ವೆಂಕಟ್ರಾಮ ದೈತೋಟ - ಕೆಲವು ನೆನಪುಗಳು

ವೆಂಕಟ್ರಾಮ ದೈತೋಟ - ಕೆಲವು ನೆನಪುಗಳು

ಅವರ ಮದ್ದಿನ ಚೀಟಿಯ ಮಾದರಿ - ಅವರದೇ ಹಸ್ತಾಕ್ಷರ

ದೈತೋಟರ ಬಗ್ಗೆ ವಿಸ್ತಾರವಾಗಿ ಬರೆಯಬಲ್ಲಷ್ಟು ಒಡನಾಟ, ಆತ್ಮೀಯತೆ ನನಗಿರಲಿಲ್ಲ. ಆದರೆ ನೋಡಿದಷ್ಟು ಸಂದರ್ಭದಲ್ಲಿ ಅವರು ಬಹಳಷ್ಟರಂತೆ ಕಂಡರು

ನಾವೊಮ್ಮೆ ಗಡ್ಡೆ ವೈವಿಧ್ಯಗಳ ಬಗ್ಗೆ ಹಲಸು ಸ್ನೇಹಿ ಕೂಟದ ವತಿಯಿಂದ ನಮ್ಮಲ್ಲೊಂದು ಕಾರ್ಯಕ್ರಮ ಮಾಡುವುದೆಂದು ನಿಶ್ಚಯಿಸಿದಾಗ ಶ್ರೀಮತಿ ಮತ್ತು ಶ್ರೀ ದೈತೋಟರನ್ನು ಪ್ರಧಾನ ಭಾಷಣಕಾರರಾಗಿ ಬರಹೇಳುವುದೆಂದು ನಿರ್ಧರಿದೆವು. ನಾಕಾರಂತರು ಅಥವಾ ಶರ್ಮಣ್ಣ ಇಬ್ಬರಲ್ಲೊಬ್ಬರ ಸಲಹೆ ಅದಾಗಿರಬಹುದು. ಕಾರಂತರು, ಶಿರಂಕಲ್ಲು ನಾರಾಯಣಣ್ಣ ಮತ್ತು ನಾನು ಜೊತೆಯಾಗಿ ಹೋಗಿ ಅವರನ್ನು ಕರೆದೆವು

ಕಾಟುಕುಕ್ಕೆ ಬದಿಯಿಂದ ಅವರಲ್ಲಿಗೆ ಹೋಗುವುದಿದ್ದರೆ ಗುಡ್ಡದ ಅರ್ಧಕ್ಕೆ ಸಾಗುವ ಡಾಂಬರು ರಸ್ತೆಯಿಂದ ಬಲಕ್ಕೆ ನೋಡಿದರೆ ದೂರದಲ್ಲಿಬಳ್ಳಿ ಮಂದಾರ’ (bauhinia pheonicia) ಎಂಬ ಮರಬಳ್ಳಿ ಎತ್ತರಕ್ಕೆ ಹಬ್ಬಿರುವ ತೋಟವೊಂದು ಕಾಣಿಸುವುದು ಅವರ ಮನೆಯ ಜಿಪಿಯಸ್ ಲೊಕೇಶನ್. ಸಣ್ಣ ಆಶ್ರಮದಂತಹ ಮನೆ. ಮನೆಗೆ ಆಗ ರಸ್ತೆಯಿರಲಿಲ್ಲ, ಬರೀ ಕಾಡುದಾರಿ. ಆಚೀಚೆ ಕಡೆ ಎಲ್-ಕೂಟಿ(litsea glutinosa, ಎಲುಬು ಮುರಿತಕ್ಕೆ ಜೋಡಕ ಅಂಟು ಲೋಳೆ ಕೊಡುವ ಗಿಡ)ಯಂತಹ ಹಲವಾರು ಮಲೆನಾಡ ಔಷಧೀಯ ಗಿಡಗಳು ಸಿಗುವ ದಾರಿ. ಬೇರೊಂದು ಬಾರಿ ಹೋದಾಗ ಯಾರೋ ಅಭಿಮಾನಿಗಳು ಅವರಿಗೆ ಸಣ್ಣ ಮಟ್ಟಿನ ರಸ್ತೆ ಮಾಡಿಕೊಟ್ಟಿದ್ದರು. ಗಡ್ಡೆ ಮೇಳದಲ್ಲಿ ಅವರ ಭಾಷಣ ತುಂಬಾನೇ ಚೆನ್ನಾಗಿ ಆಯಿತು. ಊಟವಾದ ಮೇಲೆ ಇದ್ದ ಅವರ ಭಾಷಣದಲ್ಲಿ ಸಭಿಕರು ಸ್ವಲ್ಪವೂ ತೂಕಡಿಸದೆ ಕೈಯಲ್ಲಿ ಚೀಟಿ ಪೆನ್ನುಗಳನ್ನು ಹಿಡಿದು ಅಧ್ಯಯನಾಸಕ್ತಿಯಿಂದ ಕೇಳಿ ಬರಕೊಳ್ಳುತ್ತಿದ್ದುದು ನಮಗೆ ಬಹಳ ಸಮಾಧಾನ ತಂದಿತು. ಅವರಿಗೆ ಸಣ್ಣ ಮಟ್ಟಿನ ನೆನಪಿನ ಕಾಣಿಕೆ ಕೊಟ್ಟು ಕಾಲು ಹಿಡಿಯುವ ಭಾಗ್ಯ ನನ್ನದು, ನನ್ನ ಪತ್ನಿಯದಾಯಿತು

