ಸಸ್ಯಾಧ್ಯಾಯಿ ಶ್ರೀ ಉದಯ ಕುಮಾರ್ ಶೆಟ್ಟಿ ಅವರ ಪರಿಚಯ - ನನಗೆ ತಿಳಿದಂತೆ

ಸಸ್ಯಾಧ್ಯಾಯಿ ಶ್ರೀ ಉದಯ ಕುಮಾರ್ ಶೆಟ್ಟಿ ಅವರ ಪರಿಚಯ - ನನಗೆ ತಿಳಿದಂತೆ 

ಪಿಲಿಕುಳ ಔಷಧೀಯ ಉದ್ಯಾನದ ಸಸ್ಯ ವೈವಿಧ್ಯ ವೃದ್ಧಿ, ನಿರ್ವಹಣೆಯಲ್ಲಿ ಆರಂಭದಿಂದ ಇಲ್ಲಿಯವರೆಗೆ ಕೆಲಸ ಮಾಡುತ್ತಿರುವ ಶ್ರೀ ಉದಯ ಕುಮಾರ ಶೆಟ್ಟರಿಗೆ ತಾ| 27 ದಶಂಬರ್ 2015 ರಂದು 'ಕಜೆ ವೃಕ್ಷಾಲಯ'ದಲ್ಲಿ ನಡೆದ ಗೌರವ ಸಮರ್ಪಣೆಯಲ್ಲಿ ಅವರ ಬಗ್ಗೆ ಮಾಡಿದ ಪರಿಚಯ ಭಾಷಣ. 

