ನೀರಿನ ಕೆಲಸ ನಮ್ಮ ಕರ್ತವ್ಯ
ನೀರಿನ ಕೆಲಸ ನಮ್ಮ ಕರ್ತವ್ಯ
ನಮಗೆ ಸದ್ಯಕ್ಕೆ ನೀರಿಗೆ ಸಮಸ್ಯೆಯಿಲ್ಲ. ಆದ್ದರಿಂದ ನಾವು ನೀರಿಗಾಗಿ ಕೆಲಸ ಮಾಡಬೇಕಾಗಿಲ್ಲ! - ಎಂದು ನಾನು ಹೇಳಿದರೆ ‘ನನಗೆ ಸದ್ಯಕ್ಕೆ ಹಸಿವಿಲ್ಲ, ಆದ್ದರಿಂದ ಇನ್ನು ನಾನು ಊಟಮಾಡಬೇಕಾಗಿಲ್ಲ’ ಎಂದಂತೆ.
![]() |
ಬೋರುವೆಲ್ ಪಕ್ಕ ಇಂಗುಗುಂಡಿ |
ಆದರೆ ಹಳೆಯ ನೆನಪು ಮಾಸಿಲ್ಲ. ನೀರೆಂಬುದು ನಿಂತ ನೀರಲ್ಲ. ಇಂದಿರುವ ಸಂಪತ್ತು ಮುಂದಿಲ್ಲದಾಗಬಹುದು ಎಂಬುದು ನಮಗೆ ನೆನಪಿದೆ. ಅದಕ್ಕೆ ನಾವು ಒಂದಷ್ಟು ನೀರಿನ ಕೆಲಸ ಪ್ರತಿವರ್ಷ ಮಾಡುತ್ತೇವೆ.
ಸಣ್ಣ ಇಂಗುಗುಂಡಿ, ದೊಡ್ಡ ಪ್ರಯೋಜನ
ಸುಮಾರು ಹನ್ನೆರಡು ವರ್ಷ ಹಿಂದೆ ನಾವು ಮೊದಲ ಇಂಗುಗುಂಡಿ ಮಾಡಿದೆವು. ದೊಡ್ಡದೇನಲ್ಲ. ಸುಮಾರು ಐದಡಿ ಆಳ, ಮೂರೂವರೆ ಅಡಿ ಚಚ್ಚೌಕ. ಅಂದರೆ ಸುಮಾರು 1500 ಲೀಟರ್ ನೀರು. ಗುಂಡಿ ತುಂಬಿದ ಮೇಲೆ ಮತ್ತೆ 1500 ಲೀಟರ್ ನಷ್ಟು ಮೀರು ಸಾಮರ್ಥ್ಯ (ಗುಂಡಿಯಲ್ಲಿ ನೀರು ತುಂಬಿದ್ದರೂ ಎಡಬದಿಯಲ್ಲಿ ದಂಡೆ ಇರುವುದನ್ನು ಗಮನಿಸಿ).
ಒಟ್ಟು ಮಳೆಗಾಲದಲ್ಲಿ ಎಷ್ಟು ನೀರು ಕುಡಿಯಬಹುದೆಂದು ಅಂದಾಜು ಮಾಡುವುದು ಕಷ್ಟ. ಆದರೆ ಅದು ಬಹಳ ದೊಡ್ಡ ಸಂಖ್ಯೆಯೆಂಬುದು ನಿಸ್ಸಂಶಯ ಮತ್ತು ಸ್ಪಷ್ಟ. ವಿಧಾನ ಬಹಳ ಸರಳ ಮತ್ತು ಚಿತ್ರ ನೋಡಿದರೆ ಸ್ವಯಂವೇದ್ಯ.