(ವೀಡಿಯೋ ಮತ್ತು ಅಪ್ಲೋಡಿಂಗ್ : ರಾಮ ನರೇಶ್ ಮಂಚಿ)

ಅಡಿಕೆ ಪತ್ರಿಕೆಯಲ್ಲಿ ಬಿಡಿಯಾಗಿ ಬರುತ್ತಿದ್ದ ಅವರ ಲೇಖನಗಳಿಂದ ಬೇಕಾದ ಗಿಡಗಳನ್ನು ರೆಫರ್ ಮಾಡಿ ಓದುವುದು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೊಂದು ಪರಿಹಾರ ಬೇಕೆಂದು ನಾನೊಮ್ಮೆ ಶ್ರೀಪಡ್ರೆಯವರಲ್ಲಿ ಕೇಳಿಕೊಂಡೆ. ವಿವೇಕಾನಂದ ಕಾಲೇಜಿನ ನೇತೃತ್ವದಲ್ಲಿ ಲೇಖನಗಳ ಕೂಡುಪ್ರಕಟಣೆಯ ಕೆಲಸ ನಡೆಯುತ್ತಿದೆಯೆಂದೂ ಆದರೂ ಇನ್ನೊಂದು ಸಣ್ಣ ಕೈಪಿಡಿ ಪುಸ್ತಕವನ್ನು ತಯಾರಿಸುವುದು ಉಚಿತವೆಂದು ಸಲಹೆಯಿತ್ತರು. ಅದಕ್ಕಾಗಿ ನಾನೊಮ್ಮೆ ದೈತೋಟರಲ್ಲಿ ಹೋಗಿ, ಅವರನ್ನು ಕರೆದುಕೊಂಡು ಪಡ್ರೆಯವರಲ್ಲಿಗೆ ಹೋಗಿ ನಾವೊಮ್ಮೆ ಮಾತನಾಡಿದೆವು. ಮಾತಿನಲ್ಲಿ ಅವರ ಸರಳತೆ, ಸವಿನಯ, ತನ್ನ ಜ್ಞಾನವೆಂಬ ಹಿಮಗುಡ್ಡದ(iceberg) ಕಿಂಚಿತ್ ಸೂಚನೆಯೂ ಕೊಡದಂತೆ ವ್ಯವಹರಿಸುವ ಅವರ ಸರಳತೆಗಳು ನನ್ನಂತೆ ನಿನ್ನೆ ಮೊನ್ನೆ ಹುಟ್ಟಿದವರಿಗೆ ಪಾಠವಾಗಿವೆ. ಅವರಿಗೆ ಕೈಕೊಟ್ಟಿದ್ದ ಶ್ರವಣ ಶಕ್ತಿಯಿಂದ ಬಹುಕ್ಷೀಣವಾಗಷ್ಟೇ ಕೇಳುತ್ತಿತ್ತಷ್ಟೆ. ಕೆಲವು ವಿಷಯಗಳನ್ನು ಪಡ್ರೆಯವರು ಬರೆದು ಹೇಳಬೇಕಾಯಿತು. ಕೊನೆಗೆ ಕೈಪಿಡಿಯ ಕೆಲಸವೇನೂ ನಡೆಯಲಿಲ್ಲ. ಅಷ್ಟರೊಳಗೆ ಅವರ ಪುಸ್ತಕವೇ ಪ್ರಕಟವಾಯಿತು.