ಸನ್ಮಾನ ಸ್ವೀಕರಿಸಿ ಮಾತನಾಡುತ್ತಿರುವ ಶ್ರೀ ಉದಯ ಕುಮಾರ ಶೆಟ್ಟಿ 


ಸೊಪ್ಪಿನ ಗುಡ್ಡದಲ್ಲೊಂದು ಸಭೆ, ತರಗೆಲೆಯೇ ನೆಲಹಾಸು, ತೋಟದಲ್ಲಿ ಊಟ, ದಿನವಿಡೀ ಕಾಡು ಖಗಮೃಗಸಸ್ಯಗಳ ಗುಣಗಾನ. ಇಂತಹ ಸಭೆಯಲ್ಲೊಂದು ಸನ್ಮಾನ!. ಇಂತಹ ಕುಚೇಲ ಪರಿಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಡೆಯುವ ಸನ್ಮಾನದ ಪರಿ ಏನು ಎಂಬ ಕುತೂಹಲ ನಿಮ್ಮಲ್ಲಿರುವುದು ಸಹಜ. ಹೌದು, ಇದು ಸರಳ, ಸಜ್ಜನ, ಪ್ರಾಮಾಣಿಕ, ಅರಣ್ಯ ಕಾರ್ಯಕರ್ತರೊಬ್ಬರಿಗೆ ನಡೆಯುತ್ತಿರುವ ಸರಳ ಸನ್ಮಾನ.
'ಆರಣ್ಯ' ಎನ್ನುವ ಶಬ್ದಕ್ಕೆ ಸಂಸ್ಕ್ರತದಲ್ಲಿ 'ಎಲ್ಲಿಂದ ನಾವಿರುವ ನೆಲೆಯ ಮೇಲ್ಛಾವಣಿಯನ್ನು ನೋಡಲಾಗುವುದಿಲ್ಲವೋ ಅಲ್ಲಿಂದ' ಎನ್ನುವ ಅರ್ಥವಿದೆ. ಅಂದರೆ ಕಾಡು ಎಂದರ್ಥ. ತಲೆಯೆತ್ತಿ ನೋಡಿದಾಗ ವಿಶಾಲಾಗಸ, ಪಾದದಡಿ ಸುಡುವ ಮುರಕಲ್ಲು ಇದ್ದ ಪಿಲಿಕುಳದ ಏಳೆಕರೆ ಗುಡ್ಡದಲ್ಲಿ ಅರಣ್ಯವನ್ನು ಸೃಷ್ಟಿಸಿದ ಉದಯಕುಮಾರ ಶೆಟ್ಟರನ್ನು ಈ ಅರಣ್ಯ ನಿರ್ಮಿತ ಸಹಜ ನೆರಳಿನಲ್ಲಿ ಸತ್ಕರಿಸಲು ನಮಗೆ ಸಂತೋಷವೆನಿಸುತ್ತದೆ.
* * *
ಶ್ರೀ ಉದಯಕುಮಾರ ಶೆಟ್ಟರು ದೇವಸ್ಯ ಕುಡೆತ್ತೂರು ಶಾಂತಲಾ ಶೆಟ್ಟಿ ಮತ್ತು ಕೊಳ್ನಾಡು ಪಡ್ಡೆಮನೆ ಲಕ್ಷ್ಮಣ ಶೆಟ್ಟಿ ಇವರ ಸುಪುತ್ರ. ಕಟೀಲು ಕ್ಷೇತ್ರದ ಮೊಕ್ತೇಸರಿಕೆಯನ್ನು ಹಿಂದೆ ನಡೆಸುತ್ತಿದ್ದ ತಂದೆಯ ಮನೆಯ ಕೈಯಿಂದ ಈಗ ಆ ಜವಾಬ್ದಾರಿ ಪರಾಭಾರೆಯಾಗಿ ಹೋಗಿದೆ. ಇಂದಿಗೂ ಕಟೀಲು ಮೇಳದ ತಿರುಗಾಟದ ಎರಡನೆಯ ಆಟ ನಡೆಯುವುದು ಇವರ ಮನೆಯಲ್ಲಿಯೆ. ಯಕ್ಷಗಾನ ಮತ್ತು ಭೂತಕೋಲದಲ್ಲಿ ಬಾಲ್ಯದಿಂದ ಆಸಕ್ತಿ ಮತ್ತು ಜ್ಞಾನವನ್ನು ಬೆಳೆಸಿಕೊಂಡ ಶೆಟ್ಟರು ಇಂದಿಗೂ ಅದನ್ನು ಉಳಿಸಿಕೊಂಡು ಬಂದಿದ್ದಾರೆ.
ಹೈಸ್ಕೂಲಿನ ದಿನಗಳಲ್ಲಿ NCC ಯ ನೇವಿ ವಿಭಾಗದಲ್ಲಿ ಆಸಕ್ತಿಯಿಂದ ಗುರುತಿಸಿಕೊಂಡ ಶೆಟ್ಟರು ಕೆಡೆಟ್ ಕ್ಯಾಪ್ಟನ್ ಆಗಿದ್ದವರು. ಈ ಆಸಕ್ತಿ ಮುಂದುವರೆದು, ಮರ್ಚೆಂಟ್ ನೇವಿಯ ಸರಕು ಸಾಗಣಾ ಹಡಗಿನಲ್ಲಿ ಪ್ರಪಂಚ ಸುತ್ತುವ ವೃತ್ತಿಯನ್ನು ಮೊದಲಾಗಿ ಆರಿಸಿಕೊಳ್ಳುವಂತಾಯಿತು. ಈ ಅವಧಿಯಲ್ಲಿ ಅವರು ಯುರೋಪ್ ಅಮೆರಿಕಾಗಳನ್ನೆಲ್ಲ ಸುತ್ತಿ ಬಂದರು. ಗ್ರೀಕ್ ಭಾಷೆಯನ್ನು ತಕ್ಕಮಟ್ಟಿಗೆ ಕಲಿತರು.
ಶೆಟ್ಟರ ಜೀವನದ ಮುಂದಿನ ಕೆಲವು ಹೆಜ್ಜೆಗಳು ಅವರ ಇಂದಿನ ಚರ್ಯೆಯ ವಿರುದ್ಧ ದಿಕ್ಕಿನಲ್ಲಿವೆ. ಅವರು ನೇವಿಯ ಕೆಲಸ ಕೊನೆಗೊಳಿಸಿ ಬೆಂಗಳೂರಿನಲ್ಲಿ ನೆಲೆನಿಂತು ಮರದ ಬೋರ್ಡುಗಳಿಂದ ಪ್ಯಾಕೇಜಿಂಗ್ ಮಾಡುವ ಸ್ವಂತ ಉದ್ಯಮವನ್ನು ಶುರುಮಾದಿದರು. ಕಂಪನಿ ತಕ್ಕ ಮಟ್ಟಿಗೆ ಚೆನ್ನಾಗಿ ನಡೆದು ಬೃಹತ್ ಸರಕಾರೀ ಕಂಪನಿಗಳು ಅವರ ಗ್ರಾಹಕರಾದರೂ ಕಾಲಕಾಲಕ್ಕೆ ಹಣ ಪಾವತಿಯಾಗದೆ ಕಂಪನಿಯನ್ನು ಮುಚ್ಚಿ ಊರಿಗೆ ಮರಳಿದರು. ಬಳಿಕ ಮಾಜಿ ವಿಧಾನಸಭಾ ಸದಸ್ಯರೂ ಶೆಟ್ಟರಿಗೆ ಸಂಬಂಧಿಯೂ ಅದ ಶ್ರೀ ನಾಗರಾಜ ಶೆಟ್ಟಿ ಅವರ ಪ್ಲೈವುಡ್ ಕಂಪನಿಯಲ್ಲಿ ಮ್ಯಾನೇಜರಿಕೆ, ಆಮೇಲೆ ಮಂಗಳೂರು ಬಂದರಿನಲ್ಲಿ ಸರಕು ಹೊತ್ತು ಆಗಮಿಸುವ ಹಡಗುಗಳಿಂದ ಸರಕು ಸ್ವೀಕರಿಸಿ ಬಟವಾಡೆ ಮಾಡುವ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯನ್ನು ನಿಭಾಯಿಸಿದರು. ಈ ಕಾಲವನ್ನು ಶೆಟ್ಟರ ಸುದೀರ್ಘ ಆತ್ಮವಿಮರ್ಶೆ ಮತ್ತು ತನ್ನತನದ ಹುಡುಕಾಟದ ದಿನಗಳೆನ್ನಬಹುದು. ಅಪಾರವಾದ ಮೋಸದಾಟಕ್ಕೆ ಅವಕಾಶವಿದ್ದ ಈ ವೃತ್ತಿಯಲ್ಲಿ ಪ್ರಾಮಾಣಿಕತೆಯ ಗೆರೆಯನ್ನು ದಾಟದೆ, ಮಾಲೀಕರಾದ ನಾಗರಾಜಶೆಟ್ಟರಿಗೆ ಮೋಸ ಮಾಡದೆ, ಒಮ್ಮೊಮ್ಮೆ ಉಸಿರುಕಟ್ಟುವ ವಾತಾವರಣದಲ್ಲಿ ಶೆಟ್ಟರು ತಮ್ಮ ನಿಜಾಸಕ್ತಿಯ ಹುಡುಕಾಟದಲ್ಲಿ ತೊಡಗಿದರು. ಈ ಮಧ್ಯೆ ಬಿಡುವಿನ ವೇಳೆಯಲ್ಲಿ ಸ್ಥಳೀಯ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ಸಂಗ್ರಹವನ್ನು ಆಗಾಗ ನದೆಸಿದರು.  ಕೊನೆಗೆ ನಲುವತ್ತು ತುಂಬಿದ ಬಳಿಕ ಅವರ ಜೀವನದ ಕೋಶಾವಸ್ಥೆ ಮುಗಿದು ಬಣ್ಣದ ಚಿಟ್ಟೆಯಾಗಿ ಗಿಡದಿಂದ ಗಿಡಕ್ಕೆ ಹಾರುವ ಕ್ಷಣವು ಮುಖಾಮುಖಿಯಾಯಿತು.

ಈಗ ನಿವೃತ್ತರಾಗಿರುವ ಅಂದಿನ DFO ಜಯಪ್ರಕಾಶ ಭಂಡಾರಿಯವರು ಒಂದು ದಿನ ಕರೆಮಾಡಿ ಪಿಲಿಕುಳದಲ್ಲಿ ಹೀಗೊಂದು ಉದ್ಯೋಗವಿದೆ ಮಾಡುತ್ತಿರಾ ಎಂದು ಕೇಳಿದಾಗ ಕೂಡಲೇ ಶೆಟ್ಟರು ಒಪ್ಪಿಕೊಂಡರು. ಆಮೇಲೆ ಪಿಲಿಕುಳದ ಅಂದಿನ ಕಾರ್ಯಕಾರಿ ನಿರ್ದೇಶಕ, ಈಗಿನ ಶಾಸಕ ಶ್ರೀ ಜೆ.ಆರ್.ಲೋಬೋ ಅವರಿಂದ ಸಂದರ್ಶನ ಮುಗಿದು, ಲೋಬೋ ಅವರ ಅಪಾರ ನಿರೀಕ್ಷೆಯೊಂದಿಗೆ ಪಿಲಿಕುಳ ಔಷಧೀಯ ಉದ್ಯಾನದ ಜವಾಬ್ದಾರಿ ವಹಿಸಿಕೊಂಡರು.

