ಕೃಷಿಮನೆಯ ಹುಡುಗನ ಸ್ವಗತ

ಕೃಷಿಮನೆಯ ಹುಡುಗನ ಸ್ವಗತ
                         -ವಸಂತ ಕಜೆ

[ಈ ಲೇಖನವನ್ನು ನಾನು ನಮ್ಮ ಕಜೆ (ಮಂಚಿ)ಮನೆಯವರನ್ನು ಉದ್ದೇಶಿಸಿ ಬರೆದಿದ್ದೇನೆ. ಆದರೆ ಇದು ಕೃಷಿಮನೆಯವರಿಗೆಲ್ಲರಿಗೂ ಪ್ರಸ್ತುತವೇ ಆಗಿರುವುದರಿಂದ ಇದನ್ನು ತಮ್ಮ ತಮ್ಮ ಮನೆಗೆ ಅನ್ವಯಿಸಿ ಓದಿಕೊಳ್ಳಬಹುದು]

ಇಂಜಿನಿಯರಿಂಗ್ ಮುಗಿದ ಮೇಲೆ ಇನ್ನೂ ಕೈಯಲ್ಲಿ ಕೆಲಸ ಇಲ್ಲದೆ, ನಾನು ಬೆಂಗಳೂರಿನ ಬೆಂಗಾಲಿ ಮಿತ್ರನೊಬ್ಬನ ಮನೆಯಲ್ಲಿ ಒಂದೆರಡು ವಾರ ಉಳಿದು ಕೆಲಸ ಹುಡುಕಿದ್ದೆ. ಅವನ ತಂದೆಏರ್ ಫೋರ್ಸ್ನಲ್ಲಿ ವಿಂಗ್ ಕಮಾಂಡರ್ ಆಗಿ ನಿವೃತ್ತರಾದವರು. ವಾಯುಪಡೆಯಲ್ಲಿ ಕೆಲಸಕ್ಕೆ ಸೇರುವ ಆಯ್ಕೆಯ ಬಗ್ಗೆ ಅವರು ನನಗೆ ಹೇಳಿದರು. ಅದಕ್ಕೆ ಅವರ ಮಗ, ’ಯೋಚನೆ ಮಾಡು, ಊರಿಂದ ಊರಿಗೆ ವರ್ಗಾವಣೆಯಾಗುತ್ತದೆ; ನಿನ್ನ ಮಕ್ಕಳಿಗೆ ಹುಟ್ಟೂರು ಎಂಬುದು ಇಲ್ಲವಾಗಿಬಿಡುತ್ತದೆಎಂದು ಹೇಳಿದ. ಅದು ಅವನ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಇತ್ತು. ನಾನು ಅರ್ಜಿಹಾಕುವ ಗೋಜಿಗೆ ಹೋಗಲಿಲ್ಲ. ನನಗೆ, ನನ್ನ ಮಗನಿಗೆ ಹುಟ್ಟೂರು ಇಲ್ಲವಾಗಲಿಲ್ಲ. ಸೇನೆಗೆ ಯಾರೂ ಸೇರಬಾರದೆಂದಲ್ಲ. ಇದು ನನ್ನ ವೈಯಕ್ತಿಕ ಆಯ್ಕೆ.

ಇದೊಂದು ಭಾವನಾತ್ಮಕ ವಿಷಯ. ನಾನು (ಮತ್ತು ನೀವೆಲ್ಲ) ಜೀವನದಲ್ಲಿ ನಮ್ಮ ಕಜೆಬೈಲಿಗಿಂತ ಮಿಗಿಲೆನಿಸುವ ಮನೆ, ತೋಟ, ಬೆಟ್ಟ ಗುಡ್ಡ, ಪ್ರಾಕೃತಿಕ ಸೌಂದರ್ಯದ ಮಕುಟಮಣಿಗಳನ್ನು ನೋಡಿದ್ದೇನೆ(ವೆ). ಆದರೆ ನಮ್ಮ ತಾಯ್ನೆಲವು ಅದರ ಓರೆಕೋರೆ ಸಮಸ್ಯೆಗಳೊಂದಿಗೆ ನಮಗೆ ಅಪ್ಯಾಯಮಾನವಾದುದು. ಅಂದರೆ ನಮ್ಮ ಕಜೆಬೈಲು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ವಿಚಾರದ ಬಗ್ಗೆಯೇ ನನ್ನ ಬರಹ ಇರುವುದರಿಂದ ಹುಟ್ಟಿಬೆಳೆದ ಸ್ಥಳದೊಂದಿದಿಗಿನ ನಮ್ಮ ಸಂಬಂಧವನ್ನು ಸ್ವಲ್ಪ ವಿವರವಾಗಿ ವಿಶ್ಲೇಷಿಸಬೇಕಾಗಿದೆ.

*        *      * 

ಯಾವುದಾದರೊಂದಕ್ಕೆ, ನಮ್ಮನ್ನು ನಾವು, ಹೇಳಿಕೊಳ್ಳುವಂತಹ ಕಾರಣವಿಲ್ಲದೆ (ಇರಲೇಬೇಕಾಗಿಲ್ಲದೆ – not a must) ಸೇರಿಕೊಂಡಿರುವುದಕ್ಕೆ ‘to belong’ ಎಂದು ಇಂಗ್ಲಿಷ್ನಲ್ಲಿ ಕರೆಯುತ್ತಾರೆ (belongingness). ಶಬ್ದವು ‘to be’ ಅಂದರೆ ಇರುವುದು, ಅಸ್ತಿತ್ವ ಅನ್ನುವ ಶಬ್ದದಿಂದ ಹುಟ್ಟಿದೆ. ಅಂದರೆ ನಮ್ಮ ಅಸ್ತಿತ್ವವು ನಾವು ಎಲ್ಲಿ, ಯಾವುದರ ಮೇಲೆ ಮತ್ತು ಒಳಗೆ ಇದ್ದೇವೋ ಅದಕ್ಕೆ ನಾವು ಮನ:ಪೂರ್ವಕವಾಗಿ ಸೇರಿಕೊಂಡಿರುವುದರ ಮೇಲೆ ಬಲವಾಗಿ ನಿಂತಿದೆ. ‘ಅಸ್ತಿ’, ಅಂದರೆ ಇರುವುದು ಎನ್ನುವುದರಿಂದ ನಮ್ಮ ಅಸ್ತಿತ್ವ. ಭೂಮಿಯೆನ್ನುವುದು ಸ್ಥಿರಾಸ್ತಿ. ಅದನ್ನು ಇದ್ದಲ್ಲಿಂದ ಬದಲಿಸಲಾಗದು. ಆದ್ದರಿಂದ ನಮ್ಮ ಮನೆಯೆನ್ನುವುದು ಶತಮಾನಗಳಿಂದ ಒಂದುಸ್ಥಿರ ಕಲ್ಪನೆಎನಿಸಿಕೊಂಡಿತ್ತು. ’ನಾನು ಕಜೆಯವಎಂದರೆ ನಾನು ಕಜೆಯವ ಅಷ್ಟೇ. ಅಮೆರಿಕದಲ್ಲಿದ್ದರೂ ನಾನು ಕಜೆಯವನೇ. ಅದೇ ನನ್ನನ್ನು ಬೇರೆಯವರಿಂದ ಪ್ರತ್ಯೇಕಿಸುವ ಅನನ್ಯತೆ(ಐಡೆಂಟಿಟಿ). 


ಎಲ್ಲರೂ ಒಂದಲ್ಲ ಒಂದು ಕಡೆ ಇದ್ದಾರೆ. ಆದ್ದರಿಂದ ಅವರೆಲ್ಲರೂ ಅಲ್ಲಿಗೆ ‘belong’ ಆಗಿದ್ದಾರೆ ಎಂದು ನೀವು ಅಂದುಕೊಳ್ಳಬಹುದು. ಹಾಗೇನೂ ಇಲ್ಲ. ಈಗಿನ ಆಧುನಿಕರಲ್ಲಿ ಬಹಳ ಮಂದಿಇದ್ದಾರೆಆದರೆಬೆಸೆದುಕೊಂಡಿಲ್ಲ’. ನನ್ನ ಹಳೆಯ ಸಹೋದ್ಯೋಗಿಯಬ್ಬ ನಗರದಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಈಗ ಬಾಡಿಗೆ ಮನೆಯಲ್ಲಿದ್ದಾನೆ. ’ಸದ್ಯಕ್ಕೆ ಮನೆ ಕಟ್ತಾ ಇದೀವಷ್ಟೆ, ಆಮೇಲೆ ಬೇರೊಂದುಕಡೆ ಒಂದು ತೋಟ ಮಾಡ್ಬೇಕುಅಂತ ಹೇಳುತ್ತಿದ್ದಾನೆ. ಅಂದರೆ ಅವನು ತನ್ನ ಈಗಿರುವ ಮನೆಗೂ ಬೆಸೆದಿಲ್ಲ. ತನ್ನ ಹೊಸಮನೆಯೊಂದಿಗೂ ಭಾವನಾತ್ಮಕವಾಗಿ ಬೆಸೆದಿಲ್ಲ. ರೀತಿ ಒಂದೇ ನಗರದಲ್ಲಿ ಕೆಲವಾರು ಮನೆಗಳನ್ನು ಹೊಂದಿದ್ದೂ ಯಾವುದಕ್ಕೂ ಸೇರದೆ ಇರುವ ಬಹಳ ಮಂದಿ ದೊಡ್ಡ ಸಂಬಳದ ಜನರು ನನ್ನ ಗೊತ್ತಿನಲ್ಲಿ ಇದ್ದಾರೆ. ಅಂದರೆ ಬೆಸೆಯುವುದು ಎಂಬ ಮೂಲಶೃತಿಯೇ ಇಲ್ಲದ ಜೀವನ ಸಂಗೀತವನ್ನು ಇವರು ನುಡಿಸುತ್ತಿದ್ದಾರೆ; ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ

ಆದರೆ ಈಗ ಸಮಾಜದಲ್ಲಿಭೂಮಿ ಬಗ್ಗೆಯೂಮಮತೆಕಡಿಮೆಯಾಗಿದೆ, ಆದರೆಆಸೆಹೆಚ್ಚಿದೆ. ಭೂಮಿಯು ಇತರೆಲ್ಲ ವಸ್ತುಗಳಂತೆ ಒಂದುಸರಕು’(commodity) ಆಗಿದೆ. ಕೆಲವು ವರ್ಷಗಳ ಹಿಂದೆ ಜಾಗ, ಮನೆ, ಕಾರು ಇವೆಲ್ಲ ಒಬ್ಬ ವ್ಯಕ್ತಿ ಜೀವಮಾನದ ದುಡಿಮೆಯಿಂದ ಗಳಿಸುವ ಸಂಪಾದನೆಗಳಾಗಿದ್ದವು. ಹಾಗಿದ್ದಾಗ ಅದಕ್ಕೊಂದು ಬೆಲೆಯಿತ್ತು. ಮೌಲ್ಯದ ಕಾರಣದಿಂದ ಅವನ್ನೆಲ್ಲ ಪ್ರೀತಿಯಿಂದ ಕಾಲಕಾಲದ ರಿಪೇರಿ, ಆರೈಕೆಗಳೊಂದಿಗೆ ನೋಡಿಕೊಂಡು ಸಾಧ್ಯವಾದಷ್ಟು ಸಮಯ ಅವುಗಳೊಂದಿಗೆ ಜೀವನಸಾಗಿಸುವುದಿತ್ತು. ಆದರೆ ಈಗ ಮೂರು ವರ್ಷ ಉಪಯೋಗಿಸಿ ವಾಹನವನ್ನು ಮೊದಲ ರಿಪೇರಿಯ ಮೊದಲೇ ಮಾರುವವರು ಇದ್ದಾರೆ. ಮೊಬೈಲುಗಳ ಬಾಳ್ವಿಕೆ ಆರು ತಿಂಗಳು! ಆದರೆ ನನಗಿಂತ ಹಿಂದಿನ ತಲೆಮಾರಿಗೆ ರೋಗ ಇರಲಿಲ್ಲ. ವಾಚುಗಳು 30 ವರ್ಷ ಬಾಳಿಕೆಬರುತ್ತಿದ್ದವು. ವಾಹನಗಳೂ 20 ವರ್ಷಕ್ಕಿಂತ ಮೇಲೆ. ನಮ್ಮಲ್ಲೊಂದು ಮೊಸರಿನ ಭರಣಿ ಇದೆ. ಅದು ಮೂವತ್ತೈದು ವರ್ಷ ಹಿಂದೆ ಅಮ್ಮ ಮದುವೆಯಾಗಿ ಬರುವ ಮೊದಲೇ ಉಪಯೋಗದಲ್ಲಿತ್ತು. 35 ವರ್ಷ = 365 X 35 = 12,775 ದಿನ ಪ್ರತಿದಿನ ಅದು ಉಪಯೋಗವಾಗಿದೆ ಆದರೆ ಒಡೆದಿಲ್ಲ. ಇಂತಹ ಉದಾಹರಣೆಗಳು ನಿಮ್ಮಲ್ಲೂ ಇದ್ದಾವು. ಅನಿವಾರ್ಯ ಕಾರಣಗಳಿಂದ ಒಂದು ವಸ್ತುವನ್ನು ಬದಲಾಯಿಸುವುದು ತಪ್ಪಲ್ಲ. ಆದರೆಬದಲಾಯಿಸುವುದೇ ಹೆಮ್ಮೆಎನ್ನುವುದು ಸಂಪೂರ್ಣ ತಪ್ಪು ಕಲ್ಪನೆ ಎಂದು ನಾನಿಲ್ಲಿ ಹೇಳುತ್ತಿರುವುದಷ್ಟೆ.
ಮಿತವ್ಯಯ ಮತ್ತು ವಸ್ತುಗಳ ಮೇಲಿನ ಪ್ರೀತಿ ಹದವಾಗಿ ಮಿಳಿತವಾದಾಗ ಇದು ಸಾಧ್ಯವಾಗುತ್ತದೆ. ಇದೇ ವಿಷಯವನ್ನುಭೂಮಿಗೆ ಅನ್ವಯಿಸಿ ಹೇಳುವುದಾದರೆ, ’ನಾವು ಮತ್ತು ನಮ್ಮ ಮುಂದಿನ ತಲೆಮಾರು ಇಲ್ಲಿ ಬಾಳಿಬದುಕಬೇಕಾಗಿದೆಎನ್ನುವಹದವಾದ ಸ್ವಾರ್ಥ ಬೆರೆತ ಪ್ರೀತಿನಮ್ಮ ಭೂಮಿ ಮತ್ತು ಮನೆಯನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಮಾಡಬಲ್ಲುದು. ರೀತಿ ನಮ್ಮ ಹಿಂದಿನವರು ಮತ್ತು ಇಲ್ಲಿರುವ ಹಿರಿಯರು ಮಾಡಿದ್ದರಿಂದ ನಮ್ಮ ಬೈಲು ಸೊಂಪಾಗಿ, ಸಮೃದ್ಧವಾಗಿ ಇಂದು ಇದೆ

ಹುಟ್ಟಿದ ಮನೆ, ಮನೆತನ, ಹುಟ್ಟೂರು, ಭಾಷೆ, ದೇಶಗಳಿಗೆ ರೀತಿ ಬೆಸೆಯುವ ಗುಣ ಮನುಷ್ಯನ (ಮತ್ತು ಹೆಚ್ಚಿನ ಎಲ್ಲ ಪ್ರಾಣಿಗಳ) ಹುಟ್ಟರಿವು, ಜನ್ಮಜಾತಗುಣ(instinct)ವೇ ಆಗಿದೆ. ನಮ್ಮಗಳಲ್ಲೂ ಇರುವ (ನಾನು ಬರಹದ ಮೂಲಕ ಹೇಳಬೇಕಾಗಿಲ್ಲದ) ವಿಷಯವನ್ನು ನಾನು ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ಬೆಸೆಯುವಿಕೆಯನ್ನು ನಾವೀಗ ಪ್ರಜ್ಞಾಪೂರ್ವಕ ಅನುಭವಿಸಬೇಕಾಗಿದೆ. ಇದು ಹೇಗೆಂದರೆ ರುಚಿಯಾದಬಾಳೆಹಣ್ಣು ಹಲ್ವವನ್ನುಪೇಪರ್ ಓದುತ್ತ ತಿನ್ನುವುದರ ಬದಲುಅದರ ರುಚಿಯನ್ನು ಆಸ್ವಾದಿಸುತ್ತಲೇತಿನ್ನುವುದು. ಅಂದರೆ ಇದನ್ನು ನಂಬಿ ಪ್ರೀತಿಸುವುದು
*  *   *
ವಸ್ತುಗಳಿಗಿಂತ ದುಡ್ಡು ಹೆಚ್ಚಿನ ಮಹತ್ವ ಪಡೆಯಲು ಆರಂಭವಾಗಿ ಬಹುಶ: ಕೆಲವು ಶತಮಾನಗಳೇ ಸಂದಿರಬಹುದು (ದಾಸರ ಕೀರ್ತನೆಗಳಲ್ಲೂ ದುಡ್ಡಿನ ಲಾಲಸೆ ಪ್ರಸ್ತಾಪವಾಗುತ್ತದೆ). ಈಗಂತೂ ಅದು ಉಚ್ಛ್ರಾಯ ಸ್ಥಿತಿಯಲ್ಲಿದೆ, ಸರಿ. ಧಾರಾಳ ದುಡ್ಡು ಬರುವ ಉದ್ಯೋಗವೊಂದಿದೆ ಎಂದುಕೊಳ್ಳೋಣ. ದುಡಿದ ದುಡ್ಡನ್ನು ಅಲ್ಲಿಲ್ಲಿ ಇಟ್ಟು ಕೊಟ್ಟಕೊನೆಗೆ ಸಂಪಾದಿಸಿದ ಮನುಷ್ಯ ಹಾಗೇ ಅದನ್ನು ತಿನ್ನುವ ಹಾಗಿಲ್ಲ. ಅವನು ಬಹುಶ: ಕೆಳಗಿನದನ್ನು ಮಾಡಬಹುದು.

