ನನ್ನ ಅನ್ನದ ತಟ್ಟೆಯಲ್ಲಿ ಸಿಕ್ಕಿದ ಕಲ್ಲುಗಳು

ನನ್ನ ಅನ್ನದ ತಟ್ಟೆಯಲ್ಲಿ ಸಿಕ್ಕಿದ ಕಲ್ಲುಗಳು

ಭತ್ತ ಬೆಳೆಯುವುದಕ್ಕಿಂತ ಅಕ್ಕಿ ಖರೀದಿಸುವುದು ಸುಮಾರು ಎಪ್ಪತ್ತು ಶೇಕಡಾ ಅಗ್ಗವಾಗಿರುವ ಈಗಿನ ಕಾಲದಲ್ಲಿ ಭತ್ತ ಬೆಳೆಸಲು ನಾನು ಕೈಹಾಕಿ ಅದರ ಬಗ್ಗೆ ಕೆಲವೊಂದು ಬ್ಲಾಗ್ ಬರಹಗಳನ್ನು ಬರೆದದ್ದು ಸಹಜವಾಗಿಯೇ ಹೀರೋಯಿಕ್ ಅನಿಸಿಕೊಂಡು ಪ್ರಶಂಸೆಗೆ ಪಾತ್ರವಾಯಿತು, ಮುಖ್ಯವಾಗಿ ಜಾಲತಾಣಮಾಧ್ಯಮದಲ್ಲಿ
ಒಂದಿಬ್ಬರು ಸ್ನೇಹಿತರು ಮುಂದುವರೆದು, ನಮ್ಮ ಭೂಮಿಯ ಇನ್ನೂ ಖಾಲಿಯಿರುವ ಜಾಗದಲ್ಲಿ ತಾವು ಪ್ರಾಯೋಗಿಕ ಕೃಷಿಮಾಡಬಹುದೇ ಎಂದೂ ಕೇಳಿಕೊಂಡರು. ಆದರೆ ಭತ್ತಬೆಳೆಸಿದ ಅನುಭವದ ಬಗ್ಗೆ ಒಂದು ಕೊನೆಯ ಸಾರಾಂಶ, ಮೊದಲ ಬೆಳೆಯ ಬ್ಯಾಲೆನ್ಸ್ ಶೀಟು ಬರೆಯುವುದು ಹಾಗೆಯೇ ಬಾಕಿ ಉಳಿದಿತ್ತು
ಮೋಕ್ಷಕ್ಕಾಗಿ ಕಾಯುತ್ತಿರುವ ಟ್ರಾಕ್ಟರು


* * * 
ಮನುಷ್ಯರಿಗೆ ತಮ್ಮ ಬಗ್ಗೆ ಹೇಳಿಕೊಳ್ಳುವಾಗ ಒಳ್ಳೆಯದನ್ನು ಹೇಳಿ ಕೆಟ್ಟುದನ್ನು ಹೇಳದೆ ಬಿಡುವ ಸಹಜಾಭ್ಯಾಸವಿದೆಯಷ್ಟೆ? ನನ್ನ ಭತ್ತದ ಗದ್ದೆಯಲ್ಲಿ ಕಾಳುಕಟ್ಟಿದುದೆಲ್ಲ ನಿಜವಾದರೂ ಅದು ಅಂತಿಮವಾಗಿ ನಮಗೊಂದು ಅಗುಳು ಅನ್ನವನ್ನೂ ಗಳಿಸಿಕೊಡಲಿಲ್ಲ. ಇದಕ್ಕೆ ಮೊದಲ ಬೆಳೆ, ಹೊಸ ಗದ್ದೆ ಇತ್ಯಾದಿ ಕಾರಣಗಳಿಂದ ಶುರುವಾಗಿ ಮುದ್ದಾಗಿ ಕಾಣುವ ಹೊಟ್ಟೆಬಾಕ ಮುನಿಯಾ ಹಕ್ಕಿಗಳ ಕಾಟದ ವರೆಗೆ ಹತ್ತಾರು ಕಾರಣಗಳು. ಇವನ್ನೆಲ್ಲ ಒಂದಷ್ಟು ವಿವರಗಳೊಂದಿಗೆ ಬರೆಯುವುದು ಕೆಳಗಿನ ಕಾರಣಗಳಿಂದ ಪ್ರಸ್ತುತ

 • ನನ್ನನ್ನು ಮೆಚ್ಚಿ ಪ್ರೋತ್ಸಾಹಿಸಿದ ಮಿತ್ರರಿಗೆ ಪೂರ್ಣ ಚಿತ್ರಣ ಕೊಡುವುದಕ್ಕಾಗಿ
 • ಕೃಷಿಕನೊಬ್ಬ ಒಂದೊಂದು ಕಾಳಿಗೆ ಪಡುವ ಬವಣೆಯೆಷ್ಟು, ತಟ್ಟೆಯಲ್ಲಿರುವ ಅನ್ನದ ನಿಜಮೌಲ್ಯವೇನೆಂದು ಉಣ್ಣುವವರು ತಿಳಿಯುವುದಕ್ಕಾಗಿ 
 • ಹೊಸದಾಗಿ ಗದ್ದೆ ಮಾಡುವವರು (ನನ್ನ ಆಸಕ್ತ ಮಿತ್ರರಂಥವರು) ನಿರೀಕ್ಷಿಸಬೇಕಾದ್ದೇನು? ಎನ್ನುವ ಚಿತ್ರಣ ಕೊಡುವುದಕ್ಕಾಗಿ
 • ಹೀಗೆ ಹಲವು ಕಾರಣಗಳು.


