ಸಸ್ಯಶಾಸ್ತ್ರವನ್ನು ಆಸಕ್ತಿಯಿಂದ ಓದುವುದಿದ್ದರೆ ಇಲ್ಲಿಂದ ಮೊದಲು ಮಾಡಿ!


ನನ್ನ ಹಿರಿಯ ಸ್ನೇಹಿತರಲ್ಲೊಬ್ಬರು ಕರಿಂಗಾಣ ಕಾಮತ್ ಡಾಕ್ಟ್ರು. ಅವರೊಬ್ಬರು ಇತಿಹಾಸಕಾರ, ಜೀವಿಶಾಸ್ತ್ರಜ್ಞ, ದೈವದೇವಾರಾಧನೆಗಳನ್ನು ಅಥೆಂಟಿಕ್ ಆಗಿ ವಿಶ್ಲೇಷಿಸಬಲ್ಲ ಜನಪದ, ಸಂಸ್ಕೃತ ಶಾಸ್ತ್ರಜ್ಞ, ಇನ್ನೂ ಏನೇನೋ. ಅವರ ಮನೆಯಲ್ಲಿ ಸುಮಾರು ೧೯೨೦ರ ಆಸುಪಾಸಿನಲ್ಲಿ (ಇಸವಿ ಅವರಿಗೆ ತಿಳಿದಿದೆ) ಹಾಸಿದ ಬಾಸೆಲ್ ಮಿಷನ್ ನೆಲಹಾಸು ಟೈಲ್ಸ್ ಇದೆ. ‘ಬಾಸೆಲ್ ಮಿಷನ್ಅವರಿಗೆ ತಿಳಿದಂತೆ ಆವಿಷ್ಕಾರಗಳನ್ನು ಜಗತ್ತಿಗೆ ಕೊಟ್ಟಿದೆ(ಇವಲ್ಲದೆ ಬೇರೆ ಇದ್ದರೂ ಇರಬಹುದು). ಟೈಲ್ಸ್, ಖಾಕಿ ಬಟ್ಟೆ, ಆಗಿನ ಕಾಲದ ಪ್ರಿಂಟಿಗ್ ಟೆಕ್ನಾಲಜಿಯಲ್ಲಿ ಮಹತ್ವದ್ದಾಗಿದ್ದ (ಮುಖ್ಯವಾಗಿ ಸಸ್ಯಗಳ) ಆಕರ್ಷಕ ಕೈ ವರ್ಣಚಿತ್ರಗಳ ಪ್ರಿಂಟ್ ತೆಗೆಯುವ ಯಾವುದೋ ಒಂದು ವಿಶಿಷ್ಟ ವಿಧಾನ, ನಾಲ್ಕನೆಯದು ಬಹುಶ: ಕಾಫಿಯ ಸಂಸ್ಕರಣೆ ಇರಬೇಕು. ಇವುಗಳಲ್ಲಿ ಸಸ್ಯಗಳ ನಿಖರ ಚಿತ್ರ ಬಿಡಿಸಿ ಜರ್ಮನ್ ಸಸ್ಯಶಾಸ್ತ್ರಜ್ಞರು ಮಾಡಿದ ಸಸ್ಯಶಾಸ್ತ್ರ ವಿವರಣೆಗಳು ಆಸಕ್ತರಿಗೆ ಭಗವದ್ಗೀತೆಯಂತಿವೆ.

