ಅನಾಥಕರುವಿನ ಕ್ಷೀರಾನ್ವೇಷಣೆ

ಅನಾಥಕರುವಿನ ಕ್ಷೀರಾನ್ವೇಷಣೆ ನಾನು ಅಥವಾ ಯಾವುದೇ ಗೌಳಿ ಪ್ರತಿದಿನ ಕರುವನ್ನು ತಾಯಿಯ ಬಳಿಬಿಟ್ಟು, ಅದು ಕೆಚ್ಚಲಿನಿಂದ ಸ್ವಲ್ಪ ಹಾಲು ಹೀರಿ ತಾಯಿ ಹಾಲನ್ನು ಇಳಿಸಿದ ಮೇಲೆ ಕರುವನ್ನು ಎಳೆದು ಕಟ್ಟಬೇಕಷ್ಟೆ? ಅಲ್ಲದಿದ್ದರೆ ಕರು ಎಲ್ಲ ಹಾಲನ್ನು ತಾನೇ ಕುಡಿದು ಬಿಡುತ್ತದೆ. ಎಳೆದು ಗೂಟಕ್ಕೆ ಕಟ್ಟುವಾಗ ಒಯ್ಯುರುಳು ಎನ್ನುವ ಒಯ್ದರೆ (ಎಳೆದರೆ) ಪಟಕ್ಕನೆ ಬಿಡಿಸಿಕೊಳ್ಳುವ ಗಂಟು (slip knot) ಹಾಕಿ ಅದನ್ನು ಕಟ್ಟುವುದು ಕ್ರಮ. ಇದರಿಂದ ಹಾಲುಕರೆದ ಬಳಿಕ ಕರುವನ್ನು ತಾಯಿಯ ಬಳಿ ಮತ್ತೆ ಬಿಟ್ಟು ಉಳಿದ (ಉಳಿಸಿದ) ಹಾಲನ್ನು ಕುಡಿಯಲು ಬಿಡುವುದು ಸುಲಭ.
ಕರು ಪ್ರತಿದಿನ ಎರಡು ಬಾರಿಯಂತೆ ತನ್ನ ಕಣ್ಣೆದುರೇ ರೀತಿ ಗೂಟಕ್ಕೆ ಕಟ್ಟುವುದನ್ನು, ಮತ್ತೆ ಸುಮ್ಮನೆ ಒಂದು ಬಳ್ಳಿ ಎಳೆದಾಗ ಗಂಟು ಬಿಡುವುದನ್ನು ನೋಡುತ್ತದೆ. ಆದರೆ ಇಷ್ಟು ಸರಳ ಎಳೆತವನ್ನು ತಾನೇ ಮಾಡಿ ಬಂಧನದಿಂದ ಮುಕ್ತಿ ಪಡೆಯಲು ಅದಕ್ಕೆ ಗೊತ್ತಾಗುವುದಿಲ್ಲವಲ್ಲ. ಇದೆಂಥ ಶತಮೂರ್ಖತನ. ಹಾಲು ಕರೆಯುವುದೆಂಬ ತಲೆಗೆ ಹೆಚ್ಚು ಕೆಲಸವಿಲ್ಲದ, ಕೈಕೆಲಸ ನಡೆಸುವಾಗ ನಾನು ಹೀಗೆಲ್ಲ ಯೋಚಿಸುವುದು ಸುಲಭ. ಆದರೆ ಉಪಾಯದ ಸ್ಫುರಣೆ ಕರುವಿಗೇ ಆಗಬೇಕಷ್ಟೆ?!.