ಕಷ್ಟಗಳ ಬಗ್ಗೆ ಬರೆದುಕೊಂಡುದನ್ನು ಕಂಡು ನಾನು ಉಸಾಬರಿ ಬಿಡುವವನಿದ್ದೇನೆಂದು ಓದುಗರು ತಿಳಿಯುವುದು ಬೇಡ. ‘ರಂಗನಾಯಕಿಚಿತ್ರದಲ್ಲಿ ನಾಯಕಿಯನ್ನು ಮದುವೆಯಾಗುತ್ತೇನೆಂದು ಹೀರೋ ಹೇಳಿಕೊಂಡಾಗ ನಾಟಕದ ಕಂಪನಿ ಯಜಮಾನ ಪರದೆ ಸರಿಸಿ ರಂಗದ ನಿಜರೂಪ ತೋರಿಸುತ್ತಾನಷ್ಟೆ? ರೀತಿ ತೋರಿಸುವುದಕ್ಕಾಗಿ ಬರಹ

ಮೊದಲ ಟ್ರಾಕ್ಟರ್ ಪ್ರಸಂಗ
ಮಳೆಗಾಲಕ್ಕೆ ಮೊದಲು ನಾನೊಮ್ಮೆ ಜೆಸಿಬಿಯಲ್ಲಿ ಸ್ವಲ್ಪ ಉಳುಮೆ ಮಾಡಿಸಿದ್ದೆ, ಮತ್ತೊಮ್ಮೆ ಟ್ರಾಕ್ಟರ್ನಲ್ಲಿ ಒಣ ಉಳುಮೆಯೂ ಮಾಡಿಸಿದೆ. ಅದಕ್ಕೆ ಸುಮಾರು ಹತ್ತು ಸಾವಿರ ಖರ್ಚಾಯಿತು. ಈಗ ಗದ್ದೆ ಸುಂದರವಾಗಿ ಕೆಂಪಾಗಿ ಮುಂದೆ ಪೈರನ್ನು ಹೊರಲಿರುವ ನವಜವ್ವನೆಯಂತೆ ನಮ್ಮ ಕಣ್ಣು ತಣಿಸಿದ್ದು ನಿಜ. ಕೃಷ್ನನಂತೂ ಗದ್ದೆ ಆದ ಹಾಗೆಯೇ ಎಂದು ನನ್ನನ್ನು ಹುರಿದುಂಬಿಸಿದ.

ಮಳೆಹಿಡಿದ ಮೇಲೆ ಚಾಪೆನೇಜಿ ಮನೆಯ ಅಂಗಳದಲ್ಲಿ ಹಾಕಿಟ್ಟೆವು (ಚಾಪೆನೇಜಿಯ ಬಗ್ಗೆ ಹಿಂದೆ ವಿವರವಾಗಿ ಬರೆದಿದ್ದೇನೆ. ಲೇಖನ ೧, ಲೇಖನ ೨). ಮತ್ತೆ ಟ್ರಾಕ್ಟರ್ ಬಾಡಿಗೆಗೆ ತಂದು ಇಳಿಸಿದೆ. ಸ್ವಲ್ಪ ಉಳುವಷ್ಟರಲ್ಲಿ ಗದ್ದೆಯಲ್ಲಿ ತುಂಬಾ ಕಲ್ಲು ಇದೆಯೆಂದು ಡ್ರೈವರ್ ತಕರಾರು ತೆಗೆದ. ಅವನಿಗೆ ದಮ್ಮಯ್ಯ ಹಾಕಿ ಉಳುಮೆ ಮುಂದುವರೆಸುವಂತೆ ಕೋರಿದೆ. ಸುಮಾರು ಮುಕ್ಕಾಲು ಭಾಗ ಮುಗಿಯುತ್ತಿದ್ದಂತೆ ಟ್ರಾಕ್ಟರ್ ಗದ್ದೆಯಲ್ಲಿ ಹೂತುಕೊಂಡುಬಿಟ್ಟಿತು. ಹೂತ ಟ್ರಾಕ್ಟರನ್ನು ಅಲ್ಲಿಂದಲೇ ಯಂತ್ರಬಲ ಮುನ್ನಡೆಸಿ ಹೊರತೆಗೆಯಲು ಪ್ರಯತ್ನಿಸುವುದು ಸ್ವಲ್ಪ ರಿಸ್ಕಿ. ಚಕ್ರ ತಿರುಗಿದಂತೆ ಇನ್ನಷ್ಟು ಕೆಸರಾಗಿ ಇನ್ನಷ್ಟು ಒಳಗಿಳಿದರೆ ಸಮಸ್ಯೆ ಜಟಿಲವಾಗುತ್ತ ಹೋಗುತ್ತದೆ. ಆಗ ಆನೆ ಮರಎಳೆಯಲು ಬಳಸುವಂಥ ದೊಡ್ಡ ಹಗ್ಗದ ಸಹಾಯ ಬೇಕುಮಂಚಿಗ್ರಾಮದಲ್ಲಿ ಅಂಥ ಬಳ್ಳಿಯಿರುವುದು, ಅದನ್ನು ನನ್ನಂಥ suicidal ಕೃಷಿಕರಿಗೆ ಎರವಲು ಕೊಡುವುದು ಒಬ್ಬರೇ - ಮಂಚಿ ಶ್ರೀನಿವಾಸ ಆಚಾರ್. ಅವರಲ್ಲಿ ಅದು ನನ್ನದೇ ಬಳ್ಳಿ ಎಂಬಂತೆ ಎರವಲು ಪಡೆದು ಬಳ್ಳಿ ತಂದೆ