ಸಸ್ಯಾಸಕ್ತರು ಓದಲೇ ಬೇಕಾದ ಮೊದಲ ಪುಸ್ತಕ 
ಬಾಸೆಲ್ ಮಿಷನ್ ಗೆ ನಾವು ಸಸ್ಯಾಸಕ್ತರು ವಿಶೇಷವಾಗಿ ಕೃತಜ್ಞರಾಗಿದ್ದೇವೆ. ಸಸ್ಯಶಾಸ್ತ್ರವನ್ನು ಆಸಕ್ತಿಯಿಂದ ಓದುವವರಿಗೆ ನಾನು ಸಲಹೆಕೊಡುವ ಮೊದಲ ಪುಸ್ತಕ Glimpses into the Life of Indian Plants : An Elementary Indian Botany’. ಬರೆದವರು ಐ. ಪೆಲೈಡೆರೆರ್. ಮೊದಲ ಮುದ್ರಣ ೧೯೦೮ ರಲ್ಲಿ. ನಮ್ಮ ಸುತ್ತುಮುತ್ತಲ ಸಸ್ಯಗಳನ್ನೇ ಉದಾಹರಣೆಯಾಗಿ ಎತ್ತಿಕೊಂಡು ಸಸ್ಯಶಾಸ್ತ್ರದ ಆಳ ವಿಚಾರಗಳನ್ನು ಮನಮುಟ್ಟುವಂತೆ ವಿವರಿಸಿರುವ ಈ ಪುಸ್ತಕವನ್ನು ಮೀರಿಸುವ ಇನ್ನೊಂದು ಪುಸ್ತಕ ಬರೆಯುವುದು ಎಂಥ ಬರಹಗಾರನಿಗೂ ಒಂದು ತೆರೆದ ಸವಾಲು. ಚಿತ್ರಗಳು ಅತ್ಯುತ್ತಮ ಸೂಕ್ಷ್ಮ ರೇಖಾಚಿತ್ರಗಳಾಗಿದ್ದು ಅಕ್ಷರಶ: ಸಾವಿರಶಬ್ದಗಳಿಗೆ ಸಮನಾಗಿವೆ. ಮಧ್ಯಮಧ್ಯೆ ಬರುವ ವರ್ಣಚಿತ್ರಗಳು ತಾವೇ ಸ್ವತಂತ್ರ ಕಲಾಕೃತಿಗಳಾಗಿದ್ದು ಚೌಕಟ್ಟು ಹಾಕಿ ಗೋಡೆಗಳನ್ನು ಅಲಂಕರಿಸುವಂತಿವೆ. ಬರಹಗಾರನು ಶಾಲೆಗಳಲ್ಲಿ ಈ ವಿಚಾರಗಳನ್ನು ಅದೆಷ್ಟು ನಿ:ಸಾರವಾಗಿ ಕಲಿಸುತ್ತಿದ್ದಾರೆಂಬ ದು:ಖದಿಂದ, ಆ ಕೊರತೆಯನ್ನು ನೀಗಿಸಲೆಂದು ಬರೆದಿರುವುದರಿಂದ ಪುಸ್ತಕವು ಇಷ್ಟು ಚೆನ್ನಾಗಿ ಬಂದಿದೆ.
ಈ ಪುಸ್ತಕವನ್ನು ನಾನು ಕಂಡುಹಿಡಿದುದು ಒಂದು ಯೋಗಾಯೋಗ. ಗೆಳೆಯ ಓಂಶಿವಪ್ರಕಾಶ್ ಮತ್ತು ಸಂಗಡಿಗರು pustaka.sanchaya.net ಎಂದೊಂದು ಕನ್ನಡ ಆನ್ಲೈನ್ ಉಚಿತ ಪುಸ್ತಕಗಳ ಪರಿವಿಡಿ ಲೈಬ್ರೆರಿ ಮಾಡಿದ್ದಾರೆ. ಅದರಲ್ಲಿ ‘ಸಸ್ಯಶಾಸ್ತ್ರ’ ಎಂಬ ಶಬ್ದಕ್ಕೆ ಹುಡುಕಿದರೆ ಇದೇ ಪುಸ್ತಕದ ಕನ್ನಡ ಅವತರಣಿಕೆಯ ಕೊಂಡಿ ಸಿಗುತ್ತದೆ. ನಾನು ಅದನ್ನು ಓದಿಲ್ಲ. ಮೂಲ ಇಂಗ್ಲಿಷ್ ಕೃತಿ ಅಮೆಜಾನ್ ನಲ್ಲಿ ಲಭ್ಯವಿದೆ

