ಹೊಲವ ಮೇಯದ ಹಳೆಯ ಬೇಲಿಗಳು
ಪೆಟ್ರೋಲು ಮತ್ತು ರಸ್ತೆಗಳು ಇಲ್ಲದ ಕಾಲದಲ್ಲಿ ಜನರಿಗೆ ಜೀವನ ಶ್ರಮದಾಯಕವಾಗಿದ್ದು, ಆ ಕಾ ರಣದಿಂದ ಕಷ್ಟಕರವಾಗಿದ್ದಿರಬಹುದೆನ್ ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಆ ಪರಿಸ್ಥಿತಿ ಹಳ್ಳಿಗರಿಗೆ ತಮ್ಮ ಸುತ್ತಮುತ್ತ ಲಭ್ಯ ವಸ್ತುಗಳಿಂದ ಬೇಡಿಕೆಗಳನ್ನು ಈಡೇರಿಸುವ ಸೃಜನಶೀಲ ಸವಾಲನ್ನು ಒಡ್ಡಿತ್ತು ಎನ್ನುವುದು ನಿಸ್ಸಂಶಯ. ಇದೇ ಕಾರಣದಿಂದ ತಲೆಗೆ ಧರಿಸುವ ಟೊಪ್ಪಿಗೆ, ಮಳೆಯಿಂದ ರಕ್ಷಿಸುವ ಗೊರಬೆ, ಮನೆಕಟ್ಟುವ ಕಚ್ಚಾಸಾಮಾಗ್ರಿಗಳು, ಉಡುಗೆ, ತೊಡುಗೆ, ಆಹಾರ, ಪಾತ್ರೆ ಪಗಡಿ ಇವೆಲ್ಲ ಪ್ರತಿ ನೂರಿನ್ನೂರು ಕಿಲೋಮೀಟರಿಗೆ ಬೇರೆ ಆಕಾರ, ಬೇರೆ ಕಚ್ಚಾಸಾಮಾಗ್ರಿಗಳನ್ನು ಅವಲಂಬಿಸಿ ಅಲ್ಲಲ್ಲಿಗೆ ಹೊಂದಿಕೊಂಡಿರುವುದನ್ನು ಕಾಣುತ್ತಿದ್ದೆವು. ಈ ’ಸ್ಥಳೀಯತೆ’ ಅಂ ದಿನ ಜನಜೀವನವನ್ನು ಪ್ಲಾಸ್ಟಿಕ್ ನಂಥ ಕೆಟ್ಟ ಪದಾರ್ಥಗಳಿಂದ ದೂರವಿಟ್ಟು ಹಿಂ ದಿನವರಿಗೆ ಆರೋಗ್ಯ, ಆಯುಸ್ಸು ಎರಡನ್ ನೂ ಕೊಟ್ಟಿದ್ದದ್ದು ಹೌದು.
ಭೂಮಿಯ ಗಡಿಗುರುತಿಸಲು, ರಕ್ಷಣೆಗೆ ಹಾ ಕುವ ಬೇಲಿಗಳದ್ದು ಇದೇ ಕಥೆ. ನಮ್ಮ ಭೂಮಿಯಲ್ಲೊಂದು ಮನುಷ್ಯರ ಓಡಾಟ ಬಹಳ ಸೀಮಿತವಾಗಿರುವ ಗುಡ್ಡ ಇದೆ. ಅದರಲ್ಲಿ ಮುರ (ಲಾಟರೈಟ್) ಕಲ್ಲುಗಳು ವಿಚಿತ್ರವಾಗಿ ಅಲ್ಲಲ್ಲಿ ಎದ್ದು ತಮ್ಮ ಸೃಷ್ಟಿ ಹೇಗಾಯಿತು ಎನ್ನುವ ರಹಸ್ಯವನ್ನು ನಮಗೆ ತಿಳಿಯಗೊಡದಂತೆ ಮಲಗಿಕೊಂಡಿವೆ. ಈ ಬೆಟ್ಟದ ನೆತ್ತಿಯಲ್ಲಿ ನಮ್ಮ ಗಡಿರೇಖೆ ಹಾದುಹೋಗುತ್ತದೆ. ಮುರಕಲ್ಲಿನ ಉಂಡೆಗಳನ್ನು ಜೋಡಿಸಿ ಬರಿಯ ಗುರುತ್ವಬಲದಿಂದ ನಿಲ್ಲಿಸಿ ಮಾಡಿದ ಗೋಡೆಯೊಂದು ಇಲ್ಲಿ ನಮ್ಮ ಗಡಿಯನ್ನು ಕಾಯುತ್ತಿದೆ. ಇದನ್ನು ನನ್ನ ಸಣ್ಣಜ್ಜ ಹಿಂದೆ ಮಾಡಿಸಿದ್ದರಂತೆ. ಸುಮಾರು ಅರುವತ್ತು ವರ್ಷ ಹಿಂದೆ ಇರಬಹುದು. ನನ್ನ ತಂದೆಗೂ ನೆನಪಿಲ್ಲ.
