ಮ್ಯಾನ್ ಹೂ ಪ್ಲಾಂಟೆಡ್ ಟ್ರೀಸ್ - ಫ್ರೆಂಚ್ ಕಥೆಯ ಅನುವಾದ

ಪ್ರಪಂಚದಾದ್ಯಂತ ಅಸಂಖ್ಯಾತ ಜನರನ್ನು ಪ್ರಭಾವಿಸಿದ ಕಥೆಯೊಂದರ ಅನುವಾದ ಇದು. 

ಲೇಖಕ ಜೀನ್ ಗಿಯೋನೋ
ಅನುವಾದ : ವಸಂತ ಕಜೆ

ಕಥಾನಾಯಕನ ಸಸ್ಯಾಲಂಕರಣ (topiary) ಶಿಲ್ಪ - ಇಂಟರ್ನೆಟ್ 

ನಲ್ವತ್ತು ವರ್ಷ ಹಿಂದೆ ನಾನೊಮ್ಮೆ ಆಲ್ಪ್ಸ್ ಪರ್ವತದ ತಪ್ಪಲಿನ ಭಾಗದಲ್ಲಿ ಚಾರಣ ಹೊರಟಿದ್ದೆ. ಯಾವುದೇ ಪ್ರವಾಸಿಗಳು ತಿಳಿಯದ ಒಂದು ಅಜ್ಞಾತ ಸ್ಥಳ ಅದು. ತೀರ ಬರಡಾದ ಹಸುರು ಅರಳದ, ಹೂವು ಬಿರಿಯದ ಮರುಭೂಮಿಯಂತ ನೀರಸ ಜಾಗನಡೆದು ಮುಗಿಯದಷ್ಟೆನಿಸುವ ಬಯಲಿನಲ್ಲಿ ಮೂರುದಿನದಿಂದ ನಡೆದು ಯಾರೂ ಇಲ್ಲಿಯವರೆಗೆ ಅನುಭವಿಸಿರದ ಏಕಾಂತಕ್ಕೆ ನಾನು ಜಾರುತ್ತಲಿದ್ದೆ. ಜನ ಗುಳೇ ಹೋಗಿ ಪಾಳುಬಿದ್ದ ಒಂದು ಹಳ್ಳಿಯಲ್ಲಿ ನಾನು ಉಳಿದುಕೊಳ್ಳುವ ಯೋಚನೆ
ಮಾಡುತ್ತಿದ್ದೆ. ಮೂರುದಿನದಿಂದ ನನಗೆ ನೀರಿನ ಮೂಲವೊಂದೂ ಸಿಕ್ಕಿರಲಿಲ್ಲ. ಹಳ್ಳಿಯಲ್ಲೊಂದು ನಾಗರೀಕತೆ ಬೆಳೆದಿದ್ದುದು ಇಲ್ಲಿ ನೀರಿನ ಒರತೆ ಇತ್ತೆನ್ನುವುದರ ಸಂಕೇತವಾಗಿತ್ತು. ಆದರೆ ಈಗ ಖಾಲಿಬಿದ್ದು ಶಿಥಿಲವಾಗುತ್ತಿರುವ ಹಳೆಯ ಕಣಜದ ಹುಳದ ಗೂಡಿನಂತೆ ಇರುವ ಅಲ್ಲಿ ಮನುಷ್ಯರೂ, ನೀರೂ ಎರಡೂ ಕಾಣಿಸುತ್ತಿರಲಿಲ್ಲ. ಗಾಳಿ ಮತ್ತು ಮಳೆಯ ಹೊಡೆತಕ್ಕೆ ಸಿಕ್ಕಿ ಇಂಚಿಂಚಾಗಿ ಮಣ್ಣಾಗುತ್ತಿದ್ದ ಐದಾರು ಗುಡಿಸಲುಗಳು ಮತ್ತು ಒಂದು ದೇವಸ್ಥಾನ - ಇವೆರಡು ಬತ್ತಿಹೋದ ನೀರು ಮತ್ತು ಗುಳೇಹೋದ ಜನಜೀವನಕ್ಕೆ ಸಾಕ್ಷಿಗಳಂತೆ ಅಲ್ಲಿದ್ದವು.

ಛಾವಣಿ ಹಾರಿಹೋದ ಮನೆಗಳು ಮತ್ತು ಪುಟ್ಟದಾದ ಶಿಥಿಲಗೊಂಡ ದೇವಸ್ಥಾನಗಳೆರಡರಲ್ಲೂ ಜೀವದ ಕುರುಹೂ ಇಲ್ಲದಿದ್ದರೂ, ಸಂದು ಹೋದ ನಾಗರೀಕತೆಯನ್ನು ನೆನಪಿಸುವಂತೆ ಅಲ್ಲಿ ನಿಂತಿದ್ದವು.
ಜೂನ್ ಶುಭ್ರ ಆಗಸದ ಮುದಗೊಳಿಸುವ ದಿನ ಅದಾಗಬೇಕಿದ್ದರೂ, ಬೆಟ್ಟದ ಮೇಲಿನ ಸ್ಥಳಕ್ಕೆ ನಿಷ್ಕರುಣೆಯಿಂದ ಸತತವಾಗಿ ಹೊಡೆಯುತ್ತಿದ್ದ ರಭಸದ ಗಾಳಿಯನ್ನು ತಾಳಿಕೊಳ್ಳುವುದು ಅಸಾಧ್ಯವಾಗಿತ್ತು. ಬೀಸುಗಾಳಿ ಅಲ್ಲಿದ್ದ ಮನೆಯ ಅಸ್ಥಿಪಂಜರಗಳೊಳಕ್ಕೆ ಬಿರುಸಾಗಿ ಹೊಕ್ಕು ಗಲಾಟೆಯೆಬ್ಬಿಸುತ್ತಿದ್ದುದನ್ನು ನೋಡಿದರೆ ಯಾವುದಾದರೂ ಪಿಶಾಚಿಯನ್ನು ನಿದ್ದೆಯಿಂದ ಎಬ್ಬಿಸಿದ ಹಾಗಿತ್ತು.

ನಾನು ಅಲ್ಲಿಂದ ಹೊರಡಬೇಕಿತ್ತು. ಮುಂದೆ ಐದು ಗಂಟೆ ನಡೆದರೂ ನೀರು ಸಿಗಲಿಲ್ಲ, ನೀರು ಸಿಗುವ ನಂಬಿಕೆಯೂ ಬರಲಿಲ್ಲ. ದಿಗಂತದವರೆಗೆ ಅವೇ ಒಣ ಒರಟು ಪೊದೆಗಳು..