  • ಹೊಟ್ಟೆತುಂಬಾ ಪಾಯಸ, ಹೋಳಿಗೆ ಸಹಿತವಾದ ಊಟ ಮಾಡಬಹುದು (ನಾವೂ ಇದನ್ನು ಆಗಾಗ ಮಾಡುತ್ತೇವೆ, ತಲೆಮಾರುಗಳಿಂದ ತಿಥಿಪೂಜೆಗಳು ನಡೆದುಕೊಂಡುಬಂದಿವೆ)
  • ಶುದ್ಧವಾದ ಗಾಳಿ ತಿನ್ನುತ್ತಾ, ವಿಶಾಲವಾದ ಭೂಮಿಯಲ್ಲಿ ಅಡ್ಡಾಡಲು ಹೋಗಬಹುದು (ನಮ್ಮ ಬೈಲಿನಲ್ಲಿ ಇದಕ್ಕೆ ಕೊರತೆ ಇಲ್ಲ)
  • ವ್ಯಾಯಾಮಕ್ಕಾಗಿ ಏನೇನೋ ಕಸರತ್ತುಗಳನ್ನು ಮಾಡಬಹುದು (ಕೃಷಿಕೆಲಸ ಬಿಡಿ, ಅದರ ಮೇಲುಸ್ತುವಾರಿ ಮಾಡುವ ಕೃಷಿಕರಿಗೂ ಇದರ ಕೊರತೆ ಎಳ್ಳಷ್ಟೂ ಇಲ್ಲ)
  • ಗಾರ್ಡನಿಂಗ್, ಆಟೋಟ ಹೀಗೆ ಏನು ಬೇಕಾದರೂ (ಇದೆಲ್ಲದಕ್ಕೂ ನಮ್ಮಲ್ಲಿ ಭೂಮಿ, ನೀರು, ಸ್ಥಳ ಇದೆ)

ಒಂದು ಅಧ್ಯಯನದ ಪ್ರಕಾರ, ಹೊಟ್ಟೆಗೆ, ಬಟ್ಟೆಗೆ ಮತ್ತು ಮನೆಗೆ ಸಾಲದಷ್ಟು ಬಡತನ ಇದ್ದಾಗ ಮನುಷ್ಯ ಸಕಾರಣವಾಗಿ ದು:ಖಿಯಾಗಿರುತ್ತಾನೆ. ಆದರೆ, ಅಗತ್ಯಗಳು ಪೂರೈಕೆಯಾದ ಮೇಲೆ ಅದೇ ಮನುಷ್ಯನ ಆದಾಯವನ್ನು ಹತ್ತು ಪಟ್ಟು ಹೆಚ್ಚಿಸಿದರೆ, ಅವನ ಸಂತೋಷ ಹತ್ತು ಪಟ್ಟು ಹೆಚ್ಚಾಗುವುದಿಲ್ಲ

ಮಾನದಂಡದಿಂದ ನೋಡಿದರೆ, ದುಡ್ಡನ್ನು ಸಂಪಾದಿಸುವುದರ ಮೂಲಕ ಗಳಿಸುವುದೆಲ್ಲ ನಮ್ಮಲ್ಲಿ (ಕೃಷಿಮನೆಗಳಲ್ಲಿ) ಇದೆ. ನಾವಿರುವ ಸ್ಥಿತಿಯಲ್ಲಿಸಹಜ ಸಮೃದ್ಧಿಇದೆ. ಇದು ಕೃತಕವಾಗಿ ಗಳಿಸಿದ್ದಲ್ಲ. ಕಜೆಯ ಬಗ್ಗೆ ಪ್ರತ್ಯೇಕವಾಗಿ ಸಮೃದ್ಧಿಯನ್ನು ಸ್ವಲ್ಪ ವಿವರಿಸಬಹುದು
ಕಜೆಯೆಂದರೆ ಮೂರುಬೆಳೆ ಬೆಳೆಯುವ ಭೂಮಿ ಎಂದು ಮಾವ ಒಮ್ಮೆ ನನಗೆ ಹೇಳಿದ್ದರು. ನಮ್ಮ ಭೂಮಿಯಲ್ಲಿ ಮೂರುಬೆಳೆ ಬೆಳೆಯುತ್ತಿದ್ದ ಕೊಳಕೆಗದ್ದೆಗಳಿದ್ದ ಬಗ್ಗೆ ಉಲ್ಲೇಖ ಇಲ್ಲ. ಆದರೆ ಇನ್ನಷ್ಟು ಹಿಂದೆ ಇದ್ದಿರಬಾರದೇಕೆ? ಅಂತೂ ತಕ್ಕಮಟ್ಟಿನ ಸಮೃದ್ಧಿಯಿರುವ ಭೂಮಿ ಎಂದು ಹೇಳಬಹುದು
ದೊಡ್ಡಸಂಕದಲ್ಲಿ ಕುಳಿತ ಪ್ರಚೇತ

ನಮ್ಮ ಮನೆಯಿಂದ ಕಜೆಯ ಇತರೆ ಮನೆಗಳಿಗೆ ಸಾಗುವ ಕಾಡುದಾರಿ

ರೀತಿಯ ತಕ್ಕಮಟ್ಟಿನ ವಿಸ್ತಾರದ ಭೂಮಿಯಲ್ಲಿ ಗುಡ್ಡಗಳು, ಕೃಷಿಭೂಮಿ, ಬಯಲು, ತೋಡು, ತೋಡಿಗೆ ನೀರು ಊಡುವ catchment area, ಇವೆಲ್ಲ ಹದಪ್ರಮಾಣದಲ್ಲಿ ಇರಲು ಸಾಧ್ಯವಿದೆ. ನಮ್ಮ ಮನೆಯಿಂದ ಹೊರಟು ಒಳದಾರಿಯಿಂದ ಬಂದು, ಆರು ಅಡಿಕೆ ಮರಗಳ ಪಾರಂಪರಿಕ, ಸಾವಯವ (ಕೊಳೆತು ಮಣ್ಣಾಗುವ, ಮತ್ತೆ ಹೊಸತಾಗುವ) ಸಂಕವನ್ನು ದಾಟಿ, ಬೈಲಿನ ಉದ್ದಕ್ಕೂ ನಡೆಯುವುದು ನನ್ನ ಮಟ್ಟಿಗೆ ಒಂದು ಅನಿರ್ವಚನೀಯ ಅನುಭವ. ತೋಡಿನ ದೊಡ್ಡ ಸಂಕದ ಮೊದಲು ಸಿಗುವ ಸಹಜ ಕಲ್ಲಿನಲ್ಲಿ ಕೆತ್ತಿಯೇ ಮಾಡಿದ ಮೆಟ್ಟಿಲುಗಳು, ಅಲ್ಲಿ ತಲೆಯೆತ್ತಿ ನೋಡಿದರೆ ಭಯಾನಕವಾಗಿ ಬರೆಯಿಂದ ಹೊರಚಾಚುವ ಬೇರುಗಳು, ತೋಡು ದಾಟಿದಾಗ ಪಂಪುಶೆಡ್ಡಿನ ಮೂಲೆಯಲ್ಲಿ ಇರುವ ಬೋವಿನ ಮರ, ಮುಂದೆ ಇಳಿಯುತ್ತಿದ್ದಂತೆ ಮಾರ್ಗದ ಬಲಬದಿಯಲ್ಲಿ ಕಟ್ಟಿದ ಗೋಡೆಗೆ ಪ್ರತೀ ಮಳೆಗಾಲದಲ್ಲಿ (ಅಲ್ಲಿ ಮಾತ್ರ?) ಗುಂಪಾಗಿ ಬರುವ ಹಸುರು ಬಿಳಿ ಬಣ್ಣದ ಕೆಸವಿನ ಜಾತಿ, ಅಲ್ಲಿಯೇ ಇರುವ ಒಂದು ಬಸರಿಮರ, ಶಾಲೆಗೆ ಹೋಗುತ್ತಿದ್ದ ಸಮಯದಿಂದ ನೋಡುತ್ತಿರುವ, ಕಜೆ ಟ್ರಾನ್ಸ್ ಫಾರ್ಮರ್-1 ದಾಟಿದ ಕೂಡಲೇ ಎಡಕ್ಕೆ ಸಿಗುವ ಝರಿಗಿಡದ ಗುಂಪು... ನಮ್ಮಲ್ಲಿ ಕಲ್ಲಜೇರದಲ್ಲಿ ಕಟ್ಟಿದ ಚೀನಾದ ಮಹಾಗೋಡೆಯ ಹಾಗಿರುವ ಗೋಡೆ! ಗೋಡೆಯ ಬಗ್ಗೆಯೇ ಸ್ವಲ್ಪ ಬರೆಯಬೇಕು. ಎಷ್ಟು ಸ್ಥಳೀಯವಾಗಿದೆ ಅದು!. ಅದೇ ಗುಡ್ಡದಿಂದ ಹೆಕ್ಕಿದ ಕಲ್ಲುಗಳು, ಅವನ್ನು ಹಾಗೊಮ್ಮೆ, ಹೀಗೊಮ್ಮೆ ಇಟ್ಟು ಆಯತಾಕಾರಕ್ಕೆ ಸರಿಹೊಂದಿಸಿ ಮಣ್ಣು ಕೂಡಾ ಬಳಸದೇ ಕಟ್ಟಿದ ಕಲಾತ್ಮಕ ಗೋಡೆ. ಕಲೆಯೆಂದರೆ ಶ್ರೀಮಂತ ಚಾವಡಿಯಲ್ಲಿ ಸುಮ್ಮನೇ ನೇತುಹಾಕುವ ಕೊಂಡುತಂದ ವಸ್ತುಗಳು ಮಾತ್ರವೆ? ನಮ್ಮ ನಿತ್ಯಜೀವನದಲ್ಲಿ ಕಲೆ ಇರಲಾರದೇ? ಯಾವುದನ್ನೇ ಆಗಲಿತಿಳಿಯುವುದು ವಿಜ್ಞಾನ, ಮಾಡುವುದು ಕಲೆಎಂದಿದ್ದಾರೆ ನನ್ನ ಅಚ್ಚುಮೆಚ್ಚಿನ ಇಂಗ್ಲಿಷ್ ಲೇಖಕ, ಅಮೆರಿಕದ ಈಗ ೮೦ ವರ್ಷದ ಕೃಷಿಕ ವೆಂಡೆಲ್ ಬೆರ್ರಿ
ಹೀಗೆ ಕಜೆಭೂಮಿಯ ಉದ್ದಗಲಗಕ್ಕೂ ನೋಡಿದರೆ ನೆನಪಿನ ರಾಶಿಯ ಒಂದೊಂದು ಪುಟಕ್ಕೂ ಸಂಬಂಧ ಕಲ್ಪಿಸುವ ದೃಶ್ಯಗಳು ಕಾಣಿಸುತ್ತವೆ. ಇವೆಲ್ಲ ಆಕಾಶವಾಣಿಯಲ್ಲಿ ಬರುವಕೃಷಿರಂಗ  ಶೀರ್ಷಿಕೆ ಸಂಗೀತದಂತೆ ನನ್ನ ಜೀವನದ ಮೂವತ್ತೆರಡು ವರ್ಷಗಳಲ್ಲಿ ಹೆಚ್ಚೇನೂ ಬದಲಾಗದೆ ಉಳಿದಿವೆ.