ಔಷಧೀಯ ಸಸ್ಯ ಸಂಪತ್ತು ಪುಸ್ತಕ 
ಈ ಪುಸ್ತಕಕ್ಕಾಗಿ ನಾವೆಲ್ಲ ಬಹಳ ವರ್ಷಗಳಿಂದ ಕಾಯುತ್ತಿದ್ದೆವು. ಇಂದು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿರುವ ಗಿಡಗಳ ಬಗ್ಗೆ ಇಂಟರ್ನೆಟ್ ನಿಂದಲೂ ಒಂದಷ್ಟು ಮಾಹಿತಿಗಳನ್ನು ಪಡೆಯಬಹುದು. ಆದರೆ ಪುಸ್ತಕದಿಂದ ನಮಗೆ ಸಿಗುವುದು  - ಅವರ ದೃಷ್ಟಿಕೋನದ ಒಳನೋಟ; ಸಂಕೀರ್ಣ ವಿಚಾರಗಳನ್ನು ಸರಳ ಓದಿಗೆ ದೊರಕಿಸುವ ಅವರ ಸಾಹಿತ್ಯ ಶಕ್ತಿನಿಖರವಾದ, ತನ್ನ ಉದ್ದೇಶ ಈಡೇರಿಸಲು ಸಂಪೂರ್ಣ ಸಮರ್ಥವಾದ ಅವರ ಚಿತ್ರಕಲೆ; ನಮ್ಮ ಸುತ್ತುಮುತ್ತಲಿನ - ಎಳೆ ಚೆಂಡುಪುಳೆಯಂತಹ ನಿಷ್ಪ್ರಯೋಜಕವೆನಿಸುವ ವಸ್ತುವಿನ ಸದುಪಯೋಗ ಕಲೆ; ನೂರಾರು ಆಹಾರ, ಔಷಧೀಯ ಸೂಕ್ಷ್ಮಗಳು (ಬಾಳೆದಿಂಡನ್ನು ಬಿಡಿಸಿದ ಮೇಲೆ ಹನ್ನೆರಡು ಘಂಟೆಗಿಂತ ಹೆಚ್ಚು ಕಾಲ ಇಡಬಾರದು - ಎಂಬುದು, ಬರೀ ಒಂದು ಉದಾಹರಣೆ ಕೊಡುವುದಿದ್ದರೆ) - ಈ ಎಲ್ಲ ಕಾರಣಗಳಿಗಾಗಿ ಈ ಪುಸ್ತಕ ಓದು ಮತ್ತು ಮರು ಓದನ್ನು ಸಂಪಾದಿಸಿಕೊಳ್ಳುತ್ತದೆ. 

ವೈಜ್ಞಾನಿಕ ಹೆಸರುಗಳು ಬಂದ ಮೇಲೆ, ಇಂಟರ್ನೆಟ್ ಬಂದ ಮೇಲೆ ಅವು ಸಸ್ಯಾಧ್ಯಯನಕ್ಕೆ ಉಪಕಾರಗಳಷ್ಟೇ ಸ್ವಲ್ಪ ಉಪದ್ರವಗಳನ್ನೂ ಮಾಡುತ್ತಿವೆ. ಬರೀ ಎರಡೇ ಉದಾಹರಣೆಗಳಿಂದ ವಿಚಾರವನ್ನು ಹೇಳಲು ಪ್ರಯತ್ನಿಸುತ್ತೇನೆ (ವಿಷಯಾಂತರವಾಗುವ ಹೆದರಿಕೆಯಿಂದ). 