ಮನುಷ್ಯನೂ ಸೇರಿದಂತೆ ಸಸ್ಯಪ್ರಾಣಿಗಳು ತಮ್ಮದೇ ರೀತಿಯಲ್ಲಿ, ಬೇರೆಬೇರೆ ಕಾರಣಕ್ಕೆ ಮೂರ್ಖರು ಎಂಬುದು ನಿಸ್ಸಂಶಯ. ಆದರೆದೇವರು ಕೊಟ್ಟ ಬುದ್ಧಿಎಂಬುದೊಂದು ಪ್ರತಿಯೊಂದು ಸಸ್ಯಪ್ರಾಣಿಗೆ ಹುಟ್ಟಿನಿಂದ ಇದೆ. ಇದನ್ನು ಹುಟ್ಟರಿವು, ಜನ್ಮಜಾತಗುಣ ಅಥವಾ instinct ಎಂದು ಕರೆಯಬಹುದು. ಇದು ಮಾತ್ರ ಪ್ರತಿಯೊಂದು ಜೀವಜಾತಿಯಲ್ಲಿ ನಮಗೆ ಆಶ್ಚರ್ಯವೆನಿಸುವಷ್ಟು, ದಂಗಾಗುವಷ್ಟು ಇದೆ. ನವಜಾತ ಕಡಲಾಮೆ ಮರಿಗಳು ಕಡಲಿನೆಡೆಗೆ ಓಡುವುದು, ಆಗಷ್ಟೆ ಒಡೆದ ಮೊಳಕೆಯ ತಾಯಿಬೇರು (radicle) ಭೂಮಿಯೊಳಗೆ ಇಳಿಯುವುದು, ನಾಯಿ/ಹುಲಿ/ಚಿರತೆ ಯಂಥ ಬೇಟೆಯಾಡುವ ಪ್ರಾಣಿಗಳ ಮರಿಗಳು ತಮ್ಮ ಬಾಲ್ಯದಲ್ಲಿಬೇಟೆಯ ಆಟವನ್ನೇ ಆಡುವುದು, ಮನುಷ್ಯರಲ್ಲಿ ಪುಟ್ಟ ಹೆಣ್ಣು ಮಕ್ಕಳು ಮನೆಯಾಟ, ಲಾಲನೆಪಾಲನೆಯ ಆಟವನ್ನು ಆಡುವುದು, ನಾಗರಹಾವಿನ ಎಳೆಮರಿಯೊಂದು ಹೆಡೆಬಿಚ್ಚಿ ಹೆದರಿಸುವುದು(ಇದನ್ನು ನಾನು ನೋಡಿದ್ದೇನೆ) ಹೀಗೆ ಬರೆಯುತ್ತ ಹೋದರೆ ಒಂದುಸಾವಿರ ಪುಟಗಳಷ್ಟು ಹುಟ್ಟರಿವಿನ ಅಭಿವ್ಯಕ್ತಿಗಳನ್ನೇ ಬರೆಯಬಹುದು(ನನ್ನ ಸಂಗ್ರಹ ಅಷ್ಟೊಂದು ಇಲ್ಲ!).

ನವಜಾತ ಶಿಶು/ಮರಿಗಳ ತಾಯಿಹಾಲಿನೆಡೆಗಿನ ತುಡಿತದ ಬಗ್ಗೆ ಸ್ವಲ್ಪ ನೆಟ್ ನಲ್ಲಿ ಹುಡುಕುತ್ತಿದ್ದಾಗ Breast Crawl’ (ಕ್ಷೀರಾನ್ವೇಷಣೆ) ಎಂಬ ಹುಟ್ಟರಿವೊಂದು ಮನುಷ್ಯರಲ್ಲೂ ಇದೆಯೆಂದು ಗೊತ್ತಾಯಿತು. ಆಗಷ್ಟೇ ಹುಟ್ಟಿದ ಎಳೆಮಗುವೊಂದನ್ನು ತಾಯಿಯ ಹೊಟ್ಟೆಯ ಮೇಲಿಟ್ಟರೆ ಅದು ಹದಿನೇಳು ನಿಮಿಷದಿಂದ ಒಂದೂವರೆ ಘಂಟೆಯೊಳಗೆ ತಾಯಿಯ ಎದೆಗೆ ತೆವಳಿ ತಾನೇ ಹಾಲು ಕುಡಿಯಲು ಶುರುಮಾಡುವುದಂತೆ!. ಇದಕ್ಕೆ ಬ್ರೆಸ್ಟ್ ಕ್ರಾಲ್ - ಸ್ತನದೆಡೆಗೆ ತೆವಳುವುದು - ಎಂದು ಕರೆಯುತ್ತಾರೆ. ಹುಟ್ಟಿದಾಗ ತಾಯಿ ಮತ್ತು ಮಗು ತಜ್ಞ ವೈದ್ಯರ ಕೈಯಲ್ಲಿರುವುದರಿಂದ ಇದನ್ನು  ಎಲ್ಲ ತಾಯಂದಿರಿಗೆ ಪ್ರಯೋಗ ಮಾಡುವುದು ಕಷ್ಟ. ಆದರೆ ಪ್ರಾಣಿಗಳಲ್ಲಿ, ಹಸುವಿನಲ್ಲಿ ಗಮನಿಸುವ ಧಾರಾಳ ಅವಕಾಶ ನಮಗೆ ಸಿಗುತ್ತದೆ. ವಿದೇಶಿ ತಳಿ ಮಿಶ್ರಣ ಇರುವಾಗ ಕರುಗಳು ಸ್ವಲ್ಪ ಕಡಿಮೆ ಚುರುಕಿದ್ದು ಮನುಷ್ಯರ ಸಹಾಯ ಬೇಕಾಗುವುದು ಸಾಮಾನ್ಯವಾದರೂ ಒಮ್ಮೊಮ್ಮೆ ತಾವಾಗಿ ಚುರುಕಾಗಿ ಕುಡಿಯುವುದೂ ಇದೆ.

