ಜನ/ದನ ಕಥನ: ಹಟ್ಟಿಯಲ್ಲೊಂದು ಹುಟ್ಟು-ಸಾವು ಅನಾಥಕರುವಿಗೆ ಹಾಲುಕುಡಿಸುತ್ತಿರುವ ಅಮ್ಮ ಮತ್ತು ಪ್ರಚೇತ
ಹಟ್ಟಿಯಲ್ಲೊಂದು ಬಸುರಿ ಹಸು
ತಿಂಗಳು ತುಂಬಿದ ಹಸುವೊಂದು ಹಟ್ಟಿಯಲ್ಲಿ ಇರುವುದೂ, ತಿಂಗಳು ತುಂಬಿದ ಹೆಣ್ಣುಮಗಳೊಬ್ಬಳು ಮನೆಯಲ್ಲಿ ಇರುವುದೂ ಹೆಚ್ಚುಕಮ್ಮಿ ಒಂದೇ.
ಹಟ್ಟಿಯಲ್ಲಿ ಗಬ್ಬದ ಹಸುವಿಗೆ ತಿಂಗಳು ತುಂಬುತ್ತಿದ್ದಂತೆ ಮನೆಯಲ್ಲಿ ಅದಕ್ಕನುಗುಣವಾಗಿ ಯೋಚನೆಗಳು ಬದಲಾಗತೊಡಗುತ್ತವೆ. ಯಾವುದೇ ದಿನ/ಕ್ಷಣ ಕರು ಹಾಕಬಹುದು ಎನ್ನುವ ಸಾಧ್ಯತೆ, ಮನೆಬಿಟ್ಟು ಹೋಗುವಾಗ, ರಾತ್ರಿ ಅಂಬಾ ಎನ್ನುವ ಕೂಗು ಕೇಳಿದಾಗ, ಕೆಲಸದವರು ಮನೆಯಲ್ಲಿ ಇಲ್ಲದ ದಿವಸಗಳಲ್ಲಿ - ಹೀಗೆ ಆಯಾ ಸಮಯ ಸಂದರ್ಭಕ್ಕೆ ವಿಶೇಷ ಜಾಗರೂಕತೆಯನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.
ವರ್ಷಕ್ಕೊಂದೆರಡು ಬಾರಿ ನಡೆಯುತ್ತಲೇ ಇರುವ ಘಟನೆಯಾದರೂ ಪ್ರತೀಬಾರಿ ಇದು ಹೊಸದೇ. ವಾರದ ಹಿಂದೆ ಮತ್ತೆ ನಮ್ಮಲ್ಲಿ ಹಸುವೊಂದು ಕರು ಹಾಕಿತು. ತಾಯಿಹಸುವಿಗೆ ಮೊದಲು ಅವಳಿ ತಂಗಿಯೊಂದಿತ್ತು. ಅವಳಿ ಕರುಗಳು ನನ್ನ ಮದುವೆ ನಿಶ್ಚಯವಾದ ಮೇಲೆ ಹುಟ್ಟಿದವೆನ್ನುವ ಕಾರಣಕ್ಕೆ ನಾವೇನೋ ಭಾವನಾತ್ಮಕ ವಿಶೇಷತೆಯನ್ನು ಅವಕ್ಕೆ ತಳುಕು ಹಾಕಿದ್ದೆವು. ರೀತಿ ಹುಟ್ಟಿದ ಅವಳಿ ಕರುಗಳು ಎರಡೂ ಹೆಣ್ಣೇ ಆಗಿರುವುದು, ಅವೆರಡೂ ಬದುಕುಳಿಯುವುದು ವಿಶೇಷವೆಂದು ಡಾ|ಮನೋಹರ ಉಪಾಧ್ಯರು ಹೇಳಿದ ನೆನಪು. ಅಂತೂ ಇವೆರಡೂ ಬೆಳೆದು ನಮ್ಮ ನಿರೀಕ್ಷೆಯಷ್ಟಲ್ಲದಿದ್ದರೂತಕ್ಕಮಟ್ಟಿನ ಹಸುಗಳಾಗಿ, ಎಲ್ಲವನ್ನೂ ಸಾಕಲಾಗದೆ ಒಂದನ್ನು ಕೊಟ್ಟು ಕೊನೆಗೆ ಅವಳಿಗಳಲ್ಲಿ ಒಂದೇ ನಮ್ಮಲ್ಲುಳಿದುಕೊಂಡಿತ್ತು. ಬಾರಿಯದು ಅದರ ಮೂರನೇ ಕರು.