ಮಣ್ಣು, ಕಲ್ಲು, ನೀರು, ಮರಳು ಮತ್ತು ಶ್ರಮಿಸುವ ಶಕ್ತಿ - ಹೀಗೆ ಎಲ್ಲವಕ್ಕೂ ಕೊರತೆಯಾಗಿರುವ ಈ ಕಾಲದಲ್ಲಿ ನನಗೆ ಈ ಪಾಗಾರ ವಿಶೇಷವೆನಿಸುತ್ತದೆ. ಅದೇ ಗುಡ್ಡದ ಕಲ್ಲುಗಳನ್ನು ಹೆಕ್ಕಿ ಅದರ ಗೋಡೆ ಕಟ್ಟಲಾಗಿದೆ. ಬಂಧಕ್ಕೆ ಸಿಮೆಂಟು ಇತ್ಯಾದಿಗಳ ಬಳಕೆ ಇಲ್ಲ. ಬಹುಶ: ಸುಮ್ಮನೆ ಇಟ್ಟಿದ್ದಾರೆ ಅಷ್ಟೆ! ಕಲ್ಲಿನ ಮಧ್ಯೆಯೆಲ್ಲ ಹುಲ್ಲು, ಬೇರು ಬೆಳೆದು ಈಗ ಈ ಗೋಡೆಗೆ ಜೀವ ಬಂದಿದೆ! ಕಲ್ಲಶ್ವತ್ಥದ ಪುಟ್ಟ ಮರಗಳೆ ಇದರ ಮೇಲೆ ಬೆಳೆದಿವೆ. ಯಾವುದೇ ನಿಶ್ಚಿತ ಆಕಾರವಿಲ್ಲದ ಈ ಕಲ್ಲುಗಳನ್ನು ಆಯತಕ್ಕೆ ಹೊಂದುವಂತೆ ಜೋಡಿಸಿದಲ್ಲಿ ಒಂದು ಕಲೆ ಇದೆ. ಆ ಕಲಾವಿದನಿಗೆ ರಟ್ಟೆಯಲ್ಲಿ ಅಮಿತ ಶಕ್ತಿ, ಉರಿಬಿಸಿಲಿನಲ್ಲಿ ಬೆವರುಕ್ಕಿಸಿ ದುಡಿವ ಛಲ ಇದ್ದಿರಬೇಕು. ಇಷ್ಟು ವರ್ಷಗಳಲ್ಲಿ ಸುಣ್ಣಬಣ್ಣ, ನಿರ್ವಹಣೆ ಯಾವುದೂ ಇಲ್ಲ! ಅಂತಹ ನಯನಾಜೂಕಿನ ಅಲಂಕಾರವನ್ನು ಬೇಕೆಂದರೂ ಮಾಡಲಾಗದ ಒರಟುತನ, ಮತ್ತು ಅದರೊಳಗೊಂದು ನುಣುಪು ಸೌಂದರ್ಯ ಈ ಪಾಗಾರಕ್ಕಿದೆ. ಹಾಗೆ ನೋಡಿದರೆ ಇದೊಂದು ಗೋಡೆಯೇ ಅಲ್ಲ. ಇದರ ಸೆರೆ(gap)ಯಿಂದ ಇಲಿಹಾವುಗಳೆಲ್ಲ ಹಾದು ಹೋದಾವು; ಇದೊಂದು ಜೀವಿಗಳ ಆವಾಸ, ನೀರುಗಾಳಿಗಳಿಗೆ ಹಾದುಹೋಗುವ ಮಾಧ್ಯಮ. ಮನುಷ್ಯನ ಮಟ್ಟಿಗೆ ಇದೊಂದು ತಡೆ ಅಷ್ಟೆ. ಅದ್ಭುತವಲ್ಲವೆ? ಇದರ ಸ್ಥಳೀಯತೆ, ಶಾಶ್ವತತೆ, ಮತ್ತು ಇದು ಇಂದಿನ ಕಾಲಕ್ಕೆ ನೀಡುವ ಮೌಲ್ಯಗಳು?
