About / ನನ್ನ ಬಗ್ಗೆ

ನಾನು ದಕ್ಷಿಣ ಕನ್ನಡದ ಕೃಷಿಮನೆಯಲ್ಲಿ ವಾಸಿಸುತ್ತಿರುವ ಸಂಸಾರಿ ಕೃಷಿಕ. ವೃತ್ತಿಯಲ್ಲಿ ಇಂಜಿನಿಯರ್ ಮತ್ತು ನಗರ ವೃತ್ತಿಯನ್ನೂ ನಡೆಸುತ್ತಿದ್ದೇನೆ. 

ಪತ್ನಿ, ತಂದೆ ತಾಯಿ, ಅಜ್ಜಿ, ಅಣ್ಣ ಅತ್ತಿಗೆ, ಒಟ್ಟಾಗಿ ಮೂವರು ಮಕ್ಕಳು ಸೇರಿದ ಕೂಡುಕುಟುಂಬ ನಮ್ಮದು. ಬೆಂಗಳೂರು ವಿದೇಶಗಳನ್ನೆಲ್ಲ ಸ್ವಲ್ಪ ನೋಡಿ, ನಮ್ಮ ವೈಯಕ್ತಿಕ ಅಸ್ತಿತ್ವಕ್ಕೆ ಬೆಲೆಯಿಲ್ಲದ, ನಮ್ಮ ಶ್ರಮವನ್ನಷ್ಟೇ ದೂರದೇಶಕ್ಕೆ ಮಾರುವ ಪ್ರಕೃತಿಭಂಜಕ ಆರ್ಥಿಕ ವ್ಯವಸ್ಥೆಯಲ್ಲಿ ದಶಕಕ್ಕೂ ಮಿಕ್ಕಿ ಕೆಲಸ ಮಾಡಿದ್ದೇನೆ ಮತ್ತು ಅದರ ಬಗ್ಗೆ ಬಹು ವಿಸ್ತಾರವಾದ ಭಿನ್ನಾಭಿಪ್ರಾಯವನ್ನು ಹೊಂದಿದ್ದೇನೆ. ಈ ಅನುಭವವು ನನಗೆ ಒಂದು ರೀತಿಯಲ್ಲಿ ಒಳಿತನ್ನು ಮಾಡಿದೆ. ನನ್ನ ಹುಟ್ಟೂರು, ಕೃಷಿಮನೆ, ಹಟ್ಟಿ, ನಮ್ಮ ಭೂಮಿಯಲ್ಲಿರುವ ಕಾಡು, ಕೆರೆಗಳು, ವನ್ಯಜೀವಿಗಳು ಸೇರಿದ ಹಳ್ಳಿಯ ಸ್ವಾಯತ್ತ, ಶ್ರಮ ಸಹಿತ ಜೀವನಾಧಾರ ಕೃಷಿವ್ಯವಸ್ಥೆಯ ಬಗ್ಗೆ ಅಪಾರ ಗೌರವವನ್ನು ನನ್ನಲ್ಲಿ ಬೆಳೆಸಿಕೊಟ್ಟಿದೆ. ಅದನ್ನು ಹಿಂಬಾಲಿಸಿ ಮತ್ತೆ ಊರಿಗೆ ಮರಳಿ ನನ್ನೊಂದು ಕಾಲನ್ನು ಕೃಷಿಯಲ್ಲಿ ದೃಢವಾಗಿ ಊರಿದ್ದೇನೆ.

 ನನ್ನ ಭೂಮಿಯ ಪರಿಧಿಯೊಳಗಿನಿಂದ ಪ್ರಕೃತೀ ಸತ್ಯವನ್ನು ಅಧ್ಯಯನ ಮಾಡುವುದು ನನ್ನ ಹವ್ಯಾಸ, ಒಂದು ರೀತಿಯಲ್ಲಿ ಬಾವಿಯೊಳಗಿನ ಕಪ್ಪೆ ಸಾಗರವನ್ನು ಅಧ್ಯಯನ ಮಾಡಿದಂತೆ. ಆದರೆ ಇದು ಸಾಧ್ಯ ಎಂದು ನಾನು ನಂಬಿದ್ದೇನೆ. ಹಿಂದೆ ಶಾಲೆ ಕಾಲೇಜು ಪರೀಕ್ಷೆಗಳಿಗಾಗಷ್ಟೇ ಓದಿದ್ದ ಜೀವಶಾಸ್ತ್ರವನ್ನು ಈಗ ಪ್ರಾಯೋಗಿಕ ಅನುಭವದ ದೃಷ್ಟಿಕೋನದಿಂದ ಓದುವುದು ನನ್ನ ಮೆಚ್ಚಿನ ಹವ್ಯಾಸ. ನನ್ನ ಕೃಷಿಸಂಬಂಧಿ ಕೆಲಸಗಳು ಮತ್ತು ನನ್ನ ಓದು ಒಂದಕ್ಕೊಂದು ಪೂರಕವಾಗಿ ನನಗೆ ಅನಿರ್ವಚನೀಯ ಸಂತೋಷವನ್ನು ಕೊಡುತ್ತಿವೆ.