ನಾವು ಸಂತೋಷವನ್ನು ಯಾಕೆ ಪ್ರಜ್ಞಾಪೂರ್ವಕ ಅನುಭವಿಸಬೇಕಾಗಿದೆಯೆಂದರೆ, ರೀತಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ಇರದ, ಮುಚ್ಚಿದ(closed), ನೂರೆಕರೆಯಷ್ಟು ವಿಶಾಲವಾದ ಭೂಮಿಯನ್ನು ಹೊಂದಿರುವ, ಈಗಲೂ ಕೃಷಿ ನಡೆಯುತ್ತಿರುವ ಕುಟುಂಬಗಳು ಈಗ ಎಷ್ಟು ಉಳಿದಿದ್ದಾವೆ?. ನಮ್ಮ ಭೂಮಿಯಲ್ಲಿ ಜನಿವಾರದಂತೆ ಹರಿಯುವ ತೋಡು ಕಜೆಭೂಮಿಯಲ್ಲೇ ಹುಟ್ಟುತ್ತದೆ.  ಸಾರ್ವಜನಿಕ ನೀರು ಭೂಮಿಯ ಪಕ್ಕ ಹರಿಯುವುದರಿಂದ ಸೃಷ್ಟಿಯಾಗುವ ಸಮಸ್ಯೆ ಏನೆಂದು ನನಗೆ ನೋಡಿ ಗೊತ್ತಿದೆ. ಆದರೆ ನಮಗೆ ಹಾಗಿಲ್ಲ. ನಮ್ಮ ಭೂಮಿಯಲ್ಲಿ ಸುಮಾರು 20% ಕಾಡು ಇದೆ. ಕಳೆದ ಮಳೆಗಾಲ ಅಷ್ಟು ಕಡಿಮೆ ಮಳೆ ಬಂದಿದ್ದರೂ ನಮ್ಮ ಕಣಿಗಳ ಒಸರು ಎಂದಿನಂತೆಯೇ ಇದ್ದದ್ದು ಹಸಿರಿನ ಹೊದಿಕೆಯಿಂದಲೇ ಯಾಕಿರಬಾರದು? ಕಾಡಿನಲ್ಲಿ ಕನಿಷ್ಟ ಸಾವಿರ ಜಾತಿಯ ನೈಸರ್ಗಿಕ ಸಸ್ಯ ಸಂಪತ್ತಿದೆ. ’ವೃಕ್ಷಾಲಯದಲ್ಲೊಂದು ದಿನಕಾರ್ಯಕ್ರಮದ ಸಂದರ್ಭದಲ್ಲಿ ನನಗೆಬೆಂಗಳೆ ವೆಂಕಟೇಶ್ಎಂಬ ಸಜ್ಜನ, ಅನುಭವಿ ಕೃಷಿಕರು ಫೋನ್ ಮಾಡಿದ್ದರು. ವಿವರ ತಿಳಿದುಕೊಂಡು ನಮ್ಮ ಕಾಡಿನಲ್ಲಿ ಧಾರಾಳವಾಗಿರುವಶತಾವರಿಯನ್ನು ನಾನು ಮಾತಿನಲ್ಲಿ ಪ್ರಸ್ತಾಪಿಸಿದಾಗ, ತಮ್ಮದು 300 ವರ್ಷಗಳಿಂದ ಆಯುರ್ವೇದ ಮದ್ದುಕೊಡುತ್ತಿರುವ ಮನೆತನವೆಂದೂ, ಪಾರ್ಶ್ವವಾಯು ಕೇಸುಗಳಿಗೆ (ಶತಾವರಿ ಉಪಯೋಗಿಸಿ) attack ಆದ ಎಂಟು ಗಂಟೆಯೊಳಗೆ ತಮ್ಮಲ್ಲಿಗೆ ಬಂದರೆ ಮೂರುದಿನಗಳೊಳಗೆ ಎದ್ದು ನಡೆದಾಡುವಂತೆ ಮಾಡುವ 90% ಗ್ಯಾರಂಟಿ ಇದೆಯೆಂದು ಅವರು ಹೇಳಿಕೊಂಡರು. ಪಾರ್ಶ್ವವಾಯುವಿಗೆ ಶತಾವರಿಯ ಪ್ರಯೋಗ ಮಾಡುವುದನ್ನು ನಂಬದ RSS ಹಿರಿಯ ಪ್ರಭಾವೀ ಮುಖಂಡ ವಿದ್ವಾಂಸ ದಿ| ಡಾ|ಶ್ರೀ ಉಪೇಂದ್ರ ಶೆಣೈಯವರು ಸ್ವತ: ನೋಡಿ ಪರಾಂಬರಿಸಿಕೊಂಡ ಕಥೆಯನ್ನೂ ಹೇಳಿದರು. ‘ಇದೆ ಮತ್ತು ಧಾರಾಳವಾಗಿ ಇದೆಎನ್ನುವ ಕಾರಣಕ್ಕೆ ನಿಜಮೌಲ್ಯವು ಅಪಮೌಲ್ಯಗೊಳ್ಳುವುದಿಲ್ಲ (ಮತ್ತು ಹಾಗಾಗಬಾರದು) ಎನ್ನುವುದರ ಉದಾಹರಣೆಗಾಗಿ ಇದನ್ನು ಬರೆದೆ. ಉಂಡೆಹುಳಿ ಮರದ ಕೆತ್ತೆ, ಕೆಂಪೈತ್ತಾಳು ಬಳ್ಳಿ, ಬಿಲ್ವ ಪತ್ರೆ, ದರ್ಭೆ, ಪುನರ್ಪುಳಿ, ಉಂಡೆಹುಳಿ, ಹುಣಸೆ, ಹಲಸು, ಆಯಾಯ ಉದ್ದೇಶಗಳಿಗೆ ಹೊಂದುವ ಕಾಡುಮಾವು, ರಂಬುಟಾನ್! ಹೀಗೆ ನಮ್ಮ ಅಗತ್ಯಗಳನ್ನು ಒಟ್ಟಂದದಲ್ಲಿ ಪೂರೈಸುವ ಇಟ್ಟ, ನೆಟ್ಟ ಗಿಡಮರಗಳು ನಮ್ಮಲ್ಲಿ ಎಷ್ಟಿಲ್ಲ? (ಈಗಾಗಲೇ ಚಾಲ್ತಿಯಲ್ಲಿ ಉಪಯೋಗ ಇರುವ ಕೆಲವನ್ನಷ್ಟೇ ಬರೆದಿದ್ದೇನೆ. ಸುಮ್ಮನೇ ನಮ್ಮ ಗುಡ್ಡದ ಔಷಧೀಯ ಗಿಡಗಳ ಹೆಸರು ಬರೆಯುವುದಾದರೆ ಕನಿಷ್ಠ ಇನ್ನೂರನ್ನು ಪಟ್ಟಿಮಾಡಬಹುದು)
ಅಡಿಕೆ ತೋಟದೊಳಗಿನ ದಾರಿ
ನಮ್ಮೆಲ್ಲರದು ಈಗಂತೂ ಅಡಿಕೆ ಕೃಷಿಯ ಕುಟುಂಬ. ಅಡಿಕೆಯ ದೊಡ್ಡಮಟ್ಟಿನ ಬಳಕೆ ಜಗಿಯುವುದಕ್ಕೆ ಇದ್ದರೂ ಅಡಿಕೆ ಸ್ವತ: ಔಷದೀಯ ಎನ್ನುವುದು ನಮಗೆ ತಿಳಿದ ವಿಷಯ. ಅದೇನೇ ಇರಲಿ, ಅಡಿಕೆ ಕೃಷಿಯೊಂದಿಗೆ ಒಂದು ಶ್ರಮ ಸಂಸ್ಕೃತಿ ಇದೆ. ಅದರ ಕಾಲಕಾಲದ ಕೊಯ್ಲುಗಳು, ಹೊಸದಾಗಿ ಹರಡಿ ಕೈಹಾಕಿದ ತುಂಬಿದ ಅಂಗಳ, ಅದರ ಮೇಲೆ ಬಾಲ್ಯದಲ್ಲಿ ಓಡಾಡಿ ಜಾರಿಬಿದ್ದ ನೆನಪುಗಳು, ಪೂಜೆಪುನಸ್ಕಾರಗಳಲ್ಲಿ ಸುಲಿದ (ಮತ್ತೆ ಹುಟ್ಟದ), ಸುಲಿಯದ (ಹುಟ್ಟಬಹುದಾದ) ಅಡಿಕೆಯ ಉಪಯೋಗ, ಎರಡರಲ್ಲಿ ಇರಬಹುದಾದ ಸಾಂಕೇತಿಕ ಅರ್ಥಗಳು, ಕೊಳೆರೋಗದಲ್ಲಿ ಉದುರಿದಾಗಿನ ಸಮಾನದು:, ಶುಭ ಸಮಾರಂಭಗಳ ತೋರುಗಂಬಗಳಾಗಿದ್ದ ಇನ್ನೂ ಹಸಿಯಾದ ಅಡಿಕೆಮರದ ಕಂಬದ ಚಪ್ಪರ, ಹೀಗೆ ಬರೆದು ಮುಗಿಯದಂತೆ ನಮ್ಮ ಜನಜೀವನದೊಂದಿಗೆ ಅಡಿಕೆಕೃಷಿ ಮತ್ತು ಅದರೊಂದಿಗಿನ ಶ್ರಮಸಂಸ್ಕೃತಿ ಮಿಳಿತವಾಗಿದೆ. ಅದನ್ನು ಆಸ್ವಾದಿಸದೆ ಇರುವುದು ಅಸಾಧ್ಯ