ಅಡಿಕೆ ತೋಟಕ್ಕೆ ಇನ್ನಷ್ಟು ಸರಳವಾದ, ಪರಿಣಾಮಕಾರಿಯಾಗಿ ಬೇಲಿಹಾಕುವ ಒಂದು ಕ್ರಮವಿದೆ. ಮುಳ್ಳು ಬಿದಿರಿನ ಮೆಳೆ ಯಿಂದ ಸಪೂರದ ಅಡ್ಡಗೆಲ್ಲುಗಳನ್ನು ಕೊ ಯ್ದು ತಂದು, ಅವುಗಳನ್ನು ಬೇಲಿಗೆ ಹೊ ದೆಸಿ, ಮೇಲಿಂದ ಬಂಧಕ್ಕೆ ಅಡಿಕೆ ಮರದ ಸಲಿಕೆ ಉದ್ದಕ್ಕೆ ಇಟ್ಟು ಅಲ್ಲಲ್ಲಿ ಸರಿಗೆಯ ಕಟ್ಟು ಹಾಕುವುದು. ಇಡೀ ಬೇ ಲಿಯ ಆಧಾರಕ್ಕೆ ಹತ್ತು, ಹದಿನೈದಡಿ ದೂ ರಕ್ಕೆ ಒಂದೊಂದು ಗೂಟದ ಆಧಾರ. ಪ್ರತೀ ವರ್ಷ, ಎರಡು ವರ್ಷಕ್ಕೊಮ್ಮೆ ಮೇಲಿಂ ದ ಮತ್ತೆ ಮುಳ್ಳು ಹೊದೆಸಿ ನಿರ್ವಹಣೆ ಮಾಡುವುದು. ಈ ಬೇಲಿ ತೋಡು, ನೀರಿನ ಕಾಲುವೆಗಳನ್ನು ಹಾದುಹೋಗುವಲ್ಲಿ ಮಳೆ ಗಾಲದ ರಭಸಕ್ಕೆ ಇತರೆ ಕಸಕಡ್ಡಿಯ ಜೊ ತೆ ತೆಂಗಿನಕಾಯಿ ಸಿಕ್ಕಿ ಬಿದ್ದು ಅದ ನ್ನು ಸಂಗ್ರಹಿಸುವುದು, ಕಳೆದು ಹೋ ದದ್ದಕ್ಕಾಗಿ ಪರಿತಪಿಸುವುದು ಹಳ್ಳಿ ಮನೆಗಳಲ್ಲಿ ವಾಡಿಕೆ.