ದೊಡ್ಡ ಇಂಗುಗುಂಡಿ - ಇನ್ನಷ್ಟು ಹೆಚ್ಚು ಪ್ರಯೋಜನ, ಆದರೆ ಹೆಚ್ಚಿನ ಎಚ್ಚರಿಕೆ ಅಗತ್ಯ
ಹಿಂದೆ ಮನುಷ್ಯನ ರಟ್ಟೆ ಬಲ ಹೆಚ್ಚಿದ್ದಾಗ, ವಿನಾಶಕಾರಿ ಯಂತ್ರಗಳು ಕಡಿಮೆಯಿದ್ದಾಗ ಮುರಕಲ್ಲಿನ (ಲ್ಯಾಟರೈಟ್) ಗಣಿಗಾರಿಕೆ ಮನುಷ್ಯ ಶಕ್ತಿಯಿಂದ ನಡೆಯುತ್ತಿತ್ತು. ಆಗ ನಮ್ಮ ನೆರೆಯವರೊಬ್ಬರು ನಮ್ಮ ಗುಡ್ಡದಲ್ಲಿ ತಮ್ಮ ಮನೆಗಾಗಿ ಕಲ್ಲು ಕಡಿಯಲು ಪ್ರಯತ್ನಿಸಿದ್ದರು. ಅದು ಅಷ್ತೊಂದು ಯಶಸ್ವಿ ಆಗಲಿಲ್ಲ. ಆದರೆ ಅವರು ತೋಡಿದ ಗುಂಡಿ ಹಾಗೇ ಉಳಿದುಕೊಂಡಿತು. 2014 ರಲ್ಲಿ ಅರ್ಧದಿನದ ಜೆಸಿಬಿ ಕೆಲಸ ಮಾಡಿ ಅದನ್ನು ಸುಮಾರು 30,000 ಲೀಟರ್ ಸಾಮರ್ಥ್ಯದ ಗುಂಡಿಯನ್ನಾಗಿ ತೋಡಿಸಿದೆವು. ಶಿವಾನಂದ ಕಳವೆಯವರ ಸಲಹೆಯಂತೆ ಒಂದು ಮಳೆಗಾಲ ಅದಕ್ಕೆ ಹೆಚ್ಚು ನೀರು ಹರಿಸದೆ ಗುಂಡಿಯ ದಂಡೆಗಳು ಗಟ್ಟಿಯಾಗಲು ಬಿಟ್ಟೆ.
2016 ರ ಮಳೆಗಾಲದಲ್ಲಿ ಸುಮಾರು ಅರ್ಧ ಎಕರೆ ವಿಸ್ತಾರದ ಕ್ಯಾಚ್ ಮೆಂಟ್ (ಜಲಾನಯನ) ಪ್ರದೇಶದ ನೀರು ಅದಕ್ಕೆ ಹರಿಯುವಂತೆ ಒಂದು ರಸ್ತೆಯ ರಚನೆ ಜೆಸಿಬಿಯಲ್ಲೇ ಮಾಡಿದ್ದೆ. ಈ ವರ್ಷ ಅದರ ಸಂಪೂರ್ಣ ಉಪಯೋಗ ಆಗಿದೆ. ಬಂದ ಪ್ರತಿಯೊಂದು ಮಳೆಯ ನೀರು ಹರಿದು ಬಂದು ಗುಂಡಿಗೆ ಸೇರಿದೆ.
ಕೇವಲ ಒಂದೆರಡು ಬಾರಿ ತುಂಬಿ ಕೋಡಿ ಹರಿದಿದೆ (ಈ ಬಾರಿ ಮಳೆಯೂ ಕಡಿಮೆಯೆನ್ನಿ). ಇದರ ಬಗ್ಗೆ ಒಂದು ವಿಡಿಯೋ ಮಾಡಿ ವಿವರವನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ. ಕೆಳಗೆ ನೋಡಿ (ಸಬ್ ಟೈಟಲ್ ಜೊತೆಗೆ ನೋಡಿ).
![]() |
ನೀರು ತುಂಬಿ ಹರಿಯುತ್ತಿರುವುದು |
ತೋಡಿಗೆ ಒಡ್ಡು, ಬರಕ್ಕೆ ಸಡ್ಡು
ಈಗ ಅಕ್ಟೋಬರ್. ಇನ್ನು ತೋಡುಗಳಿಗೆ ಕಟ್ಟ ಕಟ್ಟುವ ಸಮಯ. ಅಲ್ಲಲ್ಲಿ ಅಂತರ ಕಟ್ಟ ನಿರ್ಮಿಸಿ ನೀರು ನಿಲ್ಲಿಸಿದರೆ ನೀರಾವರಿ ಮುಂದೂಡಬಹುದು, ಭೂಮಿತಾಯಿಯ ಒಡಲ ತಂಪು ಉಳಿಸಬಹುದು.
ಹಳೆಯ ಕಾಲದ ಮಣ್ಣಿನ ಕಟ್ಟಗಳನ್ನು ಈಗ ಕಟ್ಟುವುದು, ನಿಭಾಯಿಸುವುದು ಬಹಳ ಕಷ್ಟ. ಪ್ಲಾಸ್ಟಿಕ್ ಎಂಬ ಮಹಾಮಾರಿ ಇಲ್ಲಿ ನಮಗೆ ಸ್ವಲ್ಪ ಸಹಾಯ ಮಾಡಬಲ್ಲುದು.
ವಿಧಾನ ಸುಲಭ.