(ಕಜೆ ಜಲಪಾತ)

ನಾನು ಒಮ್ಮೆ ನನ್ನ ಗೆಳೆಯನೊಂದಿಗೆ ಕಜೆಯ ಜಲಪಾತದಿಂದ ತೋಡಿನಲ್ಲಿ ನಡೆದು ಬಂದಿದ್ದೆ. ಅವನು ನಮ್ಮಲ್ಲಿಸ್ವಂತದ್ದಾಗಿಇರುವ ಪರಿಸರ ಸಂಪತ್ತನ್ನು ನೋಡಿ ಆಶ್ಚರ್ಯಪಟ್ಟಿದ್ದ. ಅವನ ಕುಟುಂಬ ಕೇರಳದ ಸಾಂಪ್ರದಾಯಿಕ ಚಚ್ಚೌಕದ ಮನೆ, ಭೂಮಿ ಅವರ ಆಳ್ವಿಕೆಯಲ್ಲಿ ನಡೆಯುವ ಒಂದು ದೇವಸ್ಥಾನ - ಗಳನ್ನು ಹೊಂದಿತ್ತು. ವರ್ಷಕ್ಕೊಮ್ಮೆ ಜಾತ್ರೆಯ ಸಮಯದಲ್ಲಿ ದೇವಸ್ಥಾನದ ಆನೆ ಇವರ ಮನೆಗೆ ಬರುವುದು, ಆಗ ಅದರ ಸೊಂಡಿಲಿನಿಂದ ಮಕ್ಕಳೆಲ್ಲ ಆಶೀರ್ವದಿಸಿಕೊಳ್ಳುವ ಬಾಲ್ಯದ ನೆನಪುಗಳು ಅವನಿಗೆ ಕಣ್ಣಿಗೆ ಕಟ್ಟಿದಂತೆ ಇದೆ. ಭೂಮಿಯ ಜವಾಬ್ದಾರಿಯನ್ನು ಅವನ ಹಿರಿಯರು ಯಾರೂ ಹೊರದೆ ಈಗ ಅದು ಮಾರಿ ಹೋಗಿದೆ. ನೋವು ಅವನ ಹೃದಯದಲ್ಲಿ ಎಂದೆಂದಿಗೂ ಗುಣವಾಗದಂತೆ ಉಳಿದುಕೊಂಡಿದೆ. ದುಡ್ಡಿನಿಂದ ಜಾಗ, ಮನೆಗಳನ್ನು ಕಷ್ಟಪಟ್ಟು ಸೃಷ್ಟಿಮಾಡಬಹುದು. ಆದರೆಪರಂಪರೆಯನ್ನು ಸೃಷ್ಟಿಮಾಡಲಾಗದು. ಅದಕ್ಕೆ ಮುಂದಿನ ಇನ್ನೂರೋ, ಐನೂರೋ ವರ್ಷ ಕಾಯಬೇಕು. ವೆಂಡೆಲ್ ಬೆರ್ರಿ(ಕೃಷಿಕ, ಬರಹಗಾರ) ಒಮ್ಮೆ ಕೃಷಿ ವಿಚಾರಗಳ ಬಗ್ಗೆ ಭಾಷಣ ಮಾಡಿ ವೇದಿಕೆಯಿಂದ ಇಳಿಯುತ್ತಿದ್ದಾಗ, ಅವರ ಬಳಿ ಒಬ್ಬಾಕೆ ಹೀಗೆ ಕೇಳುತ್ತಾಳೆನಾನು ಪೇಟೆಯಲ್ಲಿ ಹುಟ್ಟಿ ಬೆಳೆದಿದ್ದೇನೆ. ನೀವು ಹೇಳುವಂತೆ ನಾನು ಯಾವೊಂದು ಸಂಸ್ಕೃತಿಗೂ, ಸ್ಥಳಕ್ಕೂ ಬೆಸೆದಿಲ್ಲ. ನಾನೀಗ ಏನು ಮಾಡಲಿ?’. ಆಗ ಅವರು ಉತ್ತರವಾಗಿಇನ್ನು ಸಾವಿರ ವರ್ಷಗಳ ಬಳಿಕ ನಿನ್ನ ಕುಟುಂಬಸ್ಥರು ಹೆಮ್ಮೆ ಪಡುವಂತಹ ಸ್ಥಳ ಮತ್ತು ಸಂಸ್ಕೃತಿಗೆ ನೀನೀಗ ಆರಂಭದ ಬಿಂದುವಾಗಬೇಕಿದೆಎನ್ನುತ್ತಾರೆ. ಕೌಟುಂಬಿಕ ಪರಂಪರೆಯ ಮಹತ್ವವನ್ನು ನಾವು ಅದು ಇರುವಾಗಲೇ ಗುರುತಿಸಬೇಕಾಗಿದೆ. ಒಮ್ಮೆ ಕಳೆದುಕೊಂಡರೆ ಕೊಂಡುಕೊಳ್ಳಲಾಗದ ಮೌಲ್ಯಾತೀತ ವಿಷಯ ಅದು.