ದೂರದಲ್ಲಿ ನೆರಳಿನಂತೆ ನನಗೊಂದು ಆಕೃತಿ ಕಂಡಂತಾಯಿತು,ನನ್ನ ಅದೃಷ್ಟಕ್ಕೆ. ಅದರ ಹತ್ತಿರ ಹೋದೆ. ಅವನೊಬ್ಬ ಕುರಿಗಾಹಿ. ಮೂವತ್ತರಷ್ಟು ಕುರಿಗಳು ಅವನ ಬಳಿ ಬಿಸಿನೆಲದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು. ಅವನಲ್ಲಿದ್ದ ನೀರಿನ ಬುರುಡೆಯಿಂದ ನನಗವನು ನೀರುಕೊಟ್ಟು ಉಬ್ಬುತಗ್ಗಿನ ಮೈದಾನದ ಕೆಳಗಿದ್ದ ಅವನ ಗುಡಿಸಲಿಗೆ ಕರೆದುಕೊಂಡು ಹೋದ. ಅಲ್ಲಿದ್ದ ಪಾತಾಳದಷ್ಟು ಆಳದ ಕಮರಿಯಿಂದ ಒರಟಾದ ರಾಟೆ ಬಳಸಿ ಅವನು ನನಗೆ ತಂಪಾದ ಸಿಹಿನೀರು ಸೇದಿಕೊಟ್ಟ.
ಮೌನವೇ ಅವನ ಮಾತು ಎನ್ನುವಷ್ಟು ಕಡಿಮೆ ಮಾತಾಡುತ್ತಲಿದ್ದ. ಆದರೆ ಅವನ ನಿಲುಮೆ ನಡೆಗಳಲ್ಲಿ ಒಂದು ದೃಢತೆ, ವಿಶ್ವಾಸ ಎದ್ದು ಕಾಣುತ್ತಿದ್ದುದು ಹೌದು. ನಿರಾಶೆಯನ್ನು ಹೊದ್ದಂತಿದ್ದ ಬರಡು ಭೂಮಿಯಲ್ಲಿ ಅವನ ಭರವಸೆಯ ನೋಟ ಒಂದು ಅವರ್ಣನೀಯ ನೆಮ್ಮದಿಯನ್ನು ತನ್ನಷ್ಟಕ್ಕೆ ಕೊಡುತ್ತಿತ್ತು. ಅವನ ಗುಡಿಸಲೆಂದರೆ ಕಲ್ಲಿನಿಂದ ಮಾಡಿದ ಒಂದು ಸದೃಢ ಕಟ್ಟಡ. ಅವನಿಲ್ಲಿ ಬಂದಾಗ ಕಂಡ ಪಳೆಯುಳಿಕೆಯಿಂದ ಅವನು ಇದನ್ನು ಸ್ವಂತ ಶ್ರಮದಿಂದ ಕಟ್ಟಿರಬಹುದೆಂದು ಯಾರಿಗಾದರೂ ಅನಿಸುವಂತಿತ್ತು. ಛಾವಣಿ ಗಟ್ಟಿಯಾಗಿ ನೀರು ಸೋರದಂತೆ ಇತ್ತುಗಾಳಿಯು ಅವನ ಮನೆಯ ಬಲವಾದ ಮಾಡಿಗೆ ಹೊಡೆದು ಸಮುದ್ರ ಬೋರ್ಗರೆಯುತ್ತ ದಡಕ್ಕೆ ಹೊಡೆದಂತೆ ಶಬ್ದಮಾಡುತ್ತಿತ್ತು.
ಮನೆಯೊಳಗೆ ಓರಣವಾಗಿ, ಇದ್ದ ಬೆರಳೆಣಿಕೆಯ ಪಾತ್ರೆಗಳು ಒಪ್ಪವಾಗಿ ತೊಳೆದಿಟ್ಟು, ನೆಲಗುಡಿಸಿ ಅಚ್ಚುಕಟ್ಟಾಗಿತ್ತು. ಗಡ್ಡ ತೆಗೆದು, ಅಂಗಿಯ ಗುಬ್ಬಿಗಳನ್ನು ಸರಿಯಾಗಿ ಹಾಕಿ, ಬಟ್ಟೆಯ ಹರಕುಗಳನ್ನು ಚೆನ್ನಾಗಿ ಹೊಲಿದು ಹರಿದದ್ದೆಲ್ಲಿ ಎಂದು ಗೊತ್ತಾಗದ ಹಾಗೆ ಅವನು ಇಟ್ಟುಕೊಂಡಿದ್ದ.

ಅವನು ಬಿಸಿಬಿಸಿ ಗಂಜಿಯನ್ನು ನನ್ನೊಂದಿಗೆ ಹಂಚಿಕೊಂಡ. ನಾನು ಸ್ವಲ್ಪ ತಂಬಾಕು ಕೊಡಲು ಹೋದರೆ, ತಾನು ಸೇದುವುದಿಲ್ಲ ಎಂದುಬಿಟ್ಟ. ಅವನ ನಾಯಿ ಯಜಮಾನನನ್ನು ಮೀರಿ ಮಾತನಾಡಲಾರೆ ಎಂದು ವ್ರತತೊಟ್ಟಂತೆ ಶಿಸ್ತಿನಿಂದ ಇತ್ತು.
ರಾತ್ರಿ ಅಲ್ಲಿಯೇ ಉಳಿಯುವುದೆಂದು ನಮ್ಮಲ್ಲಿ ನಿರ್ಣಯವಾಯಿತು. ಅತೀ ಹತ್ತಿರದ ಹಳ್ಳಿಗೆ ನಾನು ಒಂದೂವರೆ ದಿನ ನಡೆಯಬೇಕಿತ್ತು. ಅಲ್ಲಿನ ಹಳ್ಳಿಗಳೆಲ್ಲ ಸಣ್ಣವು. ಮರ ಕಡಿದು ಇದ್ದಿಲು ಮಾಡಿ ಮಾರುವ ಬಡಜನರು ಅವರೆಲ್ಲ. ಬಡತನ, ಅಲ್ಲಿನ ಒಣಹವೆ, ಬಿರುಗಾಳಿಗಳೆಲ್ಲ ಬೆಸೆದು ಹಳ್ಳಿಗರೆಲ್ಲ ಒರಟರೂ, ಜಗಳಗಂಟರೂ ಆಗಿದ್ದರು. ಮಾತಾಡಿದರೆ ತಲೆಕಡಿಯಲೂ ಹೇಸದ ಜನ. ಅವರ ಜೀವನದ ಕಷ್ಟಗಳು ಅವರಲ್ಲಿ ಹಾಗೆ ಮಾಡಿಸುತ್ತಿದ್ದಿರಬೇಕು. ಅವಕಾಶ ಸಿಕ್ಕರೆ ಇದನ್ನೆಲ್ಲ ಬಿಟ್ಟು ಪೇಟೆಗೆ ಹೋಗಲು ಅವರ ಮನಸ್ಸು ಹಾತೊರೆಯುತ್ತಿದ್ದಿರಬೇಕು.

ಬೀಡಿಕೂಡ ಸೇದದ ದನಗಾಹಿ, ಈಗ ನೆಲದಲ್ಲಿ ಕೂತು ತನ್ನ ಒಂದು ಚೀಲದಿಂದ ಒಂದಷ್ಟು ಒಂದೇ ಜಾತಿಯ ಮರದ ಬೀಜಗಳನ್ನು ತೆಗೆದ. ಅವನ್ನು ಸೂಕ್ಷ್ಮವಾಗಿ ಒಂದಾದಮೇಲೆ ಒಂದರಂತೆ ಗಮನಿಸಿ ಒಳ್ಳೆಯವನ್ನು ಬೇರೆ ಇಟ್ಟ. ನಾನು ದಂ ಎಳೆಯುತ್ತಿದ್ದೆ. ಸ್ವಲ್ಪ ಸಹಾಯ ಮಾಡಬಹುದೇ ಎಂದು ಕೇಳಿದಾಗ ಅಗತ್ಯವಿಲ್ಲ ಎಂದುಬಿಟ್ಟ. ನಮ್ಮ ಮಧ್ಯೆ ನಡೆದ ಮಾತುಕತೆಯೆಂದರೆ ಅದೊಂದೇ. ಅವನ ಏಕಾಗ್ರತೆ ನೋಡಿ ನಾನೂ ಒತ್ತಾಯಿಸದೆ ಸುಮ್ಮನೆ ನೋಡುತ್ತ ಕೂತುಬಿಟ್ಟೆ. ಒಂದು ದೊಡ್ಡ ರಾಶಿಯಾದ ಮೇಲೆ ಹತ್ತತ್ತರ ಗುಂಪುಗಳಾಗಿ ವಿಭಾಗ ಮಾಡಿದ. ಹೀಗೆ ಮಾಡುವಾಗ ಇನ್ನೊಮ್ಮೆ ಸಂಶಯ ಇದ್ದವನ್ನು ರಾಶಿಯಿಂದ ಹೊರಹಾಕಿದ. ಸರಿಯಾಗಿ ನೂರು ಬೀಜಗಳನ್ನು ತೆಗೆದಿಟ್ಟು ಅವನು ನಿದ್ದೆ ಹೋದ.

ಮನುಷ್ಯನ ಸಹವಾಸದಲ್ಲಿ ವಿವರಿಸಲಾಗದ ಶಾಂತಿಯಿತ್ತು. ಮರುದಿನ ಅವನೊಂದಿಗೆ ನಾನು ಇನ್ನೊಂದು ದಿನ ಅಲ್ಲಿರಲು ಅನುಮತಿ ಕೇಳಿದೆ. ಅದರಲ್ಲಿ ಕೇಳುವಂಥದ್ದೇನೂ ಇಲ್ಲ ಎನ್ನುವಷ್ಟು ಸಹಜವಾಗಿ ಅವನು ಒಪ್ಪಿದ. ನಾನಾಗಲೀ, ಬೇರೇನಾದರಾಗಲಿ ಅವನಿಗೆ ತೊಂದರೆಯುಂಟುಮಾಡಲು ಸಾಧ್ಯವೇ ಇಲ್ಲವೆನ್ನುವಂತೆ ಅವನ ಉತ್ತರವಿತ್ತು. ಇನ್ನೊಂದು ದಿನದ ವಿಶ್ರಾಂತಿ ನನಗೆ ಬೇಕೇಬೇಕೆಂದಿರಲಿಲ್ಲ. ಆದರೆ ಅವನ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ನನ್ನಲ್ಲಿತ್ತು. ಮರುದಿನ ಅವನು ಕುರಿಮಂದೆಯನ್ನು ಮೇಯಲು ಬಿಟ್ಟ. ಜಾಗ್ರತೆಯಿಂದ ತುಂಬಿದ್ದ ಬೀಜಗಳ ಚೀಲವನ್ನು ನೀರಿನಲ್ಲಿ ಮುಳುಗಿಸಿ ಒದ್ದೆ ಮಾಡಿದ.

