ಅಂಜೂರವೆಂಬ ಚಮತ್ಕಾರ

ಅಂಜೂರವೆಂಬ ಚಮತ್ಕಾರ
ನಗುವ ಅಂಜೂರದ ಹೂವೇ.(ಒಳಗೆ ಕಪ್ಪಗಿರುವುದು ಬೀಜಕಟ್ಟಿದ ಬಳಿಕದ್ದು)

ನಾವೆಲ್ಲ ಹಸಿಯಾಗಿ,ಒಣಗಿಸಿ ತಿಂದು ಚಪ್ಪರಿಸುವ ಅಂಜೂರದ ಹಣ್ಣು  ನಿಜವಾಗಿ ಹಣ್ಣಲ್ಲ! ಅದೊಂದು ಹೂವೂ ಅಲ್ಲ ! ಸಾವಿರಾರು ಹೂಗಳನ್ನು  ಹೊಟ್ಟೆಯೊಳಗೆ ಅಡಗಿಸಿಟ್ಟ ಹೂಗೊಂಚಲ ತೊಟ್ಟು. ನಾವು ಧರಿಸಿದ ಸ್ವೆಟರ್ ನ್ನು ಕೈಯೆತ್ತಿ ಕಳಚುವಾಗ ಅದು ಅಡಿಮೇಲಾಗುವುದಿಲ್ಲವೆ? ಹಾಗೆ ಹೂಗೊಂಚಲು ಅಡಿಮೇಲಾಗಿ ಹೂಗಳೆಲ್ಲ ಒಳಗೆ ಕೂತಿವೆ. ರೀತಿಯ ಫಲರೂಪೀ ಹೂಗೊಂಚಲನ್ನು  'ಸೈಕೋನಿಯಂ' ಎಂದು ಸಸ್ಯಶಾಸ್ತ್ರ ಕರೆಯುತ್ತದೆ. ಅತ್ತಿ, ಆಲ, ಬಸರಿ, ಅಶ್ವತ್ಥ ದಂತಹ ನೂರಾರು Ficus ಉಪಜಾತಿಗಳು ಇಂತಹ ಹೂಗಳನ್ನು ಧರಿಸುತ್ತವೆ. ಲೇಖನದ ಮಟ್ಟಿಗೆ ಇವನ್ನೆಲ್ಲ 'ಅಂಜೂರ'ಎಂದೇ ಕರೆಯೋಣ.
ಸರಿ. ಹೀಗಿರುವ ವಿಚಿತ್ರವಾದ ಹೂವಿನಲ್ಲಿ, ಪರಾಗಸ್ಪರ್ಶ ಹೇಗೆ? ಬೀಜದ ಉಗಮ ಹೇಗೆ , ಅಂಜೂರದ ವಂಶ ಬೆಳೆಯುವುದು ಹೇಗೆ? - ತಲ್ಲಣಿಸದಿರು ಅಂಜೂರವೇ; ಎಲ್ಲರನ್ನೂ ಸಲಹುವ, ಬಲ್ಲಿದನಾದ ಕಾಗಿನೆಲೆಯಾದಿಕೇಶವರಾಯ ಇದಕ್ಕೊಂದು ಪರಿಹಾರ ಮಾಡಿಟ್ಟಿದ್ದಾನೆ. ಪರಿಹಾರದಲ್ಲಿ ಬೇರೊಂದು ಜೀವಿಗೆ ಜೀವನವನ್ನೇ ಕೊಟ್ಟಿದ್ದಾನೆ! ಜೀವಿಯೇ ಅಂಜೂರದ ಹುಳ (Fig Wasp).ಅಂಜೂರದ ಹುಳುಗಳಲ್ಲಿ ನೂರಾರು ಉಪಜಾತಿಗಳಿವೆ. ಪ್ರತೀ ಅಂಜೂರ (Ficus) ಉಪಜಾತಿ (species)ಗೆ ಒಂದು ಅಥವಾ ಅಪರೂಪಕ್ಕೆ ಒಂದಕ್ಕಿಂತ ಹೆಚ್ಚು ಉಪಜಾತಿಯ ಹುಳಗಳು ತಳಕುಹಾಕಿಕೊಂಡಿವೆ. ಪ್ರಕೃತಿಯಲ್ಲಿ ಪರಸ್ಪರ ಅವಲಂಬನೆಯ ಮೂಲಕ ನಡೆದ ವಿಕಾಸಕ್ಕೆ ಇದೊಂದು ಅದ್ಭುತ ಉದಾಹರಣೆ. ಅಂಜೂರದ ಹುಳದ ಜೀವನದ ಮೂಲಕ ಇಡಿಯ ಪ್ರಕ್ರಿಯೆಯನ್ನು ನೋಡೋಣ.