ಸಂಗ್ರಹಿಸಲೇಬೇಕಾದ ಇನ್ನೊಂದು ಪುಸ್ತಕ
ಬಾಸೆಲ್ ಮಿಷನ್ ಮುದ್ರಿಸಿದಸಹಸ್ರಾರ್ಧ ವೃಕ್ಷಗಳ ವರ್ಣನೆ’ (Five Hundred Indian Plants and their use in Medicine and the Art) ಎಂಬ ಪುಸ್ತಕ ಬಹಳ ಅಮೂಲ್ಯವಾದದ್ದು. ಕನ್ನಡ, ಕೊಂಕಣಿ, ತುಳು, ಮಲಯಾಳಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ೫೦೦ ಸಸ್ಯಗಳ ಹೆಸರು, ಹೃಸ್ವವಾಗಿ ವಿವರಣೆ, ಔಷಧೀಯ ಮತ್ತು ಇತರೆ ಉಪಯೋಗಗಳು ಸಂಗ್ರಹವದು. ಇದು ೧೮೦೦ ಉತ್ತಾರ್ಧದಲ್ಲಿ ಎರಡುಬಾರಿ ಮತ್ತು ೧೯೦೦ರ ಆದಿಯಲ್ಲಿ ಒಮ್ಮೆ ಮುದ್ರಿತಗೊಂಡಿದೆ. ಈಗ ಆಸಕ್ತರ ಕೈಯಲ್ಲಿ ಜೆರೋಕ್ಸ್ ಪ್ರತಿಗಳಷ್ಟೇ ಹರಿದಾಡುತ್ತಿದ್ದು ಮೂಲ ಪ್ರತಿ ಲಭ್ಯವಿಲ್ಲ. ಇಂಟರ್ನೆಟ್ ನಲ್ಲಿ ಪಿಡಿಯಫ್ ಕಾಪಿ ಇದೆ. ಆಸಕ್ತರು ಇಳಿಸಿಕೊಂಡು ಓದಿ

ಪರಿವಿಡಿಯ ಬಗ್ಗೆ ಒಂದೆರಡು ಮಾತು
ಗಮನಿಸಬೇಕಾದ ಅಂಶವೆಂದರೆ ಎರಡೂ ಪುಸ್ತಕಗಳು ಬರೆಯಲ್ಪಟ್ಟುದು ನೂರಕ್ಕೂ ವರ್ಷ ಹಿಂದೆ. ಆದರೆ ನಾನು ಇತ್ತೀಚೆಗೆ ಖರೀದಿಸಿರುವ ಹಲವು ಪುಸ್ತಕಗಳು (ಉದಾಹರಣೆಗೆ ಪತಂಜಲಿ ಸಂಸ್ಥೆಯ ಔಷಧೀಯ ಸಸ್ಯಗಳ ಬಗೆಗಿನ ಒಂದು ಪುಸ್ತಕ, ಶ್ರೀ ವೆಂಕಟ್ರಾಮ ದೈತೋಟರ ಬರಹಗಳ ಸಂಗ್ರಹ[ವಿವೇಕಾನಂದ ಕಾಲೇಜಿನ ಪ್ರಕಟಣೆ] ಇತ್ಯಾದಿ), ಪರಿವಿಡಿಯನ್ನು ನಿರ್ವಹಿಸುವಲ್ಲಿ ಇನ್ನಿಲ್ಲದಂತೆ ಸೋತಿವೆ. ಸಸ್ಯಗಳ ಬಗ್ಗೆ ಓದುವಾಗ ಪರಿವಿಡಿ ಅತಿಯಾಗಿ ಅಗತ್ಯ. ಕಾದಂಬರಿಗೆ ಇದರ ಅಗತ್ಯ ಇಲ್ಲ. ಆದರೆ ಬಾಸೆಲ್ ಮಿಷನ್ ಪರಿವಿಡಿಯ ಮಹತ್ವವನ್ನು ಬಹಳ ಚೆನ್ನಾಗಿ ತಿಳಿದಿದೆ (ಗಮನಿಸಿ ೧೮೦೦ರ ಶತಕದಲ್ಲಿ!). ಸಹಸ್ರಾರ್ಧ ವೃಕ್ಷಗಳ ವರ್ಣನೆ ಯಲ್ಲಿ ಆಯಾಭಾಷೆಗೆ ಪ್ರತ್ಯೇಕವಾಗಿ, ರೋಗರುಜಿನಗಳಿಗೆ ಪ್ರತ್ಯೇಕವಾಗಿ, ಇಷ್ಟಲ್ಲದೆ, ಬಳ್ಳಿ, ಮರ, ಹಣ್ಣು ಹೀಗೆ ಸಸ್ಯಗಳ ಸ್ವಭಾವಕ್ಕೆ, ವೈಜ್ಞಾನಿಕ ಹೆಸರುಗಳಿಗೆ ಪ್ರತ್ಯೇಕವಾಗಿ ಪರಿವಿಡಿ ಇದೆ. ಇದೊಂದು ರೀತಿಯಲ್ಲಿ ಪರಿವಿಡಿಯ ಸಂಪೂರ್ಣತೆಗೆ ಮಾದರಿ. ಯಾರೇ ಹೊಸದಾಗಿ ಪುಸ್ತಕ ಬರೆಯುವುದಿದ್ದರೂ ಪರಿವಿಡಿಯನ್ನು ಒಮ್ಮೆ ಗಮನಿಸುವುದು ಒಳ್ಳೆಯದು