ಅದಾಗಿ ಹಲವು ಮಳೆಗಾಲಗಳು ಈಗ ಸಂದಿವೆ. ಎಂಟು ಎಕರೆ ಮುರಕಲ್ಲಿನ ಗುಡ್ಡವು ಈಗ ಕಾಡಾಗಿದೆ. ಅಲ್ಲಿ ಅವರೀಗ ೧೪ ಸಣ್ಣ ಕೊಳಗಳನ್ನು ಸೃಷ್ಟಿ ಮಾಡಿದ್ದಾರೆ. ಅವರು ತಂದು ನೆಟ್ಟ ಮತ್ತು ಅಲ್ಲಿಯೇ ಇದ್ದ ಜಾತಿಗಳು ಸೇರಿ ೧೫೦೦ಕ್ಕೂ ಹೆಚ್ಚು ಜಾತಿಯ ಗಿಡಗಳು ಅಲ್ಲಿ ಬೆಳೆದು ನಿಂತಿವೆ. ಅತ್ಯಂತ ವಿರಳ, ವಿನಾಶದ ಅಂಚಿನಲ್ಲಿರುವ ತಳಿಗಳನ್ನು ಬೆಳೆಸಿ ಆಸಕ್ತರಿಗೆ ಗಿಡಗಳನ್ನು ಮಾಡಿಕೊಡುತ್ತಾರೆ. ಅವರು ನೆಟ್ಟ ೮೦ ಶೇಕಡಾ ಗಿಡಗಳು ಅವರು ಅಭಿಮಾನಪಡುವಂತೆ ಪುಷ್ಪವತಿ, ಫಲವತಿಯರಾಗಿವೆ. ಆ ಎಲ್ಲ ಗಿಡಗಳ ಸ್ಥಳೀಯ, ವೈಜ್ಞಾನಿಕ ಹೆಸರುಗಳು ಶೆಟ್ಟರ ಬಾಯ ತುದಿಯಲ್ಲಿದೆ. ಅಲ್ಲಿನ ಸಸ್ಯವೈವಿಧ್ಯವನ್ನು ಇನ್ನಷ್ಟು ಶಬ್ದಗಳಲ್ಲಿ ವರ್ನಿಸುವುದಕ್ಕಿಂತ ಹೋಗಿ ನೋಡುವುದು ಉಚಿತ.

ಶೆಟ್ಟರ ಕೆಲಸವನ್ನು ನಾವೀಗ ಹಲವು ಮಜಲುಗಳಲ್ಲಿ ವಿಶ್ಲೇಷಿಸಬೇಕಾಗಿದೆ.
ಮೊದಲನೆಯದಾಗಿ, ಅವರು ನೆಟ್ಟು ಬೆಳೆಸಿರುವುದೆಲ್ಲ ತನ್ನದಲ್ಲದ ಭೂಮಿಯಲ್ಲಿ. ದುಡಿಯುವಾಗ ಅವರು ಇದು ತನ್ನದೇ ಎಂದುಕೊಂಡು ದುಡಿದಿದ್ದಾರೆ. ಆದರೆ ಇದರಲ್ಲಿ ನನಗೆ ಸಿಕ್ಕುವುದೇನು ಎಂದು ಅವರು ಚಿಂತೆ ಮಾಡಿಲ್ಲ.