ಹಗ್ಗದಲ್ಲಿ ಆತ್ಮೋದ್ಧಾರ ಮಾಡಿಕೊಳ್ಳುವ ಟ್ರಾಕ್ಟರು
ಎಲ್ಲರು ಆತ್ಮಹತ್ಯೆಗೆ ಬಳ್ಳಿ ಬಳಸಿದರೆ ಚಾಣಾಕ್ಷ ಟ್ರಾಕ್ಟರ್ ಡ್ರೈವರುಗಳು ಪಾರುಮಾಡಲು ಬಳ್ಳಿ ಬಳಸುತ್ತಾರೆ. ಟೆಕ್ನಿಕ್ ನನಗೆ ಗೊತ್ತಿರಲಿಲ್ಲ. ಸುಮಾರಾಗಿ ಅದು ನಡೆಯುವುದು ಹೀಗೆ.
ಟ್ರಾಕ್ಟರ್ನ ಹೂತ ದೊಡ್ಡ ಚಕ್ರವೊಂದಕ್ಕೆ ಬಳ್ಳಿಯ ಒಂದು ಕೊನೆಯನ್ನು ಕಟ್ಟುವುದು
ಇನ್ನೊಂದು ಕೊನೆಯನ್ನು ಗದ್ದೆಯ ಹೊರಗೆ ಟ್ರಾಕ್ಟರ್ ನೇರಕ್ಕಿರುವ ಮರವೊಂದಕ್ಕೆ ಕಟ್ಟುವುದು (ತಕ್ಕಮಟ್ಟಿಗೆ ಬಿಗಿಯಾಗುವಂತೆ
ಈಗ ನಿಧಾನಕ್ಕೆ ಟ್ರಾಕ್ಟರ್ ಚಾಲೂ ಮಾಡಿ ಚಕ್ರವನ್ನು ಸುತ್ತಿಕೊಳ್ಳುವಂತೆ ಮಾಡುವುದು. ಇದು ಬಳ್ಳಿಯ ಟೆನ್ಶನ್ ಹೆಚ್ಚಿಸಿ ಟ್ರಾಕ್ಟರನ್ನು ಹೊರಗೆಳೆಯಲು ಶಕ್ತಿಕೊಡುತ್ತದೆ. ಆದರೆ ಅಷ್ಟರಲ್ಲಿ ಚಕ್ರದಿಂದ ಜಾರಿಕೊಂಡು ಠಳ್ ಎಂದು ಕೆಸರು ಸಿಡಿಸುತ್ತಾ ಮತ್ತೆ ಮೊದಲಿನಂತೆ. ಪುನರಪಿ ಪ್ರಯತ್ನ. ಹೀಗೆ ಐದಾರು ಬಾರಿ, ಚಕ್ರಕ್ಕೊಮ್ಮೆ, ಚಕ್ರಕ್ಕೊಮ್ಮೆ ಬಿಗಿದು, ಕೊನೆಗೂ ಹೊರಬಂದಾಗ ಹುರ್ರೇ. ಒಂಭತ್ತು ಗಂಟೆಗೆ ಬಂದು ಹತ್ತು ಗಂಟೆಗೆ ಜಾಗ ಖಾಲಿಮಾಡಬೇಕಿದ್ದ ಟ್ರಾಕ್ಟರು ಮಧ್ಯಾನ್ಹ ಎರಡೂವರೆಗೆ ಉಳುಮೆ ತಕ್ಕಮಟ್ಟಿಗೆ ಮುಗಿಸಿ ಹೊರಬಂತು


