ್ನು ಅದು ತಿನ್ನುತ್ತಿತ್ತು. ಗೆಳೆಯನೊಬ್ಬ ಅದು Atlas ಪತಂಗದ್ದು ಎಂದು ಹೇಳಿದ; ಅತೀ ಹೆಚ್ಚು ರೆಕ್ಕೆಯ ಹರವು ಹೊಂದಿರುವ ಪತಂಗಗಳಲ್ಲಿ ಎರಡನೆಯ ಸ್ಥಾನವಿರುವ ಪತಂಗವದು. ಅದೀಗ ಕೋಶ ಕಟ್ಟಿ ತಪಸ್ಸು ಕಾಯುತ್ತಿದೆ.

ಈ ಮಧ್ಯೆ ಹಳದಿ ಚಿಟ್ಟೆ ಹೀಗೆ ದರ್ಶನ ಕೊಡಬಹುದೆಂದು ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಮೊದಲಿಗೆ ಅವು ಕಾಡುಹುಣಸೆ (Pithecellobium dulce)ಯ ಎಲೆಯನ್ನೆಲ್ಲ ಸಾಮೂಹಿಕವಾಗಿ ತಿಂದು ಮುಗಿಸಿದವು. ಊಟದ ಕೊನೆಗೆ ಖಾಲಿ ಗೆಲ್ಲುಗಳಿಗೆ ‘U’ ಆಕಾರದಲ್ಲಿ ಅಂಟಿ ನಿಂತು, ಬ್ರೇಕ್ ಡಾನ್ಸ್ ರೀತಿ ಮಾಡಿ ಸ್ವಲ್ಪ ನೂಲು ನೆಯ್ದು, ಗೆಲ್ಲಿಗೆ ನೇತುಕೊಳ್ಳಲು ಆಧಾರವನ್ನು ಮಾಡಿಕೊಂಡವು (ಮೊದಲ ಚಿತ್ರ ಗಮನಿಸಿ).
ಸಂಪೂರ್ಣ ಬಲಿತಾಗ ಬರುವ ಕಪ್ಪು ರೆಕ್ಕೆಯ ಒಳ ಅಂಚು

 ಆಮೇಲೆ ಅದೇನೋ ಮ್ಯಾಜಿಕ್ ಮಾಡಿ ಸಣ್ಣ ಕೋಶದಂತಾದವು (ಇದಕ್ಕೆ ಕ್ರಿಸಾಲಿಸ್ - chrysalis ಅನ್ನುತ್ತಾರಂತೆ). ಪತಂಗವಷ್ಟೇ(ಮಾಥ್) ತನ್ನ ಸುತ್ತ ರೇಷ್ಮೆಯ ಬಲೆ ನೇಯುವುದು(cocoon), ಚಿಟ್ಟೆಗಳಲ್ಲ ಎಂದು ನನಗೆ ತಿಳಿದಿರಲಿಲ್ಲ. ಇದನ್ನೆಲ್ಲ ಗಮನಿಸುವಾಗಷ್ಟೇ ಓದಿ ಕಲಿತೆ.

ಕಳೆದ ಮೂರು ದಿನಗಳಿಂದ ಅವು ಕೋಶವೊಡೆದು ಹೊರಗೆ ಬರುತ್ತಿವೆ, ಸುಮಾರು ಬೆಳಗ್ಗೆ ಆರರಿಂದ ಏಳರ ಹೊತ್ತಿಗೆ. ಅದು ನಾನು ಹಾಲು ಕರೆಯುವ ಸಮಯ! ಎರಡೂ ದಿನ ಈ ಘಟನೆ ಮಿಸ್ ಆಯಿತು. ಈಗ ಕರಾವಿಗೆ ಎರಡು ಹಸುಗಳಿವೆ, ಅರ್ಧ ಘಂಟೆಯ ಹತ್ತಿರ ಸಮಯ ಬೇಕು. ಇವತ್ತು ಏಳು ಘಂಟೆಯವರೆಗೆ ಹಟ್ಟಿಗೆ ಹೋಗದೆ ಕಾದು ಕೂತೆ. ಆಗಲೇ ಎರಡು ಹೊರಬಂದಾಗಿತ್ತು ಮತ್ತು ಅವು ನನಗೆ ಸಿಕ್ಕಿರಲಿಲ್ಲ. ಕೊನೆಗೊಂದು ಸಿಕ್ಕಿಯೇ ಬಿಟ್ಟಿತು. ನನ್ನ ಅದೃಷ್ಟ. 