  
ಗರ್ಭ ಧರಿಸಿದ ಅಸಂಖ್ಯ ಹೆಣ್ಣು ಅಂಜೂರದ ಹುಳಗಳು ಹೊರ ವಾತಾವರಣವನ್ನು ಸೇರಿ ಮೊಟ್ಟೆಗಳನ್ನಿಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿರುತ್ತವಷ್ಟೇ. ಹೊತ್ತಿಗೆ ಎಳೆಯ ಅಂಜೂರದ ಕಾಯಿಗಳು (ಅಂದರೆ ಹೂಗೊಂಚಲು), ಹುಳಗಳನ್ನು ಆಕರ್ಷಿಸಲು ವಿಶಿಷ್ಟವಾದ ಪರಿಮಳವೊಂದನ್ನು ಹೊರಸೂಸಿ ಸಂಕೇತವನ್ನು ಕೊಡುತ್ತಿರುತ್ತ್ತವೆ. ಹಲವು ಪ್ರಾಕೃತಿಕ ಅಡೆತಡೆಗಳನ್ನು ದಾಟಿ ಬದುಕುಳಿದ ಕೆಲವೇ ಗರ್ಭಿಣಿ ಹುಳಗಳು ತಮ್ಮ ಗಮ್ಯಸ್ಥಾನವಾದ ಅಂಜೂರವನ್ನು  ತಲುಪುತ್ತವೆ. ತಲುಪಿದ್ದೇನೋ ಆಯಿತು, ಪ್ರಸೂತಿಗೃಹವೇ ಹುಳಗಳಿಗೊಂದು ಚಕ್ರವ್ಯೂಹ - ಹೌದು, ಇದಕ್ಕೆ  ಪ್ರವೇಶ ಕಷ್ಟ, ಒಮ್ಮೆ ಹೊಕ್ಕರೆ  ವಾಪಸು ಬರುವಂತಿಲ್ಲ !. ಇಡಿಯ ಅಂಜೂರಕ್ಕಿರುವುದು ಒಂದೇಒಂದು ಕಿಂಡಿ. ರಂಧ್ರಕ್ಕೆ  ಸಸ್ಯಶಾಸ್ತ್ರದಲ್ಲಿ ostiole ಎನ್ನುತ್ತಾರೆ. ಇದರ ಪ್ರವೇಶಕ್ಕಾಗಿಯೇ,ಹುಳದ ದೇಹ ತೆಳ್ಳಗಾಗಿ  ಮಾರ್ಪಾಟಾಗಿದ್ದು, ಗದ್ದದ ಭಾಗದಲ್ಲಿ ಹಿಂದಕ್ಕೆ ಜಾರದಂತೆ ತಡೆಯಲು ಮೆಟ್ಟಿಲುಗಳ ರಚನೆ ಇದೆ (mandibular appendages). ಕಷ್ಟಪಟ್ಟು ಒಳಗೆ ಹೊಗುತ್ತಲೂ ಹುಳದ ರೆಕ್ಕೆ,ಕೊಂಬುಗಳೆಲ್ಲ ಮುರಿದುಬೀಳುತ್ತವೆ! ಹಾಗೂಹೀಗೂ ಒಳಗೆ ಹೊಕ್ಕ ಹುಳಗಳಿಗೆ ಇನ್ನು ಹೆರಿಗೆ. ಅಂಜೂರದ ಹೂಗಳೊಳಗೆ ಮೊಟ್ಟೆ ಇಡಲೆಂದೇತಾಯಿ ಹುಳಕ್ಕೆ ಉದ್ದವಾದೊಂದು ಪೈಪ್ ಇದೆ (ovipositor). ಇದನ್ನು  ಒಂದೊಂದೇಹೂವಿನೊಳಗಿಳಿಸಿ ಇನ್ನೂ ಫಲಕಟ್ಟದ ಗರ್ಭದ(ovule)ಆಯಕಟ್ಟಿನ ಸ್ಥಳದಲ್ಲಿ ಮೊಟ್ಟೆಯಿಟ್ಟರಷ್ಟೇ ಮರಿಗಳು ಬಂದಾವು.ಇಲ್ಲದಿದ್ದರೆ ಶ್ರಮ ವ್ಯರ್ಥ. ಮೊಟ್ಟೆಯಿಡುವ ಪ್ರಕ್ರಿಯೆಯಲ್ಲಿ ತಮಗೆ ತಿಳಿಯದೆಯೇ ಹೂವಿಗೆ ಪರಾಗಸ್ಪರ್ಶ ಮಾಡುವ ಹುಳಗಳು ಕೆಲವಾದರೆ, ತಮ್ಮ ದೇಹದ ಪರಾಗಚೀಲ (pollen sac)ದಲ್ಲಿ ತುಂಬಿದ ಪರಾಗರೇಣುಗಳನ್ನು ಕೈಯಿಂದ ತೆಗೆದು ಉದ್ದೇಶಪೂರ್ವಕವಾಗಿ  ಹೂವಿಗೆ ಫಲಕಟ್ಟಿಸುವ ಹುಳಗಳು ಇನ್ನು ಕೆಲವು ಜಾತಿಯವು.