) ಶತಾವರಿ ಎಂಬ ಹೆಸರಿಗೆನೂರು ಗಂಡಂದಿರುಳ್ಳವಳುಎಂದು ಅರ್ಥವೆಂದು ಇಂಟರ್ನೆಟ್ ನಲ್ಲಿ ಹಲವಾರು ಕಡೆ ಬರೆದಿದೆ (ಹೆಚ್ಚಿನವು ಒಂದರಿಂದ ಇನ್ನೊಂದು ಕಾಪಿ ಮಾಡಿದವು) (ವಾಕ್ಯವೊಂದರ ಯಥಾಪ್ರತಿ : Translated as “having one hundred roots” and also referred to as meaning “having one hundred husbands”). ಗಂಡಂದಿರ ಪ್ರಸ್ತಾಪ ಹೇಗೆ ಬಂತೋ ಗೊತ್ತಿಲ್ಲ. ಭಾರತೀಯರೆಲ್ಲರೂ ಗಿಡವು ಎದೆಹಾಲು ವರ್ಧಕವಾದ್ದರಿಂದ ಇದನ್ನು ಪರ್ಯಾಯ ತಾಯಿಯೆಂದೇ ನೋಡಿದ್ದಾರೆ; ವೆಂಕಟ್ರಾಮರೂ ನೂರಾರು ಗಡ್ಡೆಗಳಾಗಿ ಹಬ್ಬಿ ಬೆಳೆಯುವಂಥದ್ದು ಎಂಬರ್ಥದಲ್ಲಿ ಬರೆದಿದ್ದಾರೆ.
) ಕಲ್ಬಾಗೆ ಎಂಬ ಕಲ್ಲಿನಂಥ ಗಟ್ಟಿ ಮರಕ್ಕೆ ವೈಜ್ಞಾನಿಕ ಹೆಸರು albizzia lebbek (ಹೆಚ್ಚಿನಂಶ ಲೆಬೆಕ್, ಅಲ್ಬಿಝಿಯಾ ಕಲ್ಬಾಗೆ ಅಂತೂ ಅಲ್ಲ). ಕಲ್ಬಾಗೆ ಮರವನ್ನು ಸಾಮಿಲ್ಲಿನಲ್ಲಿ ಕತ್ತರಿಸುವಾಗ ನಾನು ಮಿಲ್ಲಿನ ಚಲಿಸುವ ಕೈಯ ಮೇಲೊಮ್ಮೆ ನಿಂತಿದ್ದೇನೆ. ಬೇರೆಲ್ಲ ಮರವನ್ನು ಅದು ಸರಾಗವಾಗಿ ಕತ್ತರಿಸಿದರೆ, ಕಲ್ಬಾಗೆಯನ್ನು ಕತ್ತರಿಸುವಾಗ ನನ್ನಿಂದ ಸಾಧ್ಯವಿಲ್ಲವೆಂದು ಗಡಗಡ ನಡುಗುತ್ತಿರುತ್ತದೆ. ‘ಕಲ್ಬಾಗೆಎನ್ನುವ ಹೆಸರು ರೀತಿ ಅನ್ವರ್ಥನಾಮ. ಆದರೆ ವೈಜ್ಞಾನಿಕ ನಾಮವು ಪ್ರಾಯೋಗಿಕ ಸೂಕ್ಷ್ಮವನ್ನು ಹೇಳದು. ಅದು ಅದರ ತಪ್ಪಲ್ಲ ಅದರ ಮಿತಿ. ಆದ್ದರಿಂದ ಸ್ಥಳೀಯ ಹೆಸರು, ದೃಷ್ಟಿಕೋನ, ಆಯಾಯ ಊರಿಗೆ ಹೊಂದಿಕೊಂಡ ಉಪಯೋಗ ಬಹುಮುಖ್ಯ - ವೆಂಕಟ್ರಾಮರ ಮಹತ್ವ, ತಜ್ಞತೆ ಇಲ್ಲಿದೆ ಎಂದು ನನಗನಿಸುತ್ತದೆ. 