ಹಗಲಲ್ಲಿ ಹಸು ಕರು ಹಾಕಿದರೆ ಮನೆಯವರ ಭಾರ ಎಷ್ಟೋ ಕಡಿಮೆಯಾದಂತೆ. ಕರು ಈಯುವ ಪ್ರಕ್ರಿಯೆ ಬೇಗ ಮುಗಿಯಲೂ ಬಹುದು, ಕೆಲವು ಗಂಟೆ ಬೇಕಾಗಲೂ ಬಹುದು. ಹೆತ್ತು ಧರೆಸೇರಿದ ಮೇಲೆ, ಕರು ಮತ್ತು ಅದರೊಡನೆ ಕೆಳಗೆ ಬಿದ್ದ ಮೃದು ಚೀಲದ ಭಾಗಗಳು ರಕ್ತ ಮತ್ತು ಹಸಿಜೀವರಸದ ಲೇಪನ ಹೊಂದಿರುತ್ತವೆ. ಸಹಜ ವನ್ಯಪರಿಸರದಲ್ಲಿ ಇದರ ವಾಸನೆ ಹಿಡಿದು ತಕ್ಷಣ ಕರುವನ್ನು ಬೇಟೆಯಾಡುವ ಕಾಡುಪ್ರಾಣಿಗಳ ಭಯವಿರುವುದರಿಂದ ತಾಯಿ ಮತ್ತು ಇತರೆ ಹಸುಗಳು ಹೆಚ್ಚಾಗಿ ಯಾವುದೇ ಸದ್ದುಗದ್ದಲ ಮಾಡದೆ ಘಟನೆಯ ಸೂಚನೆ ತಿಳಿಯದಂತೆ ಇಡೀ ಹೆರಿಗೆ ಪ್ರಕ್ರಿಯೆಯಲ್ಲಿ ಸುಮ್ಮನೆ ಇದ್ದುಬಿಡುತ್ತವೆ. ಈಗ ಭಯವಿಲ್ಲದಿದ್ದರೂ ಗುಣ ಜಾನುವಾರುಗಳಲ್ಲಿ ಅಚ್ಚಳಿಯದೆ ಉಳಿದು ಬಂದಿದೆ.

ಕರು ಬಿದ್ದಮೇಲೆ ಅದಕ್ಕೆ ಹಾಲು ಕುಡಿಸುವುದು, ಅದು ಅಷ್ಟು ಸುಲಭವಾಗಿ ಕುಡಿಯದಿದ್ದರೆ ಎಳೆಯದಾದರೂ ತೂಕದಲ್ಲಿ ಅರಳೆಯಂತೇನೂ ಇರದ ಅದನ್ನು ಎತ್ತಿ ಹಿಡಿದು ಹಾಲು ಕುಡಿಸುವುದು, ಆಮೇಲೆ ಕರುವನ್ನು ತೋಳುಗಳಿಂದ ಎದೆಯ ಮೇಲೆ ಎತ್ತಿ ಅದರ ವಿಶ್ರಾಂತಿಸ್ಥಳಕ್ಕೆ ವರ್ಗಾಯಿಸಿ ಬೆಚ್ಚಗೆ ಮಲಗಿಸುವುದು, ತಾಯಿಯಲ್ಲಿ ಉಳಿದಿರಬಹುದಾದ ಹಾಲನ್ನು ಖಾಲಿ ಮಾಡುವುದು, ಕರುಹಾಕಿದ ಮೇಲೆ ಒಂದು ದಿನದೊಳಗೆ ಯಾವಾಗಲಾದರೂ ಹೊರಬೀಳಬಹುದಾದ, ಅದರ ಮಾಸು/ಚೀಲ/ಪ್ಲಾಸೆಂಟವನ್ನು ಹೂತು ವಿಲೇವಾರಿ ಮಾಡುವುದು ಹೀಗೆ ಒಂದೆರಡು ದಿನ ತಾಯಿಗೆ, ಕರುವಿಗೆ ಅಭ್ಯಾಸವಾಗುವವರೆಗೆ ಇದು ಮನೆಯವರಿಗೆ ಶ್ರಮದಾಯಕ ಕೆಲಸ. ಪ್ರಕೃತಿಯ ಸಹಜ ಸೃಷ್ಟಿಕ್ರಿಯೆಯಲ್ಲಿ ಮನುಷ್ಯ ಒಂದು ಗೆರೆಗಿಂತ ಹೆಚ್ಚು ಮೂಗುತೂರಿಸುವಂತಿಲ್ಲ, ಆದರೆ ನಿಗಾ ಕಡಿಮೆಯಾಗುವಂತಿಲ್ಲ.