ಅವನು ನಡೆಯುವಾಗ ಸುಮಾರು ಒಂದೂವರೆ ಮೀಟರ್ ಉದ್ದದ ಕಬ್ಬಿಣದ ವಾಕಿಂಗ್ ಸ್ಟಿಕ್ ಹಿಡಿದಿದ್ದ. ಸುಮಾರು ಹೆಬ್ಬೆರಳಿನ ಗಾತ್ರದ್ದು. ನಾನು ಸುಮ್ಮನೆ ಅವನೊಂದಿಗೆ ನಡೆಯಲು ಶುರುಮಾಡಿದೆ. ಅವನ ಕುರಿಗಳು ಗುಡ್ಡದ ಬುಡದಲ್ಲಿ ಮೇಯುತ್ತಿದ್ದವು. ಅವನ್ನು ತನ್ನ ನಾಯಿಯ ವಶಕ್ಕೆ ಬಿಟ್ಟು ಬೆಟ್ಟದ ಮೇಲೆ ಹತ್ತಲು ಶುರುಮಾಡಿದ. ನಾನು ರೀತಿ ನಿರುದ್ಯೋಗಿಯಾಗಿ ಅವನಿಗೆ ಗಂಟು ಬಿದ್ದದ್ದಕ್ಕೆ ಬಯ್ಯುತ್ತಾನೋ ಎನ್ನುವ ಭಯ ನನಗಿತ್ತು. ಆದರೆ ಅವನು ಅವನಷ್ಟಕ್ಕೆ ನನ್ನನ್ನು ದಾಟಿ ಮೇಲೆ ಹೋದ. ಸ್ವಲ್ಪ ದೂರಹೋಗುತ್ತ ನಿಂತು ತನ್ನ ಊರುಗೋಲಿನಲ್ಲಿ ನೆಲಕ್ಕೆ ಗುದ್ದಿ ತೂತು ಕೊರೆಯಲು ಶುರುವಿಟ್ಟ. ತೂತಿನೊಳಗೆ ಒಂದು ಬೀಜ ಇಟ್ಟು ಮತ್ತೆ ಮುಚ್ಚಿಬಿಟ್ಟ. ಅವನು ಓಕ್ ಮರದ ಬೀಜವನ್ನು ನೆಡುತ್ತಿದ್ದ. ಭೂಮಿ ಅವನದ್ದಿರಬಹುದು ಎಂಬ ಕುತೂಹಲ ನನಗಿತ್ತು. ಇಲ್ಲ, ನನ್ನದಲ್ಲಎಂದು ಉತ್ತರಕೊಟ್ಟ. ಯಾರದೆಂದು ಅವನಿಗೆ ಗೊತ್ತಿರಲೂ ಇಲ್ಲ. ಅದು ಒಂದೋ ಅರಣ್ಯ ಇಲಾಖೆಯದ್ದು ಅಥವಾ ಅದರ ಬಗ್ಗೆ ಗಮನವಿರದ ಯಾರೋ ಒಬ್ಬನದ್ದು ಎಂಬುದು ಅವನ ಅನಿಸಿಕೆ.

ಅದರ ವಾರಿಸುದಾರರನ್ನು ತಿಳಿಯುವ ಬಗ್ಗೆ ಅವನಿಗೆ ಯಾವುದೇ ಆಸಕ್ತಿ ಇರಲಿಲ್ಲ. ಅಂತೂ ತಂದಿದ್ದ ನೂರು ಬೀಜಗಳನ್ನು ಜತನದಿಂದ ನೆಟ್ಟು ಮುಗಿಸಿಬಿಟ್ಟ.

ಊಟದ ಬಳಿಕ ಮತ್ತೆ ಓಕ್ ಮರದ ಬೀಜಗಳನ್ನು ಹೆಕ್ಕಲು ಶುರುಮಾಡಿದ. ನಾನು ತಿಳಿಯಲೇಬೇಕೆಂಬ ಒತ್ತಡದಲ್ಲಿ ಕೇಳುತ್ತಿದ್ದರಿಂದ ಅನಿವಾರ್ಯವಾಗಿ ಅವನು ಉತ್ತರಿಸುತ್ತಿದ್ದ. ಕಳೆದ ಮೂರು ವರ್ಷಗಳಿಂದ ಅವನು ರೀತಿ ನೆಡುತ್ತಿದ್ದಾನಂತೆ. ಅಂದರೆ ಒಂದು ಲಕ್ಷ ಬೀಜಗಳು! ಅವುಗಳಲ್ಲಿ ಇಪ್ಪತ್ತು ಸಾವಿರ ಗಿಡಗಳು ಹುಟ್ಟಿರಬಹುದೆಂದು ಅಂದಾಜುಪಟ್ಟ. ಅದರಲ್ಲಿ ಹತ್ತುಸಾವಿರ ಇಲಿಹೆಗ್ಗಣಗಳಿಂದ ಅಥವಾ ನಮಗೆ ತಿಳಿಯದ ಹತ್ತಾರು ಕಾರಣಗಳಿಂದ ಹೋಗಿದ್ದರೆ ಹತ್ತುಸಾವಿರ ಉಳಿದಾವು ಎಂದ. ಬರಡಾಗಿ ಭಣಗುಟ್ಟುತ್ತಿದ್ದ ಇಲ್ಲಿ ಉಳಿದ ಹತ್ತುಸಾವಿರ ಬೀಜಗಳಿಂದ ಮರಗಳು ಬೆಳೆಯಲಿವೆ ಎಂದಾಯಿತು.

ಅವನ ವಯಸ್ಸೆಷ್ಟಿರಬಹುದು, ಸುಮಾರು ಐವತ್ತು? ಐವತ್ತೈದುಎಂದ. ಅವನ ಹೆಸರು ಎಲ್ಝಿಯಾರ್ಡ್ ಬೌಫಿಯರ್. ಅವನಿಗೆ ಬೆಟ್ಟದ ಕೆಳಗಿನ ಬಯಲಿನಲ್ಲಿ ಹೊಲವಿತ್ತಂತೆ. ಅವನ ಒಬ್ಬನೇ ಮಗ ತೀರಿಹೋಗಿದ್ದಾನೆ. ಹೆಂಡತಿಯೂ ಮಗನ ದಾರಿ ಹಿಡಿದಿದ್ದಾಳೆಈಗ ಏಕಾಂತ ಜೀವನವೇ ಅವನ ನಿವೃತ್ತಿಯ ಆಯ್ಕೆ. ಕುರಿಮಂದೆ ಮತ್ತು ನಾಯಿಗಳು ಅವನಿಗೆ ಸಂಗಾತಿಗಳು. ಗಿಡಮರಗಳಿಲ್ಲದೆಯೇ ಹಳ್ಳಿ ಸಾಯುತ್ತಿದೆ ಎಂದು ಅಂದಾಜು ಮಾಡಿ ಅವನೀಗ ಕೆಲಸಕ್ಕೆ ಹೊರಟಿದ್ದಾನೆ. ಅದಕ್ಕಿಂತ ಮುಖ್ಯವಾದ ರಾಜಕಾರ್ಯ ತನಗಿಲ್ಲ, ಅದಕ್ಕೆ ಮಾಡುತ್ತೇನಷ್ಟೆ ಎಂದೂ ಸೇರಿಸಿದ.

ಯುವಕನಾಗಿದ್ದರೂ ಒಬ್ಬಂಟಿಯಾಗಿ ಆಗ ಬದುಕುತ್ತಿದ್ದ ನಾನು, ಒಂಟಿಜೀವಗಳನ್ನು ಮಾತನಾಡಿಸುವಾಗ ಜಾಗ್ರತೆ ಮಾಡುತ್ತಿದ್ದೆ. ಆದರೂ ಒಂದು ತಪ್ಪು ಮಾಡಿದೆ. ನನ್ನ ಯೌವನ ನನ್ನಿಂದ ಹಾಗೆ ಮಾಡಿಸಿರಬಹುದು. ನಮ್ಮೆಲ್ಲ ಕೆಲಸಕ್ಕೆ ಒಂದು ಕಾರಣ, ನಮಗೆ ಸಂತೋಷ ಕೊಡುವಂತಹ ಒಂದು ಗುರಿ ಇರಲೇಬೇಕು ಎಂದು ನನ್ನ ಕಲ್ಪನೆ ಇದ್ದಿರಬಹುದು. 'ಇನ್ನು ಮೂವತ್ತು ವರ್ಷ ನೀನು ಬದುಕಿದರೆ ಇವನ್ನೆಲ್ಲ ಹೆಮ್ಮರಗಳಾಗಿ ನೀನು ನೋಡಬಹುದು' ಎಂದೆ. 'ಅಷ್ಟು ಆಯುಸ್ಸು ದೇವರು ಕೊಟ್ಟರೆ ನಾನೆಷ್ಟು ರೀತಿಯ ಬೀಜಗಳನ್ನು ಊರಿರುತ್ತೇನೆಂದರೆ ಇವು ಸಾಗರದಲ್ಲಿ ಒಂದು ಹನಿಯೂ ಆಗಲಾರವು' ಎಂದಂದ!.