ಮತ್ತೊಮ್ಮೆ ನಮ್ಮನ್ನು ಹುಗಿದ ಟ್ರಾಕ್ಟರು
ಅಂತೂ ಇಂತೂ ಬಂತಲ್ಲ ಎಂದುಕೊಳ್ಳುವಾಗ, ಅಲ್ಲೇಬೇರೊಂದು ಸಮತಟ್ಟು ಜಾಗದಲ್ಲಿ ಕಲ್ಲು ಇರಲಾರದು, ಅಲ್ಲಿ ಒಮ್ಮೆ ಒಕ್ಕಿಸಿ ನೋಡೋಣವೆಂದು ಕೃಷ್ಣ ಗೋಗರೆದ. ನಾವಾಗಲೇ ಆಯ್ದುಕೊಂಡ ಜಾಗದ ಕಲ್ಲಿನ ಸಮಸ್ಯೆಗೆ ರೋಸಿ ಹೋಗಿದ್ದೆವು. ಹತ್ತಿರಹತ್ತಿರ ಅರ್ಧ ಕ್ವಿಂಟಾಲ್ ತೂಕದ ಕಲ್ಲುಗಳನ್ನು ಕೃಷ್ಣ ಒಬ್ಬನೇ ಹೊತ್ತು ಹೊರಗೆ ಹಾಕಿದ್ದ, ಹಲವು ಬಾರಿ. ನಮ್ಮ ಭೂಮಿಯ ಬಗ್ಗೆ ತನ್ನದೆಂಬ ಉತ್ಸಾಹ ಕುತೂಹಲದಲ್ಲಿ ಕೇಳುವ ಕೃಷ್ಣನಿಗೆ ಇಲ್ಲವೆನ್ನಲಾಗದೆ ಟ್ರಾಕ್ಟರ್ ಅಲ್ಲಿಗೆ ನಡೆಯಿತು. ಆದರೆ ವಿಧಿ ನಮ್ಮನ್ನು ಕ್ಷಮಿಸಲಿಲ್ಲ. ಮತ್ತೆ ಮೆತ್ತನೆಯ ಮಣ್ಣಿನ ಜಾಗದಲ್ಲಿ ಸಿಕ್ಕಿಬಿದ್ದು ಮಧ್ಯಾನ್ಹದ ಹಸಿವು, ಮಳೆ, ಕೆಸರಿನಲ್ಲಿ ನಮ್ಮನ್ನು ಮುಂದಿನ ಮೂರುಗಂಟೆ ಒದ್ದಾಡಿಸಿಬಿಟ್ಟಿತು. ಬಾರಿ ಅದನ್ನು ಹೊರತೆಗೆಯುವುದು ಹಿಂದಿನ ಬಾರಿಗಿಂತ ಬಹಳವೇ ಕಷ್ಟವಾಯಿತು. ಅಂತೂ ಹೊರಗೆ ಬಂತು.

ಗೊಬ್ಬರವಾದ ಚಾಪೆನೇಜಿ 
ಕೆಸರಾಗುವ ಮೊದಲಿನ ಮೊದಲನೇ ಹಸಿ ಉಳುಮೆ ಮಾಡಿದ ಕೂಡಲೇ ಚಾಪೆನೇಜಿ ಹಾಕಿದ್ದೆ. ಆದರೆ ಗದ್ದೆ ತಯಾರಾಗಲಿಲ್ಲ. ಎರಡನೆಯ ಉಳುಮೆಯ ನಂತರವೂ ಸಮತಟ್ಟಾಗಿರದ ಗದ್ದೆ ಹಾಗೇ ಉಳಿದಿತ್ತು. ಟ್ರಾಕ್ಟರ್ ಸಮತಟ್ಟು ಮಾಡಬಹುದೆನ್ನುವ ಕನಸು ಕರಗಿ ಹೋಗಿತ್ತು. ಇನ್ನಷ್ಟು ಶಕ್ತಿಯುತ ಖಾಸಗಿ ಟ್ರಾಕ್ಟರ್ ಒಂದಕ್ಕೆ ಹೇಳಿ ಸರಿ ಮಾಡಿಸಲು ಹೊರಟಿದ್ದೆ. ನೇಜಿಗೆ ವಯಸ್ಸಾಗಿ, ನೆಡಲು ಅನುಪಯುಕ್ತವಾಗಿ ಅದನ್ನು ಮಡಚಿ ಅರಸಿನ ಬೆಳೆಯ ಮಡಿಗೆ ಗೊಬ್ಬರದಂತೆ ಹೊದೆಸಿದೆ. ಐದು ಕೇಜಿ ಭತ್ತ, ನಾಲ್ಕು ಮಂದಿಯ ಅರ್ಧದಿನದ ಕೆಲಸವೂ ಅದರೊಂದಿಗೆ ಗೊಬ್ಬರವಾಯಿತು

ಮೂರನೇ ಉಳುಮೆಕೈಬಿಡದ ನನ್ನ ದುರ್ದೈವ

ನಾನು ಕೃಷ್ಣ ಮತ್ತು ಅವನ ತಮ್ಮ ರಾಜು ಮತ್ತೆ ಸುಮಾರು ಒಂದು ವಾರ ಕಾಲ ಗದ್ದೆಯಲ್ಲಿ ಕೆಸರಿನಲ್ಲಿ ನಡೆದಾಡಿ ಕಲ್ಲು ಹೆಕ್ಕುವ ಕೆಲಸ, ಬದು ಕಟ್ಟುವುದು ಮಾಡಿಯೇ ಮಾಡಿದೆವು. ಚೂಪಾದ ಕಲ್ಲುಗಳು ನಮ್ಮ ಬೆರಳುಗಳನ್ನೆಲ್ಲ ಗೀರಿ ಗಾಯ ಮಾಡಿಟ್ಟವು. ಮತ್ತೆ ಮಳೆ ಹೊಯ್ದಾಗ ಗದ್ದೆಯಲ್ಲಿ ತಕ್ಕಮಟ್ಟಿಗೆ ಚೆನ್ನಾಗಿ ನೀರು ನಿಂತಿತು.