ವೆಂಕಟ್ರಾಮರ ಜ್ಞಾನ ಸಮುದ್ರ ಮಟ್ಟದಂತೆ ಎಲ್ಲೆಡೆ ಒಂದೇ ರೀತಿ ಮಟ್ಟ ಕಾಯ್ದು ಕೊಳ್ಳುವ ಆಧುನಿಕ ಜ್ಞಾನ ಅಲ್ಲ. ಅವರದು ಪ್ರಾಯೋಗಿಕ ಮತ್ತುಸ್ಥಳೀಯಕಣ್ಣುಗಳಿಂದ ನೋಡಿದ ವಿಸ್ತಾರ ಜ್ಞಾನ. ಉದಾಹರಣೆಗೆ ಪೊಲಿ ಬಳ್ಳಿ (lygodium flexuosum ಎಂಬ ವೈಜ್ಞಾನಿಕ ಹೆಸರಿನ ಒಂದು ಬಳ್ಳಿ ಝರಿಗಿಡ) ಎಂಬ ಬಳ್ಳಿಯು ಭತ್ತ ಕೊಯ್ದು ಮನೆ ತುಂಬಿಸಿ ಕೊಳ್ಳುವಾಗ ಅದನ್ನು ಕಟ್ಟಲು ಉಪಯೋಗಿಸುವಂತಹುದು. ‘ಪೊಲ್ಸುಎಂದರೆ ತುಳುವಿನಲ್ಲಿಅದೃಷ್ಟಅಂದರೆಲಕ್ಷ್ಮಿಎಂಬ ಅರ್ಥವಿದೆ  ಎಂದವರು ಬರೆದಿದ್ದಾರೆ (ಅವರು ಬರೆದ ಮೇಲೆ ನನಗೆ ಹೊಳೆದದ್ದು, ‘ಆಯೆನ ಪೊಲ್ಸು ಮಾರಾಯಾನಾನೇ ಎಷ್ಟೋ ಬಾರಿ ಇತರರು ಹೇಳುವುದನ್ನು ಕೇಳಿದ್ದೇನೆ). ಭತ್ತವನ್ನು (ಅಂದರೆ ಧಾನ್ಯವೆಂಬ ಸಂಪತ್ತನ್ನು) ಕಟ್ಟುವ, ಮನೆಯೊಳಗೆ ತರುವ ಬಳ್ಳಿಯು ಪೊಲಿ ಬಳ್ಳಿ ಎಂದು ಅವರು ವಿವರಿಸಿದ್ದು ಕಾವ್ಯದಂತೆ ಇದೆ!!. ಇದನ್ನೊಮ್ಮೆ ಕೇಳಿದರೆ ಯಾರೂ ಮರೆಯಲಾರರು. ಅರ್ಥ ಸಂಬಂಧ ಅವರು ಬರೆದ ಮೇಲೆಯೇ ತಿಳಿಯಿತು.
ಅವರು ಬಾಳೆಗಿಡವನ್ನು, ಕಹಿಬೇವನ್ನು ಹೊಗಳಿದ್ದನ್ನು ಓದುಗರು ಓದಿಯೇ ಅನುಭವಿಸಬೇಕು. ಕ್ಲಿಷ್ಟ ವೈಜ್ಞಾನಿಕ ವಿವರಣೆಯನ್ನು ಅವರು ಸರಳಗೊಳಿಸುವ ರೀತಿ ಅನನ್ಯ. ಗುಂಪೆ ಇಣಿಲು ಗಿಡ (strobilanthus ixiocephala) ಎಂಬ ನೀಲಕುರುಂಜಿಯ ಸಹೋದರಿಯು ಕಾಡಿನೊಳಗೆ ಗುಂಪಾಗಿ ಒಂದೆರಡು ಮೂರು ಸೆಂಟ್ಸ್ ಜಾಗದಲ್ಲಿ ಬೇರೆ ಯಾವುದೇ ಗಿಡವನ್ನು ಬೆಳೆಯಗೊಡದಂತೆ ಬೆಳೆಯುವುದುಂಟು(ಅದರಷ್ಟಕ್ಕೆ ಬೆಳೆಯಬಿಟ್ಟಿರುವಲ್ಲಿ). ಇದನ್ನು ದೈತೋಟರುಅಲ್ಲಲ್ಲಿ ಸಸ್ಯಗಳ ಹೊಲಎಂದು ಬರೆದಿದ್ದಾರೆ. ‘ಹಸುಗಳಿಗೆ ತೀನಿಎಂಬ ಅವರ ಉಪಯೋಗ ಎಷ್ಟು ಮುದ್ದಾಗಿದೆ. ಮುಟ್ಟಿದರೆ ಕೈಗೆ ತಗಲುವ ಎಣ್ಣೆಯಂಶ, ಸೂಸುವ ಪರಿಮಳ, ಗಿಡ/ಹೂ/ಕಾಯಿಗಳನ್ನು ಕಂಡಾಗ ನೆನಪಿಗೆ ಬರುವ ಇತರೆ ಆಕಾರಗಳ ಹೋಲಿಕೆ - ಹೀಗೆ ಅವರ ವಿವರಣೆ ಅವರದ್ದೇ ಆಗಿದೆ ಮತ್ತು ಹೊಸತಾಗಿದೆ; ಅದು ಶತಮಾನಗಳ ಸ್ಥಳೀಯ ಮತ್ತು ಶಾಸ್ತ್ರ ಜ್ಞಾನದ ಗೊಬ್ಬರದಲ್ಲಿ (ಹ್ಯೂಮಸ್) ನಲ್ಲಿ ವಿಫುಲವಾಗಿ ಬೆಳೆದಿದೆ