ಮೊದಲ ಕೆಲವು ದಿನಗಳ ಆತಂಕಗಳು

ಕರುಹಾಕಿದ ಹನ್ನೊಂದು ದಿನಗಳ ನಂತರ ಹಾಲು ಶುದ್ಧ ಹಾಲು ಅನಿಸಿಕೊಳ್ಳುವುದು ಸಂಪ್ರದಾಯ. ಅಲ್ಲಿಯವರೆಗೆ ಅದು ದೇವರಿಗೆ ನೈವೇದ್ಯವಾಗಿ ವರ್ಜ್ಯ, ನಿಜವಾಗಿ ಮನುಷ್ಯರಿಗೂ (ನಮ್ಮೂರಿನ ಪದ್ಧತಿಯಂತೆ) ವರ್ಜ್ಯ. ಕರುವಿಗೆ ಪೌಷ್ಟಿಕವಾದ ಮತ್ತು ಅದಕ್ಕೆಂದೇ ದಪ್ಪವಾಗಿ, ಕೆನೆಭರಿತವಾಗಿರುವ ಹಾಲಿಗೆ ಮನುಷ್ಯ ಕೈಹಾಕಬಾರದೆಂದು ನಿಯಮವನ್ನು ಹಿಂದಿನವರು ಮಾಡಿದ್ದಿರಬೇಕು ಮತ್ತು ಕಾರಣಕ್ಕೆ ನಿಯಮ ನಿಜಕ್ಕೂ ಗೌರವಾರ್ಹ (ಆದರೆ ಆರೇಳು ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಹಾಲು ಇರುವ ಹಸುಗಳಲ್ಲಿ ಅಷ್ಟೂ ಹಾಲನ್ನು ಕರು ಕುಡಿದರೆ ಅದಕ್ಕೆ ಅಜೀರ್ಣ ಗ್ಯಾರಂಟಿ. ಇದಕ್ಕೆ ನಮ್ಮೂರಲ್ಲಿ ಈಗ ಅನಿವಾರ್ಯವಾಗಿ ಜಾರಿಗೆ ಬಂದಿರುವ ಕಟ್ಟಿ ಹಾಕಿ ಸಾಕುವ ಪದ್ಧತಿಯದೂ ಕೊಡುಗೆ ಇರಬಹುದು). ಹೆತ್ತ ಮೇಲೆ ಸರಿಯಾಗಿ ಮಾಸು ಹೊರಬೀಳದೆ ಇರುವ, ಬಿದ್ದ ಮಾಸುವನ್ನು ಹಸು ತಿಂದು ಬಿಡುವ, ಹಾಲಿನಲ್ಲಿರುವ ಪೌಷ್ಟಿಕತೆಯಿಂದ ಬಾಕ್ಟೀರಿಯಾಗಳು ಹೊರಗಿನಿಂದ ಕೆಚ್ಚಲು ಹೊಕ್ಕು ಕೆಚ್ಚಲುಬಾವು ಬರುವ, ಕರುವಿಗೆ ಕಾಲಿನ ಗೊರಸು, ಮೊಣಕಾಲು, ಗುದದ್ವಾರಗಳಲ್ಲಿ ಪರಾವಲಂಬಿ ಹುಳಬೆಳೆಯುವ - ಇತ್ಯಾದಿ - ಹತ್ತು ಹಲವು ರೀತಿಯ ಅಪಾಯಗಳು ತೂಗುಕತ್ತಿಯಾಗಿ ಹಟ್ಟಿಯಮೇಲೆ, ಯಜಮಾನನ ಮೇಲೆ ತೂಗುತ್ತಿರುತ್ತವೆ(ಮಾಸು ತಿಂದರೆ ತೊಂದರೆಯೇನೂ ಇಲ್ಲವೆನ್ನುವ ಮತವಿದೆ. ಇದು ನಿಜವಿರಬಹುದು, ಆದರೆ ನಮ್ಮೂರಿನ ನಂಬಿಕೆಯನ್ನು ಬರೆದಿದ್ದೇನಷ್ಟೆ).

ಸರ್ತಿ, ಕಳೆದ ಕೆಲವು ದಿನಗಳಿಂದ ನಾನು ವಿಪರೀತ ಬ್ಯುಸಿ ಇದ್ದುದರಿಂದ ಮತ್ತು ಇಂತಹ ಕೆಲಸಗಳಲ್ಲಿ ನುರಿತ ಕೆಲಸಗಾರ ಕೃಷ್ಣ (ಅನ್ವರ್ಥವಾಗಿ!) ಮನೆಯಲ್ಲಿದ್ದುದರಿಂದ ನನ್ನ (ಮನೆಯವರ) ಹೆಗಲಿಗೆ ಭಾರ ಸ್ವಲ್ಪ ಕಡಿಮೆಯಿತ್ತು. ಅದೃಷ್ಟ ಬಾರಿ ನಮ್ಮ ಜೊತೆಗಿರಲಿಲ್ಲ. ಕೃಷ್ಣ, ಎರಡನೆಯ ದಿನವೇ ಹಸುವಿಗೆ ಕೆಚ್ಚಲುಬಾವು ಬಂದಿದೆಯೆಂದೂ ವಿಷಯ ಸೀರಿಯಸ್ ಇದೆಯೆಂದೂ ಮನೆಯಲ್ಲಿ ಹೇಳಿದ. ಸಂಜೆ ಅದೇ ಹಸುವಿನ ಹಾಲು ಕರೆದಿದ್ದ ಅಮ್ಮನಿಗೆ ಹಾಗೇನೂ ಅನ್ನಿಸಿರಲಿಲ್ಲ. ಆಫೀಸಿನಿಂದ ಮನೆಗೆ ಹೋಗಿ ಕೆಚ್ಚಲು ಮುಟ್ಟಿ ನಾನು ನೋಡಿ, ಲಕ್ಷಣಗಳನ್ನು ವಿವರಿಸಿ, ಮನೋಹರ ಮಾವನಲ್ಲಿ ಚರ್ಚಿಸಿ ಹೋಮಿಯೋಪತಿ ಔಷಧಿಗೆ ವ್ಯವಸ್ಥೆ ಮಾಡಿದ್ದಾಯಿತು.
ಕೆಚ್ಚಲಿಗೆ ನೀರು ಸಿಂಪಡಿಸುವುದು (ತಂಪುಮಾಡುವುದು) ಹಿತಕಾರಿಯಾದ್ದರಿಂದ ನಾನು ಹೋಸ್ ಪೈಪಿನಲ್ಲಿ ನೀರು ಬಿಟ್ಟಾಗ ಹಸು ದಡಬಡಿಸಿ ಕಷ್ಟಪಟ್ಟು ಎದ್ದು ನಿಂತಿತು. ಆದರೆ ಅದು ಕಷ್ಟಪಟ್ಟದ್ದು ನನ್ನ ಮನಸ್ಸಿನಲ್ಲಿ ದಾಖಲಾಗಲಿಲ್ಲ.

ಹಸು ಏಳದಿದ್ದರೆ ಅಪಾಯದ ಗೆರೆ ದಾಟಿದಂತೆ

ಮರುದಿನ ಹಸು ಏಳಲಿಲ್ಲ. ಕೆಚ್ಚಲು ನೀರುತುಂಬಿದಂತೆ ದೊಡ್ಡದಾಗಿ ಊದಿಕೊಂಡುದು ಬಿಟ್ಟರೆ ಅನಾರೋಗ್ಯದ, ನಿ:ಶಕ್ತಿಯ ಯಾವುದೇ ಲಕ್ಷಣ ಇರಲಿಲ್ಲ. ಆದರೆ ಹುಲ್ಲು/ಹಿಂಡಿ ತಿನ್ನಲಿಲ್ಲ. ನಮ್ಮ ಸತತ ಚಿಕಿತ್ಸೆಗಳು ಶುರುವಾದವು. ಹೋಮಿಯೋಪತಿ, ಮನೆಮದ್ದು, ಇಂಟ್ರಾವೀನಸ್ ಗ್ಲುಕೋಸ್, ಕ್ಯಾಲ್ಸಿಯಂ ಮತ್ತು ಆಂಟಿಬಯೋಟಿಕ್ ಗಳು, ಕೆಚ್ಚಲಿಗೆ ಐಸ್ ಇಡುವುದು, ಮತ್ತೆ ಇದೇ ಚಕ್ರದ ಪುನರಾವರ್ತನೆ. ಕೃಷ್ಣ ಕುಟುಂಬ ಸದಸ್ಯರ ಅಸೌಖ್ಯವೆಂಬಂತೆ ಚಡಪಡಿಸಿದ. ನಾನು ರಜೆಯಿದ್ದುದರಿಂದ ಗಂಟೆಗೊಮ್ಮೆ ಭೇಟಿ ಕೊಡುವುದು, ಔಷಧಿ ಬಾಯಿಗೆ ಹಾಕುವುದು ಇವನ್ನೆಲ್ಲ ಮಾಡಿಯೇ ಮಾಡಿದೆ. ಮನೆಯವರೆಲ್ಲ - ಮಕ್ಕಳು ಸೇರಿ - ತಮ್ಮದೇ ರೀತಿಯಲ್ಲಿ ಮಿಡಿದರು. ಆದರೆ ಪರಿಣಾಮ ಶೂನ್ಯ. ನಮ್ಮ ಹಳ್ಳಿಯ ಸರಕಾರಿ ಚಿಕಿತ್ಸಕ ಶ್ರೀ ಕೃಷ್ಣಮೂರ್ತಿ ತಮ್ಮ ನಿಬಿಡ ದಿನಚರಿಯ ಮಧ್ಯೆ ತಮ್ಮ ಕರ್ತವ್ಯವನ್ನು ಚೆನ್ನಾಗಿಯೇ ಮಾಡಿದರು.