ಬಾರಿ ನಲ್ವತ್ತೈದು ಬಿಹೆಚ್ಪಿ ಶಕ್ತಿಯ ದೊಡ್ಡ ಟ್ರಾಕ್ಟರ್ ಒಂದಕ್ಕೆ ಹೇಳಿದ್ದೆ. ಬೆಳಗ್ಗೆ ಒಂಭತ್ತು ಗಂಟೆಗೆ ಬರುವುದಾಗಿ ಹೇಳಿದ್ದ. ನಾವು ಸುಮಾರು ಕಾಲುಗಂಟೆ ತಡವಾಗಿ ಅಲ್ಲಿಗೆ ತಲುಪಿದೆವು. ಒಮ್ಮೆ ಡುರ್ರ್ ಎಂಬ ಶಬ್ದ ಕೇಳಿದಂತಾಯಿತು. ಟ್ರಾಕ್ಟರ್ ಕಾಣಲಿಲ್ಲ. ಇನ್ನಷ್ಟು ಇಳಿದು ಹೋದಾಗ ಗದ್ದೆಯ ಮೂಲೆಯಲ್ಲಿ ತೆಂಗು ನೆಡಲು ತೆಗೆಸಿದ ದೊಡ್ಡ ಖಾಲಿ ಗುಂಡಿಯಲ್ಲಿ ಕೆಸರಿನಲ್ಲಿ ಹೂತು ನಿಂತಿತ್ತು. ನಮ್ಮ, ನಮ್ಮ ಜಾಗದ ಏನೊಂದೂ ಪರಿಚಯವಿಲ್ಲದ ಸವಾರ ನಾವು ಬರುವ ಮೊದಲೇ ಗದ್ದೆಗೆ ವಾಹನ ಇಳಿಸಿ ಫಚೀತಿ ಮಾಡಿದ್ದ. ಟ್ರಾಕ್ಟರ್ ಶಕ್ತಿಶಾಲಿ ಮತ್ತು ಹೆಚ್ಚು ತೂಕದ್ದು. ಅದು ಸಿಕ್ಕಿಬಿದ್ದ ಜಾಗದಲ್ಲಿ ನಮಗೆ ಅನುಕೂಲವಾಗುವಂತೆ ಬಳ್ಳಿ ಕಟ್ಟಿ ಎಳೆಯುವಂಥ ಮರವೇನೂ ಇರಲಿಲ್ಲ. ಗದ್ದೆಯ ನೀರು ಖಾಲಿ ಮಾಡಲು ಮುಂದಿನ ನಾಲ್ಕು ಗಂಟೆ ಜಾರಿ ಹೋಯಿತು. ಅದು ಸಿಕ್ಕಿಬಿದ್ದ ಪರಿಸ್ಥಿತಿ ಏನು, ಅದನ್ನು ಹೊರತೆಗೆಯಲು ನಾವು ಮಾಡಿದ ಕುಟಿಲೋಪಾಯಗಳು ಏನು ಎಂದು ಬರಹದಲ್ಲಿ ಹೇಳುವುದಕ್ಕಿಂತ ಮತ್ತೊಮ್ಮೆ ಅದನ್ನು ಹೊಂಡದಲ್ಲಿ ಹಾಕಿ ತೋರಿಸುವುದು ಸುಲಭವಾದೀತು. ಅಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಅದನ್ನು ಇಂಚಿಂಚೇ ಹಿಂತೆಗೆದು ಪಾರುಮಾಡಿಬಿಟ್ಟೆವು. ಹೋದ ಜೀವ ಬಂದಂತಾಗಿತ್ತು. ಹೆಚ್ಚುಕಮ್ಮಿಯಾಗಿದ್ದರೆ ಜೆಸಿಬಿ ತಂದು ಗದ್ದೆಯನ್ನು ಲಗಾಡಿ ತೆಗೆದು ಟ್ರಾಕ್ಟರ್ ಹೊರತೆಗೆಯಬೇಕಿತ್ತು. ಸದ್ಯಕ್ಕೆ ಹಾಗೇನೂ ಆಗಲಿಲ್ಲ
ಅಡಿಕೆ ಮರದ ಅಟ್ಟೊಳಿಗೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಹೊರಬಂದ
ಒಕ್ಕುಯಂತ್ರ

ಕಾಲಯಾಪನೆಗಾಗಿ ಆಮೆಗೆ ಕಸರತ್ತು (ಇದನ್ನು ತಿನ್ನಲಾಗುವುದಿಲ್ಲ) 
ಕಣ್ಣೀರಿನ ಬದಲಿಗೊಂದು ಸೆಲ್ಫೀ 

ಇಡಿಯ ಗದ್ದೆ ಉಳುಮೆ ಮಾಡಿ ಮುಗಿಸಿದಾಗ ಸಂಜೆ ಐದಾಗಿತ್ತು. ಈಗ ಕೆಸರು ಗದ್ದೆಯಲ್ಲಿ ಟ್ರಾಕ್ಟರ್ ಹಿಂಬದಿಗೆ ಭಾರವಾದ ಅಡಿಕೆ ಮರವೊಂದನ್ನು ಅಡ್ಡಲಾಗಿ ಕಟ್ಟಿ, ಅದರ ಮೇಲೆ ನಾವು ಭಾರಕ್ಕೆ ನಿಂತು ಕೆಸರನ್ನು ಎತ್ತರದಿಂದ ತಗ್ಗಿನೆಡೆಗೆ ಎಳೆದುಲೆವೆಲ್ಮಾಡುವ ನಮ್ಮ ಕೆಲಸ ಶುರುವಾಯ್ತು. ಪ್ರಯತ್ನವೇನೋ ಚೆನ್ನಾಗಿ ಮಾಡಿದೆವು. ಆದರೆ ಫಲ ಸಾಲದು. ಗದ್ದೆ ಲೆವೆಲ್ ಮಾಡಲು ಬಹುಶ: ಬೇರೆ ಉಪಕರಣಗಳಿರಬಹುದು. ಅದಿಲ್ಲದಿದ್ದರೆ ಮಾನವಶ್ರಮವೇ ಒಳಿತು. ಲೆವೆಲ್ ಮಾಡುವ ಕೆಲಸ ಆಷ್ಟೇನೂ ಫಲಕಾರಿಯಾಗಲಿಲ್ಲ. ರಾತ್ರಿ ಏಳೂವರೆಯ ಕತ್ತಲಲ್ಲಿ ಅಡಿಕೆಮರದ ಮೇಲೆ ನಿಂತವನು ಟ್ರಾಕ್ಟರ್ನ ಏಳೆತದ ಒಯ್ಲಿಗೆ ಬಿದ್ದರೂ ಗೊತ್ತಾಗದಷ್ಟು ನಾವು ಸುಸ್ತಾಗಿದ್ದೆವು. ಇನ್ನು ಸಾಕುನಮ್ಮ ಜೀವ ಲೆವೆಲ್ಆಗುವ ಸಾಧ್ಯತೆ ಇದೆ ಎಂದು ನಾನು ನಿಲ್ಲಿಸಲು ಹೇಳಿದೆ