ಇವೆರಡಲ್ಲದೆ ಬಾಸೆಲ್ ಮಿಷನ್ ನವರ ಇನ್ನೊಂದು ಪುಸ್ತಕದ ಡಿಜಿಟಲ್ ರೂಪದಲ್ಲಿ ನಾನು ಹಿಂದೆ ನೋಡಿದ್ದೆ. ಅದು ಸಸ್ಯಗಳ Taxonomy ಗೆ ಸಂಬಂಧಪಟ್ಟಿದ್ದು. ಅದನ್ನು ನಾನು ಸರಿಯಾಗಿ ಓದಿಲ್ಲ ಮತ್ತು ಅದರ ಹೆಸರು ಇತ್ಯಾದಿ ವಿವರಗಳು ನೆನಪಿಗೆ ಬರುತ್ತಿಲ್ಲ. ಆಸಕ್ತರು ಹುಡುಕಿ ಓದಿ.

Plant Form: An Illustrated Guide to Flowering Plant Morphology - ಸಸ್ಯ ಬಾಹ್ಯ ಲಕ್ಷಣ ವಿವರಣೆಯ ಬಗ್ಗೆ ಅತ್ಯುತ್ತಮ ಪುಸ್ತಕ 

ಸಸ್ಯಗಳ ಸೂಕ್ಷ್ಮ ಜೀವಕೋಶ ಮಟ್ಟದ ವಿವರಣೆಗಳು ಹವ್ಯಾಸಿ ಆಸಕ್ತರು ಮೊದಲಾಗಿ ಓದಬೇಕಾದುದೇನಲ್ಲ. ಆದರೆ ಬಾಹ್ಯಲಕ್ಷಣಗಳಾದ ಕಾಂಡ, ಬೇರು, ಬಳ್ಳಿಗಳು ಹತ್ತಲು ಬಳಸುವ ಕೊಕ್ಕೆಗಳು, ಸುತ್ತುಬಳ್ಳಿಗಳು, ಮುಳ್ಳು, ಹೂವು, ಹಣ್ಣು ಇತ್ಯಾದಿ ಎಲ್ಲ ಹೊರ ವಿವರಣೆಗಳು ನಮಗೆ ದೃಶ್ಯ ಮತ್ತು ಗ್ರಾಹ್ಯ. ನಮಗೆ ಕಾಣುವುದರ ಬಗ್ಗೆ ಓದುವುದು ಹೆಚ್ಚು ಆಸಕ್ತಿಕರ. ವೈಜ್ಞಾನಿಕ ವಿವರಣೆಯನ್ನು ಪಿಯುಸಿ ಹಂತಕ್ಕೆ ಓದಿದ, ಇಂಗ್ಲಿಷ್ ಸರಾಗವಾಗಿ ಬಲ್ಲ ಯಾರಿಗಾದರೂ ಅರ್ಥವಾಗುವಂತೆ ಪ್ಲಾಂಟ್ ಫಾರ್ಮ್ (ಸಸ್ಯ ರೂಪ) ಪುಸ್ತಕ ತಿಳಿಸುತ್ತದೆ. ಕೊಳ್ಳುವುದಕ್ಕೆ ಬಹಳ ದುಬಾರಿ (೨೫೦೦ ರೂಪಾಯಿ). ನಿಜವಾಗಿಯೂ ಆಸಕ್ತಿಯಿದ್ದರಷ್ಟೇ ಕೊಳ್ಳಿ, ಕೊಂಡರೆ ನಿಜಕ್ಕೂ ಚೆನ್ನಾಗಿದೆ