ಎರಡನೆಯದಾಗಿ, ದುಡಿಯುವ ಸಂಸ್ಥೆಯ ಅವರಿಗಿರುವ ಪ್ರಾಮಾಣಿಕತೆ. ಪಿಲಿಕುಳಕ್ಕಾಗಿ ಅವರು ಗಿಡಗಳನ್ನು ತೆಗೆದುಕೊಳ್ಳುವಾಗ ಮತ್ತು ಅಥವಾ ಕೊಡುವಾಗ ಸ್ನೇಹಾಚಾರವನ್ನು ಲೆಕ್ಕಿಸದೆ ಅದರ ಮೌಲ್ಯವನ್ನು ಬಿಲ್ಲಿನೊಂದಿಗೆ ಕೊಟ್ಟು ಅಥವಾ ಪಡೆದೇ ವ್ಯವಹಾರವನ್ನು ಮುಗಿಸುತ್ತಾರೆ. ಅವರನ್ನು ನೇಮಿಸಿಕೊಂಡ ಲೋಬೋ ಅವರು ಶೆಟ್ಟರ ಕಾರ್ಯಕ್ಷೇತ್ರಕ್ಕೆ ಬಂದು ಅವರ ಕೆಲಸವನ್ನು ವಿರಾಮವಾಗಿ ವೀಕ್ಷಿಸಿ 'ಇಲ್ಲಿ ಸಮಯ ಕಳೆಯಲು ನನಗೆ ಸಂತೋಷವಾಗುತ್ತದೆ' ಎಂದು ನುಡಿಯುವ ನಲ್ಮಾತುಗಳನ್ನು ಬಿಟ್ಟರೆ ಅವರಿಗೆ ಜೀವನದಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಅವರು 'ನಾನು ಇಲ್ಲಿ ಸಂಬಳಕ್ಕೆ ದುಡಿಯುವವ. ಇಲ್ಲಿ ಮಾಡಿದ ಕೆಲಸಕ್ಕಾಗಿ ನಾನು ಈ ರೀತಿ ಗೌರವವನ್ನು ಸ್ವೀಕರಿಸಬಹುದೇ?' ಎಂದು ಕೇಳುವ ಅವರ ಪ್ರಶ್ನೆ ನಮ್ಮನ್ನು ಗಂಭೀರವಾದ ಯೋಚನೆಗೆ ಹಚ್ಚಬಲ್ಲುದು. ಮುಗ್ಧವಾದ ಮತ್ತು ಪ್ರಾಮಾಣಿಕವಾದ, ಯಾವುದೇ ಗೌರವದ ನಿರೀಕ್ಷೆಯನ್ನು ಹೊಂದಿರದೆ ಕೇಳಿದ ಈ ಪ್ರಶ್ನೆಯು ನಮ್ಮ ಭಾವನೆಯ ತಂತಿಯನ್ನು ಒಮ್ಮೆ ಮೀಟಬಲ್ಲುದು. ನಾಗರಿಕ ಸಮಾಜ ಇಂದು ಎಂಥವರನ್ನು ಗೌರವಿಸುತ್ತಿದೆ? ಗೌರವಕ್ಕೆ ಅರ್ಹವಾದ ಶ್ರಮ, ಗೃಹಕೃತ್ಯ, ರಿಪೇರಿ, ಕೃಷಿ, ಅರಣ್ಯೀಕರಣ ಇಂಥ ಸಾವಿರಾರು ವೃತ್ತಿಗಳನ್ನು ಕಡೆಗಣಿಸಿ ಸೆಲೆಬ್ರಿಟಿಗಳನ್ನು ಸಾಕಿ, ಇನ್ನೊಂದೆರಡು ದಶಕಗಳಲ್ಲಿ ನಾವು ಸೃಷ್ಟಿಮಾಡಲಿರುವ ಸಮಾಜ ಎಂತಹುದು? ಎನ್ನುವುದು ನಮಗೆ ಚಿಂತನಾರ್ಹ.