ಕರುವನ್ನು ತಾಯಿಯ ಸಂಪರ್ಕವಿಲ್ಲದೆ ಸಾಕುವ ಸಂದರ್ಭಗಳು ಕೃಷಿಕನಿಗೆ ಬರುತ್ತವೆ - ಹಟ್ಟಿಯ ವ್ಯವಸ್ಥೆ ದೊಡ್ಡದಾಗಿದ್ದು ಪ್ರತಿಯೊಂದು ಕರುವನ್ನು ತಾಯಿಯ ಬಳಿಬಿಟ್ಟು ಹಾಲು ಕರೆಯುವುದು ಕಷ್ಟವಾದಾಗ ಅಥವಾ ತಾಯಿಕರು ತೀರಿಹೋದಾಗ (ವಿಡಿಯೋದಲ್ಲಿ ಕಾಣುವ ಕರುವಿನ ತಾಯಿ ತೀರಿಹೋದುದರ ಬಗ್ಗೆ ಇಲ್ಲಿ ಬರೆದಿದ್ದೇನೆ). ರೀತಿ ಕುಡಿಸುವುದು ಬಹಳ ಸುಲಭ. ಕರುವಿನ ಎದುರು ನಮ್ಮ ಒಂದು ಬೆರಳನ್ನು ಹಿಡಿಯಬೇಕು. ಬೆರಳನ್ನು ಕರು ತಾಯಿಯ ಮೊಲೆಯೆಂದೇ ತಿಳಿದು ಚೀಪಲು ಶುರುಮಾಡುತ್ತದೆ. ಮತ್ತೆ ನಿಧಾನವಾಗಿ ಅದು ಚೀಪುತ್ತಿದ್ದಂತೆ ಕೈಯನ್ನು ಇಳಿಸಿ ಹಾಲು/ಗಂಜಿತಿಳಿ/ಇನ್ಯಾವುದೇ ಪೌಷ್ಟಿಕದ್ರವ ತುಂಬಿದ ಬಾಲ್ದಿಗೆ ಮುಳುಗಿಸಿ ಬೆರಳನ್ನು ಮೇಲ್ಮುಖವಾಗಿ ಹಿಡಿಯಬೇಕು. ಕರು ಬೆರಳನ್ನು ಚೀಪುತ್ತ ಚೀಪುತ್ತ ಬಾಲ್ದಿ ಖಾಲಿ ಮಾಡುತ್ತದೆ, ಎರಡ್ಮೂರು ಲೀಟರ್ ಒಂದೇ ಬಾರಿಗೆ!. ಇಲ್ಲಿ ತನ್ನ ಕೊರಳಿನಿಂದ ಸ್ವಲ್ಪ ಎತ್ತರದಲ್ಲಿ ಕಾಣುವ ಬೆರಳಿಗೂ, ತಾಯಿಯ ಕೆಚ್ಚಲಿಗೂ ಕರು ಹೋಲಿಕೆಯನ್ನು ಗಮನಿಸುವುದು ಅದ್ಭುತವಲ್ಲವೆ?! (ವಿಡಿಯೋ ಗಮನಿಸಿ). ದಿನಕಳೆದಂತೆ ನಮ್ಮ ಬೆರಳನ್ನು ಸ್ವಲ್ಪ ಸ್ವಲ್ಪವೇ ಹಿಂತೆಗೆದು ಸ್ವತಂತ್ರ ಕುಡಿಯುವಿಕೆಗೆ ಅಭ್ಯಾಸ ಮಾಡಿಸಬೇಕು. 