ಇನ್ನಷ್ಟು... 
ಈ ಕೆಳಗಿನ ಚಿತ್ರದಲ್ಲಿ ಒಂದಷ್ಟು ಮುಖ್ಯ ಪುಸ್ತಕಗಳು ಇವೆ. ಇದರಲ್ಲಿ Seed science and Technology & Pollination and Floral Ecology ಇವೆರಡೂ ದುಬಾರಿ ಮತ್ತು ಟೆಕ್ಶ್ಟ್ ಬುಕ್ ನಂತೆ ಇರುವಂಥವು. ಉಳಿದವು ಬೇರೆ ಬೇರೆ ಕಾರಣಕ್ಕೆ ಚೆನ್ನಾಗಿವೆ.

 • ಒರಿಜಿನ್ ಆಫ್ ಪ್ಲಾಂಟ್ ನೇಮ್ಸ್ - ಸಸ್ಯಗಳ sdfadsaf ಎನ್ನುವಂಥ ವಿಚಿತ್ರ ಹೆಸರುಗಳನ್ನು ನಮಗೆ ಅರ್ಥ ಮಾಡಿಕೊಡುವ ವಿಶಿಷ್ಟ ಪುಸ್ತಕ. ಭಾರತೀಯ ಪುಸ್ತಕವಾಗಿರುವುದರಿಂದ ಭಾರತದ ಸಸ್ಯಗಳ, ಕುಟುಂಬಗಳ ಹೆಸರುಗಳು ಹೆಚ್ಚಾಗಿವೆ. ನನಗೆ ಆನ್ಲೈನ್ ಸಿಕ್ಕಿತು. ಆದರೆ ಮತ್ತೊಂದು ಕಾಪಿ ಪ್ರಯತ್ನಿಸಿದಾಗ ಸಿಗಲಿಲ್ಲ.
 • ವೆಂಕಟ್ರಾಮರ ಔಷಧೀಯ ಸಸ್ಯ ಸಂಪತ್ತು ಓದಲೇ ಬೇಕಾದದ್ದು. ಸಸ್ಯಲೋಕದ ಋಷಿಗಳಾದ ವೆಂಕಟ್ರಾಮರು ಬರೆದಿರುವುದು ಪುಸ್ತಕ ಪೂಜೆಯದಿನ ಪೂಜೆಗಿಡಲು ಅರ್ಹ. ಅಷ್ಟು ಪವಿತ್ರವಾದ ಪುಸ್ತಕ.
 • ಪ್ರದೀಪ್ ಕಿಶನ್ ಅವರ ಚಿತ್ರದಲ್ಲಿರುವ ಪುಸ್ತಕ ಮತ್ತು 'ಟ್ರೀಸ್ ಆಫ್ ಡೆಲ್ಲಿ' ಎರಡೂ ಮತ್ತೆ ಮತ್ತೆ ಓದುವಂಥದ್ದು. 
 • ಫ್ಲೋರಾ ಆಫ್ ಉಡುಪಿ ತುಂಬಾ ಚೆನ್ನಾಗಿದೆ ಆದರೆ ತುಂಬಾ ಟೆಕ್ನಿಕಲ್. ಸ್ವಲ್ಪ ಪೂರ್ವ ಸಿದ್ಧತೆ ಬೇಕು. ಸ್ಥಳೀಯ ಹೆಸರುಗಳು ಇನ್ನಷ್ಟು ಇದ್ದರೆ ಚೆನ್ನಾಗಿತ್ತು. ಈ ಪುಸ್ತಕದ ಉದ್ದೇಶ ಇತರೆ ಪುಸ್ತಕಗಳಿಗಿಂತ ಭಿನ್ನ. ಇದು ದಕ್ಷಿಣ, ಕನ್ನಡ ಹೆಚ್ಚು ಕಮ್ಮಿ ಕಾಸರಗೊಡಿನವರೆಗಿನ ಎಲ್ಲ (ಅಂದರೆ ಎಲ್ಲವೂ) ಗಿಡಮರಗಳ ಲಕ್ಷಣ ವಿವರಣೆ, ಈ ವಿವರಣೆಯನ್ನು ಬಳಸಿ ಗಿಡಗಳನ್ನು ಗುರುತಿಸಲು ಸಾಧ್ಯವಾಗುವಂತಹ ಪುಸ್ತಕ. ಬಹಳ ಹೃಸ್ವವಾದ ಸಸ್ಯಶಾಸ್ತ್ರೀಯ ವಿಶೇಷಣಗಳನ್ನು ಬಳಸಿ ಹೆಚ್ಚಿನ ಮಾಹಿತಿಯನ್ನು ಕಡಿಮೆ ಶಬ್ದಗಳಲ್ಲಿ ಹೇಳಿದ್ದಾರೆ. ಹೊಸಬರಿಗೆ ಅರ್ಥಮಾಡಿಕೊಳ್ಳುವುದು ಕಷ್ಟವೇ. ಆದರೆ ಇದಕ್ಕೆ ಪರ್ಯಾಯವಾದ ಇದೇ ಉದ್ದೇಶಕ್ಕೆ ಹೇಳಿಮಾಡಿಸಿದ ಇನ್ನೊಂದು ಪುಸ್ತಕವಿಲ್ಲ.
 • ಲೈಫ್ ಎನ್ನುವ ಬೃಹತ್ ಗ್ರಂಥ ಇಡಿಯ ಜೀವಸಂಕುಲದ ಬಗ್ಗೆ ಇರುವಂಥದ್ದು. ಬಹಳ ಚೆನ್ನಾಗಿದೆ ಆದರೆ ಒಮ್ಮೆಲೆ ಓದಿ ಮುಗಿಸುವುದು ಅಸಾಧ್ಯ. 
 • ಸೀಕ್ರೆಟ್ ಲೈಫ್ ಆಫ್ ಪ್ಲಾಂಟ್ಸ್ ನಾನಿನ್ನೂ ಓದಬೇಕು. ಚೆನ್ನಾಗಿದೆ ಎಂದು ಕೇಳಿದ್ದೇನೆ.