ಪರಿಸರ ಪ್ರೇಮ ಮತ್ತು ಅಕ್ಕಚ್ಚಿನ ಬಾಲ್ದಿ

ಕೃಷಿಮನೆಯಲ್ಲಿ ನಡೆಯುವ ಅದೆಷ್ಟೋ ಸರಳ ನಗಣ್ಯವೆನಿಸುವ ವಿಷಯಗಳು ಅದೆಷ್ಟು ಮಹತ್ವಪೂರ್ಣವಾದದ್ದೆಂದರೆ ಅದರೆ ಮಹತ್ವದ ಬಗ್ಗೆ ಸ್ವತ: ಕೃಷಿಕರಿಗೆ ಮತ್ತು ನಗರದಲ್ಲಿರುವವರಿಗೆ ಕೆಲವೊಮ್ಮೆ ಯಾವುದೇ ಅರಿವಿಲ್ಲ. ಇದಕ್ಕೆ ರೂಪಕವಾಗಿ ನಾನು ಬಳಸುವುದು ಅಕ್ಕಚ್ಚಿನ ಬಾಲ್ದಿಯನ್ನು. ಪರಿಸರ ರಕ್ಷಣೆಗಾಗಿ ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯಗಳನ್ನು ಬೇರೆಬೇರೆ ಮಾಡಬೇಕೆಂದು ಪತ್ರಿಕೆಗಳು, ಪೋಸ್ಟರುಗಳು, ನಗರಪಾಲಿಕೆಗಳು, ಪಾಂಪ್ಲೆಟ್ಟುಗಳು, ಹೋರಾಟಗಾರರು ಹೀಗೆ ಎಲ್ಲರೂ ಒಕ್ಕೊರಲಿನಿಂದ ಅರಚುತ್ತಿದ್ದಾರೆ. ಕಸ ತೆಗೆಯುವವರು ಮುಷ್ಕರ ಹೂಡಿದ್ದರಿಂದ ಬೆಂಗಳೂರಿನಲ್ಲಿ ಮೂಗು ಕತ್ತರಿಸಿಕೊಳ್ಳಬೇಕಾಗಿ ಬಂದದ್ದಿದೆ. ಆದರೆ ಹಳ್ಳಿಮನೆಯ ಹೆಂಗಸರು ಮೌನವಾಗಿ ಹಣ್ಣುತರಕಾರಿ ಸಿಪ್ಪೆಯಿಂದ ಹಿಡಿದು ಕಾಯಿಹಾಲು ಹಿಂಡಿದ ಬಟ್ಟೆಯನ್ನು ತೊಳೆದ ನೀರಿನವರೆಗೆ ಜೈವಿಕ ಅಂಶವಿರುವ ಪ್ರತಿಯೊಂದನ್ನು ಅಕ್ಕಚ್ಚಿನ ಬಾಲ್ದಿಗೆ ಹಾಕುತ್ತಾರೆ. ಮುಂದಿನ ಸರ್ತಿ ಅದು ದನದ ಹೊಟ್ಟೆ ಸೇರುತ್ತದೆ. ಅದು ಒಂದೋ ಸೆಗಣಿ/ಹಾಲು/ದನದ ಮೂಳೆ-ಮಾಂಸ-ಮಜ್ಜೆ ಹೀಗೆ ಏನೋ ಒಂದಾಗಿ ಪರಿವರ್ತನೆಯಾಗುತ್ತದೆ. ಇಷ್ಟು ಸುಲಭವಾಗಿ ವೇಸ್ಟ್ ಮ್ಯಾನೇಜ್ ಮೆಂಟ್ ಮಾಡುವ ಬೇರೆ ಯಾವುದಾದರೂ ತಂತ್ರಜ್ಞಾನ ಇರಲು ಸಾಧ್ಯವಿದೆಯೇ? ಕೃಷಿಮನೆಯ ದಿನನಿತ್ಯದ ವಿಚಾರಗಳು ರೀತಿ ಮಹತ್ವವನ್ನು ಪಡೆದಿವೆ ಎಂದು ಹೇಳಲು ಉದಾಹರಣೆಯನ್ನು ಪ್ರತ್ಯೇಕವಾಗಿ ಬರೆದಿದ್ದೇನೆ.  
ಹಾಲು, ತುಪ್ಪ, ಜೇನು, ಹುಣಸೆ, ಅರಸಿನ ರೀತಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಆದರೆ ಶುದ್ಧವೆಂದು ಎಷ್ಟು ಮಾತ್ರಕ್ಕೂ ನಂಬಲಿಕ್ಕಾಗದ ವಸ್ತುಗಳ ಬಗ್ಗೆ ಇಂದು ನಗರದ ತಂದೆತಾಯಂದಿರು ಅತೀವ ಭಯಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೆ ಶುದ್ಧವಾದದ್ದನ್ನು ಕೊಡಬೇಕೆಂಬ ಕಾಳಜಿ ಇದೆ ಅವರಿಗೆ. ಆದರೆ ಅವನ್ನು ತರುವುದು ಎಲ್ಲಿಂದ ಎನ್ನುವುದು ಅವರಿಗೆ ಹೊಳೆಯುತ್ತಿಲ್ಲ. ಆದರೆ ಇವೆಲ್ಲ ನಮ್ಮಲ್ಲಿ ಒಂದೋ ಇವೆ ಅಥವಾ ನಮ್ಮ ನೆರೆಹೊರೆಯವರಲ್ಲಿ/ಆತ್ಮೀಯರಲ್ಲಿ ಇವೆ. ಆದ್ದರಿಂದ ನಾವು ತಂದುದರ ಗುಣಮಟ್ಟದ ಬಗ್ಗೆ ನಮಗೆ ಖಾತರಿ ಇದೆ. ಬೆಳೆಯ ಮೂಲ ನಮ್ಮ ಹತ್ತಿರ ಇದ್ದಷ್ಟು ದಿನ ಮಾತ್ರ ನಮಗೆ ಖಾತರಿ ಇರಬಲ್ಲುದುಕೃಷಿಮನೆ ಮತ್ತು ಶ್ರಮ

ಮೇಲೆ ಬರೆದಸುಂದರವಾದ ವಿವರಣೆಗಳೆಲ್ಲ ಗೋಡೆಯಲ್ಲಿ ನೇತುಹಾಕಿದ ಪ್ರಕೃತಿಚಿತ್ರದಂತೆ ಎಂದೆಂದಿಗೂ ಮುಕ್ಕಾಗದೆ ಉಳಿಯುವಂತಹದಲ್ಲ. ಏಕೆಂದರೆ ಅದು ಜಡವಾಗಿಲ್ಲ. ಸೃಷ್ಟಿಕರ್ತನು ಎಲ್ಲೆಲ್ಲೂಸೃಷ್ಟಿ ರೂಪದಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಳ್ಳಲು ಹಾತೊರೆಯುತ್ತಿದ್ದಾನೆ. ಆದ್ದರಿಂದ ಅಂಗಳದಲ್ಲಿ ಹುಲ್ಲು, ಸಂಕದಲ್ಲಿ ಗೆದ್ದಲು, ದಾರಿಯಲ್ಲಿ ತರಗೆಲೆ, ಬರೆಯಲ್ಲಿ ಬಲ್ಲೆ, ತೋಟದಲ್ಲಿ ಕಾಡು ಇವೆಲ್ಲ ಅದಮ್ಯ (ದಮನಗೊಳಿಸಲಾಗದ್ದು ಅದಮ್ಯ) ಶಕ್ತಿಯನ್ನು ಧರಿಸಿ ಮತ್ತೆ ಮತ್ತೆ ಎದ್ದುಬರುತ್ತವೆ. ಕೃಷಿಮನೆಯೆಂದ ಮೇಲೆ ಪಂಪು, ಸ್ಪ್ರಿಂಕ್ಲರ್, ನೀರಿನ ಕೆಲಸಗಳು, ಹೂಗಿಡಗಳ ಕೆಲಸ, ಪ್ರತೀದಿನದ ಅವಧಾನವನ್ನು ಬೇಡುವ ಹಟ್ಟಿ ಮತ್ತು ತರಕಾರಿ, ಮಳೆಯಿಂದ ಅಡಿಕೆಯ ರಕ್ಷಣೆ, ರಿಪೇರಿಗಳು ಹೀಗೆ ಅಸಂಖ್ಯ ಕೆಲಸಗಳು ಒಳಗೊಂಡಿವೆಯಷ್ಟೆ. ಕೆಲಸದಲ್ಲಿ ಕುಟುಂಬಸ್ಥರೆಲ್ಲರೂ, ಮುಖ್ಯವಾಗಿ ಮಕ್ಕಳು ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದರಲ್ಲಿ ಪರಂಪರೆಯಸಂತತತೆ’ (continuity) ಹೊಂಗಿರಣಗಳು ಇವೆ. ಮಕ್ಕಳು ಮುಂದೇ ಯಾವುದೇ ಉದ್ಯೋಗವನ್ನು ಮಾಡುವುದಿದ್ದರೂ ಬಾಲ್ಯದ ಶ್ರಮದ ಅನುಭವ ದಾರಿದೀವಿಗೆಯೇ. ಮತ್ತು ಅವರೆಲ್ಲಿಯೇ ಇರಲಿ, ಅವರಿಗೆ ಒಂದುಸಾಂಸ್ಕೃತಿಕ ಅನನ್ಯತೆಯನ್ನು (cultural identity) ಹೊಂದಲು, ಹಳ್ಳಿಮನೆ ಮತ್ತು ಶ್ರಮಜೀವನದ ಅಗತ್ಯ ಇದೆ. ಅಲ್ಲದಿದ್ದರೆ ಅವರು ಹತ್ತರಲ್ಲಿ ಹನ್ನೊಂದಾಗುತ್ತಾರಷ್ಟೆ. ಸ್ವತ: ತಂದೆಯಾಗಿರುವ ನನಗೆ ಮಾತನ್ನು ಬಹಿರಂಗವಾಗಿ ಬರೆಯುತ್ತಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗುತ್ತಿರುವುದರ ಅರಿವಿದೆ. ’ಕೆಲಸಮತ್ತು ಅದಕ್ಕೆ ಮಿಳಿತವಾದ ಆವರ್ತನೀಯ ಶ್ರಮ ಸಂಸ್ಕೃತಿ (cyclic work culture) ಪಾಠವನ್ನು ಯಾವುದೇ ಮಗು ಪ್ರತಿಭಟನೆಯಿಲ್ಲದೆ ಸ್ವೀಕರಿಸಲಾರದು. ಆದರೆ ಮಗು ಬೆಳೆದು ಪ್ರೌಢವಾದ ಮೇಲೆ ಅಥವಾ ತಾನೇ ತಂದೆ/ತಾಯಿಯ ಸ್ಥಾನದಲ್ಲಿ ನಿಂತಾಗ ನಮ್ಮ ಮಾತುಗಳಲ್ಲಿ ಸರಿಯಾದುದನ್ನು ಹೆಕ್ಕಿಕೊಳ್ಳಬಲ್ಲುದು. ಅದರೆಡೆಗೆ ಪ್ರಯತ್ನವನ್ನು ನಾವು ಮಾಡಬಹುದಷ್ಟೆ