ಹುಟ್ಟೆಂಬ ಗುಟ್ಟು
ಚಿತ್ರದಲ್ಲಿ ಕಾಣುವಂತೆ, ಕೋಶವು ಎಷ್ಟು ಚಿಕ್ಕದಾಗಿದೆ! ಅದರಲ್ಲಿ ರೆಕ್ಕೆಗಳನ್ನು ಮಡಚಿ ಕೂರುವುದಾದರೂ ಹೇಗೆ? ಬರೀ ತೆವಳಿಕೊಂಡು ಚಲಿಸುವ, ಎಲೆಯನ್ನಷ್ಟೇ ತಿನ್ನುವ ಕಂಬಳಿಹುಳ, ಚಿಟ್ಟೆಯಾಗಿ ಬದಲಾದಾಗ ಅದರ ‘ಮನಸ್ಸೂ’ ಬದಲಾಗುವುದೇ? ತಾನು ಹಿಂದೆ ತೆವಳುತ್ತಿದ್ದೆ ಎಂಬುದು ಅದರ ನೆನಪಿನಲ್ಲಿರುವುದೆ? ತೆವಳುವ ಕಾಲುಗಳು ಹೋಗಿ ರೆಕ್ಕೆ ಬಂದುದು, ಎಲೆಯ ಬದಲಿಗೆ ಮಕರಂದ, ಹಣ್ಣುಗಳನ್ನೆಲ್ಲ ತಿನ್ನಲಾಗುವುದು ಎಷ್ಟು ವಿಚಿತ್ರವೆನಿಸಬಹುದಲ್ಲ! 
ಈ ಚಿಟ್ಟೆಯ ಕೋಶ ಒಂದು ಸಣ್ಣ ಎಲೆಯ ಆಕಾರದಲ್ಲಿರುವುದು, ಎಲೆಯಂತೆಯೇ ಗಿಡಕ್ಕೆ 'ತೊಟ್ಟಿನ' ರಚನೆಯ ಮೂಲಕ ಅಂಟಿಕೊಂಡಿರುವುದು ಕಾಕತಾಳೀಯವೆ? ಉದ್ದೇಶಪೂರ್ವಕವೆ? ಹುಟ್ಟಿದ ಕೂಡಲೇ ತಾನೇನು ಮಾಡಬೇಕೆಂಬುದು ಅಷ್ಟು ನಿಖರವಾಗಿ ಚಿಟ್ಟೆಗೆ ಗೊತ್ತಿರುವುದು ಹೇಗೆ? ಇಂತಹ ಪ್ರಶ್ನೆಗಳಿಗೆ 'ಕೂದಲು ಸೀಳುವ' ಸಂಶೋಧನೆಗಳನ್ನು ನಡೆಸಿ ಉತ್ತರ ತಿಳಿಯುವ ಬದಲು, ನಮ್ಮ ಅಜ್ಞಾನದ ಮೂಲಕವೇ ಉತ್ತರಿಸಲು ಪ್ರಯತ್ನಿಸಬೇಕೆಂಬುದು ವೆಂಡೆಲ್ ಬೆರಿಯವರ ನಿಲುವಾಗಿದೆ. ಆ ನಿಗೂಢತೆಯನ್ನು ಉಳಿಸಿಕೊಳ್ಳುವುದರಲ್ಲಿ ಸಿಗುವ ವಿಸ್ಮಯಾನಂದ ಅದನ್ನು ಒಡೆದಾಗ ಸಿಗಲಾರದು ಅನಿಸುತ್ತದೆ.

ಹೊರಬಂದ ಕೂಡಲೇ ಚಿಟ್ಟೆಗಳು ಮೊದಲು ಮಾಡಿದ ಕೆಲಸವೆಂದರೆ ಬಿಸಿಲಿಗೆ ಕಾಯುವುದು. ಸೂರ್ಯ ನಮಸ್ಕಾರ ಮಾಡದೆ ಅವಕ್ಕೆ ಮುಂದಿನ ಬದುಕಿಲ್ಲ. ಬಿಸಿಲು ಬಿದ್ದ ತಕ್ಷಣ ಅವಕ್ಕೆ ಕೆರಳಿದ್ದು ಪ್ರೇಮ-ಕಾಮ. ಅದೇ ಗಿಡದ ಮೇಲೆ, ನೆರೆ ಹೊರೆಯ ಗಿಡದ ಮೇಲೆ ಕುಳಿತು ಅವು ಜೊತೆಗೂಡಿದವು. ಈಗ ಹೆಣ್ಣು ಫಲವತಿ! ಜೀವಚಕ್ರದ ಮುಂದಿನ ಸುತ್ತುಗಳಿಗೆ ಚಾಲಕಿ.
ಪ್ರೇಮದಲ್ಲಿ ನಿರತ ಚಿಟ್ಟೆಗಳು

ಅವರ ಚಕ್ರವನ್ನು ಇನ್ನಷ್ಟು ಹಿಂಬಾಲಿಸಲು ನನ್ನಿಂದ ಸಾಧ್ಯವಾದೀತೆ? ನಾನು ನನ್ನ ಜೀವನ ಚಕ್ರಕ್ಕೆ ಮರಳಿದೆ. ಇಡೀ ದಿನ ಮನಸ್ಸಿನಲ್ಲಿ ಅದೇ ಗುಂಗು

ವಸಂತ ಕಜೆ
ಕಜೆ ವೃಕ್ಷಾಲಯ 

Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!