ಯಾವುದೇ  ಹೂವಿನ ಹೆಣ್ಣು ಭಾಗ (pistil)ದಲ್ಲಿ ಸ್ಥೂಲವಾಗಿ ಮೂರು ಘಟಕಗಳು. )ಪರಾಗರೇಣುವನ್ನು  ಸಂಗ್ರಹಿಸಲು ಒಂದು ತಟ್ಟೆ (stigma), )ಅಂಡಾಶಯ (ovary), ) ತಟ್ಟೆಯಿಂದ ಅಂಡಾಶಯಕ್ಕೆ ಬೀಜಾಣುಗಳು ಇಳಿಯಲೊಂದು ನಾಳ (style). ಅಂಜೂರದ ಹೆಣ್ಣು ಹೂಗಳಲ್ಲಿ ಎರಡು ರೀತಿ. ಉದ್ದ ನಾಳದವು ಮತ್ತು ಗಿ ಡ್ಡ ನಾಳದವು (long styled, short styled). ಉದ್ದನಾಳದ ಹೂಗಳ ತತ್ತಿಯನ್ನು ಮುಟ್ಟುವಷ್ಟು ಹೆಣ್ಣು ಹುಳದ ovipositor ನೀಳವಾಗಿರದ ಕಾರಣ  ಹೂಗಳಲ್ಲಿ ಪರಾಗಸ್ಪರ್ಶವಷ್ಟೆ ನಡೆದು ಬೀಜಗಳು ಬೆಳೆಯುತ್ತವೆ ಮತ್ತು ಹುಳದ ಮರಿಗಳು ಸಾಯುತ್ತವೆ. ಗಿಡ್ಡನಾಳದ ಹೂಗಳಲ್ಲಿ ಮರಿಗಳು ಬೆಳೆದು ಬೀಜದ ಪೋಷಣೆಗೆಂದು ಮೀಸಲಾಗಿದ್ದ ಪೋಷಕಾಂಶವನ್ನು (endosperm) ತಿಂದು ಅಂಜೂರದ ಬೀಜದ ಸಾವಿಗೆ ಕಾರಣವಾಗುತ್ತವೆ. ಗಮನಿಸಬೇಕಾದ ಅಂಶವೆಂದರೆ, ಒಂದೇ ಅಂಜೂರದಲ್ಲಿ ಉದ್ದ ಮತ್ತು ಗಿಡ್ಡ ನಾಳದ ಹೂಗಳೆರಡೂ ಇರುತ್ತವೆ. ಆದ್ದರಿಂದ ಅಂಜೂರದ ಬೀಜಗಳೂ, ಹುಳದ ಮರಿಗಳೂ ನೆರೆಹೊರೆಯಲ್ಲಿ ಬೆಳೆಯತೊಡಗುತ್ತವೆ.ಇದೆಂತಹ ಹೊಂದಾಣಿಕೆ! ಮೊಟ್ಟೆಯಿಟ್ಟು ತನ್ನ ಕರ್ತವ್ಯ ಮುಗಿಸಿದ ತಾಯಿಹುಳ ಮತ್ತೆ ಹೊರಬರಲಾರದೆ, ಅಲ್ಲಿಯೇ ಸತ್ತರೂ, ಹೆಣವಾಗಿ ಉಳಿಯದೆ ಜೀರ್ಣವಾಗಿ ಅಂಜೂರದ ಹಣ್ಣಲ್ಲದ ಹಣ್ಣಿಗೆ ಪೋಷಕಾಂಶವಾಗುತ್ತದೆ.