’ಕಜೆ ವೃಕ್ಷಾಲಯ’ ನಮ್ಮ ತೋಟದ,ಮನೆಯ ಹೆಸರು. ಸುಸ್ಥಿರ ಕೃಷಿ, ಸಸ್ಯಪ್ರಾಣಿವೈವಿಧ್ಯಗಳು, ಸಸ್ಯವೈವಿಧ್ಯ ಸಂಗ್ರಹ, agrarian philosophy ಇತ್ಯಾದಿ ವಿಷಯ ಸಂಬಂಧಿ ಓದು, ಚರ್ಚೆ ನನ್ನ ಆಸಕ್ತಿಯ ಕ್ಷೇತ್ರಗಳು. 
ಮಕ್ಕಳಿಗೆ ಮತ್ತು ಆಸಕ್ತರಿಗೆ ನಮ್ಮ ಕಾಡಿನಲ್ಲಿಯ ಸಸ್ಯಪ್ರಾಣಿ ವೈವಿಧ್ಯ, ಅವುಗಳೊಳಗಿನ ಪರಸ್ಪರಾವಲಂಬನೆಯ ಬಗ್ಗೆ ನನಗೆ ತಿಳಿದಂತೆ ಹೇಳುವುದು ಮತ್ತು ಅವರಿಂದ ಹೊಸತನ್ನು ಕಲಿಯುವುದು ನನ್ನ ಆಸಕ್ತಿಯ ವಿಷಯ. ಆಸಕ್ತರಿಗೆ ಸುಸ್ವಾಗತ.ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ನಾನು ಭಿನ್ನಾಭಿಪ್ರಾಯವನ್ನು ಹೊಂದಿದ್ದೇನೆ. ನಾವು ಟೀಕಿಸುವ ಜಾಗತೀಕರಣ ಮತ್ತು ಪೆಟ್ರೋಲಿಯಂ ಆರ್ಥಿಕತೆಯ ಮೇಲೆ ಈ ಮಾಧ್ಯಮವು ಸಂಪೂರ್ಣವಾಗಿ ನಿಂತಿದೆ. ವೇಗವಾದ ಮಾಹಿತಿಯ ಹರಿವು ಮಾಡುವ ಹಾನಿ ಮತ್ತು ಅದಕ್ಕೆ ನಾವಿಂದು ತೆರಬೇಕಾಗಿರುವ ಪ್ರತ್ಯಕ್ಷ, ಪರೋಕ್ಷ ಬೆಲೆಗಳು ಅಗಾಧ. ಕೃಷಿ ಸಂಸ್ಕೃತಿಯ ಪರವಾಗಿ ಮತ್ತು ನಗರ ಕೇಂದ್ರಿತ ಪ್ರಕೃತಿವಿನಾಶಕ ವ್ಯವಸ್ಥೆಯ ವಿರುದ್ಧವಾಗಿ ಮಾತನಾಡುವ ಯಾರೇ ಆದರೂ ಅಂತರ್ಜಾಲವನ್ನು ಸಂಪೂರ್ಣ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ವೃದ್ಧನೊಬ್ಬನಿಗೆ ಊರುಗೋಲು ಅನಿವಾರ್ಯವಾದಂತೆ ನಮ್ಮ ಅನಿವಾರ್ಯತೆಯಿಂದಷ್ಟೇ ಒಪ್ಪಿಕೊಳ್ಳಬಹುದು, ಹೆಮ್ಮೆಯಿಂದಲ್ಲ. ನನ್ನ ಈಗಿನ ಅಂತರ್ಜಾಲದ ಬಳಕೆಯನ್ನು ಓದುಗರು ನನ್ನ ಆದರ್ಶದೊಂದಿಗೆ ನಾನು ಮಾಡಿದ ರಾಜಿ ಎಂದು ತಿಳಿಯಬೇಕೆಂದು ಕೋರಿಕೆ. ನನ್ನ ಈ ಪ್ರಜ್ಞೆಯು ನನ್ನ ಅಂತರ್ಜಾಲ ಬಳಕೆಯನ್ನು ಕನಿಷ್ಠ ಮಿತಿಯಲ್ಲಿ ಇಡುತ್ತಿದೆ. 

ಕನ್ನಡಿಗ, ಕೃಷಿಕ ಶ್ರೀ ಎ.ಪಿ.ಚಂದ್ರಶೇಖರ ಮತ್ತು ಅಮೆರಿಕದ ಕೃಷಿಕ ವೆಂಡೆಲ್ ಬೆರಿ ನನ್ನ ಮೆಚ್ಚಿನ ಚಿಂತಕ-ಸಾಧಕರು. 

ನಿಮ್ಮ ಆಸಕ್ತಿಗೆ ವಂದನೆಗಳು.

ನನ್ನ ವಿಚಾರಗಳನ್ನು http://kaje.in ಲ್ಲಿ ನಿಯಮಿತವಾಗಿ ಬರೆಯುತ್ತೇನೆ.ವಸಂತ ಕಜೆ, ಕಜೆ ವೃಕ್ಷಾಲಯ
೯೦೦೮ ೬೬೬ ೨೬೬

Comments

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!