ಅವನೀಗ ಬೀಚ್ ಮರಗಳನ್ನು ನೆಡುವುದು ಹೇಗೆಂದು ಪ್ರಯತ್ನಿಸಲು ಸುರುಮಾಡಿದ್ದ. ಅವನ ಮನೆಯ ಪಕ್ಕ ಬೀಚ್ ಸಣ್ಣ ಗಿಡಗಳನ್ನು ನರ್ಸರಿಮಾಡಿ ಬೆಳೆಸುತ್ತಿದ್ದ. ಅವನ ಪುಟ್ಟ ಗಿಡಗಳು ಅವನೇ ಕಟ್ಟಿದ ಸಣ್ಣಮಟ್ಟಿನ ಬೇಲಿಯಿಂದಾಗಿ ಕುರಿಗಳಿಗೆ ಸಿಗದೆ ಬೆಳೆಯುತ್ತಿದ್ದವು. ಸ್ವಲ್ಪ ತಗ್ಗಿನಲ್ಲಿ ತೇವಾಂಶ ಬೇಗ ಸಿಗುವ ಮಣ್ಣಿನಲ್ಲಿ ಬರ್ಚ್ಗಳನ್ನು ಬೆಳೆಸುವ ಯೋಚನೆ ಅವನಿಗಿತ್ತು.

ಮರುದಿನ ನಾನು ಅವನಿಗೆ ವಿದಾಯ ಹೇಳಿ ಹೊರಟೆ.

ಮುಂದಿನ ವರ್ಷ ಯುದ್ಧ ಶುರುವಾಯಿತು. ಅದರಲ್ಲಿ ಐದು ವರ್ಷ ನಾನು ಸೇವೆ ಸಲ್ಲಿಸಿದೆ. ಗಡಿಯಲ್ಲಿ ಹೋರಾಡುವ ಜವಾನನಿಗೆ ಮರಗಳ ಬಗ್ಗೆ ಯೋಚಿಸಲೂ ಸಮಯವಿರುವುದಿಲ್ಲ. ಸತ್ಯ ಒಪ್ಪಿಕೊಳ್ಳುವುದಾದರೆ ಅಂದಿನ ಘಟನೆ ನನ್ನ ಮನಸ್ಸಿನಲ್ಲಿ ಅಷ್ಟೊಂದೇನೂ ಗಟ್ಟಿಯಾಗಿ ಉಳಿದಿರಲಿಲ್ಲ. ಅಂಚೆ ಚೀಟಿ ಸಂಗ್ರಹದಂತೆ ಅದೊಂದು ಹವ್ಯಾಸವಿರಬಹುದು ಎಂದುಕೊಂಡು ಮರೆತಿದ್ದೆ.
ಯುದ್ಧ ಮುಗಿದ ಮೇಲೆ ಸ್ವಲ್ಪ ಭತ್ಯೆ ಕೂಡ ಸಿಕ್ಕಿ ಸ್ವಲ್ಪ ಸುತ್ತಾಡಿ ಬರುವ ಆಸೆಯಾದಾಗ ನಾನು ಮತ್ತದೇ ಜಾಗವನ್ನು ಆಯ್ಕೆ ಮಾಡಿದೆ. ಗುಳೇ ಹೋದ ಹಳ್ಳಿ ಹಾಗೇ ಇತ್ತು. ಅದನ್ನು ದಾಟಿ ಬರುತ್ತಿದ್ದಂತೆ ಗುಡ್ಡದ ಮೇಲೆ ಮಂಜು ಮುಸುಕಿತ್ತು. ಯುದ್ಧದಲ್ಲಿ ನಿತ್ಯ ಸಾಯುವುದನ್ನೇ ನೋಡುತ್ತಿದ್ದ ನಾನು, ನನ್ನ ಮುದುಕ ಸತ್ತಿರಬಹುದೆಂದು ಅಂದುಕೊಂಡಿದ್ದೆ. ಇಪ್ಪತ್ತರ ಪ್ರಾಯದಲ್ಲಿರುವವರಿಗೆ ಐವತ್ತರಲ್ಲಿರುವವರು ಮುದುಕರಂತೆ ಕಾಣುತ್ತಾರೆ. ಆದರೆ ಹಾಗೇನೂ ಆಗಿರಲಿಲ್ಲ. ಅವನು ತನ್ನ ಹಿಂದಿನ ವರ್ಚಸ್ಸಿನಲ್ಲಿಯೇ ಇದ್ದ. ಆದರೆ ಅವನ ಕೆಲಸವನ್ನು ಸ್ವಲ್ಪ ಬದಲಾಯಿಸಿದ್ದ. ಅವನಲ್ಲಿ ಈಗ ಕೇವಲ ನಾಲ್ಕು ಕುರಿಗಳಿದ್ದವು. ಆದರೆ ಈಗ ನೂರು ಜೇನು ಪೆಟ್ಟಿಗೆ ಇಟ್ಟಿದ್ದ. ಕುರಿಗಳು ನೆಟ್ಟ ಗಿಡಗಳನ್ನು ಹಾಳುಮಾಡುತ್ತಿದ್ದವೆಂದು ರೀತಿ ಬದಲಾಯಿಸಿದ್ದಕ್ಕೆ ಕಾರಣ ಕೊಟ್ಟ. ಯುದ್ಧಕ್ಕೂ ಅವನಿಗೂ ಸಂಬಂಧವೇ ಇರಲಿಕ್ಕಿಲ್ಲ ಎಂದು ನನಗೇ ಅನಿಸಿತು ಮತ್ತು ಅವನೂ ಹಾಗೆಯೇ ಅಂದ. ಅವನು ನೆಡುತ್ತಲೇ ಇದ್ದ.

ಸಾವಿರದ ಒಂಭೈನೂರ ಹತ್ತರಲ್ಲಿ ನೆಟ್ಟಿದ್ದ ಗಿಡಗಳು ಈಗ ಹತ್ತು ವರ್ಷ ಪೂರೈಸಿ ನನ್ನಿಂದ ಮತ್ತು ಸ್ವತ: ಅವನಿಂದ ಉದ್ದ ಬೆಳೆದಿದ್ದವು. ನೋಟದಿಂದ ನಾನು ದಂಗಾಗಿ ಬಿಟ್ಟೆ. ಅವನೂ ಮತ್ತೆ ಮಾತಾಡಲಿಲ್ಲ. ಇಡೀ ದಿನ ನಾವಿಬ್ಬರೂ ಮೌನವಾಗಿ ಕಾಡದಾರಿಯಲ್ಲಿ ಹೆಜ್ಜೆ ಹಾಕಿದೆವು. ಒಟ್ಟು ಹನ್ನೊಂದು ಕಿಲೋಮೀಟರು ಉದ್ದದ ಅತೀ ಹೆಚ್ಚೆಂದರೆ ಮೂರು ಕಿಲೊಮೀಟರ್ ಅಗಲದ ಭೂಪ್ರದೇಶ ಅದು. ಇವಿಷ್ಟು ಗಿಡಗಳು ಒಬ್ಬ ಮನುಷ್ಯನಿಂದ ಒಂದು ಸರಳು ಮತ್ತು ನೆಡುವ ಮನಸ್ಸು - ಇವೆರಡರಿಂದ ಸಾಕಾರಗೊಂಡಿವೆ ಎಂದರೆ ನನಗೆ ನಂಬಲಾಗಲಿಲ್ಲ. ಮನುಷ್ಯನೊಬ್ಬ ದೇವರಷ್ಟೇ ಪರಿಣಾಮಕಾರಿಯಾಗಬಲ್ಲ ಎಂದು ನನಗನಿಸಿತು.