[ ಬರಹ ಆಸಕ್ತರಿಗೆ ಆಕರವಾಗಿ ಬಳಸಲು ಒಂದು ಟಿಪ್ಪಣಿ ಅಷ್ಟೆ. ನಿಮಗೆ ಬೇರೆ ಒಳ್ಳೆಯ ಪುಸ್ತಕಗಳು ಗೊತ್ತಿದ್ದರೆ ನನಗೆ ತಿಳಿಸಿ. ನಾನು ಹೇಳಿರುವುದೇ ಅಂತಿಮವಲ್ಲ. ಇದು ನಾನು ಓದಿದವಲ್ಲಿ ನಾನು ಮಾಡಿದ ಆಯ್ಕೆ ಅಷ್ಟೆ]. 

Comments

 1. Glimpses into the Life of Indian Plants : An Elementary Indian Botany ನ ಮೂಲ ಆವೃತ್ತಿ ಇಲ್ಲಿ ಲಭ್ಯವಿದೆ. https://archive.org/details/glimpsesintolife00pfle

  ReplyDelete
  Replies
  1. ಧನ್ಯವಾದಗಳು ಡಾಕ್ಟರ್ ಕೃಷಿ

   Delete
 2. Link for Plant Form: An Illustrated Guide to Flowering Plant Morphology - ಸಸ್ಯ ಬಾಹ್ಯ ಲಕ್ಷಣ ವಿವರಣೆಯ ಬಗ್ಗೆ ಅತ್ಯುತ್ತಮ ಪುಸ್ತಕ

  https://www.pdfdrive.com/plant-form-an-illustrated-guide-to-flowering-plant-morphology-d162062181.html

  ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!