[ಈ ಪುಸ್ತಕದಲ್ಲಿಸಹಸ್ರಾರ್ಧ ವೃಕ್ಷಗಳ ವರ್ಣನೆಪುಸ್ತಕದಲ್ಲಿದ್ದಂತಹ ಪರಿವಿಡಿ ಇಲ್ಲದಿರುವುದು ಪುಸ್ತಕದ ಸಂಪಾದಕೀಯ ಕೆಲಸದ ಮಟ್ಟಿಗೆ ಕೊರತೆಯೆಂದು ನನ್ನ ಅಭಿಪ್ರಾಯ. ಇರುವ ಪರಿವಿಡಿಗಳೊಂದಿಗೆ ಎಲ್ಲಾ ಭಾಷೆಗಳಿಗೆ, ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ಪರಿವಿಡಿಗಳು ಅಗತ್ಯವಾಗಿದ್ದವು. ಪರಿವಿಡಿ ಹೇಗಿರಬೇಕೆನ್ನುವುದಕ್ಕೆಸಹಸ್ರಾರ್ಧ ವೃಕ್ಷಗಳ ವರ್ಣನೆಯೇ ಪರಿವಿಡಿ.]

ಅವರಲ್ಲಿ ನಾನು ಕಂಡ ಜೀವನಮೌಲ್ಯಗಳು 

ಹೊಟ್ಟೆ ಸಮಸ್ಯೆಯನ್ನೇ ಮೊದಲು ಗುರುತಿಸಿ, ಪರಿಹರಿಸಿ ಮತ್ತೆ ಇತರೆ ಸಮಸ್ಯೆ ಗಳನ್ನು ಪರಿಹರಿಸುವುದು ಅವರ ಕ್ರಮವೆಂಬುದು ಅವರನ್ನು ತಿಳಿದವರಿಗೆ ತಿಳಿದಿರುವ ಮಾಹಿತಿ. ನನಗಿರುವ ಅಲ್ಪ ವೈದ್ಯಕೀಯ ತಿಳಿವಿನೊಂದಿಗೆ ಅದನ್ನು ನಾನು ಧಾರಾಳವಾಗಿ ಹೊಗಳಬಯಸುತ್ತೇನೆ. ಅವರ ಜೀವನಕ್ರಮ ಒಂದು ಆದರ್ಶ. ದುಡ್ಡಿನಿಂದ ಕೆಟ್ಟುಹೋಗಿದೆ, ಅದು ಹಾಳಾಗಿದೆ, ಇದು ಹಾಳಾಗಿದೆ ಎಂದೆಲ್ಲ ನಾವು ವಿಮರ್ಶೆ ಮಾಡುವಾಗ, ಹಾಗಾದರೆ ಸರಿಯಾದುದು ಎಲ್ಲಿದೆ? ಸರಿಯಾಗಿರುವುದು ಹೇಗೆ ಎಂಬುದಕ್ಕೆ ಜೀವಂತ ಮಾದರಿಯಾಗಿ ಅವರಿದ್ದರು ಎನ್ನಬಹುದೇನೋ. ಅವರ ಜೀವನಕ್ರಮವನ್ನು ಉದಾಹರಿಸಿ ಆದರ್ಶಗಳು ಅನುಸರಣೆಯಲ್ಲಿ ಸಾಧ್ಯವಿದೆ ಎಂದು ಕಂಡುಕೊಳ್ಳಬಹುದಾಗಿದೆ ಮತ್ತು ಆದಕಾರಣ (ಅಂಥವರೊಬ್ಬರು ಇದ್ದುದರಿಂದ) ಬಗ್ಗೆ ನಮಗೆ ನಾವೇ ಮತ್ತು ಇತರರಿಗೆ ಹೇಳಲು ಸಾಧ್ಯವಾಗಿದೆ. ಅಂಥವರು ಇಲ್ಲದಿದ್ದರೆಅದು ಅಪ್ರಾಯೋಗಿಕ’, ‘ಅದು ಈಗ ಸಾಧ್ಯವಿಲ್ಲಎಂದು ಆದರ್ಶಗಳನ್ನು ತಳ್ಳಿಹಾಕಬೇಕಾಗುತ್ತದೆ. ಅವರನ್ನು ಹೊಗಳಿದಷ್ಟು ಸುಲಭವಾಗಿ ಅವರಂತೆ ನಡೆಯಲಾಗದು ಎನ್ನುವುದು ಅಷ್ಟೇ ನಿಜ. ಕಿರುಬ್ರಾಹ್ಮಿಯಿಂದಷ್ಟೇ ಮಾಡಬಹುದಾಗಿದ್ದ ಔಷಧಿಯೊಂದನ್ನು ತಕ್ಷಣ ಮಾಡಿಕೊಡಲಾಗದೆ (ಮೂಲಿಕೆಯಿಲ್ಲದುದರಿಂದ), ರೋಗಿಯ ಕಡೆಯವರಿಗೆ ಮೂಲಿಕೆ ಸಂಗ್ರಹಿಸಿ ಮಾಡಿಕೊಡುತ್ತೇನೆಂದು ಮಾತುಕೊಟ್ಟು, ಐದಾರು ತಿಂಗಳುಗಳ ಬಳಿಕ ಮಾಡಿಯೂ ಕೊಟ್ಟು ಸಮಸ್ಯೆಯನ್ನು ಪರಿಹರಿಸಿದರ ಬಗ್ಗೆ ನನಗೆ (ಬಹುಶ:) ಪಡ್ರೆಯವರು ಒಮ್ಮೆ ಹೇಳಿದ್ದರು. ಉಚಿತ ಸೇವೆ ಸಲ್ಲಿಸುವ ವೈದ್ಯನೊಬ್ಬಹೀಗೂ ಮಾಡಬಹುದುಎಂಬುದು ಮುಂದಿನ ಜನಾಂಗಕ್ಕೆ ಕಟ್ಟುಕತೆಯೇ ಆಗಿಬಿಡುವ ಸಂಶಯವಿದೆ.  