ಅಂಜೂರವು ಬಲಿಯುತ್ತಿದ್ದಂತೆ ಅದರಲ್ಲಿರುವ ಗಂಡುಹೂಗಳು ಬೆಳೆದು ಪರಾಗರೇಣು ಪಕ್ವವಾಗುತ್ತದೆ. ಸಮಯಕ್ಕೆ ಹುಳದ ಲಾರ್ವಾಗಳೂ ಬಲಿತು ಗಂಡು ಮತ್ತು ಹೆಣ್ಣು ಹುಳಗಳು ಹೊರಬರುತ್ತವೆ.ಅಂಜೂರದ ಗಂಡು ಹುಳಗಳು ಹೆಣ್ಣಿಗಿಂತ ತೀರಾ ಭಿನ್ನ.ರೆಕ್ಕೆಯಿಲ್ಲದ ಅವಕ್ಕೆ ಹಾರುವ ಶಕ್ತಿಯೇ ಇಲ್ಲ.ಅವುಗಳ ಮುಖ್ಯ ಕೆಲಸವೆಂದರೆ ಈಗಷ್ಟೇ ಬಲಿತಿರುವ ಯುವ ಹೆಣ್ಣು ಹುಳಗಳನ್ನು ಕೂಡಿ ಮುಂದಿನ ಪೀಳಿಗೆಗೆ ನಾಂದಿ ಹಾಡುವುದು ಮತ್ತು ಗರ್ಭವತಿಯಾದ ಹೆಣ್ಣು ಹುಳವನ್ನು ಅಂಜೂರದಲ್ಲಿ ತೂತು ಕೊರೆದು ಹೊರವಾತಾವರಣಕ್ಕೆ ಮುಕ್ತಗೊಳಿಸುವುದು.ಇದಾದ ಬಳಿಕ ಗಂಡು ಹುಳಗಳು ಸಾವನ್ನಪ್ಪುತ್ತವೆ. ಗರ್ಭಧರಿಸಿದ ಹೆಣ್ಣುಹುಳಗಳು ಬೆಳೆದ ಗಂಡು ಹೂಗಳಿಂದ ಪರಾಗರೇಣುವನ್ನು ಸಂಗ್ರಹಿಸಿ ತಾವು ಬೆಳೆದ ಅಂಜೂರವನ್ನು ಬಿಟ್ಟು ಮೊದಲಬಾರಿಗೆ ಹೊರವಾತಾವರಣಕ್ಕೆ ಹಾರುತ್ತವೆ.ಈಗ ಅವಕ್ಕೆ ತಮ್ಮ ಪೀಳಿಗೆಯನ್ನು  ಮುಂದುವರೆಸುವ ಮತ್ತು ತಮಗೆ ಆಶ್ರಯಕೊಟ್ಟ ಅಂಜೂರದ ವಂಶವನ್ನು ಬೆಳೆಸುವ ಜಂಟಿ ಜವಾಬ್ದಾರಿ ಇದೆ. ಹೀಗೆ ಹೊರಹಾರಿದ ಹೆಣ್ಣು ಹುಳಗಳು ಇನ್ನೊಂದು ಅಂಜೂರವನ್ನು ಹೊಗುವುದರೊಂದಿಗೆ ಮುಂದಿನ ಅಧ್ಯಾಯ ಶುರುವಾಗುತ್ತದೆ (ಅಂಕ ರಿಂದ ಕಥೆ ಮತ್ತೆ ಮುಂದುವರೆಯುತ್ತದೆ). ಒಂದು ಅಂಜೂರದ ಪರಾಗವು ಬೇರೊಂದು ಅಂಜೂರಕ್ಕೆ  ಫಲಕಟ್ಟುವುದರಿಂದ ತಳಿ ವೈವಿಧ್ಯದ ಸಾಧ್ಯತೆ  ಹೆಚ್ಚುತ್ತದೆ (ಮನುಷ್ಯರು ಬೇರೆ ಗೋತ್ರದಿಂದ ಮದುವೆಯಾಗುವ ಹಾಗೆ). ಒಂದೇ ಅಂಜೂರದೊಳಗೆ ಒಂದಕ್ಕಿಂತ ಹೆಚ್ಚು  ತಾಯಿ ಹುಳಗಳು ಮೊಟ್ಟೆಯಿಟ್ಟು ಮರಿಮಾಡುವುದರಿಂದ ಅಂಜೂರದಮರಿಗಳ ನಡುವೆ ಸೋದರ ಸಂಬಂಧವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಅವಲಂಬನೆಯ ಬಲೆ