ಕೃಷಿ ಇಲ್ಲದ, ಗುಡ್ಡದಲ್ಲಿ ಗಡಿಗುರು ತಿಸಲು ಹಿಂದೆ ಮಾಡುತ್ತಿದ್ದ ಇನ್ನೊಂದು ಪಾಗಾರ ಹೆಚ್ಚು ಶ್ರಮ ಬೇಡುವಂಥದ್ದು. ಸಪಾಟಾದ ನೆಲದಲ್ಲಿ ಒಂದೆಡೆ ಆಳದ ಚರಂಡಿ ತೋಡಿ, ಸಿಕ್ಕಿದ ಮಣ್ಣನ್ನು ಪಕ್ಕಕ್ಕೆ ರಾಶಿಹಾಕಿ ನಿರ್ಮಿಸುವ ಕಂದಕ ಅದು. ಮೊದಲ ಒಂದೆರಡು ವರ್ಷ ಇದಕ್ಕೆ ಸ್ವಲ್ಪ ಜಾಗ್ರತೆಯ ಆರೈಕೆ ಬೇಕು. ಇದನ್ನು ಮಾಡಿದ ತಕ್ಷಣ ಇದರ ಮೇಲೆ ಭೂತಾಳೆ (ಕತ್ತಾಳೆ ಅಥವ ದಡ್ಡಿ) ಎನ್ನುವ ಮುಳ್ಳಿನಜಾತಿಯ ಎಳೆಗಿಡಗಳನ್ನು ನೆಡುವುದು ಕ್ರಮ. ಇದೊಮ್ಮೆ ಗಟ್ಟಿಯಾಗಿ ಬೇರೂರುವವರೆಗೆ ಹೊಸ ಗೋಡೆ ಜರಿದು ಬೀಳುವ ಅಪಾಯ ಇದೆ ಅಷ್ಟೆ. ಮತ್ತೆ ಈ ದಡ್ಡಿ ಗಿಡದ ವಂಶ ನೂರುಸಾವಿರವಾಗಿ ಪಾಗಾರದ ತುಂಬೆಲ್ಲ ಹರಡಿ ಅಬೇಧ್ಯವಾಗುತ್ತದೆ. ಭೂತಾಳೆ ಸ್ವಲ್ಪ ಮಟ್ಟಿಗೆ ಅನಾನಸಿನಂತೆ. ಬುಡದಲ್ಲಿ ಕಂದು(ಪಿಳ್ಳೆ)ಯ ಮೂಲಕ (ನಿರ್ಲಿಂಗ ವಿಧಾನ), ದೊಡ್ಡ ಹೂಗುಚ್ಛವಾಗಿ ಬೀಜ ಬಿದ್ದು ಸಾವಿರಾರು ಗಿಡವಾಗಿ ಲೈಂಗಿಕ ವಿಧಾನದಿಂದ ವಂಶಾಭಿವೃದ್ಧಿ ಮಾಡುತ್ತದೆ. ಅಷ್ಟಲ್ಲದೆ ಹೂಗುಚ್ಛದ ಮೇಲೆ ಸಾವಿರಾರು ತದ್ರೂಪಿ ಮರಿಗಳನ್ನು (ನಿರ್ಲಿಂಗ ವಿಧಾನ) ಮಾಡಿ ಭೂಮಿ ಸೇರಿಸುವುದು ಕತ್ತಾಳೆಯ ಇನ್ನೊಂದು ವಿಧಾನ. ಈ ಗಿಡದ ಎಲೆಯಿಂದ ನಾರು ತೆಗೆದು ಹಗ್ಗ ಹೊಸೆಯಬಹುದು. ಹೂಗುಚ್ಚದ ದಂಟನ್ನು ಮಡಕೆಯನ್ನು ಹೆಗಲ ಮೇಲೆ ಹೊತ್ತು ಮಾರುವವರು ಮಡಿಕೆ ಕಟ್ಟುವ ದಂಟಾಗಿ ಉಪಯೋಗಿಸುತ್ತಾರೆ ಎಂದು ಕೇಳಿದ್ದೇನೆ. ಈ ದಂಟು ಸ್ವಲ್ಪ ‘action’ ಕೊಡುವುದರಿಂದ ಶಾಕ್ ಅಬ್ಸಾರ್ಬರ್ ನಂತೆ ಕೆಲಸ ಮಾಡುವುದಂತೆ. ಈಗ ಮಡಿಕೆಯನ್ನು ಹೆಗಲ ಮೇಲೆ ಹೊತ್ತು ಮನೆಮನೆಗೆ ಮಾರುವುದು ಅಳಿವಿನಂಚಿನಲ್ಲಿರುವ ಉದ್ಯೋಗ. ಅದರೊಂದಿಗೆ ಕತ್ತಾಳೆ ದಂಟಿನ ಬಳಕೆ ಅಂತ್ಯಕಾಣುವುದು ಖಂಡಿತ. ಕುಡಿದು ಸಂಭ್ರಮಿಸುವ ’ಟಕೀಲಾ’ ಎನ್ನುವ ಮಾದಕ ಪೇಯವನ್ನು ಭೂತಾಳೆಯ ವಿದೇಶಿ ಜಾತಿಯೊಂದರಿಂದ ಮಾಡುತ್ತಾರೆ. ಹೋದ ವರ್ಷ ಮಳೆಗಾಲ ಕಳೆಯುತ್ತಿದ್ದಂತೆ ನಾವೊಂದು ಹೊಸ ಅಗಳು (ಪಾಗಾರ) ಮಾಡಿದ್ದೆವು. ಆಗ ನಾನು ಕತ್ತಾಳೆ ಮರಿಗಳನ್ನು ಸಂಗ್ರಹ ಮಾಡಿ ಅದರ ಮೇಲೆ ಸುಮ್ಮನೆ ಉದುರಿಸಿದ್ದೆ. ಅವು ಈಗ ಕಷ್ಟಪಟ್ಟು ಜೀವ ಹಿಡಿದು ಈ ಮಳೆಗಾಲದ ತುಂತುರು ಸಿಂಚನಕ್ಕೆ ಕಾಯುತ್ತಿವೆ.