ಒಬ್ಬರು ದೊಡ್ಡ ನಗರದಲ್ಲಿರುವ, ದೊಡ್ಡ ಆಯುರ್ವೇದ ಡಾಕ್ಟರೊಬ್ಬರೊಡನೆ ಒಮ್ಮೆ ಮಾತನಾಡುತ್ತಿದ್ದಾಗ ಅವರಿಗೆ ತನ್ನ ಕಣ್ಣೆದುರಿಗೇ ಇದ್ದಕಾಲೀ ಮುಸಲಿ(curculingo orchioides)’ ಯನ್ನು ಗುರುತು ಹಿಡಿಯಲಾಗಲಿಲ್ಲ(ಅದು ಸಫೇದ್ ಮುಸಲಿಯೋ ಕಾಲಿ ಮುಸಲಿಯೋ ಎಂದು ತಿಳಿಯುವುದು ನನ್ನ ಉದ್ದೇಶವಾಗಿತ್ತು, ಅವರ ಜ್ಞಾನವನ್ನು ಪರೀಕ್ಷಿಸುವುದಲ್ಲ). ಆಯುರ್ವೇದ (ಮತ್ತು ಎಲ್ಲ ಇತರೆ) ಔಷಧಿಗಳು ಬಾಟಲಿಗಳಲ್ಲಿ, ಮಾತ್ರೆಗಳಲ್ಲಿ ಬರುತ್ತಿರುವ ದಿನಗಳಲ್ಲಿ ವೈದ್ಯರಿಗೂ, ಜನಸಾಮಾನ್ಯರಿಗೂ ಕವಿಯುತ್ತಿರುವ ಅಜ್ಞಾನವು ನಿರೀಕ್ಷಿತವೇ ಆಗಿದೆ (ಆಹಾರ ಕ್ಷೇತ್ರದಲ್ಲಿ ಇದೇ disconnect ನಮ್ಮನ್ನಾಗಲೇ ಮುತ್ತಿಕೊಂಡಿದೆ). ಇಂಥದ್ದರಲ್ಲಿ ಆಯಾಯ ಬಿಡಿ ಮೂಲಿಕೆಗಳನ್ನು ತೋಟದಿಂದ ಸಂಗ್ರಹಿಸಿ ಕುದಿಸಿ, ನಮ್ಮ ಔಷಧಿಯನ್ನು ನಾವೇ ತಯಾರಿಸಲು ಕಲಿಸುವ ದೈತೋಟರ ಕ್ರಮ ಒಂದು ರೀತಿಯಲ್ಲಿ ಮದ್ದಿನೊಂದಿಗೆ ಮದ್ದಿನ ರಹಸ್ಯವನ್ನೂ ಹೇಳಿಕೊಟ್ಟಂತೆ. ಇದನ್ನು ಇಂದಿನ ಆಧುನಿಕ ಜಗತ್ತು ಒಮ್ಮೆ ಸಂಪೂರ್ಣ ಮರೆತು ‘Open source’ ಎಂಬ ಹೆಸರಿನಲ್ಲಿಒಂದಿಷ್ಟುಮರು ಆವಿಷ್ಕರಿಸಿಕೊಂಡಿದೆ - ಅದರ ಮೌಲ್ಯವು ಕಾಡುತ್ತಿರುವುದನ್ನು ಕಡೆಗಣಿಸಲಾಗದೆ! ಒಬ್ಬ ಸಜ್ಜನನು ಇನ್ನೊಬ್ಬನನ್ನು ಗುರುತಿಸಬಲ್ಲ ಎನ್ನುವಂತೆ ಅವರು ಡಾ|ಚಕ್ರಪಾಣಿಯವರ ಬಗ್ಗೆ ನನ್ನಲ್ಲಿ ಆಡಿದ ಸನ್ಮಾತುಗಳು ಅವರ ಮತ್ತು ಚಕ್ರಪಾಣಿಯವರ ಸಜ್ಜನಿಕೆಗೆ ಪ್ರಮಾಣವಾಗಿದೆ.

ನನಗೆ ಅವರ ಹೆಚ್ಚು ಪರಿಚಯವಿರಲಿಲ್ಲ. ಎಷ್ಟೆಂದರೆ ಅವರಿಗೆ ನನ್ನನ್ನು ಕಂಡರೆ ವಸಂತಎಂದು ಗುರುತಿಸುವಷ್ಟೂ ಇರಲಿಲ್ಲ. ಅವರನ್ನು ಇನ್ನಷ್ಟು ಬಲ್ಲವರು ನಮಗೆ ಅವರೊಂದಿಗಿನ ಅನುಭವವನ್ನು ತಿಳಿಸಿಯಾರು ಎಂಬುದು ನನ್ನ ಮುಂದಿನ ದಿನಗಳ ಬಗೆಗಿನ ನಿರೀಕ್ಷೆ. ಅವರಲ್ಲಿ ಶಿಕ್ಷಾರ್ಥಿಗಳಾಗಿ ಕಲಿತವರು ಅವರ ಮೌಲ್ಯಗಳನ್ನು ರೂಢಿಸಿಕೊಂಡು ಅವರ ಪರಂಪರೆಯನ್ನು ಮುಂದುವರೆಸಲಿ ಎಂಬುದು ಸಣ್ಣ ಹಾರೈಕೆ. ಅವರಿಗೆ ಅವರು ನಂಬಿದ ದೇವರು ಸದ್ಗತಿ ನೀಡಲಿ. ಅವರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದ್ದ, ಕೊನೆಯ ವರ್ಷಗಳಲ್ಲಿ ಅವರಿಗೆ 'ಕಿವಿ'ಯಾಗಿಯೂ ಇದ್ದ, ಸ್ವತ: ವೈದ್ಯೆಯಾದ ಅವರ ಶ್ರೀಮತಿಯವರಿಗೆ ಮುಂದಿನ ದಿನಗಳು ಸಹ್ಯವಾಗಲಿ

Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!