ಮನುಷ್ಯ,ಮಂಗ, ಅಳಿಲುಗಳಲ್ಲದೆ ನೂರಾರು ಜಾತಿಯ ಹಕ್ಕಿಪಕ್ಕಿಗಳು ಹಣ್ಣಾದ ಅಂಜೂರವನ್ನು ತಿಂದು ತಮ್ಮ ಹೊಟ್ಟೆ ಹೊರೆಯುತ್ತವೆ, ತಮಗೆ ತಿಳಿಯದೆಯೇ  ಬೀಜವನ್ನು ದೂರದೂರಕ್ಕೆ ಹೊತ್ತೊಯ್ಯ್ಯುತ್ತವೆ. ಪರಾಗಸ್ಪರ್ಶ ಮಾಡುವ ಉಪಕಾರಿ ಕೀಟಗಳಲ್ಲದೆ,ಹಾಗೇನೂ ಮಾಡದೆ ಅಂಜೂರದೊಳಗೆ ತಮ್ಮ ಮರಿಗಳನ್ನಷ್ಟೇ ಬೆಳೆಸಿ ಲಾಭಮಾಡಿಕೊಳ್ಳು ಕೀಟಗಳೂ ಇವೆ!ಹೀಗೆ ಹಲವಾರು ಜಾತಿಯ ವಿವಿಧ ಗಾತ್ರದ, ಜಾತಿಯ ಜೀವಿಗಳು ಅಂಜೂರದ ಉಳಿವಿಗೆ, ಬೆಳೆವಿಗೆ ಕಾರಣವಾಗುತ್ತವೆ ಮತ್ತು ಅಂಜೂರ ಅವಕ್ಕೆ ಆಹಾರವಾಗುತ್ತದೆ. ಪ್ರಕೃತಿ ಹೀಗೆ  ಸಿಕ್ಕುಸಿಕ್ಕಾದ ಅವಲಂಬನೆಯ ಕೊಂಡಿಗಳಲ್ಲಿ ಜೀವಿಗಳನ್ನು  ಸಿಕ್ಕಿಸಿ, ಅವುಗಳಿಗೆಲ್ಲ ಒಂದು ಮಟ್ಟಿನ ಸ್ವತಂತ್ರ ಜೀವನವನ್ನು ನೀಡಿದೆ. ಮನುಷ್ಯ ಮಾತ್ರ ತನ್ನ ಮಿತಿಯನ್ನು ಅರಿಯದೆ, ಅವಲಂಬನೆಯನ್ನು ತಿಳಿಯದೆ, ಬೆಳೆ-ಕಳೆಯೆಂದು ಬೇಧ ಮಾಡಿ, ಅಭಿವೃದ್ಧಿ ಎಂದು ನಾಶಮಾಡಿ, ನಿಂತ ಗೆಲ್ಲನ್ನೇ ಕಡಿದ ಕಾಳಿದಾಸನಂತೆ ಮೂರ್ಖನಾಗುತ್ತಿದ್ದಾನೆ. ಉಗುರಿನ ತುದಿಯಷ್ಟೇ ದೊಡ್ಡ ಅಂಜೂರದ ಹುಳಕ್ಕೆ , ಮುಷ್ಟಿಯಷ್ಟೆ ಇರುವ ಅಂಜೂರದ ಹಣ್ಣಿಗೆ ಇರುವ ವಿವೇಕ ಮನುಷ್ಯನಿಗೆ ಇದ್ದಂತಿಲ್ಲ!

ಸೂಚನೆ
)ಬರಹದಲ್ಲಿ  ನಾನು ಬಳಸಿದ ಕನ್ನಡ ಸಸ್ಯಶಾಸ್ತ್ರೀಯ ಶಬ್ದಗಳು ಭಾವಾನುವಾದವೇ ಹೊರತು ನಿಖರವಾದ text book ಶಬ್ದಗಳಲ್ಲ.

)Ficus ನಲ್ಲಿ monoecious(ದ್ವಿಲಿಂಗಿ)ಮತ್ತು  dioecious(ಏಕಲಿಂಗಿ ), ಎರಡೂ ಜಾತಿಯವು ಇವೆ. ಸದ್ಯಕ್ಕೆ ನಾನು ದ್ವಿಲಿಂಗಿ ಹೂಗಳನ್ನು ಗಮನದಲ್ಲಿಟ್ಟು ಬರೆದಿದ್ದೇನೆ - ಸರಳ ಓದಿಗಾಗಿ

Comments

  1. Tumbaa oLLe maahiti...but bit misleading ...Not all fig varieties need wasp to produce fruits...here is what I read in one of the horticulture website
    ". There are 3 main classes of figs and the class is what determines if a fig wasp is needed for producing ripe figs for that particular variety. There are many varieties in each of the main two classes but fewer in the third class called the 'San Pedro class'. The first class is called (in America anyway) "Smyrna class figs" - these require the wasp to pollinate both the early or breba crop of figs and the main or late crop of figs, or else the developing fruits drop off. The other main class is called 'common figs' - these do not require the wasp at all - the figs will develop without pollination (both crops, if your variety makes 2 crops). There is a smaller 3rd intermediate class of figs called 'San Pedro class figs' which form a breba crop without the wasp but need the wasp for the main crop.


    To make things more confusing, the wasp can pollinate both the common and San Pedro classes of figs also, which makes the developing fruit a little different - many feel the figs develop more flavor and crunchiness from seeds.

    ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!