ಬೀಚ್ ಮರಗಳು ನನ್ನ ಹೆಗಲಿಗೆ ಬಂದಿದ್ದವು ಮತ್ತು ಓಕ್ ಗಳು ದಪ್ಪ ಕೂಡ ಆಗಿ ಇಲಿ ಹೆಗ್ಗಣಗಳ ಅಳತೆ ಮೀರಿ ಬೆಳೆದಿದ್ದವು. ಐದು ವರ್ಷ ಹಿಂದೆ ನೆಟ್ಟ ಹೆಮ್ಮೆಯಿಂದ ನಿಂತ ಬರ್ಚ್ ಗಳನ್ನು ಅವನು ತೋರಿಸಿದ, ನಾನಾಗ ವರ್ಡನ್ ನಲ್ಲಿ ಯುದ್ಧ ಮಾಡುತ್ತಿದ್ದೆ. ಬೆಟ್ಟದ ತಪ್ಪಲಿನಲ್ಲಿ ಅವು ಅವನ ನಿರೀಕ್ಷೆಯಂತೆ ಬೆಳೆದಿದ್ದವು. ನವಜವ್ವನೆಯಂತೆ ಮೃದುವಾಗಿದ್ದವು ಮತ್ತು ಆಕಾಶಕ್ಕೆ ಲಗ್ಗೆಯಿಡುವ ಬಗ್ಗೆ ವಿಶ್ವಾಸದಿಂದ ಅವು ನಿಂತಿದ್ದವು.

ಇವನ ಕೆಲಸಕ್ಕೆ ಒಂದು ದೂರಗಾಮಿ ಪರಿಣಾಮವಿತ್ತು. ಅವನು ವ್ಯವಸ್ಥೆಗೆ ಹೆಚ್ಚು ಮೂಗು ತೂರಿಸಲಿಲ್ಲ. ಆದರೆ ಸುಮ್ಮನೆ ತನ್ನ ನೆಡುವ ಕೆಲಸವನ್ನು ವ್ರತದಂತೆ ಅಥವಾ ಸುಮ್ಮನೆ ತನ್ನ ಉಸಿರಾಟದಂತೆ ನಡೆಸುತ್ತಿದ್ದ. ಆದರೆ ಈಗ ಹಳ್ಳಿಗೆ ಇಳಿದು ಹೋದಾಗ ಅಲ್ಲಿನ ಒಣಗಿದ್ದ ತೋಡುಗಳಲ್ಲಿ ನೀರಿನ ಒಸರಿತ್ತು. ಇವೆಲ್ಲ ಹಿಂದೆ ಜುಳುಜುಳು ಹರಿಯುವ ತೋಡುಗಳಾಗಿದ್ದವು; ಗುಳೇ ಹೋದ ಬರಡು ಹಳ್ಳಿಗಳು ಒಂದಾನೊಂದು ಕಾಲದಲ್ಲಿ ಪುರಾತನ ಗ್ಯಾಲೋ-ರೋಮನ್ ಹಳ್ಳಿಗಳಾಗಿದ್ದವು. ಪುರಾತತ್ವ ಅಭ್ಯಾಸಿಗಳಿಗೆ ಅಲ್ಲಿ ಮೀನು ಹಿಡಿಯುವ ಕೊಕ್ಕೆಗಳು ಸಿಕ್ಕಿದುದು ಅಲ್ಲಿ ಹಿಂದಿದ್ದ ಜಲಸಮೃದ್ಧಿಗೆ ಸಾಕ್ಷಿ. ಆದರೆ ಇತ್ತೀಚೆಗೆ ಕೊಡಪಾನ ತುಂಬಲೂ ಅಲ್ಲಿ ನೀರಿರಲಿಲ್ಲ.

ಬೆಂಕಿಯನ್ನಾದರೂ ಪರಿಮಳವನ್ನಾದರೂ ನಿಷ್ಪಕ್ಷಪಾತವಾಗಿ ಹರಡುವ ಗಾಳಿಯು  ಅಜ್ಜನ ಜವಾಬ್ದಾರಿಯನ್ನು ಸ್ವಲ್ಪ ತಾನು ಹೊತ್ತುಕೊಂಡು ನೆಲಕ್ಕೆ ಬಿದ್ದ ಬೀಜಗಳನ್ನು ಹರಡುತ್ತಿತ್ತು. ಈಗ ಮತ್ತೆ ನೀರಿನ ಒರತೆ ಬಂದದ್ದರಿಂದ ಬೇರೆ ಬೇರೆ ಮರಗಳು, ಹುಲ್ಲುಗಾವಲು, ಕಾಡು ಹೂಗಳು, ಮತ್ತು ಹೊಸಜೀವನವನ್ನು ಬದುಕಲು ಬೇಕಾದ ನಿರೀಕ್ಷೆಗಳೆಲ್ಲ ಹುಟ್ಟಿಕೊಂಡಿದ್ದವು.

ಇದೆಲ್ಲ ಎಷ್ಟು ನಿಧಾನವಾಗಿ ನಡೆದಿತ್ತೆಂದರೆ, ಅದು ತನ್ನಷ್ಟಕ್ಕೆ ತಾನೇ ಆಯಿತು ಎನ್ನುವಂತೆ ಹಳ್ಳಿಗರು ತಿಳಿದಿದ್ದರು. ಮೊಲವನ್ನೋ, ಹಂದಿಯನ್ನೋ ಬೇಟೆಯಾಡಲು ಬೆಟ್ಟಹತ್ತಿ ಬರುವವರು ಇಲ್ಲಿ ಹೆಚ್ಚುತ್ತಿರುವ ಹಸಿರನ್ನು ನೋಡಿ, ಇದೆಲ್ಲ ಭೂಮಿಯ ಸಹಜ ಸೃಷ್ಟಿಶೀಲತೆಯಿಂದ ಆಗಿದೆ ಎಂದುಕೊಂಡಿರಬೇಕು. ಅದಕ್ಕೇ ಅವರು ಅಜ್ಜನಿಗೆ ಅಡ್ಡಗಾಲು ಹಾಕಲು ಹೋಗಲಿಲ್ಲ. ಅಲ್ಲದಿದ್ದರೆ ಅವರು ತೊಂದರೆ ಕೊಡುತ್ತಿದ್ದರೇನೋ. ಹೆಸರು, ಹಣ, ಕೀರ್ತಿಯ ನಿರೀಕ್ಷೆಯನ್ನು ಮೀರಿದ ಕೆಲಸವನ್ನು ಮನುಷ್ಯನೊಬ್ಬ ಮಾಡಬಹುದೆಂದು ಯಾರಾದರೂ ಗುಡ್ಡವನ್ನು ನೋಡಿದರೆ ಗ್ರಹಿಸಲು ಸಾಧ್ಯವೆ?

ಸಾವಿರದೊಂಭೈನೂರಿಪ್ಪತ್ತನೇ ಇಸವಿಯ ಬಳಿಕ ನಾನು ಎಲ್ಝಿಯಾರ್ಡ್ ಬೌಫಿಯರ್ ನನ್ನು ಪ್ರತೀ ವರ್ಷ ಗಮನಿಸತೊಡಗಿದೆ. ತನ್ನ ಕೆಲಸದ ಬಗ್ಗೆ ಎಂದೂ ಸಂಶಯಪಟ್ಟದ್ದನ್ನು, ಇದನ್ನೆಲ್ಲ ತಾನು ಮಾಡಬೇಕಾಗಿತ್ತೇ ಎಂದು ಅವನು ಪ್ರಶ್ನಿಸಿಕೊಂಡದ್ದನ್ನು ನಾನು ನೋಡಿಲ್ಲ. ಯಾರಿಗೆ ಗೊತ್ತು? ದೇವರು ಮನುಷ್ಯರೂಪದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾನೆ ಎಂದು ನಮಗೆ ಹೇಳಲು ಸಾಧ್ಯವೆ?
ನಾನೆಂದೂ ಅವನಿಗೆ ನಿರಾಶೆಯಾಗುವಂತೆ ಮಾತಾಡಲಿಲ್ಲ. ಆದರೆ ಅಷ್ಟು ದೊಡ್ಡ ಸಾಧನೆಗೆ ತನ್ನಿಂತಾನಾಗಿ ಪ್ರತಿರೋಧಗಳು ಹುಟ್ಟಿಕೊಳ್ಳದಿರಲು ಸಾಧ್ಯವೆ? ಒಂದು ನಿಜಾಸಕ್ತಿಯ ಬೆನ್ನು ಹತ್ತಿ ಹೊರಟಾಗ ಅಲ್ಲಲ್ಲಿ ಹತಾಶೆಯ ಅಡ್ಡಗಲ್ಲುಗಳನ್ನು ಹಾಯದೆ ನಡೆಯಲು ಸಾಧ್ಯವಿಲ್ಲವೇನೋ. ಒಂದು ವರ್ಷ ಅವನು ನೆಟ್ಟ ಹತ್ತುಸಾವಿರ ಮೇಪಲ್ ಗಿಡಗಳು ಸತ್ತೇಹೋದವು. ಮರುವರ್ಷ ಅವನು ಮೇಪಲ್ನ ಉಸಾಬರಿ ಬಿಟ್ಟು ಮತ್ತೆ ಬೀಚ್ ಗಳನ್ನೇ ನೆಟ್ಟ. ಅವು ಓಕ್ ಗಿಂತಲೂ ಚೆನ್ನಾಗಿ ಬಂದವು.
ಅವನ ಕೆಲಸ ಎಷ್ಟು ಕಷ್ಟದ್ದೆಂದು ನೀವು ಕಲ್ಪಿಸಿಕೊಳ್ಳುವುದಿದ್ದರೆ ಅವನ ಸಂಪೂರ್ಣ ಏಕಾಂಗಿತನದ ಜೊತೆಗೆ ಕಲ್ಪಿಸಿಕೊಳ್ಳಿ. ಅದೆಂಥ ಏಕಾಂತವೆಂದರೆ ಅವನ ಜೀವನದ ಅಂತ್ಯಕ್ಕಾಗುವಾಗ ಅವನು ಮಾತನ್ನು ಪೂರ್ತಿ ಮರೆತು ಮೌನಿಯಾಗಿಬಿಟ್ಟ; ಅಥವಾ ಅವನಿಗೆ ಮಾತಿನ ನಿಷ್ಪ್ರಯೋಜಕತೆಯ ಅರಿವಾಗಿರಬೇಕು.