ಮಧ್ಯೆ ಹಸುವನ್ನೊಮ್ಮೆ ನಿಲ್ಲಿಸಿದರೆ ಹೇಗೆಂಬ ಮಾತು ಹಲವು ಬಾರಿ ಬಂತು. ಹಸುವನ್ನು ಬಿಡಿ, ಕರುವನ್ನೊಮ್ಮೆ ಮುಟ್ಟಿ ನೋಡಿದವರಿಗೆ ಗೊತ್ತಿರಬಹುದು. ಜಾನುವಾರುಗಳ ಒಡನಾಟ ಅಷ್ಟು ಸುಲಭದ್ದಲ್ಲ. ಅವೊಮ್ಮೆ ತಮಾಶೆಗೆ ನಮ್ಮಗೆ ಕಚಗುಳಿಯಿಟ್ಟರೆ, ಗೊರಸಿನಿಂದ ಮೆಟ್ಟಿದರೆ ನಮ್ಮ ಜೀವಮಾನಕ್ಕೆ ಉಳಿಯುವ ನೋವನ್ನು ಬಿಟ್ಟು ಹೋದಾವು. ಅವುಗಳ ಭಾರ, ಶಕ್ತಿ ಅಂಥಾದ್ದು.

ಹಗ್ಗದ ಸಹಾಯದಿಂದ ನಿಂತ ಹಸು

ಮನೋಹರ ಉಪಾಧ್ಯರು ಹಸುವನ್ನು ನಿಲ್ಲಿಸುವುದು ಪೂರಕವಾಗಬಲ್ಲುದೆಂದು ಹೇಳಿ, ಹಸುವನ್ನು ನಿಲ್ಲಿಸುವ ಬಳ್ಳಿ ವಿಧಾನ ಬಗ್ಗೆ ಫೋನ್ ನಲ್ಲೇ ಹೇಳಿದರು. ಕೃಷ್ಣಮೂರ್ತಿಯವರು ಬಂದಿದ್ದಾಗ ಅವರು ವಿಧಾನವನ್ನು ತೋರಿಸಿಕೊಡಹೊರಟರು. ಬರಿಯ ಡೆಮೊಕ್ಕೆಂದು ಹೊರಟಿದ್ದ ನಾವು ಬರೀ ನಾಲ್ಕು ಜನರ ಬಲದಲ್ಲಿ ಕೃಷ್ಣನ ಭೀಮಶಕ್ತಿಯಿಂದ ಹಸುವನ್ನು ಎತ್ತಿಯೇ ಬಿಟ್ಟೆವು. ಆದರೆ ಸ್ವಲ್ಪ ಹೊತ್ತಿನಲ್ಲಿ ಅದಕ್ಕೆ ಸುಸ್ತಾಗಿ ನಿಧಾನಕ್ಕೆ ಒರಗಿ ಬಿದ್ದದ್ದೂ, ಆಗ ಹಸು ಮತ್ತು ಗೋಡೆಯ ಮಧ್ಯೆ ನನ್ನ ಕೈ ಸಿಕ್ಕಿ ಜಖಂ ಆದದ್ದೂ ಆಯಿತು.
ಇದಾದ ಮೇಲೆ ಇನ್ನೆರಡು ಬಾರಿ ಹಸುವನ್ನು ನಿಲ್ಲಿಸುವ ಪ್ರಯತ್ನ ಮಾಡಿದೆವು. ನಿಲ್ಲಿಸಿದ ಗುಂಪಿಗೆ ತಕ್ಷಣ ಇಳಿಸಲು ಮನಸ್ಸಾಗದೆ, ಹಸು ಬಳ್ಳಿಯಲ್ಲಿ ಜೋತು ಬಿದ್ದದ್ದೂ ಆಯಿತು
ಕಾಲು ಸೋತು ಜೋತುಬಿದ್ದ ಹಸು
ಹಸುವನ್ನು ನಿಲ್ಲಿಸುವುದರಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಒಂದುವೇಳೆ ಹಸು ತಕ್ಕ ಮಟ್ಟಿಗೆ ಆರೋಗ್ಯವಾಗಿದ್ದು ಕೇವಲ ಆತ್ಮವಿಶ್ವಾಸದ ಕೊರತೆಯಷ್ಟೇ ಇದ್ದರೆ, ನಿಲ್ಲಿಸುವುದರಿಂದ ಉಪಯೋಗವಾಗಬಹುದೇನೋ ( ಲೇಖನವನ್ನು ಓದಿ, ಸರಿಯಾಗಿ ಅನುಭವ ಇಲ್ಲದೆ, ಹಸುವನ್ನು ನಿಲ್ಲಿಸಲು ಯಾರೂ ಹೋಗಬೇಡಿ).

