ಕಾಡುಬಸಳೆಯ ಫಾಮಿಲಿ ಪ್ಲಾನಿಂಗ್
ಮನುಷ್ಯನೆಂಬ ಒಂದು ವಿಶಿಷ್ಟಜಾತಿಯನ್ನು ಬಿಟ್ಟರೆ ಭೂಮಿಯ ಇತರೆಲ್ಲ ಜೀವರಾಶಿಯ ಮಟ್ಟಿಗೆ ‘ಫಾಮಿಲಿ ಪ್ಲಾನಿಂಗ್’ ಎನ್ನುವ ಶಬ್ದದ ಅರ್ಥ ಒಂದೇ – ಸಾಧ್ಯವಾದಷ್ಟು ಹೆಚ್ಚು ಮಕ್ಕಳನ್ನು ಹೆರುವುದು!. ಹುಟ್ಟಿದ ಮಕ್ಕಳಲ್ಲಿ ಬದುಕಿದವು ಸಂತತಿ ಬೆಳೆಸಿದರೆ ಅಲ್ಲಿಯವರೆಗೆ ತಲುಪದವು ಇತರೆ ಜಾತಿಗಳಿಗೆ ಆಹಾರ. ತಿನ್ನುವುದು ಮತ್ತು ತಿನಿಸಿಕೊಳ್ಳುವುದರ ನಡುವಿನ ಕಣ್ಣಾಮುಚ್ಚಾಲೆ ಒಂದು ನಿರಂತರ ಆಟ. ಈ ಆಟದ ಮೇಲುಗೈಗಾಗಿ ಸಸ್ಯಪ್ರಾಣಿಗಳು ಮಾಡುವ ತಂತ್ರಗಾರಿಕೆ ಲೆಕ್ಕವಿಲ್ಲದಷ್ಟು. ಕೆದಕಿದಷ್ಟು ಕೌತುಕಮಯ.
ದಪ್ಪಗಿನ ನೀರುತುಂಬಿದ ಎಲೆಗಳ (succulent) ಕಾಡುಬಸಳೆ ನಮಗೆ ಚಿರಪರಿಚಿತವಷ್ಟೆ. ನಾನು ಒಂದಾರು ತಿಂಗಳ ಹಿಂದೆ, ಆ ಜಾತಿಯ ಅಲಂಕಾರಿಕ ಪ್ರಬೇಧವೊಂದರ ಎರಡು ಗಿಡಗಳನ್ನು ಎರಡು ಪ್ರತ್ಯೇಕ ಕುಂಡಗಳಲ್ಲಿ ಹಾಕಿ, ಒಂದು ಕುಂಡವನ್ನು ರಣಬಿಸಿಲಿನ ತಾರಸಿಯಲ್ಲಿಯೂ, ಇನ್ನೊಂದನ್ನು ತಂಪುಜಾಗದಲ್ಲಿಯೂ ಇಟ್ಟೆ. ಬಿಸಿಲಿನಲ್ಲಿಟ್ಟ ಕುಂಡಕ್ಕೆ ಒಂದು ಹನಿನೀರೂ ಹಾಕಲಿಲ್ಲ, ತಂಪಿನಲ್ಲಿಟ್ಟದ್ದಕ್ಕೆ ದಿನಕ್ಕೊಮ್ಮೆ ನೀರು. ಒಂದು ಎಲೆಯನ್ನು ಹಿಂಡಿದರೆ ನಾಲ್ಕು ಚಮಚೆ ನೀರು ಒಸರುವ ಕಾಡುಬಸಳೆಗಿಡ ಉರಿ ಬಿಸಿಲಿನಲ್ಲಿ ಬದುಕಿ ಉಳಿಯುವುದೇ ಒಂದು ವಿಸ್ಮಯ. ಬಿಸಿಲಿನಲ್ಲಿರುವ ಗಿಡದ ಎಲೆಗಳು ನೀರು ನಷ್ಟವಾಗದಂತೆ ತಡೆಯಲು ಒಳಮುಖವಾಗಿ ಸುರುಳಿಯಾದವು. ಪತ್ರಹರಿತ್ತು ಕಡಿಮೆಯಾಗಿ ಎಲೆ ಕೆಂಬಣ್ಣಕ್ಕೆ ತಿರುಗಿದವು. ಸಹಜವಾಗಿ ಒಂದು ಕೈಯಗಲ ಬರಬೇಕಾದ ಎಲೆಗಳು ಅದರ ಅರ್ಧಕ್ಕೂ ಬರಲಿಲ್ಲ. ಇದೊಂದು ಉದ್ದೇಶಪೂರ್ವಕ ಮಿತವ್ಯಯ. ಹೇಗಾದರೂ ಮಳೆಗಾಲದವರೆಗೆ ದಿನದೂಡಿದರೆ ಮತ್ತೆ ಸೊಕ್ಕಿಬೆಳೆದೇನೆಂಬ ಹಟ. ತಂಪಿನಲ್ಲಿಟ್ಟ ಗಿಡ ಅಗಲವಾದ ಎಲೆತುಂಬಿ ಪುಷ್ಟಿಯಾಗಿ ಬೆಳೆಯಿತು.