ಸಾವಿರದ ಒಂಭೈನೂರ ಮೂವತ್ಮೂರರಲ್ಲಿ ಅವನು ಬೆಳೆಸಿದ ಕಾಡಿಗೆ ಫಾರೆಸ್ಟ್ ರೇಂಜರನೊಬ್ಬ ಭೇಟಿಕೊಟ್ಟು ಆಶ್ಚರ್ಯಚಕಿತನಾದ. ಅವನು ಮನುಷ್ಯನಲ್ಲಿ 'ಅಂಗಳದಲ್ಲಿ ಛಳಿಕಾಯಿಸಲು ಬೆಂಕಿಹಾಕಿಕೊಳ್ಳಬೇಡ ಕಾಡು ಸುಟ್ಟು ಹೋದೀತು' ಎಂದು ಎಚ್ಚರಿಕೆ ಕೊಟ್ಟ. ಅದೇ ಮೊದಲಬಾರಿಗೆ ಅವನು ಕಾಡನ್ನು ತಾನೇ ಬೆಳೆಸಿದ್ದೇನೆ ಎಂದು ರೇಂಜರನಲ್ಲಿ ಅನಿವಾರ್ಯವಾಗಿ ಹೇಳಿಕೊಂಡ. ಅವನ ಮೊದಲ ಮನೆಗಿಂತ ಹನ್ನೆರಡು ಕಿಮೀ ದೂರದಲ್ಲಿ ಅವನೀಗ ಅರಣ್ಯೀಕರಣ ಮಾಡುತ್ತಿದ್ದ. ಎಪ್ಪತ್ತೈದರ ಹರೆಯಕ್ಕೆ ಕಾಲಿಟ್ಟಿದ್ದ ಅವನಿಗೆ ನಿತ್ಯ ಬಂದುಹೋಗಲು ಕಷ್ಟವಾಗುವುದರಿಂದ ನೆಡುವ ಜಾಗದಲ್ಲಿ ಕಲ್ಲುಗಳನ್ನು ಪೇರಿಸಿ ಶೆಡ್ ಕಟ್ಟಬೇಕೆಂದಿದ್ದ. ಮುಂದಿನ ವರ್ಷ ಹಾಗೆಯೇ ಮಾಡಿದ.

ಸಾವಿರದೊಂಭೈನೂರ ಮೂವತ್ತೈದರಲ್ಲಿ ಅರಣ್ಯಾಧಿಕಾರಿಗಳ ಉನ್ನತ ನಿಯೋಗವೊಂದು "ಸಹಜ" ಕಾಡಿಗೆ ಹೋಯಿತುಅರ್ಥಹೀನವಾದ ಒಂದಷ್ಟು ಮಾತುಕತೆಗಳನ್ನು ಅವರು ಹರಿಯಬಿಟ್ಟರು. ಅದರ "ಅಭಿವೃದ್ಧಿ"ಗೆ ಏನೇನೋ ಮಾಡಬೇಕೆಂದು ಹೇಳಿಕೊಂಡರು. ಅವನ್ನೆಲ್ಲ ಅವರಿಗೆ ಸಾಧಿಸುವ ವ್ಯವಧಾನವಿರಲಿಲ್ಲ, ಪುಣ್ಯಕ್ಕೆ. ಒಂದು ಉಪಕಾರವನ್ನಂತೂ ಮಾಡಿದರು. ಅಲ್ಲಿಗೆ ಯಾರು ಬರದಂತೆ ಪ್ರತಿಬಂಧಿಸಿದರು. ಅದರಿಂದ ಇದ್ದಿಲು ಮಾಡಲು ಅಲ್ಲಿಗೆ ಬಂದು ಮರಗಳನ್ನು ಕಡಿಯುವ ಸಾಧ್ಯತೆ ಇಲ್ಲವಾಯಿತು. ನಳನಳಿಸಿ ಬೆಳೆದ ಎಳೆಯ ಆರೋಗ್ಯವಂತ ಮರಗಳಿಂದ ತುಂಬಿದ್ದ ಕಾಡಿಗೆ, ಬಂದಿದ್ದ ನಿರ್ಭಾವುಕ ನಿಯೋಗದ ಸದಸ್ಯರಲ್ಲೂ ಪ್ರೇಮದ ಸೆಲೆಯೊಂದನ್ನು ಉಕ್ಕಿಸುವ ಶಕ್ತಿಯಿತ್ತು.

ನಿಯೋಗದಲ್ಲಿ ನನ್ನ ಮಿತ್ರರಾದ ಮುಖ್ಯ ಅರಣ್ಯಾಧಿಕಾರಿಯೊಬ್ಬರೂ ಇದ್ದರು. ನಾನು ಕಾಡಿನ ರಹಸ್ಯವನ್ನು ಅವರಿಗೆ ವಿವರಿಸಿದೆ. ಮುಂದಿನವಾರದಲ್ಲಿ ಒಂದು ದಿನ ಅವರನ್ನು ಕರೆದುಕೊಂಡು ಮತ್ತೆ ಎಲ್ಝಿಯಾರ್ಡ್ ನನ್ನು ಕಾಣಲು ಹೋದೆ. ನಿಯೋಗ ಭೇಟಿನೀಡಿದ್ದ ಜಾಗದಿಂದ ಒಂದಿಪ್ಪತ್ತು ಕಿಲೋಮೀಟರ್ ಆಚೆ ಅವನು ತನ್ನ ಕರ್ತವ್ಯವನ್ನು ಮಾಡುತ್ತಿದ್ದುದನ್ನು ನೋಡಿದೆವು. ಅರಣ್ಯಾಧಿಕಾರಿಯವರಿಗೆ ಮಾತು ಮತ್ತು ಮೌನದ ಸೂಕ್ತತೆಗಳೇನೆಂದು ಗೊತ್ತಿತ್ತು. ಅವರು ಮೌನವಾಗಿ ಅವನ ಕೆಲಸವನ್ನು ನೋಡಿದರು. ನಾನು ತಂದಿದ್ದ ಮೊಟ್ಟೆಗಳು ಮತ್ತು ಊಟವನ್ನು ಮೂರೂ ಜನ ಹಂಚಿ ತಿಂದೆವು. ಮತ್ತೆ ಬಹಳ ಹೊತ್ತು ಸುಮ್ಮನೆ ಅಲ್ಲಿನ ಸಹಜ ಮೌನದಲ್ಲಿ ಒಂದಾಗಿ ನಿರುಕಿಸುತ್ತ ನಿಂತೆವು.

ನಾವು ದಾಟಿಬಂದಿದ್ದ ಬೆಟ್ಟಗಳೀಗ ಆರೇಳು ಮೀಟರ್ ಎತ್ತರದ ಮರಗಳಿಂದ ಆವೃತವಾಗಿದ್ದವು. ನಾನು ಜಾಗವನ್ನು ಸಾವಿರದೊಂಭೈನೂರ ಹದಿಮೂರರಲ್ಲಿ ನೋಡಿದ್ದೆ. ಬರೀ ಮರುಭೂಮಿಯಾಗಿತ್ತಷ್ಟೆ... ಸತತ ಮತ್ತು ಶಾಂತ ಶ್ರಮ, ಬೆಟ್ಟದ ತಂಪುಗಾಳಿ, ಅಜ್ಜನ ಸರಳತೆ ಎಲ್ಲಕ್ಕೂ ಮಿಗಿಲಾಗಿ ಅವನ ಹೃದಯದ ಶುದ್ಧತೆ ಅವನಿಗೆ ಅತ್ಯುತ್ತಮ ಆರೋಗ್ಯವನ್ನು ಕೊಟ್ಟಿದ್ದವು. ಅವನು ದೇವರು ನಿರ್ಮಿಸಿದ ಕ್ರೀಡಾಪಟು. ಅವನಲ್ಲಿ ಪ್ರತಿಸ್ಪರ್ಧೆಯಿರಲಿಲ್ಲ ಆದರೆ ಶಾರೀರಿಕ ಶಕ್ತಿಯನ್ನು ರಚನಾತ್ಮಕವಾಗಿ ವಿನಿಯೋಗಿಸುವ ಮನಸ್ಸಿತ್ತು. ಇನ್ನೆಷ್ಟು ಹೆಕ್ಟೇರು ಬಾಕಿಯುಳಿದಿವೆ ಎಂದು ನಾನು ಯೋಚಿಸುತ್ತಿದ್ದೆ. ಅವನು ಬಹುಶ: ಅದನ್ನೂ ಯೋಚಿಸಿರಲಿಕ್ಕಿಲ್ಲ. ನಾವು ಉಸಿರಾಡುವಾಗ ಇನ್ನೆಷ್ಟು ಉಸಿರು ಬಾಕಿಯುಳಿದಿವೆಯೆಂದು ಯೋಚಿಸುತ್ತೇವೆಯೆ?