ಮರೀಚಿಕೆಯಾದ ಆರೋಗ್ಯ, ಉತ್ಸಾಹ ಕಳೆದುಕೊಳ್ಳದ ಕೃಷ್ಣ

ಹಸುವಿನ ಆರೋಗ್ಯದಗ್ರಾಫ್ಮೇಲಕ್ಕೇರಿಸುವುದು ನಮ್ಮಿಂದಾಗಲಿಲ್ಲ. ಮರುದಿನ ಇನ್ನೊಂದಷ್ಟು ಜನರಿದ್ದಾಗ ಮತ್ತೆ ಹಸುವನ್ನೆತ್ತಿ ಮೇಲಿನ ಅಡ್ಡಕ್ಕೆ ಬಳ್ಳಿ ಹಾಕಿ ನಿಲ್ಲಿಸಿದೆವು. ಆದರೆ ಒಂದಷ್ಟು ಹೊತ್ತಿನಲ್ಲಿ ಅದರ ಕಾಲು ಸೋತು ಅದು ಬಳ್ಳಿಯ ಮೇಲೆ ಜೋತು ಬಿದ್ದು ಉಪಯೋಗದಿಂದ ತೊಂದರೆಯೇ ಹೆಚ್ಚಾಯಿತು. ಮೂರನೆಯ ಬಾರಿ ಎತ್ತಿದಾಗ ಹಸು ಕಾಲು ಊರಲು ನಿರಾಕರಿಸಿ ಬಿಟ್ಟಿತು.
ಗೋಪಾಲಕನಾದ ಕೃಷ್ಣ ಅಷ್ಟು ಬೇಗ ಭರವಸೆಯನ್ನು ಬಿಟ್ಟುಕೊಡಲಿಲ್ಲ. ಮುಳುಗುತ್ತಿದ್ದ ದೋಣಿಯಿಂದ ನೀರನ್ನು ಸತತ ಮೊಗೆದು ಹೊರಗೆ ಹಾಕುತ್ತಲೇ ಇದ್ದ. ಕೆಲವು ಸಣ್ಣ ಸಮಸ್ಯೆಗಳಷ್ಟೇ ಉಳಿದಿವೆ, ಅವು ಬಿಟ್ಟರೆ ಹಸು ಆರೋಗ್ಯವಾಗಿದೆಯೆಂದು ಮತ್ತೆ ಮತ್ತೆ ಹೇಳುತ್ತಲಿದ್ದ. ಜೀವನೋತ್ಸಾಹವೆಂದರೆ ಅತ್ಯಂತ ಅನುಕೂಲ ಸ್ಥಿತಿಯಲ್ಲಿ ಆಶಾವಾದ, ಭರವಸೆಯನ್ನು ತಳೆಯುವುದೆ? ಅಥವಾ ರೀತಿಯ ಪ್ರತಿಕೂಲ ಸ್ಥಿತಿಯಲ್ಲಿ ಮರಳಿಯತ್ನವ ಮಾಡುವ ಛಲವನ್ನು ಹೊಂದುವುದೆ? ಎನ್ನುವ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಳ್ಳದೆ ವಿಧಿಯಿರಲಿಲ್ಲ. ಹಟ್ಟಿಯ ನಿತ್ಯಕರ್ಮಗಳನ್ನು ಪೂರೈಸುವುದು ಬೇರೆ, ಅದರೊಂದಿಗೆ ಹಸುವನ್ನು ತೀಡಿ, ಮಾತನಾಡಿಸಿ ಅದರೊಂದಿಗೆ ಬೆರೆಯುವುದು ಬೇರೆ. ಕೃಷ್ಣ ಎರಡನೆಯ ಗುಂಪಿಗೆ ಸೇರಿದವನಾಗಿದ್ದ. ರೀತಿ ಮಾಡುವುದು ಒಂದು ವೇಳೆ ಹಸುವಿಗೆ ತಿಳಿಯದಿದ್ದರೂ, ಅದು ಮಾಡುವ ಮನುಷ್ಯನ ಜೀವಂತಿಕೆಯನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಪ್ರೀತಿಯನ್ನು ಬೇಶರತ್ತಾಗಿ ಕೊಡುವುದು ಅದನ್ನು ಪಡೆದವನಿಗಿಂತ ಕೊಟ್ಟವನಿಗೆ ಹೆಚ್ಚು ಕ್ಷೇಮಕರ.