![]() |
ತಾರಸಿಯಲ್ಲಿಟ್ಟ್ ಕಾಡುಬಸಳೆ (bryophyllum) |
![]() |
ತಂಪಿನಲ್ಲಿಟ್ಟ ಕಾಡುಬಸಳೆ (bryophyllum) |
ಮನುಷ್ಯನೊಬ್ಬನನ್ನು ಬಿಟ್ಟು, ನಿಸರ್ಗದ ನಿಯಮಾನುವರ್ತಿಗಳಾಗಿ ಬದುಕುವ ಇತರೆಲ್ಲಜೀವಿಗಳು ತಮ್ಮನ್ನು ತಾವು ಮುಂದಿನ ತಲೆಮಾರಿನೊಂದಿಗೆ ಬೆಸೆಯುವ ಕೊಂಡಿಗಳಷ್ಟೇ ಎಂದು ತಿಳಿದಿವೆ ಎಂದು ನನಗನಿಸುತ್ತಿದೆ. ಅವು ಯಾವುದೇ ಇತರ ಸಾಧನೆಗಾಗಿ ತಮ್ಮ ಸಂತಾನೋತ್ಪತ್ತಿಯನ್ನು ಬಲಿಗೊಡಹೊರಟಿಲ್ಲ. ಜೀವಜಾಲದ ಮಟ್ಟಿಗೆ ಪ್ರತಿಯೊಂದು ದೇಹವೂ ಜೀವಕಣವನ್ನು (gamete – ವೀರ್ಯಾಣು ಅಥವಾ ಅಂಡಾಣು) ಉತ್ಪಾದಿಸುವ ಒಂದು ಕಾರ್ಖಾನೆ. ಜೀವಿಯ ಉಳಿದೆಲ್ಲ ಚಟುವಟಿಕೆಗಳು ಸಮರ್ಥ ಮತ್ತು ಇನ್ನಷ್ಟು ಉತ್ತಮವಾದ ಮುಂದಿನ ತಲೆಮಾರನ್ನು ತಯಾರಿಸಲು ಪೂರಕ ಕ್ರಿಯೆಗಳಷ್ಟೆ (supportive activities). ಸಸ್ಯವೊಂದು ತನ್ನದೇ ದೇಹದ ಒಂದು ಭಾಗದಿಂದ (vegetative) ಅಥವಾ ಇತರೊಂದು ಸಸ್ಯದ ಸಹಾಯದಿಂದ (sexual) ಸಂತಾನೋತ್ಪತ್ತಿ ಮಾಡಬಲ್ಲದು. ಬದಲಾಗುವ ತೇವಾಂಶ, ಉಷ್ಣಾಂಶ, ಭಕ್ಷಕಜೀವಿಗಳು (predator) ಇತ್ಯಾದಿ ನೂರೊಂದು ಶಕ್ತಿಗಳೊಂದಿಗೆ ಇನ್ನಷ್ಟು ಚೆನ್ನಾಗಿ ಏಗಲು ಲೈಂಗಿಕ ಸಂತಾನೋತ್ಪತ್ತಿಯಿಂದ ಹೊಸ ವಂಶವಾಹಿಯ ಮರಿಗಳನ್ನು ಸೃಷ್ಟಿಸುವುದು ಅನಿವಾರ್ಯ. ಇದುವೇ ಜೀವ ವಿಕಾಸದ ಸ್ಟೇರಿಂಗ್ ವ್ಹೀಲ್. ಪ್ರತಿಯೊಂದು ಜೊತೆ ಜೀವಿಗಳು ನಡೆಸುವ ಲೈಂಗಿಕ ವಂಶಾಭಿವೃದ್ಧಿಯಿಂದ ಆಯಾ ಜಾತಿ(species)ಗೆ ಸೇರಿಸಲ್ಪಡುವ ಚೂರೇ ಚೂರು ವೈವಿಧ್ಯತೆ, ಕೆಲವು ಮಿಲಿಯ ವರ್ಷಗಳಲ್ಲಿ ಸ್ವಲ್ಪ ಸ್ವಲ್ಪವೇ ಒಟ್ಟಾಗಿ ಕೊನೆಗೆ ಮೂಲಜಾತಿಯಿಂದ ಬೇರೆಯಾಗುವ, ಹೊಸ species ಸೃಷ್ಟಿಯಾಗುವ ಪ್ರಕ್ರಿಯೆ ಪ್ರಕೃತಿಯ ಜೀವಂತ art work!.