ಕೃಷಿಕೆಲಸಗಳು ಮೇಲ್ನೋಟಕ್ಕೆ ಸರಳವಾಗಿಯೂ, ’ಯಾರೂ ಮಾಡಬಹುದುಎನ್ನುವಂತೆಯೂ ಕಾಣುತ್ತವೆ. ಮೇಲ್ನೋಟದಸರಳತೆಗಾಗಿ ಕೃಷಿಕ ಇಂದು ಅವಜ್ಞೆಗೂ ಒಳಗಾಗಿದ್ದಾನೆ. ಆದರೆ ಒಂದು ಕೃಷಿಮನೆಯ ಆಳ್ವಿಕೆಯನ್ನು ಕೈಗೆತ್ತಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವಲ್ಲ. ಹೊಸ ಆಸ್ತಿಯ ಖರೀದಿಗಾಗಿ ನಾನು 2008ರಿಂದ 2013-14 ವರೆಗೆ ಹತ್ತಾರು ಕೃಷಿಭೂಮಿಗಳಲ್ಲಿ ನಿಂತು ಅದು ಕರುಳಿನಲ್ಲಿ ಉಂಟುಮಾಡುವ ಕಂಪನವನ್ನು ಅನುಭವಿಸಿದ್ದೇನೆ. ಭೂಮಿ ತನ್ನ ಯಜಮಾನಿಕೆಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅದು ಬೇಡುವ ಸಾಮರ್ಥ, ಕೌಶಲ್ಯಗಳನ್ನು ಧರಿಸಿಕೊಳ್ಳಲು ಕನಿಷ್ಠ ಒಂದು ದಶಕ ಬೇಕಾಗಬಹುದೇನೋ. ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಭೂಮಿಯನ್ನು ಬೆಳೆಸುವುದೆಂದರೆ ಅದೊಂದು ತಪಸ್ಸೇ ಸರಿ, ಅದರ ಅನುಭವ ಈಗಿನವರಿಗಿಲ್ಲ.

ಶ್ರಮದ ಪ್ರತಿಯಾಗಿ ಬರುವ ಫಲ - ಹಾಲು, ಹಣ್ಣು, ತರಕಾರಿ, ಅವುಗಳ ಬೀಜಗಳು - ಹೀಗೆ ನಾನಾ ರೂಪದಲ್ಲಿ ಬರುವವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ, ಸಮಾರಂಭಗಳಿದ್ದರೆ ಕಳಿಸಿಕೊಡುವ ಸಂಪ್ರದಾಯ ದಶಕಗಳಿಂದ ನಿಧಾನವಾಗಿ ರೂಪುಗೊಂಡಿರುತ್ತದೆ. ’ಅಲ್ಲಿಂದ ಅದನ್ನು ತಂದಿದ್ದೆವುಎಂದು ನೆನಪಿಟ್ಟು ತಂದುದಕ್ಕೆ ದುಡ್ಡಿನಲ್ಲಿ ಸಮಾನವೆನಿಸದ ಬೇರೆನೋ ಇನ್ಯಾವಾಗಲೋ ಕೊಡುತ್ತೇವೆ. ನಮ್ಮಲ್ಲಿ ಇಲ್ಲದ ಕೌಶಲ್ಯವನ್ನು ನೆರೆಮನೆಯವರನ್ನು ಕರೆದು ಎರವಲು ಪಡೆಯುತ್ತೇವೆ - ಪ್ರತಿಯಾಗಿ ಬಿಡಿಗಾಸು ಕೊಡಬೇಕಾಗಿಲ್ಲದೆ, ಕಾಸಿನಲ್ಲಿ ಅಳೆಯುವಂಥ ವಿಷಯವೇ ಅಲ್ಲ ಅದು.

ಕೊನೆಯ ಮಾತುಗಳು
ಓದಿ ಬೋರಾಗುವಷ್ಟು ಬರೆದಾಯಿತು. ಇದಕ್ಕೊಂದು ಕೊನೆ ಮಾಡಬೇಕಾಗಿದೆ. ಕೊನೆ ಅಥವಾಗೊನೆಎಂದರೆ ಹಣ್ಣಿನ ಗೊಂಚಲು. ಅಂದರೆ ಅದು ಅಂತಿಮ ಫಲ. ಆದರೆ ನನ್ನ ಬರಹದಲ್ಲಿ ದಾರಿಯೇ ಗುರಿ. ತುಳಸಿ ಗಿಡದಂತೆ ಹೂಹಣ್ಣಿಗಿಂತ ಎಲೆಯೇ ಫಲ

ಜೀವನ ಮತ್ತು ಸಂಸ್ಕೃತಿ ಇಂದು ಬದಲಾವಣೆಯ ಕಾಲದಲ್ಲಿವೆ. ಸದಾ ಬದಲಾಯಿಸುತ್ತ ಇರುವುದಕ್ಕೆ ಸ್ಥಾಯಿತ್ವಕ್ಕಿಂತ ಹೆಚ್ಚಿನ ಮಹತ್ವ ಬಂದಿದೆ. ಆದರೆ, I am an advocate of slow change. ಸರಿಯಾಗಿರುವುದನ್ನು ಬದಲಾಯಿಸುವುದು ಯಾಕೆ?
ಕಜೆಯ ಬಗ್ಗೆ ಹೇಳುವುದಾದರೆ ಇದು ಚೆನ್ನಾಗಿಯೇ ಇದೆ, ಒಂದೆರಡು ಶತಮಾನಗಳಿಂದ ರೂಪುಗೊಂಡ ವ್ಯವಸ್ಥೆಗಳು ಇಲ್ಲಿವೆ ಎನ್ನುವ ಸಂವೇದನೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎನ್ನುವುದನ್ನು ಹೇಳುವುದಕ್ಕಾಗಿ ಬರಹ. ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ನಿವೇಶನ ಕಟ್ಟಿಸುವ ದೊಡ್ಡ ಸಂಸ್ಥೆಯೊಂದು ಅರ್ಧಪುಟದ ಜಾಹೀರಾತು ಕೊಟ್ಟಿತ್ತು. ’ಸೈಕಲ್ ಬಿಡುವ ಟ್ರಾಕ್ಇದೆ ಎನ್ನುವುದನ್ನು ಅದರಲ್ಲಿ ದೊಡ್ಡದಾಗಿ ಬಿಂಬಿಸಲಾಗಿತ್ತು. ಒಂದು ಕೋಟಿಗಿಂತ ಹೆಚ್ಚಿನ ಬೆಲೆಯ ಮನೆ ಅದು. ನಾವು ನಂಬುವುದಿದ್ದರೆ ನಮ್ಮಿಂದ ಬದನೆಯನ್ನು ಖರೀದಿಸಿ ಕುದನೆಯನ್ನು ನಮಗೇ ಮಾರಲು ಸಿದ್ಧರಿದ್ದಾರೆ ಇವರು!