ಕತ್ತಾಳೆಯ ಪುನರುತ್ಪತ್ತಿ ಬಲು ಸೊಗಸು.
ಹಿಡಿಯಷ್ಟಿದ್ದ ಕತ್ತಾಳೆ
ನೋಡ್ತಾ ನೋಡ್ತಾ ಬೆಳೆದಾಳೆ
ಹತ್ತುವರ್ಷ ಆಗೋಕು ಮೊದಲೇನೆ
ಎತ್ರಕ್ಕೆ ಹೂಗುಚ್ಛ ಬಿರಿದಾಳೆ |
ಹೂಬಿಟ್ಟು ಅವ್ಳು ಯೋಚಿಸ್ತಾಳೆ
ಬೀಜ ಬೆಳೆಸಿದ್ರೆ ಟೈಮ್ ವೇಸ್ಟು
ಕೊಡ್ತಾಳೆ ಕಥೆಗೊಂದು ಟ್ವಿಸ್ಟು
ಪುಟ್ಟಪುಟ್ಟ ಮರಿಗಳ್ನೇ ಬೆಳ್ಸೋದು ಬೆಸ್ಟು |
ಅಮ್ಮನಿಗೆ ಆತ್ಕೊಂಡ ಮರಿಗಳ್ನ
ಆಗಸದ ತೊಟ್ಲಲ್ಲಿ ತೂಗ್ತಾಳೆ
ಅಷ್ಟ್ರಲ್ಲಿ ಅಲ್ಲೊಂದು ಪಾರಿವಾಳ
ಗೂಡ್ಕಟ್ಟಿ ಸಂಸಾರ ಮಾಡ್ತಾಳೆ|
ಇಪ್ಪತ್ತು ತಿಂಗ್ಳು ಆಗ್ತಾನು
ಕತ್ತಾಳೆ ಮರಿಗಳ್ನ ಬಿಡ್ತಾಳೆ
ಮಡಿಲಿಂದ ಒಂದೊಂದೇ ಉದುರೋದ್ನ
ಕಣ್ಣಿರು ತುಂಬ್ಕೊಳ್ತ ನೋಡ್ತಾಳೆ |
ಬೆಳಿತಾವೆ ಸುತ್ಮುತ್ಲು ಹಲವೊಂದು
ಬೆಳಗ್ತಾವೆ ದೂರ್ದಲ್ಲಿ ಕೆಲವೊಂದು
ಕತ್ತಾಳೆ ಇದನೆಲ್ಲ ನೋಡ್ತಾಳೆ
ನಗುನಗುತಾ ತನಕಣ್ಣು ಮುಚ್ತಾಳೆ |
(ಇದು Karen R Adams ಎಂಬ ಪಳೆಯುಳಿಕೆ ಸಸ್ಯಶಾಸ್ತ್ ರಿಯೊಬ್ಬ ದಡ್ಡಿಗಿಡದ ಬಗ್ಗೆ ಬರೆದ ಸುಂ ದರ ಗೀತಕಾವ್ಯದ ತಕ್ಕಮಟ್ಟಿನ ಅನುವಾ ದ)
ಕಾಲಕ್ಕೆ ತಕ್ಕಂತೆ ಬದಲಾದ ಬೇಲಿಗಳು
ಗಡಿಯನ್ನು ಗುರುತಿಸುವುದು ವಿಕಸಿತ ಜೀವಜಾತಿಗಳಲ್ಲಿ ವ್ಯಾಪಕವಾಗಿರುವ ಒಂದು ಕ್ರಮ. ಹುಲಿ, ನಾಯಿಯಂಥವು ಮೂತ್ರದ ವಾಸನೆಯಿಂದ ತಮ್ಮ ಬೇಲಿ ಹಾಕುತ್ತವೆ. ತಮ್ಮ ಘರ್ಜನೆ, ಹೋರಾಟದಿಂದ ತಮ್ಮದೇ ಜಾತಿಯ ಇತರ ಪ್ರಾಣಿಗಳನ್ನು ದೂರ ಇರಿಸುವವು ಬಹಳ ಇವೆ. ಆದ್ದರಿಂದ ಗಡಿಯೆಂಬುದು ಮನುಷ್ಯನೊಬ್ಬನ ತಪ್ಪು ಕಲ್ಪನೆ ಎಂದು ಭ್ರಮಿಸಿದರೆ ಅದು ಸರಿಯಾಗಲಾರದು. ಅದು ನಮ್ಮ ಇನ್ಸ್ಟಿಂಕ್ಟ್. ಆದರೆ ಗಡಿ ಗುರುತಿಸುವಂಥ ಜೀವನದ ಸಣ್ಣ ಭಾಗವೊಂದು ಪ್ರಕೃತಿಗೇ ಭಂಜಕವಾಗಿರುವುದು ಮನುಷ್ಯನದೇ ಸಾಧನೆ!
ಈಗಿನ ವೇಗದ ಯುಗದಲ್ಲಿ ಅಲ್ಲಲ್ಲಿನ ಕಲ್ಲು ಹೊಂದಿಸಿ ಬೇಲಿ ಕಟ್ಟುವವರು, ಮಣ್ಣಿನ ಪಾಗಾರವೆಬ್ಬಿಸಿ ದಡ್ಡಿಗಿಡ ನೆಟ್ಟು ಭದ್ರಮಾಡುವವರು ಎಲ್ಲಿದ್ದಾರೆ? ದಶಕಗಳ ಹಿಂದೆಯೇ ಕಲ್ಲಿನ ಕಂಬ ನಿಲ್ಲಿಸಿ ಬಾರ್ಬೆಡ್ ವಯರಿನ ತಂತಿಬೇಲಿಯ ಯುಗ ಸುರುವಾಯಿತು. ನಮ್ಮೂರಿಗೆಲ್ಲ ದೂರದ ಕಾರ್ಕಳದಿಂದ ಕಲ್ಲಿನ ಕಂಬಗಳು ಬರ್ತಾ ಇದ್ದವು. ಕ್ರಮೇಣ ಕಂಬಗಳಿಗೆ ಬೆಲೆ ಬಂದಾಗ ಇವು ಸಪೂರ ಆಗ್ತಾ ಬಂದವು. ಸಬ್ಬಲ್ (ಗುದ್ದಲಿ) ಯ ತಲೆಯಲ್ಲಿ ಒಂದು ಹೊಡೆದರೆ ಮುರಿದು ಬೀಳುವಂತೆ ಆದವು. ಅದೇ ಸಮಯಕ್ಕೆ ಕಲ್ಲಿನ ಕ್ವಾರಿಯಲ್ಲಿ ಗಣಿಗಾರಿಕೆ ಹೆಚ್ಚಿ ಪರಿಸರ ನಾಶದ ರೂಪ ಪಡೆಯಿತು. ತಂತಿಬೇಲಿಗೆ ಬೇಕಿದ್ದ ಕಬ್ಬಿಣ ಎಲ್ಲಿಂದ ಬಂತು ಎನ್ನುವುದು ನಮಗೆ ತಿಳಿಯುತ್ತಿರಲಿಲ್ಲ. ಅದರ ಗಣಿಗಾರಿಕೆ, ಶುದ್ಧೀಕರಣ, ಕಳಪೆ ಕಾಮಗಾರಿಯ ಬೇಗನೆ ತುಕ್ಕುಹಿಡಿಯುವ ಬೇಲಿಯ ತಂತಿಗಳ ಹಿಂದಿನ ಮೋಸದ ಮತ್ತು ವಿನಾಶದ ಕಥೆ ತುಂಬಾ ದೊಡ್ಡದೇ ಇರಬಹುದು. ಬೇಲಿ ಆರೇಳು ವರ್ಷಕ್ಕೆ ಹಾಳಾಗಿ ಹೋಗಲು ಸುರುವಾಯ್ತು. ಕಂಬಗಳು ಸಣ್ಣ ಆಘಾತಕ್ಕೆ ಅಲ್ಲಲ್ಲಿ ಮುರಿದೂ ಬೀಳತೊಡಗಿದವು. ಒಂದು ಹಂತಕ್ಕೆ ಕಲ್ ಲಿನ ಕಂಬಗಳು ಸಿಗುವುದೇ ಕಷ್ಟವಾಗತೊ ಡಗಿತು.