ಮತ್ತೆ ಹಾಳಾದ ಬಿತ್ತನೆ ಬೀಜ
ಎರಡನೆಯ ಬಾರಿ ನೆರೆಮನೆಯಿಂದ ಎರವಲು ತಂದು ಐದು ಕೇಜಿ ಬಿತ್ತನೆ ಬೀಜ ಹಾಕಿದ್ದೆ. ಎರಡು ವರ್ಷ ಹಳೆಯ ಬೀಜ, ಹುಟ್ಟಲಾರದೇನೋ ಎಂದು ಅವರೇ ಹೇಳಿದ್ದರು. ನೂರಾರು ವಿವಿಧ ಜಾತಿಗಳನ್ನು ಬೀಜದಿಂದ ಬೆಳೆಸಿದ ಅನುಭವಿಗೆ ಯಕಶ್ಚಿತ್ ಭತ್ತವನ್ನು ಹುಟ್ಟಿಸುವುದು ಕಷ್ಟವಾಗಲಾರದೆಂದು ಹುಂಬ ಧೈರ್ಯದಿಂದ ತಂದಿದ್ದೆ. ಒಂದೇ ಒಂದು ಗಿಡ ಹುಟ್ಟಲಿಲ್ಲ. ಮತ್ತೆ ಕೆಜಿ ಭತ್ತ, ಅರ್ಧ ದಿನದ ಕೆಲಸ ನಷ್ಟವಾಯಿತು. ಮೂರನೆಯ ಬಾರಿ ಬೀಜ ಹೊಂದಿಸುವುದೇ ಕಷ್ಟವಾಯಿತು. ಬಿತ್ತಿದ್ದು ಒತ್ತಾಗಿ ಹುಟ್ಟಲಿಲ್ಲ.

ನಾಟಿ ಮತ್ತು ಬೆಳವಣಿಗೆ

ಹೊಸದಾಗಿಚಾಪೆನೇಜಿ ಮಾಡಿ ಮತ್ತೆ ನೆಡುಯಂತ್ರದ ಮೂಲಕ ನೆಡಿಸಿದೆ. ನಮ್ಮ ದುರಾದೃಷ್ಟಕ್ಕೆ ಈಬಾರಿ ಒತ್ತೊತ್ತಾಗಿ ಹುಟ್ಟಿಬರದೆ ಸ್ವಲ್ಪ ತೊಂದರೆ ಆಯಿತು. ಅಂತೂ ನೆಟ್ಟು ನಿರಾಳನಾದೆ. ಸಾವಯವ ಗದ್ದೆ ಬೇಸಾಯದಲ್ಲಿ ಮುಂದಿನದು ಸ್ವಲ್ಪ ಸುಲಭ. ಗಿಡ ತಾನಾಗಿ ಬೆಳೆದು ಫಲಕೊಡಲು ಕಾಯುವುದಷ್ಟೆ. ಹುಳಬಿದ್ದರೆ ಸಿಂಪಡಣೆಯಿಲ್ಲ. ಪ್ರಕೃತೀ ಶಕ್ತಿಯ ಮೇಲೆ ನಂಬಿಕೆಯಿಟ್ಟು ಮನಸ್ಸು ಗಟ್ಟಿ ಮಾಡಿ ನೀರಿನ ಮಟ್ಟ ಇಳಿಯದಂತೆ ನೋಡಿಕೊಳ್ಳುವುದಷ್ಟೆ
ಗದ್ದೆ ಮಟ್ಟಸವಾಗಿಲ್ಲದೆ, ಒಂದೇ ಹದಕ್ಕೆ ನೀರು ನಿಲ್ಲದೆ ಖಾಲಿ ಇದ್ದ ಜಾಗದಲ್ಲಿ ಹುಲ್ಲು ಉಕ್ಕೇರಿ ಬಂತು. ಕೃಷ್ಣ ಮತ್ತು ನಾನು ಅರ್ಧ ದಿನ ಹುಲ್ಲು ತೆಗೆಯಲು ಪ್ರಯತ್ನಿಸಿದೆವು. ಪ್ರಯತ್ನಿಸಿದ ಸಮಾಧಾನ ಮಾತ್ರ ಉಳಿಯಿತು. ಹುಲ್ಲು ಬೆಳೆಯಿತು