- ನಿಮ್ಮ ತೋಡಿನ ಅಗಲಕ್ಕೆ ತಕ್ಕುದಾದ HDPI ಶೀಟನ್ನು ಕೊಂಡು ತರುವುದು. ಮತ್ತು ಸುಮಾರು ಎಂಟರಿಂದ ಹತ್ತಡಿ ಅಗಲ ಮತ್ತು ತೋಡಿಗೆ ತಕ್ಕಷ್ಟು ಉದ್ದದ ಸಿಲ್ಪಾಲಿನ್ ಅಥವಾ ಇನ್ನಾವುದೇ ತೂತಿಲ್ಲದ ಪ್ಲಾಸ್ಟಿಕ್ ಶೀಟು.
- ತೋಡಿಗೆ ಅಡ್ಡಲಾಗಿ ಸುಮಾರು ಎರಡೆರಡು ಅಡಿಗೊಂದರಂತೆ ಗೂಟಗಳನ್ನು ನೆಡುವುದು. ಏರಿ ನಿಂತ ನೀರಿನ ಭಾರವನ್ನು ತಡೆಯಲು ಅಡ್ಡಡ್ಡಲಾಗಿ ಒಂದೊಂದಡಿ ಅಂತರಕ್ಕೆ ಸಲಿಕೆ ಕಟ್ಟಬೇಕು.
- ನೀರಿಗೆ ಅಡ್ಡಲಾಗಿ HDPI ಶೀಟನ್ನು ಇಟ್ಟು, ಅದರ ಮುಂದೆ (ನೀರಿಗೆ ಅಭಿಮುಖವಾಗಿ) ಸಿಲ್ಪಾಲಿನ್ ಶೀಟನ್ನು ಇಡುವುದು. ಸಿಲ್ಪಾಲಿನ್ ಶೀಟು ನೆಲಕ್ಕೆ ಅಂಟಲು ಅದರ ಮೇಲೆ ಸ್ವಲ್ಪ ಮಣ್ಣು ಹರಡುವುದು.
ಇಷ್ಟು ಮಾಡಿದಾಗ ಸಿಲ್ಪಾಲಿನ್ ಶೀಟಿನ ಮೇಲೆ ನೀರು ಸಂಗ್ರಹವಾಗಲು ತೊಡಗಿ ಅದು ಸಿಲ್ಪಾಲಿನ್ ಶೀಟನ್ನು ನೆಲಕ್ಕೆ, ತೋಡಿನ ಗೋಡೆಗಳಿಗೆ ಒತ್ತಲು ತೊಡಗುತ್ತದೆ. ಆ ಭಾರಕ್ಕೆ ತನ್ನಿಂತಾನಾಗಿ ಪ್ಲಾಸ್ಟಿಕ್ ಶೀಟು ನೆಲಕ್ಕೆ ಲಾಕ್ ಆಗಿ ನೀರಿಗೆ ಹೊರಹೊರಡಲು ದಾರಿ ಇಲ್ಲವಾಗುತ್ತದೆ. ಕಟ್ಟದಲ್ಲಿ ನೀರು ಏರತೊಡಗುತ್ತದೆ. ಒಂದು ಗಂಟೆಯೊಳಗೆ ಕಟ್ಟಕಟ್ಟಬಹುದು. ಒಂದು ದಿನದಲ್ಲಿ ಅಲ್ಲಲ್ಲಿ ಒಡ್ಡು ನಿರ್ಮಿಸಿ ಮುಂದಿನ ಎರಡು ತಿಂಗಳಿಗೆ ನೀರಿನ ಭದ್ರತೆ ಯನ್ನು ಪಡೆಯಬಹುದು.
![]() |
ಒಡ್ಡು ಕಟ್ಟುವ ಕ್ರಮ |
![]() |
ಒಡ್ಡಿನಿಂದ ಸಂಗ್ರಹವಾದ ಹಿನ್ನೀರು |
ಇವೆಲ್ಲ ನಮ್ಮ ಕರ್ತವ್ಯ. ‘ಪ್ರಕೃತಿಯನ್ನು ರಕ್ಷಿಸಲು’ ಮಾಡಬೇಕಾದ ಹೀರೋಯಿಕ್ ಕೆಲಸ ಅಲ್ಲ. ಯಾರದಾದರೂ ರಕ್ಷಣೆಯಾಗುವುದಿದ್ದರೆ ಅದು ‘ನಮ್ಮದೇ’. ನಾವು ಮಾಡುತ್ತಿದ್ದೇವೆ. ನೀವೂ ಮಾಡಿ.
ವಸಂತ ಕಜೆ
ಕಜೆ ವೃಕ್ಷಾಲಯ
Tumba chennagitta vivarisi barediddiri...keep writing...
ReplyDelete