ಹೆತ್ತ ನಾಲ್ಕನೆಯ ದಿನ ರಾತ್ರಿಯ ಹೊತ್ತಿಗೆ ಹಸು ಮೊದಲ ಬಾರಿ ಸಶಬ್ದವಾಗಿ ರೋದಿಸತೊಡಗಿತು. ನನ್ನ ಅಂದಾಜಿನಂತೆ ಅದು ರೋದನವಾಗಿರದೆ ಹೊಟ್ಟೆ ಉಬ್ಬರಿಸಿ ಅದು ಉಸಿರಾಡಲು ಕಷ್ಟಪಡುತ್ತಿದ್ದುದಾಗಿತ್ತಷ್ಟೆ. ಕೈಕಾಲುಗಳನ್ನು ಒತ್ತಿ ಒತ್ತಿ ಮಲಗಿದಲ್ಲಿಂದಲೇ ಒದ್ದಾಡುತ್ತಿತ್ತು. ಒಂದೂವರೆ, ಎರಡು ಗಂಟೆಗಳ ಯಮಹಿಂಸೆ ಅನುಭವಿಸಿ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅದು ನಿ:ಶಬ್ದವಾಯಿತು
ಕಾಲನ ನಿರ್ಣಯಕ್ಕೆ ಸೋಲೊಪ್ಪಿದ ಹಸು
ಮರುದಿನ ಆರುಜನರ ಕನಿಷ್ಠ ಮೂರುಗಂಟೆಯ ಶ್ರಮದಿಂದ ಹಸುವನ್ನು ಭೂಮಿತಾಯಿಯ ಮಡಿಲಿಗೆ ಒಪ್ಪಿಸಲು ಸಾಧ್ಯವಾಯಿತು. ಮಣ್ಣಿಗೆ ಸಾವು ಮತ್ತು ಹುಟ್ಟಿನ ನಡುವೆ ಬೇಧವಿಲ್ಲ. ತಣ್ಣಗೆ ಮಲಗಿದ ಹಸುವಿನ ಮೇಲೆ ಹಟ್ಟಿಯಲ್ಲಿದ್ದಾಗಲೇ ಸಣ್ಣ ಉಣ್ಣಿಯಂತಹ ಕೀಟಗಳು ಹಾರುತ್ತಿದ್ದವು. ಇಷ್ಟರಲ್ಲಾಗಲೇ ಕೋಟಿಗಟ್ಟಲೆ ಹುಳಗಳು ಅದೆಲ್ಲಿಂದಲೋ ಬಂದು ಅದರ ಮೈಯ ಇಂಚಿಂಚಿನಲ್ಲಿ ಹುಟ್ಟಿಕೊಂಡು ಹಸುವಿನಲ್ಲಿ ಸಂಚಯವಾಗಿದ್ದ ಜೀವಧಾರಕ ವಸ್ತುಗಳನ್ನು ವಿಘಟಿಸಿ ಮತ್ತೆ ಮಣ್ಣಿಗೆ ಸೇರಿಸುವ ಕೆಲಸ ಮಾಡುತ್ತಿರುತ್ತವೆ.

* * *
ಕೃಷಿ ಆದಾಯದಿಂದಲೇ ಜೀವಿಸುವ ಕೃಷಿಕನ ಆರ್ಥಿಕತೆಯನ್ನು ಒಂದು ಹಸುವಿನ ಸಾವು ಅಸ್ತವ್ಯಸ್ತಗೊಳಿಸಬಲ್ಲುದು. ಹಾಲಿಗೆ ಐವತ್ತು ರೂಪಾಯಿ ಕೃಷಿಕನ ಅಸಲೇ ಇದೆ. ಡೈರಿಯಲ್ಲಿ ಸಿಗುವುದು ಮೂವತ್ತು ರುಪಾಯಿ. ಉಳಿದದ್ದು ಗೊಬ್ಬರದ ರೂಪದಲ್ಲಿ ಸಿಕ್ಕಿತೆಂದು ಕೃಷಿಕ ಇಂದು ಅಂದುಕೊಳ್ಳಬೇಕಿದೆ. ಹೀಗಿರುವಾಗ ಗಾಯದ ಮೇಲಿನ ಬರೆಯಂತೆ ಹಸುವೇ ತೀರಿಹೋದರೆ ಅವನ ಗತಿಯೇನು?

ಆದರೆ, ಹಟ್ಟಿಯೊಂದಿಗಿನ ಒಡನಾಟ ಒಂದು ವಿಶೇಷ ಅನುಭವ. ಮನುಷ್ಯನನ್ನು ಬಿಟ್ಟು ಉಳಿದ ಸಸ್ಯಪ್ರಾಣಿಗಳೊಂದಿಗೆ ದೈನಂದಿನ ಒಡನಾಟ ನಮಗಿದ್ದರೆ ನಮಗಿಂತ ಸಂಪೂರ್ಣ ಭಿನ್ನವಾದ ದೃಷ್ಟಿಕೋನವನ್ನು ಅವು ಹೊಂದಿದ್ದಂತೆ ನಮಗನಿಸುತ್ತದೆ. ಸಾಯುವ ಮುನ್ಸೂಚನೆ ಸಿಕ್ಕಿದ ಮೇಲೆ ಹೆಚ್ಚಿನ ಜೀವಜಾತಿಗಳು ಮತ್ತೆ ಬದುಕುವ ಯೋಚನೆ ಮಾಡುವುದಿಲ್ಲ. ನನಗೇ ಬದುಕುವ ಆಸೆಯಿಲ್ಲ ಮಾರಾಯ, ನೀನ್ಯಾಕೆ ಕಷ್ಟ ಪಡುತ್ತೀಯ?ಎನ್ನುವಂತೆ ಅವು ನಮ್ಮ ಚಿಕಿತ್ಸೆಯನ್ನೆಲ್ಲ ಸುಮ್ಮನೆ ನಿರ್ಲಿಪ್ತವಾಗಿ ನೋಡುತ್ತ ಸಾವಿನೆಡೆಗೆ ನಡೆಯುತ್ತಿರುತ್ತವೆ. ಇದೆಲ್ಲ ನೋಡಿದರೆ, ನಮ್ಮ ಯೋಚನೆಯನ್ನು ಜರಡಿ ಹಿಡಿದು ಮರುವಿಮರ್ಶಿಸಲು, ಸರಿತಪ್ಪುಗಳನ್ನು ಹೆಕ್ಕಲು ಸಾಧ್ಯವಿದೆ. ಇದೆಲ್ಲ + = ಎನ್ನುವಷ್ಟು ಸರಳವಾಗಿಲ್ಲ. ಎಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ. ಇದ್ದರೂ ಅವು ಒಮ್ಮೆಲೆ ಸಿಗುವಂಥವಲ್ಲ. ಆದರೆ ಇದೆಲ್ಲ ಆಳವಾದ ಒಳನೋಟಕ್ಕೆ ಕಾರಣವಾಗುವಂಥ ವಿಷಯ. ಬಾರಿ ಹಟ್ಟಿಯಲ್ಲಿನ ಹುಟ್ಟು ಮತ್ತು ನಂತರದ ಸಾವು ನಮಗೆ ಹೀಗೊಂದು ಅನುಭವವನ್ನು ಕೊಟ್ಟಿತೆನ್ನಬಹುದು.. 