ಹೊರಡುವ ಮೊದಲು ನನ್ನ ಗೆಳೆಯ ಇಲ್ಲಿಗೆ ಬೇರೆ ಯಾವ ಜಾತಿಯ ಮರಗಳು ಹೊಂದಿಕೊಂಡಾವು ಎಂಬ ಬಗ್ಗೆ ಕೆಲವು ಸಲಹೆಗಳನ್ನು ಕೊಟ್ಟ. ಅವನು ಒತ್ತಾಯಿಸಲಿಲ್ಲ ಕುರಿಗಾಹಿ ತನಗಿಂತ  ಬಗ್ಗೆ ಎಷ್ಟೋ ಹೆಚ್ಚು ತಿಳಿದಿದ್ದಾನೆ ಎಂದು ನನ್ನ ಮಿತ್ರ ನನ್ನಲ್ಲಿ ಹೇಳಿದ. ಇನ್ನೊಂದು ಗಂಟೆ ನಾವು ನಡೆದ ಮೇಲೆ ತಾನು ಹೇಳಿದುದು ತನ್ನ ಹೃದಯಕ್ಕೆ ಇಳಿದಿದೆ ಎಂಬಂತೆ " ಬಗ್ಗೆ ಬೇರೆ ಯಾರಿಗಿಂತಲೂ ಹೆಚ್ಚು ಕುರಿಗಾಹಿ ತಿಳಿದಿದ್ದಾನೆ" ಎಂದು ಮತ್ತೆ ತನ್ನಷ್ಟಕ್ಕೆ ಹೇಳಿದ. ವಾಪಸು ಹೋದ ಮೇಲೆ ಅರಣ್ಯಾಧಿಕಾರಿ ರಕ್ಷಿತಾರಣ್ಯವನ್ನು ಕಾಪಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಂಡ, ಮೂಲಕ, ನೆಟ್ಟ ಅಜ್ಜನ ನೆಮ್ಮದಿಗೆ ಚ್ಯುತಿ ಬರದಂತೆ ನೋಡಿಕೊಂಡ. ಇದರ ರಕ್ಷಣೆಗೆ ಮೂರು ರೇಂಜರುಗಳನ್ನು ನೇಮಿಸಿ, ಅವರನ್ನು ಎಷ್ಟು ಹೆದರಿಸಿ ಬಿಟ್ಟನೆಂದರೆ ಮರಕಳ್ಳರು ಎಷ್ಟು ಬ್ಯಾರೆಲ್ ಮದ್ಯ ಸುರಿದರೂ ಅವರು ಜಗ್ಗುವ ಭಯವಿರಲಿಲ್ಲ.

ಮೊದಲ ಕೆಲವು ದಶಕಗಳಲ್ಲಿ ಮೂವತ್ಮೂರನೇ ಇಸವಿಯಲ್ಲಿ ನಡೆದ ಯುದ್ಧವೊಂದನ್ನು ಬಿಟ್ಟರೆ ಕಾಡಿಗೆ ಬೇರೆ ಯಾವುದೇ ಭಯವಿರಲಿಲ್ಲ. ಕಾಲದಲ್ಲಿ ವಾಹನಗಳು ಇದ್ದಿಲಿನಿಂದ ನಡೆಯುತ್ತಿದ್ದವು ಮತ್ತು ಎಷ್ಟು ಇದ್ದಿಲಿದ್ದರೂ ಸಾಕಾಗುತ್ತಿರಲಿಲ್ಲ. ಸಾವಿರದೊಂಭೈನೂರ ಹತ್ತರಲ್ಲಿ ನೆಟ್ಟ ಓಕ್ ಗಳನ್ನು ಆಗ ಕಡಿಯಲು ಹೊರಟಿದ್ದರು ಆದರೆ ನಾಗರೀಕತೆಯಿಂದ ಅವೆಷ್ಟು ದೂರ ಇದ್ದವೆಂದರೆ ಅವನ್ನು ಕಡಿದು ಸಾಗಿಸುವುದು ಪ್ರಾಯೋಗಿಕವಾಗಿರಲಿಲ್ಲ. ಕುರಿಗಾಹಿಗೆ ಇದು ಗೊತ್ತೇ ಆಗಲಿಲ್ಲ. ಅವನು ಮೂವತ್ತು ಕಿಲೋಮೀಟರು ದೂರದಲ್ಲಿ ನೆಡುವುದರಲ್ಲಿ ನಿರತನಾಗಿದ್ದ. ಮೂವತ್ತೊಂಭತ್ತರ ಮತ್ತು ಹದಿನಾಲ್ಕರ ಯುದ್ಧಗಳು ಅವನನ್ನು ಬಾಧಿಸಲೇ ಇಲ್ಲ.

ಎಲ್ಝಿಯಾರ್ಡನ್ನು ನಾನು ಸಾವಿರದೊಂಭೈನೂರ ನಲ್ವತ್ತೈದರಲ್ಲಿ ಕೊನೆಯ ಬಾರಿ ನೋಡಿದೆ. ಅವನಿಗಾಗ ಎಂಭತ್ತೇಳು ವರ್ಷ ಪ್ರಾಯ. ಇತ್ತೀಚೆಗೆ ನಾನು ಅಲ್ಲಿ ನಡೆಯುತ್ತಿದ್ದಾಗ ಸ್ವಲ್ಪ ದಾರಿ ಬದಲಿಸಿ ಇಳಿದಾಗ ಅಲ್ಲೊಂದು ವಾಹನ ಹೋಗುವ ದಾರಿ ಇರುವುದನ್ನು ಮೊದಲ ಬಾರಿಗೆ ಗಮನಿಸಿದೆ. ನೋಡೋಣವೆಂದು ಅಲ್ಲಿಂದ ಬಸ್ಸಿನಲ್ಲೇ ಹೋದೆ. ಆಗ ಜಾಗಗಳೆಲ್ಲ ಬೇರೆಯೇ ಆಗಿ ಕಂಡವು. ನಾನು ಅವೇ ಹಳ್ಳಿಗಳ ಮೂಲಕ ದಾಟಿಹೋಗುತ್ತಿದ್ದೇನೆಂದು ನಾನು ವಿಚಾರಿಸಿ ಖಾತರಿಪಡಿಸಿಕೊಳ್ಳಬೇಕಾಯಿತು. ಸಾವಿರದೊಂಭೈನೂರ ಹದಿಮೂರರಲ್ಲಿ ಅದು ಕೇವಲ ಮೂರು ಜನರಿದ್ದ ಹಳ್ಳಿ. ಅವರು ಒಬ್ಬರನ್ನೊಬ್ಬರು ದ್ವೇಷಿಸಿಕೊಂಡು, ಅಲ್ಲೇ ಬಂಧಿಗಳಾಗಿದ್ದಂತೆ ಇದ್ದರು. ಅವರ ಜೀವನದಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲದೆ ಸಾವಿಗಾಗಿ ಕಾಯುತ್ತಿರುವವರಂತೆ ಅವರಿದ್ದರು. ಪರಿಸ್ಥಿತಿಯಲ್ಲಿ ಅವರಲ್ಲಿ ಸದ್ಗುಣಗಳು ಉದಿಸುವುದು ಸಾಧ್ಯವೇ ಇರಲಿಲ್ಲ.