ಜನ ಇನ್ನಷ್ಟು ಅಡ್ಡದಾರಿಗಳನ್ನು ಹಿಡಯಹೊರಟರು. ಕಲ್ಲಿನ ಕಂಬಗಳ ಬದಲಿಗೆ ಕಾಂಕ್ರೀಟ್ ಕಂಬಗಳು, ಕಬ್ಬಿಣದ ತಂತಿಬೇಲಿಯ ಬದಲಿಗೆ ಬಿಸಿಲಿಗೆ ಮಣಿಯದ, ತುಕ್ಕು ಹಿಡಿಯದ ಪ್ಲಾಸ್ಟಿಕ್ ಬಾರ್ಬೆಡ್ ವಯರುಗಳು ಈಗ ಬಂದಿವೆ. ಬೇಸಿಗೆಯಲ್ಲಿ ಹುಲ್ಲಿಗೆ ಬೆಂಕಿಹಿಡಿದರೆ ಪ್ಲಾಸ್ಟಿಕ್ ಬೇಲಿ ಕರಗಿ ನೆಲಕ್ಕೊರಗುತ್ತದೆ. ಕಾಂಕ್ರೀಟ್ ಕಂಬಕ್ಕೆ ಬೇಕಾಗುವ ಮರಳಿನ ಅಲಭ್ಯತೆಯದು ಇನ್ನೊಂದೇ ಕಥೆ. ಮರಳನ್ನು ಇಂಡೋನೇಶಿಯಾದಿಂದ ಆಮದು ಮಾಡಲು ಹೊರಟಿದೆ ಸರಕಾರ!
ಹೀಗೆ ನಮ್ಮ ಬೇಲಿಗಳನ್ನಷ್ಟೇ ಗಮನಿಸಿದರೂ ನಮಗೆ ನಮ್ಮ ಪಾರಿಸರಿಕ ಪತನದ ದಾರಿ ತಿಳಿಯುತ್ತದೆ. ಈಗ ಜೆಸಿಬಿಗಳ ಯುಗ ನಡೆಯುತ್ತಿರುವುದರಿಂದ ಮಣ್ಣಿನ ಅಗಳು (ಬೇಲಿ) ಹಾಕುವ ಕ್ರಮ ಮತ್ತೆ ಕೆಲವು ಕಡೆ ಸುರುವಾಗಿದೆ. ಆದರೆ ಜೆಸಿಬಿ ಅಗಲಕ್ಕೆ ಮಣ್ಣನ್ನು ಸಡಿಲಮಾಡುತ್ತದೆ, ಮನುಷ್ಯನ ಕೈಕೆಲಸದ ಸೊಗಸು ಅದರ ಕೆಲಸಕ್ಕಿಲ್ಲ. ಜೆಸಿಬಿಯಲ್ಲಿ ಮಾಡಿದ ಬೇಲಿಯ ಮೇಲೆ ಕತ್ತಾಳೆ ಮರಿಗಿಡಗಳನ್ನು ಉದುರಿಸುವಷ್ಟು ಈಗ ಭೂಮಾಲೀಕರಿಗೆ ಸಮಯ ಇಲ್ಲದಾಗಿದೆ. ಭೂಮಿಯ ಮೇಲೆ ನಮ್ಮ ಕಾಳಜಿ, ಪ್ರೀತಿ, ಸಂಗೋಪನೆಯಲ್ಲಿ ಗಣನೀಯ ಇಳಿಕೆಯಾಗಿರುವುದಕ್ಕೆ ಇದೊಂದು ಸೂಚಿ. ಈ ಸ್ವಭಾವ ನಮ್ಮೆಲ್ಲ ಉದ್ಯಮಗಳಲ್ಲಿ ಸಾಂಕ್ರಾಮಿಕವಾಗಿರುವುದರಿಂದ ನಿಸರ್ಗದ ಅದದೇ ಮೂಲವಸ್ತುಗಳ ಗಂಭೀರ ಕೊರತೆಯಾಗಿರುವುದೂ ನಮಗೆ ಕಾಣಿಸುತ್ತದೆ. ಈ ಎಲ್ಲ ಅಬದ್ಧಗಳನ್ನು ಪ್ರಶ್ನಿಸುವಂತೆ ನಮ್ಮ ಭೂಮಿಯ ಹಳೆಯ, ಸ್ಥಳೀಯ ಮೂಲವಸ್ತುಗಳಿಂದ ನಿರ್ಮಿತ ಕೆಲವು ಬೇಲಿಗಳು ಇಂದಿಗೂ ನಿಂತಿವೆ...