Breast Crawlಗೆ ಇನ್ನೊಂದು ಅತ್ಯುತ್ತಮ ಉದಾಹರಣೆ ಕಾಂಗರೂನದ್ದು. ಅಂದ ಹಾಗೆ ಕಾಂಗರೂ ಒಂದು ಸಸ್ತನಿ ಎಂದು ಮತ್ತೆ ಹೇಳಬೇಕಿಲ್ಲ. ಸಸ್ತನಿಗಳಲ್ಲಿ ಮೊಟ್ಟೆಯಿಡುವವು - ನಾವು ಶಾಲೆಯಲ್ಲಿ ಓದಿದಂತೆ ಪ್ಲಾಟಿಪಸ್, ಮರಿಯಿಡುವವು (ನಾವು!) ಮತ್ತು ಹೊಟ್ಟೆಚೀಲದಲ್ಲಿ ಮರಿಗಳನ್ನು ಬಹಳ ಎಳೆ ಹಂತದಿಂದ ಬೆಳೆಸುವ ಕಾಂಗರೂ ನಂತವು ಎಂದು ಮೂರು ವಿಭಾಗಗಳಿವೆ. ಮೊಟ್ಟೆಯಿಡುವವು ಮತ್ತು ಮರಿಯಿಡುವವು ಸಂಪೂರ್ಣ ಬೆಳವಣಿಗೆ ಹೊಂದಿದ ಮಕ್ಕಳನ್ನು ಹೆತ್ತರೆ, ಹೊಟ್ಟೆಚೀಲದ ಪ್ರಾಣಿಗಳು - ಕಾಂಗರೂನಂತವು ಮಾತ್ರ ಬರಿಯ ಒಂದೆರಡು ಸೆಂಟಿಮೀಟರ್ ಉದ್ದದ ಹುಳುವಿನಂತಹ ಎಳೆ ಭ್ರೂಣವನ್ನೇ ಹೆರುತ್ತವೆ!. ಮುಂಗಾಲುಗಳು ತಕ್ಕಮಟ್ಟಿಗೆ ಶಕ್ತಿಯುತವಾದ ಹುಳರೂಪಿ ಕಾಂಗರೂ ಮೆಲ್ಲಗೆ ತೆವಳುತ್ತ ತಾಯಿಯ ಹೊಟ್ಟೆಚೀಲದೊಳಕ್ಕೆ ಬಂದು ಮೊಲೆಗೆ ಬಾಯಿಯಿಟ್ಟರೆ ಮತ್ತೆ ಮುಂದಿನ ಸುದೀರ್ಘ ಬೆಳವಣಿಗೆ
ತಾಯಿ ಹಾಲು ಕುಡಿಯುತ್ತಿರುವ ಹುಳದಂತಿರುವ ಮರಿ ಕಾಂಗರೂ - ವಿಕಿಪೀಡಿಯಾ ಚಿತ್ರ  
ದಾರಿ ತಿಳಿಯಲು ತಾಯಿ ಕಾಂಗರೂ ತನ್ನ ರೋಮಭರಿತ ಚರ್ಮವನ್ನು ನೆಕ್ಕಿ ದಾರಿ ತೋರಿಸಿಕೊಡುತ್ತದೆ ಎಂದು ಎಲ್ಲೋ ಓದಿದ್ದೇನೆ. ಇದೂ ಸ್ತನ್ಯಪಯಣಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದು ನನಗನಿಸುತ್ತದೆ.