ಅದೆಲ್ಲ ಈಗ ಬದಲಾಗಿತ್ತು. ಅಲ್ಲಿನ ಗಾಳಿಯೂ ಬದಲಾದಂತಿತ್ತು. ಹದವಾದ ಪರಿಮಳವನ್ನು ಹೊತ್ತ ತಂಗಾಳಿಯೊಂದು ನನ್ನನ್ನು ಸ್ವಾಗತಿಸಿತು. ಎಲ್ಲಕ್ಕಿಂತ ಹೆಚ್ಚು ಅಚ್ಚರಿಗೊಳಿಸಿದ್ದೆಂದರೆ ಅಲ್ಲಿ ಇಳಿದು ಬಂದು ಕೆರೆಗೆ ಸೇರುತ್ತಿದ್ದ ಸಣ್ಣ ನೀರ ಝರಿ. ಹರಿವಿನಿಂದ ಕಟ್ಟಿದ ಸಣ್ಣದೊಂದು ಕಾರಂಜಿ, ಅದರ ಪಕ್ಕದಲ್ಲಿ ಸೊಂಪಾಗಿ ಬೆಳೆಯುತ್ತಿದ್ದ ನಿಂಬೆ ಗಿಡ, ಇವೆಲ್ಲ ನವಜೀವನದ ಅನನ್ಯ ಸಂಕೇತಗಳಂತೆ ಕಂಡವು. ಅಲ್ಲಿನವರು ತೊಡಗಿದ್ದ ಕೆಲಸಗಳನ್ನು ನೋಡಿದರೆ ಅವರಲ್ಲಿ ಆಶಾವಾದ ಮರಳಿದ್ದು ಸ್ಪಷ್ಟವಾಗಿ ಕಂಡುಬಂತು. ಅವರೀಗ ಶಿಥಿಲಾದ ಹಳೆಯ ರಚನೆಗಳನ್ನೆಲ್ಲ ತೆಗೆದು ಐದು ಮನೆಗಳನ್ನು ಕಟ್ಟಿದ್ದರು. ಅಲ್ಲಿ ಇಪ್ಪತ್ತೆಂಟು ಹಳ್ಳಿಗರೀಗ ವಾಸವಾಗಿದ್ದರು. ಮನೆಯ ಸುತ್ತ ಹೂಹಣ್ಣಿನ ತೋಟ, ತರಕಾರಿ ಬೆಳೆ, ಪುಟ್ಟ ಹಟ್ಟಿಯೆಲ್ಲ ಸೇರಿ ಸಹಜ ಸಮೃದ್ಧಿ ತುಳುಕಾಡುತ್ತಿತ್ತು. ಅಲ್ಲಿಂದ ಮುಂದೆ ನಡೆದೇ ಹೋದೆ. ಯುದ್ಧದಿಂದ ಆಗಷ್ಟೇ ಎಚ್ಚೆತ್ತುಕೊಂಡಿದ್ದರೂ, ಹೊಲಗಳಲ್ಲಿ ಬಾರ್ಲಿ, ರೈ ಬೆಳೆಗಳು ತೆನೆಕಟ್ಟುತ್ತಿದ್ದವು. ಹುಲ್ಲುಗಾವಲುಗಳಲ್ಲಿ ಹಸುರಿತ್ತು. ಸಾವಿರದೊಂಭೈನೂರ ಹದಿಮೂರರಲ್ಲಿ ಪಾಳುಬಿದ್ದಿದ್ದ ಜಾಗಗಳಲ್ಲಿ ಈಗ ಪಚ್ಚೆ ಪೈರಿದ್ದು ನೆಮ್ಮದಿಯ ಜೀವನವು ಮರಳಿದ್ದನ್ನು ಸೂಚಿಸುತ್ತಿತ್ತು. ಸಣ್ಣ ತೋಡುಗಳಿಗೆ ಕಟ್ಟ ಕಟ್ಟಿ ಹೊಲಕ್ಕೆ ನೀರು ಹರಿಬಿಟ್ಟಿದ್ದರು. ಅಲ್ಲೊಂದು ಸಂಚಲನ, ಜವ್ವನ ಮತ್ತು ಸಾಹಸಿಕ ಮನೋವೃತ್ತಿ ಮರಳಿದ್ದು ಕಾಣುತ್ತಿತ್ತು. ಆರೋಗ್ಯವಂತ ಯುವಕ ಯುವತಿಯರು, ಮತ್ತೆ ನಗಲು ಕಲಿತಿರುವ ಜನರು ಕಾಣಸಿಕ್ಕರು. ರೀತಿ ಒಟ್ಟು ಲೆಕ್ಕಹಾಕಿದರೆ ಸುಮಾರು ಹತ್ತುಸಾವಿರ ಜನರ ಸುಖನೆಮ್ಮದಿಗೆ ಎಲ್ಝಿಯಾರ್ಡ್ ಕಾರಣಕರ್ತನಾಗಿದ್ದ.

ಒಬ್ಬ ಮನುಷ್ಯ, ತನ್ನ ಸರಳ ಶಾರೀರಿಕ ಮತ್ತು ನೈತಿಕ ಶಕ್ತಿಯಿಂದ ಇಷ್ಟೆಲ್ಲ ಬದಲಾವಣೆ ಮಾಡಬಲ್ಲನೆಂದಾದರೆ, ನಮ್ಮೆಲ್ಲ ಸಮಸ್ಯೆಗಳ ಹೊರತಾಗಿಯೂ ನಾವು ಆಶಾವಾದವನ್ನು ಉಳಿಸಿಕೊಳ್ಳಬಹುದೆಂದು ನನಗನಿಸುತ್ತಿದೆ. ಆದರೆ ಸಾಧನೆಗೆ ಬೇಕಾದ ನಿರಂತರತೆ, ಪರಿಶುದ್ಧತೆ, ನಿಸ್ವಾರ್ಥ ಮತ್ತು ಮುಗ್ಧ ಸೇವೆಗಳನ್ನು ಗಮನಿಸಿದರೆ ಸಾಮಾನ್ಯ ಕೂಲಿಯ ಬಗ್ಗೆ ಹೃದಯ ತುಂಬಿ ಬರುತ್ತಿದೆ; ದೇವರು ಮೆಚ್ಚುವ ಕೆಲಸ ಯಾವುದೆಂದು ಅವನು ಅರಿತಿದ್ದನೆನಿಸುತ್ತದೆ.

ಎಲ್ಝಿಯಾರ್ಡ್ ಬೌಫಿಯರ್ ಸಾವಿರದೊಂಭೈನೂರ ನಲ್ವತ್ತೈದರಲ್ಲಿ ಅವನ ಗುಡಿಸಲಿನಲ್ಲಿ ಶಾಂತವಾಗಿ ತೀರಿಹೋದ.ಒಬ್ಬಾತನನ್ನು ಅರಿಯಲುಆತನ ನಿಜಗುಣವನ್ನು ತಿಳಿದು ಅದರ ಸೌಂದರ್ಯವನ್ನು ಮೆಚ್ಚಲು ಅವನನ್ನು ಬಹುಕಾಲ ಗಮನಿಸುವ ಅವಕಾಶ ನಮಗೆ ದೊರಕಬೇಕುಆತನ ಸ್ವಭಾವದ ಬಗೆಗಿನ ನಮ್ಮ  ತೀರ್ಮಾನ ಸರಿಯೆಂದೆನಿಸಬೇಕಿದ್ದರೆ ಆತ ನಿರಹಂಕಾರಿಯಾಗಿದ್ದುಯಾವುದೇ ಉದ್ದೇಶವಿರದ ಪರೋಪಕಾರ ಆತನಲ್ಲಿದ್ದುತನ್ನ ಶ್ರಮದಿಂದ  ಭೂಮಿಯ ಮೇಲೆ ಆತನು ಶಾಶ್ವತ ಸತ್ಯದ ಒಂದು ಅಭಿವ್ಯಕ್ತಿಯನ್ನು ಉಳಿಸಿಹೋಗಬೇಕುಇದನ್ನೆಲ್ಲ ಗಮನಿಸಿ ಅಭಿಪ್ರಾಯ ತಳೆಯುವ ನಮ್ಮ ಮೇಲೂ ಆತನ ಜೀವನವನ್ನು ಸಮಗ್ರವಾಗಿ, ಸುದೀರ್ಘವಾಗಿ, ನಿಷ್ಪಕ್ಷಪಾತವಾಗಿ ಗ್ರಹಿಸುವ ಅಷ್ಟೇ ದೊಡ್ಡ ಜವಾಬ್ದಾರಿ ಇದೆಯೆನ್ನುವುದನ್ನು ಮರೆಯುವಂತಿಲ್ಲ.

[ಲೇಖಕ ಜೀನ್ ಗಿಯೋನೋ ಕಥೆಯನ್ನು ಮುಕ್ತವಾಗಿ ಅನುವಾದಿಸುವ, ಹಂಚುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಮೂಲಕ ಗಿಡಮರಗಳ ಮಹತ್ವ ನಮಗೆ ತಿಳಿಯಬೇಕೆಂಬುದು ಅವನ ಆಶಯ.]Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!