ಈ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿದೆ, ಸ್ವಲ್ಪ ಕತ್ತರಿ ಪ್ರಯೋಗದೊಂದಿಗೆ.
http://www.udayavani.com/kannada/news/weekly-supplement/221259/old-style-compounds
ಈ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿದೆ, ಸ್ವಲ್ಪ ಕತ್ತರಿ ಪ್ರಯೋಗದೊಂದಿಗೆ.
http://www.udayavani.com/kannada/news/weekly-supplement/221259/old-style-compounds
(ಚಿತ್ರ : ಪುರುಷೋತ್ತಮ ಅಡ್ವೆಯವರ ಮನೆಗೆ ದಾರಿ)
ಚಿತ್ರಗಳ ಸಹಾಯಕ್ಕಾಗಿ ಶ್ರೀ ಬಿ.ಸಿ.ಶೆಟ್ಟಿ ಮತ್ತು ಪುರುಷೋತ್ತಮ ಅಡ್ವೆಯವರಿಗೆ ವಂದನೆಗಳು.
ವಸಂತ ಕಜೆ
ಕಜೆ ವೃಕ್ಷಾಲಯ
ಬೇಲಿ (ಪಾಕ್ ನಡುವೆ) ಗೋಡೆಗಳ (ಚೀನಾದ್ದು) ವಿಶ್ವಮಟ್ಟದ ಆಶಯದ ನಡುವೆ ಇಂಥ ಪ್ರಾಕೃತಿಕ ವಿಚೇಚನೆ ಸೇರಿಕೊಳ್ಳುವಂತಾದರೆ ಎಷ್ಟು ಚೆನ್ನ. ನನ್ನ ಅಭಯಾರಣ್ಯದ ಮೂರು ದಿಕ್ಕಿಗೆ ಕಡಿದ ಮುರಕಲ್ಲು, ಸಿಮೆಂಟಿನ ಗೋಡೆಯಿದ್ದರೂ ತುರ್ತಿರದ ಉಳಿದೊಂದು ಬದಿಯನ್ನು ಹೀಗೇ ಸಿಕ್ಕ (ಮುರ) ಉಂಡೆಕಲ್ಲಿನಲ್ಲಿ ಕಟ್ಟುವ ಕೆಲಸ ಎಂದೋ ಶುರು ಮಾಡಿ ಬಾಕಿ ಉಳಿಸಿದ್ದೂ ನೆನಪಾಯ್ತು. ಅದು ಪೂರ್ಣವಾದಂದು ಏನೋ ಬರೆಯುತ್ತಿದ್ದೆನೇನೋ, ಆದರೆ ನಿನ್ನೀ ಸಮರ್ಥ ಲೇಖನ ನೋಡಿದ ಮೇಲೆ ಇನ್ನು ಬರೆಯುವ ಅಗತ್ಯ ಬಾರದು :-)
ReplyDelete