ಅಂತೂ ಇಂತೂ ಪೈರು ಬಂತು, ಹುಳ ಹಕ್ಕಿಗಳೂ ಬಂದವು!
ಪೈರು ಕಚ್ಚಿ ಹಾಲ್ದೆನೆ ಮೂಡುತ್ತಿದ್ದಂತೆ ತೆನೆಹೀರುವ ಸೊಳ್ಳೆಜಾತಿಯವು (ಬಂಬುಚ್ಚಿ ಎಂದರೆ ಇದೇ?) ಧಾಳಿ ಇಟ್ಟವು
ಹೀರಿ ಹೀರಿ ಜೊಳ್ಳು ಮಾತ್ರ ಉಳಿಸುತ್ತಿದ್ದವು
ರಸ ಹೀರುತ್ತಿರುವ ಕೀಟಗಳು
ಹೀರಿದ ಮೇಲೆ ಉಳಿಯುವ ಜೊಳ್ಳು
ಆರೋಗ್ಯವಂತ ತೆನೆ 

ಉಳಿದ ಕಾಳುಗಳು ಬೆಳೆಯುತ್ತಿದ್ದಂತೆ ಮುನಿಯಾಗಳು ಧಾವಿಸಿ ಬಂದವು. ಬೆಳಗ್ಗೆ ರವಿಮೂಡಿದ ಮೇಲೆ ಹನ್ನೊಂದು ಗಂಟೆಯ ವರೆಗೆ, ಸಂಜೆ ಮೂರು ಗಂಟೆಯಿಂದ ಹೊತ್ತು ಮುಳುಗುವ ವರೆಗೆ ಸತತವಾಗಿ ಪೈರಿನಲ್ಲೇ ಜೋಕಾಲಿ ಜೀಕುತ್ತ ಕಾಳುತಿನ್ನುತ್ತ ಮಜಾಹೊಡೆಯುತ್ತಿದ್ದ ಅವುಗಳ ಸೌಂದರ್ಯವನ್ನು ಆಸ್ವಾದಿಸೋಣವೆಂದರೆ, ಅಲ್ಲಿ ಸೂರೆಹೋಗುತ್ತಿದ್ದವ ನಾನೇ!. ಅಂತೂ ಒಂದಿಪ್ಪತ್ತು ದಿನಗಳ ಸತತ ಪ್ರಯತ್ನದ ಬಳಿಕ ಗದ್ದೆಯನ್ನು ಸಂಪೂರ್ಣ ಖಾಲಿ ಮಾಡಿಬಿಟ್ಟವು. ಯಾವ ಪೈರನ್ನು ಮುಟ್ಟಿದರೂ ಕಾಳು ಕೈಗೆ ಸಿಗುತ್ತಿರಲಿಲ್ಲ. ಬ್ಯಾಲೆನ್ಸ್ ಶೀಟಿನಲ್ಲಿ ಹೆಚ್ಚುಕಮ್ಮಿ ಮುವ್ವತ್ತು ಸಾವಿರ ರುಪಾಯಿ ಖೋತಾ ಬಜೆಟ್ ಅಷ್ಟೆ ಉಳಿಯಿತು.

ಮುಂದಿನ ಬೆಳೆಗಾದರೂ ಗದ್ದೆ ಮಟ್ಟ ಮಾಡಬೇಕೆಂದು ಭೋವಿ ಕೆಲಸಗಾರರನ್ನು ಕರೆಸಿ ಗದ್ದೆ ಕೊಯ್ಯಿಸಿ ಮತ್ತೆ ೧೮೦೦೦ ಖರ್ಚು ಮಾಡಿಸಿ ಇತ್ತೀಚೆಗೆ ಲೆವೆಲ್ ಮಾಡಿಸಿದೆ. ಕಾಳನ್ನು ಹೊಡೆದು ಬೇರ್ಪಡಿಸಿದರೆ ಏನೂ ಸಿಗಲಾರದೆಂದು ಹಾಗೇ ಬೈಹುಲ್ಲಾಗಿ ಉಪಯೋಗಿಸಲು ಮನೆಗೆ ತಂದೆ.
ಈಗ ಕಾಳಿನ ಹೊಟ್ಟು ಇರುವ ಹುಲ್ಲನ್ನು ತಿನ್ನಲು ದನಗಳೂ ಒಪ್ಪುತ್ತಿಲ್ಲ!!! ಅಕ್ಕಿಯಿಲ್ಲದಿದ್ದರೂ ಹೊಟ್ಟು ಹೊಡೆದು ಪ್ರತ್ಯೇಕಿಸಬೇಕಾಗಿತ್ತು, ನನಗೆ ಹೊಳೆಯಲಿಲ್ಲ.