Comments

 1. ಹಸುವಿನ ಕಥನ ಮನವನ್ನು ಭಾರವಾಗಿಸಿತು. ಒಂದು ವರ್ಷದಲ್ಲಿ ಮೂರು ಮಹಾಗಾತ್ರದ ದನಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಕಳೆದುಕೊಂಡ ಕಹಿ ಅನುಭವಗಳೆಲ್ಲ ಮತ್ತೆ ನೆನಪಿಗೆ ಬಂತು. ಗೋಸಾಕಣೆಯಲ್ಲಿ ಇಂಥ ಘಟನೆಗಳು ನಮ್ಮ ಸ್ಥೈರ್ಯ ಉಡುಗಿಸುತ್ತವೆ - ಜನ ಬೆಂಬಲವಿಲ್ಲದೇ ಇರುವ ಈ ಕಾಲದಲ್ಲಿ. ದನಗಳನ್ನು ಸಾಕುವ ಉತ್ಸಾಹವಿದ್ದರೂ ಸಹಾಯಕರಿಲ್ಲದ ಅಸಾಹಯಕತೆ ಅನಿವಾರ್ಯವಾಗಿ ಗೋ ಸಾಕಣೆಯಿಂದ ದೂರವಾಗಿಸುತ್ತಿದೆ. ಆದರೂ ಸಂಪೂರ್ಣ ಬಿಟ್ಟು ನಗರದ ಪೆಕೇಟ್ ಹಾಲಿಗೆ ಬದಲಾಗಲು ಇನ್ನೂ ಮನಸ್ಸು ಸಿದ್ಧವಾಗುತ್ತಿಲ್ಲ - ಕಥನದ ಕೊನೆಯ ಭಾಗದಲ್ಲಿ ಹೇಳಿದ ಹಾಗೆ - ಹಟ್ಟಿಯೊಂದಿಗಿನ ಒಡನಾಟ ವಿಶೇಷ ಅನುಭವ.

  ReplyDelete
 2. ನಮ್ಮ ದನ ಅಂತ ಮನೆಯವರಿಗೆ ಪ್ರೀತಿ,ಕಾಳಜಿ ಸಹಜ.ಕೃಷ್ಣನ ಅಕ್ಕರೆ ವಿಶೇಷ.ನಿಮ್ಮೆಲ್ಲರ ಪ್ರಯತ್ನಗಳೂ ದನವನ್ನು ಉಳಿಸಲಾಗದ್ದು ಬೇಸರ.
  ಹಟ್ಟಿಯಲ್ಲಿನ ಹುಟ್ಟು ಸಾವಿನ ಕಥನವನ್ನು ನಿರ್ಲಿಪ್ತವಾಗಿ ವಿಚಾರ ಮಾಡಿದ್ದು ಮೆಚ್ಚುಗೆ ಆಯ್ತು

  ReplyDelete
 3. ಲೇಖನ ಬಲು ಚೆನ್ನಾಗಿ ಮೂಡಿ ಬಂದಿದೆ.ಸಾವು ಎದುರಾದಾಗ ನಿರ್ಲಿಪ್ತತೆಯಿಂದ ಅದನ್ನು ಸ್ವೀಕರಿಸುವುದನ್ನು ನಾವು ಪ್ರಾಣಿ ಪಕ್ಷಿಗಳಿಂದ ಕಲಿತರೆ ಸುಖಮರಣ ಲಭಿಸೀತು

  ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!