ಮೂರನೆಯದಾಗಿ, ಸ್ಥಳೀಯ ವೈವಿಧ್ಯತೆಗಳು ಉಳಿಯಬೇಕು ಎನ್ನುವುದರ ಬಗ್ಗೆ ಅವರಿಗೆ ಅಪಾರ ಕಾಳಜಿಯಿದೆ. ಇದು ಸಸ್ಯಗಳನ್ನು ಮೀರಿ ಅವರು ಡಾ. ಮನೋಹರ ಉಪಾಧ್ಯರಲ್ಲಿ 'ನಾಟಿಕೋಳಿಗಳನ್ನು ಉಳಿಸಲು ನೀವು ಏನಾದರೂ ಮಾಡಬೇಕು' ಎಂದವರು ಹೇಳುವುದಿದೆ. ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಿರುವ ಮತ್ತು ಈಗ ನಾವು ಮರೆಯುತ್ತಿರುವ, ಆಹಾರದಿಂದ ಆರೋಗ್ಯ ಪಡೆಯುವ ಜೀವನಕ್ರಮ, ಗ್ರಾಮ್ಯ ಜನರಿಗೆ ತಿಳಿದಿರುವ ಅಪಾರ ಪರಿಸರ ಮಾಹಿತಿ ಇತ್ಯಾದಿಗಳ ಬಗ್ಗೆ ಶೆಟ್ಟರು ಸಂವೇದನೆಯನ್ನು ಹೊಂದಿದ್ದಾರೆ. ನಿಸರ್ಗದಲ್ಲಿ ನಮಗೆ ತಿಳಿಯಲಾಗದಷ್ಟು ರಹಸ್ಯಗಳು ತುಂಬಿವೆ ಮತ್ತು ಅದನ್ನು ಆರಾಧಿಸಿದರೆ ನಮಗೆ ಒಳ್ಳೆಯದೇ ಆಗುತ್ತದೆ ಎಂದು ಅವರು ತಮ್ಮದೇ ಮಾತುಗಳಲ್ಲಿ ಹೇಳುತ್ತಾರೆ.
ತಮ್ಮ ಕಿನ್ನಿಗೋಳಿ ಮೂಲಮನೆಯ ದೈವಕಾರ್ಯವನ್ನು ನಡೆಸುತ್ತಿರುವ ಶೆಟ್ಟರು ಅಲ್ಲಿ ದೊಂದಿಬೆಳಕಿನಲ್ಲಿ ಸ್ವಾಭಾವಿಕ ವನವನ್ನು ಸ್ವಲ್ಪವೂ ಕಡಿಯದೆ ನೇಮಕಾರ್ಯಗಳನ್ನು ನಡೆಸುತ್ತಿದ್ದಾರೆ. ದೇವರನ್ನು ಒಲಿಸಿಕೊಳ್ಳಲು ಬಂಗಾರದ ಗಟ್ಟಿಗಳನ್ನು ನೀಡುವ ಕಳ್ಳದುಡ್ಡಿನ ಸಂಪಾದನೆಯ ದಾರಿಯ ಬಗ್ಗೆ ಜಿಗುಪ್ಸೆಯನ್ನು ಹೊಂದಿರುವ ಶೆಟ್ಟರು ಸರಿತಪ್ಪುಗಳ ನಿಷ್ಕರ್ಷೆಯನ್ನು ಸ್ಪಷ್ಟವಾಗಿ ಮಾಡಬಲ್ಲವರು.
ಶೆಟ್ಟರ ಈ ರೀತಿಯ ಸದ್ವಿಚಾರ ನಿರ್ದೇಶಿತ ಜೀವನಕ್ಕೆ ಅವರು ನಂಬಿದ ಮೌಲ್ಯಗಳು ಮತ್ತು ದೈವ ದೇವರುಗಳು ಒಳ್ಳೆಯ ಪುರಸ್ಕಾರವನ್ನೇ ನೀಡಿವೆ. ಉದಯಕುಮಾರ ಶೆಟ್ಟಿ ಮತ್ತು ಅನಿತಾ ದಂಪತಿಗೆ ನಾಲ್ಕು ಮಂದಿ ಮಕ್ಕಳು. ಗಂಡು ಮಕ್ಕಳು NIT ಯಲ್ಲಿ ವ್ಯಾಸಂಗ ಮಾಡಿ ಉನ್ನತ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಅವಳಿ ಹೆಣ್ಣು ಮಕ್ಕಳು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಅವರ ಕುಟುಂಬವನ್ನು ಅವರು ಸೇವೆಗೈದಿರುವ ಪ್ರಕೃತಿಮಾತೆ ಮತ್ತು ದೇವತಾಶಕ್ತಿಗಳು ಮುಂದಿನ ದಿನಗಳಲ್ಲಿ ಪ್ರಕ್ರತೀ ತತ್ವಗಳಿಗೆ ಮುಕ್ಕಾಗದಂತೆ ನಡೆಸಿಕೊಂಡು ಹೋಗಲಿ ಎಂದು ಈ ಸಂದರ್ಭದಲ್ಲಿ ಜೊತೆ ಸೇರಿರುವ ನಾವೆಲ್ಲರೂ ಹಾರೈಸಲು ಬಯಸುತ್ತೇವೆ.

ಶ್ರೀ ಉದಯ ಕುಮಾರ ಶೆಟ್ಟಿ, ಬೇಂಗದ ಮರ(pterocarpus marsupium)ದ ಹಿನ್ನೆಲೆಯೊಂದಿಗೆ

Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!