ಉಣ್ಣುವುದೆಂದರೆ ಬೆಳೆಯುವುದರ ಅಂತಿಮ ಹಂತ - Eating is an agricultural act
ನಾವುಣ್ಣುವ ಅನ್ನವನ್ನು(ಅಥವಾ ಇನ್ಯಾವುದೇ ಬೆಳೆ) ಬೆಳೆಯುವ ಜವಾಬುದಾರಿ ನಾವು ಹೊತ್ತರೆ ಜಗತ್ತಿನ ಮುಕ್ಕಾಲುಭಾಗ ಸಮಸ್ಯೆಗಳು ಇಲ್ಲವಾಗುತ್ತದೆ. ಇಷ್ಟೆಲ್ಲ ಕಷ್ಟಪಟ್ಟು ಅನ್ನಬೆಳೆಯುವುದು ಬೇಕೇ ಎನ್ನುವ ಪ್ರಶ್ನೆ ಸಹಜ. ಇದು ನಮಗೊಂದು ಆಯ್ಕೆಯಲ್ಲ, ಅದು ಉಸಿರಾಡಿದಂತೆ - ‘ನಮ್ಮ ಅನಿವಾರ್ಯತೆ’. ಅದಿಲ್ಲದೆ ನಾವು ಬದುಕಲಾರೆವು. ಅನ್ನದಿಂದ ದೂರ ನಡೆದು ನಾವು ಕಳೆದುಕೊಳ್ಳುವುದೇನು ಎನ್ನುವ ಬಗ್ಗೆ ಇತ್ತೀಚೆಗೆ ಒಂದು ಸಂವಾದದಲ್ಲಿ ಪಾಲ್ಗೊಂಡಿದ್ದೆ. ಎರಡು ಗಂಟೆ ಮಾತಾಡಿದರೂ ವಿಷಯಗಳು ಮುಗಿಯಲಿಲ್ಲ. ಆದರೆ ಬೆಳೆದು ಉಣ್ಣದೆ ಇದ್ದರೆ ಆಗುವ ನೇತ್ಯಾತ್ಮಕ ಪರಿಣಾಮಗಳ ಶಮನದ ಬದಲಿಗೆ, ಬೆಳೆದು ಉಂಡರೆ ಸಿಕ್ಕುವ ಆನಂದಕ್ಕಾಗಿ, ಇತ್ಯಾತ್ಮಕತೆಗಾಗಿ ನಾವು ಬೆಳೆಯಬೇಕು. ನಾನು ಕಳೆದುಕೊಂಡ ದುಡ್ಡಿನ ಬದಲಿಗೆ ನಾನು ಬಹಳಷ್ಟು ಕಲಿತಿದ್ದೇನೆ. ಗದ್ದೆಯ ಕೆಸರಿನಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮಗ ಬಿಸಿಲು ಮಳೆಯಲ್ಲಿ ನನ್ನೊಂದಿಗೆ ಗದ್ದೆಯಲ್ಲಿ ಆಟವಾಡಿದ್ದಾನೆ. ಮುಂದಿನ ಬೆಳೆಗಳು ಯಶಸ್ವಿಯಾದರೆ ನಾವು ಪಟ್ಟ ಕಷ್ಟಗಳು ನಗಣ್ಯ.

ಮೊದಲೇ ಬೇಯಿಸಿದ ಅನ್ನ ಪ್ಯಾಕೆಟ್ನಲ್ಲಿ ಸಿಕ್ಕರೆ ಸಂತೋಷದಿಂದ ಕೊಳ್ಳುವ ಹಂತದಲ್ಲಿ ನಮ್ಮ ಮಾನಸಿಕ ದಿವಾಳಿತನ ಇಂದು ಇದೆ. ಇಂದು ಕೃಷ್ಣನಂಥ ಸರ್ವಾಂಗೀಣ ದುಡಿಮೆಗಾರರು ಗೌರವದಿಂದ ವಂಚಿತರಾಗಿದ್ದಾರೆ. ಇದಕ್ಕೆ ಪರಿಹಾರ ಹಳ್ಳಿಗರಿಗೆ ಸೌಕರ್ಯ ಕೊಡುವುದಲ್ಲ. ಪಟ್ಟಣಿಗರು ಸ್ವ ಇಚ್ಛೆಯಿಂದ ತಮ್ಮ ಅನುಕೂಲತೆಗಳನ್ನು ಕಡಿಮೆ ಮಾಡಿಕೊಳ್ಳುವುದು
ಬೆಳೆದು ಉಣ್ಣುವುದು ಪ್ರಕ್ರಿಯೆಯ ಆರಂಭವೂ ಹೌದು, ಅಂತ್ಯವೂ ಹೌದು.

Comments

 1. ಓದಿದ ಮೇಲೆ ಮನಸ್ಸಿಗೆ ಬೇಸರವಾಯ್ತು. ಮುಂದಿನ ಸಲಕ್ಕೆ ಏನು ಮಾಡಬಹುದು, ಕೀಟ/ಹಕ್ಕಿಗಳ ಹತೋಟಿ ಮಾಡಲು?

  ReplyDelete
  Replies
  1. ಇದೇ ವಿಧಾನದಲ್ಲಿ ಇಷ್ಟೇ ಜಾಗದಲ್ಲಿ (೧/೩ ಎಕರೆ) ಒಂದೇ ಬೆಳೆಯಲ್ಲಿ ಹತ್ತಿರ ಹತ್ತಿರ ವರ್ಷಕ್ಕಾಗುವಷ್ಟು ಬೆಳೆಯುವುದು ಸಾಧ್ಯವಿದೆ. ಇತರೆಲ್ಲ ಗದ್ದೆಗಳಲ್ಲಿ ಬೆಳೆ ಇರುವಾಗಲೇ ನಾವೂ ಮಾಡಬೇಕು. ಮತ್ತು ಅದೃಷ್ಟ ಕೂಡಬೇಕು.
   ನಿಮ್ಮ ಕಾಳಜಿಗೆ ನನ್ನ ವಂದನೆಗಳು.

   Delete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!