ರೂಪ, ಗಾತ್ರ ದಲ್ಲಿ ಸಂಬಂಧವಿರದ, ವಿಕಾಸದ ಹಾದಿಯಲ್ಲಿ ಬೇರೆಬೇರೆ ಹಂತದಲ್ಲಿರುವ ಲೆಕ್ಕವಿಲ್ಲದಷ್ಟು ಜೀವಿಗಳಲ್ಲಿ ರೀತಿಯ ಹುಟ್ಟಿದ ತಕ್ಷಣದ ಬದುಕುವ ತುಡಿತ ಕಂಡುಬರುತ್ತದೆ; ಇನ್ನು ಹಲವು ಸಂಪೂರ್ಣ ಸಶಕ್ತವಾಗಿ ಹುಟ್ಟುತ್ತವೆ(https://en.wikipedia.org/wiki/Precocial). ಸ್ತನ್ಯಪಾನವಿಲ್ಲದ ಹಕ್ಕಿಗಳಲ್ಲಿ ಮರಿಗಳು ಬಾಯೆತ್ತಿ ಬೊಬ್ಬೆಹಾಕಿ ತುತ್ತಿಗೆ ಅಂಗಲಾಚುವುದನ್ನು ನೋಡುತ್ತೇವೆ. ಮೊಳಕೆಯೊಡೆದ ಬೀಜಗಳು ಆದಷ್ಟು ಬೇಗ ಪತ್ರಹರಿತ್ತನ್ನು ಧರಿಸಿ ತಮ್ಮ ಆಹಾರ ಉತ್ಪಾದಿಸುತ್ತವೆ. ಬಳ್ಳಿಜಾತಿಗಳು ಆದಷ್ಟು ಬೇಗ ಯಾವುದಾದರೂ ಆಧಾರಕ್ಕೆ ಸುತ್ತಲು, ಮೇಲಕ್ಕೇರಲು ತೊಡಗುತ್ತವೆ. ಇಡಿಯ ಜೀವಜಗತ್ತು ಹೀಗೆ
ಒಂದಲ್ಲ ಒಂದು ತೆವಳುವಿಕೆಯಲ್ಲಿದೆ (crawl for something or crawl for life).


ಇದೆಲ್ಲ ಹೇಗಾಯಿತೆಂಬುದಕ್ಕೆ ವಿಕಾಸವಾದ ವೈಜ್ಞಾನಿಕವಾದ ಕಾರಣವನ್ನು ಕೊಡುವುದು ನಿಜ. ಆದರೆ ವೈಜ್ಞಾನಿಕ ವಿವರಣೆಯೊಂದಿಗೆ, ವಿಜ್ಞಾನಕ್ಕೆ ಮೀರಿದ ಒಂದು ನಿಗೂಢತೆ, ನಮ್ಮ ಊಹೆಗೆ, ಅಂದಾಜಿಗೆ, ವಿವರಣೆಗೆ ಮೀರಿದ ವಿಷಯವೊಂದು ಇಲ್ಲಿದೆ ಎಂದು ಅಂದುಕೊಳ್ಳುವುದು ನನಗೆ ಹೆಚ್ಚು ಇಷ್ಟ. ಪೂರ್ತಿ ತಿಳಿದರೆ, ಸರಳೀಕರಿಸಿದರೆ  ವಿಸ್ಮಯಉಳಿಯಲಾರದು. ನನ್ನ ಪ್ರಕಾರ ನಾವಿದನ್ನೆಲ್ಲ ಒಂದಷ್ಟು, ಅಲ್ಪಸ್ವಲ್ಪ ತಿಳಿಯುವ ಉದ್ದೇಶವೇ ನಮಗೆ ತಿಳಿಯಲಾರದ್ದು ಇದೆ ಎಂಬುದನ್ನು ಅರಿಯುವುದು. ಆಗಷ್ಟೇ ಇವೆಲ್ಲದರ ಬಗ್ಗೆ ಗೌರವದಿಂದ, ಕಾಳಜಿಯಿಂದ ನಾವಿಲ್ಲಿ ವ್ಯವಹರಿಸಲು ಸಾಧ್ಯವಿದೆ.

Comments

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!