ನಾನು ಮತ್ತು ನನ್ನಂತೆ ನೀವು ಪೇಟೆ ಮತ್ತು ಹಳ್ಳಿಯ ವ್ಯತ್ಯಾಸವನ್ನು ತಿಳಿದಿದ್ದೇನೆ(ವೆ). ನಾನು ನನ್ನ ಸ್ನೇಹಿತರನೇಕರನ್ನು ಕಳೆದ ಒಂದು ದಶಕದಲ್ಲಿ ಮನೆಗೆ ಕರೆದಿದ್ದೇನೆ. ರಾತ್ರಿಗೆ ಉಳಿಸಿಕೊಂಡಿದ್ದೇನೆ. ’ನಮ್ಮಲ್ಲಿರುವುದು ಇದೇ/ಇಷ್ಟೇಎನ್ನುವ ಸಾತ್ವಿಕ ದಾರ್ಷ್ಟ್ಯದಿಂದ ಅವರಿಗೆ ನಮ್ಮಲ್ಲಿರುವ ಅನುಕೂಲತೆಗಳನ್ನಷ್ಟೇ ಕೊಟ್ಟಿದ್ದೇವೆ. ಆದರೆ ಅವರೆಲ್ಲರಿಗೆ ಇದೊಂದು ಕನಸಿನಂತೆ ಕಂಡಿದೆ. ನನ್ನ ಹಿರಿಯ ಸಹೋದ್ಯೋಗಿಯೊಬ್ಬರು (ಈಗ ಅಕಾಲದಲ್ಲಿ ದಿವಂಗತರು) –‘You are living my brother’s dream’ ಎಂದು ಹೇಳಿದ್ದಾರೆ. ಅವರ ತಮ್ಮನಿಗೆ ರೀತಿ ಹಳ್ಳಿಯ ಕೃಷಿಮನೆಯೊಂದನ್ನು ಹೊಂದಬೇಕೆನ್ನುವುದು ಕನಸಂತೆ. ಅವನು ಉದ್ಯೋಗದಲ್ಲಿ ನಗರದಲ್ಲಿದ್ದಾನೆ. ಕನಸನ್ನು ಕಾಣುವವರಿದ್ದಾರೆ, ಆದರೆ ಅದರೊಂದಿಗೆ ಬರುವ ಶ್ರಮವನ್ನು ಸ್ವೀಕರಿಸುವವರಿಲ್ಲ. ನಮ್ಮ ಕಜೆಬೈಲಿನಲ್ಲಿ ಕನಸೂ ಇದೆ ಮತ್ತು ಅದು ನನಸಾಗಲು ಬೇಕಾದ ಶ್ರಮ ಸಂಸ್ಕೃತಿಯೂ ಮರೆಯಾಗದೆ ಕಾಲಕಾಲಕ್ಕೆ ಸ್ವಲ್ಪ ಬದಲಾಗಿ ಉಳಿದುಕೊಂಡಿದೆ. ಮಹತ್ವವಾದುದೆಂದು ತಿಳಿದರೆ ಮಾತ್ರ ಇದು ಉಳಿಯಬಲ್ಲುದು ಎನ್ನುವುದನ್ನು (ನನಗೆ) ನೆನಪಿಸಲು ಇದನ್ನು ಬರೆದಿದ್ದೇನೆ. ಇದು ಕಜೆ ಮನೆಯವರಿಗೆಲ್ಲರಿಗೆ (ಮಾನಸಿಕವಾಗಿ ಸಂಬಂಧ ಹೊಂದಿದವರಿಗೆ, ದೈಹಿಕವಾಗಿ ದೂರವಿದ್ದರೂ) ಸೇರಿದ ವಿಷಯವಾದ್ದರಿಂದ ನಿಮಗೊಂದು ಪ್ರತಿಯನ್ನು ಕೊಡುತ್ತಿದ್ದೇನೆ

ನಗರದಲ್ಲಿ ಅಥವಾ ತರವಾಡು ಮನೆಯಿಂದ ಹೊರಗೊಂದು ಮನೆಮಾಡಿದರೆ ತಪ್ಪು ಎನ್ನುವುದು ಬರಹದ ಅರ್ಥವಲ್ಲ. ಅಲ್ಲಿಗೆ ನಮಗೆಬೆಸೆದುಕೊಳ್ಳಲುಸಾಧ್ಯವಾದರೆ ನಮ್ಮ ಮುಂದಿನವರಿಗೆ ಅದೇ ತರವಾಡು. ಆದರೆ ಏಕಾಂಗಿ ಭೂಮಿಗಳಿಗೆ ಒಂದು ಅಭದ್ರತೆ ಇರುತ್ತದೆ. ಆದರೆ ಸೇರಿಕೊಂಡಿರುವ, ವಿಸ್ತಾರವಾಗಿರುವ ಸ್ಥಳಾವಕಾಶಕ್ಕೆ ಹೆಚ್ಚಿನ ಭದ್ರತೆ ಇರುತ್ತದೆ. ಅನುಕೂಲತೆ (ಅವಿಭಜಿತ) ಭೂಮಿಗೆ ಇದೆ ಎಂದು ನನಗನಿಸುತ್ತದೆ.

ಕೃಷಿಕ ಎನ್ನುವ ಸ್ಥಾನವನ್ನು ಇಂದು ಉದ್ದೇಶಪೂರ್ವಕವಾಗಿ ಅಗೌರವಿಸಲಾಗಿದೆ. ಅಗೌರವದ ದೃಷ್ಟಿ ಅಷ್ಟಿಷ್ಟು ನಮ್ಮ ಮನಸ್ಸಿಗೆ ನಮಗೆ ತಿಳಿಯದೆಯೇ ವೈರಸ್ ನಂತೆ ಹೊಕ್ಕಿದೆ. ನಾವು ನಮಗಾಗಿ ಕೆಲಸ ಮಾಡಿದರೆ ಕೀಳು, ಬೇರೆಯವರಿಗೆ ಕೆಲಸಮಾಡಿ ದುಡ್ಡನ್ನು ಪ್ರತಿಯಾಗಿ ಪಡೆದರೆ ಮೇಲು ಎನ್ನುವ ಅರ್ಥಹೀನ ದೃಷ್ಟಿ ಮನೆಮಾಡಿದೆ. ಇದನ್ನು ನಾವು ವಿಮರ್ಶೆ ಮಾಡಬೇಕಾಗಿದೆ. ಎಲ್ಲಿ ಒಟ್ಟು ಸೇರಿದರೂ ತಮ್ಮ ಕಷ್ಟಗಳ ಬಗ್ಗೆಯಷ್ಟೇ ಮಾತನಾಡುವ ಕೃಷಿಕರನ್ನು ನೋಡಿದಾಗ ನನಗೆ ಮರುಕವೆನಿಸುತ್ತದೆ. ರೀತಿ ಭಾವಿಸಿ ಅವರೆಲ್ಲೊಷ್ಟೋ ಮಂದಿ ಭೂಮಿಯನ್ನು ಮಾರಿದ್ದಾರೆ. ’ಮಾರಾಟಕ್ಕಿದೆಎನ್ನುವ ಬೋರ್ಡನ್ನು ತಗಲಿಸಿಕೊಂಡ ಹಡಿಲುಬಿದ್ದ ಗದ್ದೆಗಳು, ಅಡಿಕೆತೋಟಗಳು, ತರವಾಡು ಮನೆಗಳು ತಮ್ಮೊಂದಿಗೆ ಒಂದು ಪರಂಪರೆಯನ್ನು ಅಳಿಸಿಹಾಕುತ್ತಿವೆ. ಇಂತಹ ಭೂಮಿಗಳನ್ನು ಕೃಷಿ ಉದ್ದೇಶಕ್ಕಾಗಿ ಖರೀದಿಸುವವರು ಇಂದು ಹತ್ತು ಶೇಕಡಾಕ್ಕಿಂತ ಕಡಿಮೆ. ಕಜೆ ಭೂಮಿಗೆ ಎಂದಲ್ಲ, ಯಾವ ಭೂಮಿಗೂ ಹಾಗಾಗಬಾರದು ಎನ್ನುವುದು ಇಲ್ಲಿರುವ ಮಿಡಿತ.


ಲೇಖನದಲ್ಲಿ ಒಂದಷ್ಟು ರಮ್ಯತೆ, ಶುಗರ್ ಕೋಟಿಂಗ್ ಇದೆ ಎಂದು ನಿಮಗನಿಸಬಹುದು. ಇದು ಹೌದೋ ಅಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವುದು ಸುಲಭ. ಭೂಮಿಯನ್ನು ಕಳೆದುಕೊಂಡಂತೆ ಕಲ್ಪಿಸಿಕೊಳ್ಳಿ. ಗೌಜಿಗದ್ದಲದ ಮಧ್ಯೆ, ಧೂಳು, ಕಸಗಳ ಮಧ್ಯೆ ಜೀವಿಸಬೇಕಾದ ಇಂದಿನ ಬಹುಸಂಖ್ಯಾತರ ಪರಿಸ್ಥಿತಿ ನಮಗೂ ಬಂದರೆ ಹೇಗೆಂದು ಯೋಚಿಸಿ. ಆಗ ನಮಗೆ ನಮ್ಮಲ್ಲಿರುವುದರ ನಿಜವಾದ ರಮ್ಯತೆ ತಿಳಿಯುತ್ತದೆ. ಆದರೆ ಹಾಗಾಗುವ ಮೊದಲೇ, ನಮ್ಮಲ್ಲಿರುವುದನ್ನು ಕಳೆದುಕೊಳ್ಳುವ ಮೊದಲೇ, ಇರುವ ಭಾಗ್ಯವ ನೆನೆದು, ಹರುಷದ ದಾರಿಯನ್ನು ಕಂಡುಕೊಳ್ಳಬಹುದೇ ಎನ್ನುವುದು ನನ್ನ ಕಾಳಜಿ.

Comments

  1. ವಸಂತಣ್ಣಾ, ತುಂಬ ಚೆನ್ನಾಗಿ ಹೇಳಿದೆ. ನನ್ನ ಮನಸ್ಸಿನಲ್ಲಿಯೂ ಇಂತಹ ವಿಚಾರಗಳು ಬರುತ್ತಿವೆ. ಆದರೆ ಬರಹ ರೂಪದಲ್ಲಿ ಇಷ್ಟು ಚೆನ್ನಾಗಿ ಹೊರಹಾಕಲು ಸಾಧ್ಯವಾಗಿರಲಿಲ್ಲ.

    ReplyDelete
  2. Very nice presentation of your Love towards culture and agriculture.

    ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!