ಆದರೆ ಸಸ್ಯ (ಅಥವಾ ಪ್ರಾಣಿಯ) ಲೈಂಗಿಕ ಸಂತಾನೋತ್ಪತ್ತಿ ಅಪಾರವಾದ ಶಕ್ತಿ ಮತ್ತು ಸಂಪನ್ಮೂಲವನ್ನು ಬೇಡುತ್ತದೆ. ಕಾಡುಬಸಳೆಯೊಂದು ಹೂಗೊಂಚಲನ್ನು ಧರಿಸಿ, ಕೀಟವೋ, ಚಿಟ್ಟೆಯೋ ಯಾವುದಾದೊಂದರಿಂದ ಪರಾಗಸ್ಪರ್ಶ ಮಾಡಿಸಿಕೊಂಡು, ಬೀಜ ಕಟ್ಟಿ, ಅದು ಬೆಳೆದು ಉದುರಿ, ಸೂಕ್ತ ತೇವಾಂಶ ಮತ್ತು ಉಷ್ಣತೆಗೆ ಕಾದು ಮತ್ತೆ ಹುಟ್ಟಿ ಬರಬೇಕೆಂದರೆ ಅದೊಂದು ದೊಡ್ಡ ರಾಮಾಯಣ.
ನಮ್ಮ ಆದ್ಯತೆಗಳೇನು? ನಾವು ಹೋರಾಡಬೇಕಾದುದು ಎಷ್ಟು ಮತ್ತು ಯಾವುದಕ್ಕೆ? ಎನ್ನುವ ಗಂಭೀರವಾದ ಪ್ರಶ್ನೆಗಳಿಗೆ ಕಾಡುಬಸಳೆ ಸಸ್ಯ ಉತ್ತರವನ್ನು ತೋರಿಸುತ್ತಿದೆ. ನಮ್ಮ ಮುಂದಿನ ತಲೆಮಾರು ಬದುಕಿ ಬೆಳೆಯಬಹುದಾದ ನೆರೆಹೊರೆಯನ್ನು(ಪರಿಸರ) ಉಳಿಸಿಕೊಳ್ಳುವುದು ಆ ಮುಂದಿನ ತಲೆಮಾರನ್ನು ಸೃಷ್ಟಿಸುವುದು ನಿಸ್ಸಂಶವಾಗಿ ನಮ್ಮ ಆದ್ಯತೆ. ಇದು ತಲೆಕೆಳಗಾಗಿ, ಪರಿಸರವನ್ನು ದೋಚಿ ದುಡ್ಡು ಕೊಳ್ಳೆಹೊಡೆಯುವುದು ಮತ್ತು ಮಕ್ಕಳನ್ನು ಆದಷ್ಟೂ ಕಡಿಮೆ ಹೆರುವುದು (ಅಥವಾ ಹೆರದೇ ಇರುವುದು) ನಮ್ಮ ಆದ್ಯತೆಗಳಾಗಿ ಬದಲಾದುದು ಬುದ್ಧಿವಂತ ಮಾನವನ ಸಾಧನೆ. ಅದೇನೇ ಇರಲಿ. ನಾಡಜನರಿಗೆ ನಿಜವಾದ family planning ಹೇಳಿಕೊಡುವ ಕಾಡುಬಸಳೆಗೆ ಅಭಿನಂದನೆ ಹೇಳಲೇಬೇಕು.
[ಮೇಲಿನ ಲೇಖನದಲ್ಲಿ ಬರೆದ ಸಸ್ಯದ ವರ್ತನೆ ನನ್ನ ಇಂಟರ್ಪ್ರಿಟೇಶನ್. ಅದೇ ನಿಜ ಎನ್ನುವುದಕ್ಕೆ ನನ್ನ ಹತ್ತಿರ ವೈಜ್ಞಾನಿಕ ಆಧಾರಗಳಿಲ್ಲ.]
Comments
Post a comment